ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿಗಳ ಮೇಲೆ ಜನಪದ ಪ್ರಭಾವ

Last Updated 17 ನವೆಂಬರ್ 2011, 7:40 IST
ಅಕ್ಷರ ಗಾತ್ರ

ಧಾರವಾಡ: `ಕನ್ನಡ ಜನಪದ ಕಲೆಯನ್ನು ಕಳೆದ 20 ವರ್ಷಗಳಿಂದ ಅಧ್ಯಯನ ಮಾಡುತ್ತ ಬಂದಿದ್ದೇವೆ. ಎಷ್ಟು ಮಾಡಿದರೂ ತೀರದ ಜನಪದ ಅಧ್ಯಯನ ಈ ನಾಡಿನಲ್ಲಿದೆ. ದೇಶದಲ್ಲಿಯೇ ಕರ್ನಾಟಕದ ಜನಪದ ಶ್ರೀಮಂತಿಕೆ ವೈವಿಧ್ಯಮಯವಾಗಿದೆ” ಎಂದು ಡಾ. ಸಿ.ಕೆ.ನಾವಲಗಿ ಹೇಳಿದರು.

ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಜನಪದ ಶ್ರೀಮಂತಿಕೆ ಎಂಬ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.

ಜನಪದ ಶ್ರೀಮಂತಿಕೆಯ ಅರಿವು ಮೂಡಿಸುವ ಕೆಲಸ ವೈಜ್ಞಾನಿಕ ಚೌಕಟ್ಟಿನಲ್ಲಿ ದಕ್ಷಿಣ ಕರ್ನಾಟಕದಲ್ಲಿ ಆಗಿದೆ. ಆದರೆ ಉತ್ತರ ಕರ್ನಾಟಕದಲ್ಲಿ ಇದು ಆಗಿಲ್ಲ. ನೂರೆಂಟು ಜನಪದರು ಇಂದಿಗೂ ಪ್ರತಿ ಹಳ್ಳಿಯಲ್ಲಿದ್ದಾರೆ. ಇವರೇ ಜನಪದ ಶ್ರೀಮಂತಿಕೆ ಎಂದ ಅವರು, ಜನಪದ ಎಲ್ಲ ಸಾಹಿತಿಗಳಿಗೆ ಒಂದಿಲ್ಲ ಒಂದು ರೀತಿಯಲ್ಲಿ ಪ್ರಭಾವ ಬೀರಿದೆ ಎಂದರು.

ಕಂಬಾರರಿಗೆ ಜ್ಞಾನಪೀಠ ಸಿಕ್ಕಿದ್ದು ದೇಶಿ ಸೊಗಡಿನಿಂದ. ಕಂಬಾರರನ್ನು ದೇಶಿಯಿಂದ ಹೊರಗೆ ನಿಲ್ಲಿಸಿದರೆ ಅವರು ಇಲ್ಲವಾಗುತ್ತಾರೆ. ಹಾಗೆ ಪ್ರತಿಯೊಬ್ಬ ಸಾಹಿತಿಯೂ ಇದಕ್ಕೆ ಹೊರತಾಗಿಲ್ಲ ಎಂದ ನಾವಲಗಿ, ಕೆಲವು ಜನಪದವನ್ನು ಯಥಾವತ್ತಾಗಿ ಉಳಿಸಿಕೊಳ್ಳಬೇಕು. ತಂತ್ರಜ್ಞಾನ ಜನಪದಕ್ಕೆ ಮಾರಕವಲ್ಲ, ಎಲ್ಲ ತಂತ್ರಜ್ಞಾನವನ್ನೂ ಅರಿಗಿಸಿಕೊಂಡು ಜನಪದ ತನ್ನತನ ಉಳಿಸಿಕೊಂಡು ಬಂದಿದೆ. ಜಾಗತಿಕರಣವನ್ನು ಸಮರ್ಥವಾಗಿ ಎದುರಿಸುವುದು ದೇಶಿ ಸಂಸ್ಕೃತಿಯ ಕಡೆಗೆ ನಡೆದರೆ ಮಾತ್ರ ಸಾಧ್ಯ ಎಂದು ಹೇಳಿದರು.

ಡಾ. ಶಾಲಿನಿ ರಘುನಾಥ ಅಧ್ಯಕ್ಷತೆ ವಹಿಸಿ, ಜನಪದ ಶ್ರೀಮಂತಿಕೆ ಪ್ರತಿಯೊಬ್ಬ ಗ್ರಾಮೀಣರ ಹೃದಯದಲ್ಲಿದೆ. ಗ್ರಾಮಗಳಿರುವವರೆಗೆ ನಮ್ಮ ಜನಪದ ಶ್ರೀಮಂತಿಕೆಗೆ ಅಳಿವಿಲ್ಲ ಎಂದರು.

ಶಂಕರಣ್ಣ ಸಂಕಣ್ಣವರ ಜನಪದ ಹಾಡುಗಳನ್ನು ಪ್ರಸ್ತುತಪಡಿಸಿದರು. ಹುಕ್ಕೇರಿ ಬಾಳಪ್ಪನವರ 9ನೇ ಪುಣ್ಯತಿಥಿ ಅಂಗವಾಗಿ ಅವರ ಸ್ಮರಣೆಯಲ್ಲಿ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಪಾರ್ವತೆವ್ವ ಹೊಂಗಲ ಅವರನ್ನು ಸನ್ಮಾನಿಸಲಾಯಿತು. ಶಂಕರ ಹಲಗತ್ತಿ ಸ್ವಾಗತಿಸಿದರು. ಶಂಕರ ಕುಂಬಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT