ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಕೃತಿಗಳ ಓದು, ಇಂದೇಕೆ ಹಿಂದು...?

Last Updated 12 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸಾ ಹಿತ್ಯ ಕೃತಿಗಳನ್ನು ಓದುವವರ ಸಂಖ್ಯೆ ಇಂದು ಇಳಿಮುಖವಾಗುತ್ತಿದೆಯೇ? ಓದುವ ಕ್ರಿಯೆ ಮೊದಲಿನಷ್ಟೇಕೆ ಪ್ರಖರವಾಗಿಲ್ಲ? ಸಾಹಿತ್ಯದ ಮೇಲಿನ ಪ್ರೀತಿಗೆ ಏನಂಥ ಅಡ್ಡಿ–-ಆತಂಕಗಳು ಎದುರಾಗಿವೆ? ಮತ್ತೆ ಓದಿಗೆ ತೊಡಗುವಂತೆ ಓದುಗರನ್ನು ಪ್ರೇರೇಪಿಸುವುದು ಹೇಗೆ?- ಪ್ರಸಕ್ತ ಸಾಹಿತ್ಯ ವಾತಾವರಣದ ‘ಬರ’ದಿಂದ ಇಂತಹ ಪ್ರಶ್ನೆಗಳು ಎದುರಾಗುತ್ತವೆ.

ಮೊದಲೆಲ್ಲ ಪಾಂಡಿತ್ಯಪೂರ್ಣ ಓದಿಗೆ ಮಾತ್ರ ದಕ್ಕುತ್ತಿದ್ದ ನಮ್ಮ ಸಾಹಿತ್ಯ ಕೃತಿಗಳು ಚಿಂತನೆಗೆ, ಜ್ಞಾನ ವಿಕಸನಕ್ಕೆ ಪೂರಕವಾಗಿಯಷ್ಟೇ ಬಳಕೆ­ಯಾಗು­ತ್ತಿದ್ದವು. ಕೆಲವೇ ಕೆಲವರ ಸ್ವತ್ತಾಗಿದ್ದ ಈ ಓದು ಅಂಥವರಿಗಷ್ಟೇ ನಿಲುಕುವ ಸರಕಾಗಿತ್ತು ಕೂಡ. ತದನಂತರದ ಅಂದರೆ ಹೊಸಗನ್ನಡದ ಹುಟ್ಟಿನೊಂದಿಗೆ ಸಾಹಿತ್ಯದ ಓದು ಈ ಮಿತಿ­ಯನ್ನು ಮೀರಿ ಸ್ವಲ್ಪ ಪ್ರಮಾಣದಲ್ಲಿ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿತು.

ಹಳೆಗನ್ನಡ ಸಹ ಪಠ್ಯಕ್ರಮದ, ವಿದ್ಯಾರ್ಜನೆ ಹಸಿವಿರುವವರ ಅಗತ್ಯವಾಗಿತ್ತೇ ವಿನಾ ಸಾಮಾನ್ಯ ಓದುಗನ ಮಟ್ಟಿಗೆ ಜೀರ್ಣಿಸಿಕೊಳ್ಳುವ, ರಂಜಿಸುವ ಸಾಧನವಾಗಿ ಬಳಕೆಯಾಗಿಲ್ಲವೆಂದೇ ಹೇಳಬೇಕು. ಹೀಗಾಗಿಯೇ ಜಾನಪದವು ಓದು-–ಬರಹ ಬಾರದವರ ಸ್ವತ್ತಾಗಿ, ಸಾಹಿತ್ಯವಾಗಿ, ಬದುಕಾಗಿ ಮಾರ್ಪಾಡಾಗಿದ್ದೂ ಹೌದು. ಒಂದು ಕಾಲದಲ್ಲಿ ಸಮಯದ ಸದ್ಬಳಕೆ ಮಾರ್ಗವಾಗಿದ್ದ ಸಾಹಿತ್ಯ ಕೃತಿಗಳ ಓದು, ಬಿಡುವಿನ ವೇಳೆ –ಅದೂ ಕಾದಂಬರಿ, -ಕಥೆಗಳು– ಇಂದಿನ ಧಾರಾವಾಹಿಗಳ ಪಾತ್ರವನ್ನೇ ನಿಭಾಯಿಸುತ್ತಿದ್ದವು. ಬರೆದು ಬದುಕ­ಬಲ್ಲ ಬರಹಗಾರರಿಗೂ ಆ ಕಾಲದಲ್ಲಿ ಸಂತೃ­ಪ್ತಿಯ ಯೋಗವಿತ್ತು. ಇದರಿಂದಾಗಿಯೇ ಅಂಥ­ವರ ಜೀವನ ನಿರ್ವಹಣೆ ನಿರಾತಂಕ­ವಾಗಿತ್ತು.

ಈ ಹೊತ್ತಿನ ಸಾಹಿತ್ಯದ ಓದಿನ ಕ್ಷೀಣತೆಗೆ ಒಂದಲ್ಲ ನೂರಾರು ಕಾರಣಗಳು ಸಾಲು ಹಚ್ಚುತ್ತವೆ. ವಿದ್ಯುನ್ಮಾನ ಯಂತ್ರಗಳಿಗೆ ಮೊರೆ ಹೋಗುವ ಹೊಸ ತಲೆಮಾರಿನ ಮನಸ್ಥಿತಿ, ದಿನನಿತ್ಯದ ಜಂಜಾಟದ ಬದುಕಿನ ಸವಾಲು, ಯಾವುದಕ್ಕೂ ಪುರುಸೊತ್ತಿಲ್ಲದ ಜೀವನಶೈಲಿ, ಸಮಯ ಸದ್ಬಳಕೆ ಕಡೆಗೆ ನಿರುತ್ಸಾಹದ ನೋಟ,  ಪಕ್ಕಾ ಮನರಂಜನೆಗೇ ಸೀಮಿತ­ವಾದ ಮನೋಭಿ­ಲಾಷೆ, ಏಕಾಗ್ರತೆ ಕೊರತೆ... ಹೀಗೆ ಹುಡುಕುತ್ತ ಹೋದಂತೆ ಓದಿಗೆ ಸಂಚಕಾರ ತಂದಿಟ್ಟ ಸಂಗತಿ­ಗಳ ವೇಗ ನಿಯಂತ್ರಿಸುವ ಪರಿ ಹೇಗೆ ಎಂಬುದೇ ಸವಾಲಾಗಿ ನಮ್ಮ ಮುಂದೆ ನಿಂತು ಬಿಡುತ್ತದೆ. ಚಿಂತನೆಗೆ ಗ್ರಾಸ ಒದಗಿಸ­ಬೇಕಾದ ಓದಿನ ಈ ದಯನೀಯ ಸ್ಥಿತಿ ನಮ್ಮನ್ನೆಲ್ಲ ಚಿಂತಾಕ್ರಾಂತ­ರನ್ನಾಗಿಸಿ ತಬ್ಬಿಬ್ಬು ಮಾಡಿಬಿಟ್ಟಿದೆ.

ಓದಿಗೆ ತೊಡಗಿಸಿಕೊಳ್ಳಬೇಕಾದ ಸುಸಮಯ­ದಲ್ಲಿ ವಿದ್ಯಾರ್ಥಿಗಳು, ಮಣಭಾರದ ಪಠ್ಯ­ಕ್ರಮದ ಹೊರೆಗೆ ಬೆನ್ನುನೋವು ತರಿಸಿಕೊಂಡು ಪಠ್ಯೇತರ ಚಟುವಟಿಕೆಗೆ ತುಡಿಯುವ ಉತ್ಸಾಹ­ವನ್ನೇ ತುಂಡರಿಸಿಕೊಂಡಿರುವುದೂ ಸಾಹಿತ್ಯ ಕೃತಿಗಳ ಅಧ್ಯಯನದ ಹಿನ್ನಡೆಗೆ ಪ್ರಮುಖ ಕಾರಣ. ನಂತರ, ಬದುಕು ಕಟ್ಟಿಕೊಳ್ಳುವ ಅಂಗವಾಗಿ ನೌಕರಿ ಹಂಬಲದ ತರಾತುರಿಯಲ್ಲಿ ‘ಸಾಹಿತ್ಯ ಯಾರಿಗೆ ಬೇಕು, ಯಾಕೆ ಬೇಕು?’ ಎನ್ನುವ ಅಸಡ್ಡೆಯೂ ಓದನ್ನು ಒಂದು ಚೌಕಟ್ಟಿಗೆ ನಿಗದಿಗೊಳಿಸಿದೆ.

ಓದು ಬಲ್ಲ ಖಾಲಿ ಇರುವವ­ರಿಗೆ, ನಿವೃತ್ತರಿಗೆ, ಹಿರೀಕರಿಗೆ, ಗೃಹಿಣಿ­ಯರಿಗೆ, ಓದು ಬಿಟ್ಟು ಮನೆಯಲ್ಲಿ ಕೂತ ಹರೆ­ಯದ ಹೆಣ್ಣು ಮಕ್ಕಳಿಗೆ... ಹೀಗೆ ಕೆಲವರಿಗೆ ಮಾತ್ರ ಈ ಓದು ಒಂದು ಕಾಲದಲ್ಲಿ ಆಪ್ತ­ವಾಗಿತ್ತು ಮತ್ತು ಇದೀಗ ಅವರೆಲ್ಲ ಟಿ.ವಿ., ಕಂಪ್ಯೂಟರ್ ವೀಕ್ಷಕರಾಗಿ ಪರಿವರ್ತಿತರಾಗಿ­ದ್ದಾರೆ.

ಬದುಕಿನ ಮೌಲ್ಯಗಳನ್ನು ಇವತ್ತಿಗೂ ಬಿತ್ತರಿ­ಸುತ್ತಿರುವ ರಾಮಾಯಣ, ಮಹಾ­ಭಾರತ­ಗಳಂತಹ ಜನಪ್ರಿಯ ಕೃತಿಗಳೇ ಒಂದು ಹಂತದಲ್ಲಿ ಕಾಣೆಯಾಗಬಹುದು ಎನಿಸುತ್ತಿದೆ. ಅಜ್ಜ–-ಅಜ್ಜಿ ಕಥೆಗಳೂ ದೂರ ಸರಿದಿವೆ. ಕಥೆ ಹೇಳುವ ಇವರೇ ಟಿ.ವಿ. ದಾಸರಾದಾಗ ಮಕ್ಕಳಾದರೂ ಏನು ಮಾಡಿಯಾರು, ಅಲ್ಲವೇ?

ನವೋದಯ, ಪ್ರಗತಿಶೀಲ ಸಾಹಿತ್ಯ ಚಳವಳಿಗಳ ಅವಧಿಯಲ್ಲಿ ಪುಸ್ತಕ ಓದುವವರ ದೊಡ್ಡ ಪಡೆಯೇ ಇತ್ತು. ಬಂಡಾಯ-–ದಲಿತ ಸಾಹಿತ್ಯ ಚಳವಳಿಗಳ ಸಂದರ್ಭದಲ್ಲೂ ಸಾಹಿತ್ಯ ಸೃಜಿಸುವ ಕೆಲಸ ಜಾತಿ ಮೀರಿ ಎಲ್ಲರ ಸ್ವತ್ತಾದಂತೆ ಆ ನಿಟ್ಟಿನಲ್ಲಿ ಓದು ಸಹ ಹಿಗ್ಗಿ, ಜನ ಜಾಗೃತಿಗೆ ಪೂರಕವಾಗಿದ್ದೂ ಓದಿನಿಂದಾದ ಅಪೂರ್ವ ಕ್ರಾಂತಿಯೇ. ಆದರೆ, ನವ್ಯದ ಸಂಕೀರ್ಣ ಮತ್ತು  ಕ್ಲಿಷ್ಟ ಜಾಡಿನಲ್ಲಿ ಇದ್ದು-ಬಿದ್ದ ಸಹಜ ಓದೂ ಎಕ್ಕುಟ್ಟಿ ಹೋಗಿ, ಅದು ಸಾಮಾನ್ಯ ಓದುಗನಿಗೆ ನಿಲುಕಲಾರದ ನಕ್ಷತ್ರವಾಗಿ ಗೋಚರಿಸಿದ್ದೂ ಸತ್ಯವೇ.  ನಿತ್ಯದ ವರ್ತಮಾನ ತಿಳಿದುಕೊಳ್ಳುವ ಸಲುವಾಗಿ ದಿನಪತ್ರಿಕೆಗಳ ಬೆಳಗಿನ ಓದೇ ಕಷ್ಟ­ಸಾಧ್ಯವಾದ ಇಂದಿನ ದಿನಮಾನದಲ್ಲಿ ‘ಓದುವ’ ಕ್ರಿಯೆಗಿಂತ ‘ನೋಡುವ’ ಕಾಯಕವೇ ಸುಲಭ ಸಾಧ್ಯವಾದಂತಿದೆ.   

ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಮತ್ತೆ ಸಾಹಿತ್ಯದ ಓದಿಗೆ ಓದುಗರನ್ನು ತೊಡಗಿಸಿ­ಕೊಳ್ಳುವಂತೆ ಮಾಡಲು, ಆಕರ್ಷಣೆಗೆ ಒಳ­ಗಾಗು­ವಂತೆ ಮಾಡಲು ಏನು ಮಾಡಬೇಕು ಎಂಬ ಪ್ರಶ್ನೆ ಹಾಕಿಕೊಂಡಾಗ ಇದು ಬಗೆಹರಿ­ಯದ ಸಮಸ್ಯೆಯಾಗಿಯೇ ಕಾಡುವುದು. ಕೊಂಚ ಮಟ್ಟಿಗಾದರೂ ಸಾಹಿತ್ಯದ ಓದಿನ ಕಡೆ ಸೆಳೆಯಬಹುದಾದ ಕೆಲ ಪರಿಹಾರೋಪಾಯ­ಗಳನ್ನು ಹುಡುಕಬಹುದು:

* ಸಾಹಿತ್ಯ ಕೃತಿಗಳ ಓದು ವಿದ್ಯಾರ್ಥಿ ಜೀವನದ ಹಂತದಲ್ಲಿಯೇ ಆರಂಭವಾಗುವುದ­ರಿಂದ ಪಠ್ಯ­ಕ್ರಮ­ದಲ್ಲಿಯೇ ಕಡ್ಡಾಯ­ವಾಗಿ ಸಾಹಿತ್ಯ ಪ್ರಕಾರಗಳನ್ನು ಹೆಚ್ಚಾಗಿ ಅಳವಡಿಸು­ವುದು.

* ಉದ್ಯೋಗಾವಕಾಶ­ ಸೃಷ್ಟಿಸುವಾಗ ಸಾಹಿತ್ಯ ಕೃತಿ­ಗಳ ಅಧ್ಯಯನ­­ವನ್ನೇ ಸ್ಪರ್ಧಾತ್ಮಕ ಪರೀಕ್ಷೆ­ಗಳಲ್ಲಿ ಮುಖ್ಯ ಮಾನದಂಡವನ್ನಾಗಿ ಮಾಡುವುದು.

* ಪ್ರತಿ ಹಳ್ಳಿಯಲ್ಲೂ ಸುಸಜ್ಜಿತವಾದ ಗ್ರಂಥಾ­ಲಯವನ್ನು ಸ್ಥಾಪಿಸಿ ಎಲ್ಲ ತರಹದ ಕೃತಿಗಳನ್ನು ಓದಿಗೆ ಮುಕ್ತವಾಗಿರಿಸುವುದು.

*  ಕಥಾ ವಾಚನ, ಕಾವ್ಯ ವಾಚನ, ಕಾದಂಬರಿ-, ನಾಟಕಗಳ ಆಯ್ದ ಭಾಗಗಳ ವಾಚನ ಹಾಗೂ ಜಾನಪದ, ಕಾವ್ಯ ಗಾಯನದಂತಹ ಕಾರ್ಯ­ಕ್ರಮ­­ಗಳಿಗೆ ಹೊಸ ಸ್ಪರ್ಶವನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಸಾಹಿತ್ಯದ ಅಭಿರುಚಿ ಮೂಡಿಸುವಲ್ಲಿ ಮುಂದಾಗುವುದು.

* ಮನೆಯಲ್ಲಿ ಟಿ.ವಿ., ಕಂಪ್ಯೂಟರ್‌ಗಳಿಗೆ ಶರಣಾದ ಮಕ್ಕಳಿಗೆ ರಂಜಿಸಬಲ್ಲ ಕಥೆ, ಪದ್ಯಗಳನ್ನು ಆಕರ್ಷಕವಾಗಿ ಹೇಳುವ ಮೂಲಕ ಸಾಹಿತ್ಯದ ಕಡೆ ಕುತೂಹಲ ಹುಟ್ಟು­ವಂತೆ ಮಾಡಿ ಅವರನ್ನು ಓದಿಗೆ ಒಗ್ಗಿಸುವುದು.

* ಸಾಹಿತಿಗಳು, ಸಾಹಿತ್ಯ ಸಂಘಟಕರು ಬಿಡುವಿನ ವೇಳೆಯಲ್ಲಿ ಕನಿಷ್ಠ ತಾವು ಬರೆದದ್ದರ ಜೊತೆಗೇ ಇನ್ನಿತರ ಮಹತ್ವದ ಕೃತಿಗಳ ಕುರಿತು ಮಕ್ಕಳಿಗೆ, ಆಸಕ್ತರಿಗೆ ಕೂತಲ್ಲಿಯೇ ವಿವರಿಸುವುದು.

* ಅಕಾಡೆಮಿ, ಪರಿಷತ್‌ ಮತ್ತು ಪ್ರಾಧಿಕಾರಗಳು ಸಾಹಿತ್ಯದ ಓದನ್ನು ಹೆಚ್ಚಿಸಲು ಇನ್ನೂ ಸಮರ್ಥವಾಗಿ ಕಾರ್ಯಾಗಾರ, ವಿಚಾರ ಸಂಕಿರಣಗಳನ್ನು ನಡೆಸುವುದು.

* ಟಿ.ವಿ, ಕಂಪ್ಯೂಟರ್, ಮೊಬೈಲ್‌­ಗಳಂತಹ  ಸಾಧನಗಳನ್ನು ಅಗತ್ಯ ಸಂದರ್ಭದಲ್ಲಿ ಮಾತ್ರ ಬಳಸುವಂತೆ  ಮಕ್ಕಳಿಗೆ ಕಟ್ಟಳೆ ವಿಧಿಸುವುದು.

ಓದುವ ಪ್ರವೃತ್ತಿಯ ಹಿನ್ನಡೆ ಹಿಂದೆ ನಾವು ಯಾವ ಕಾರಣಗಳನ್ನು ಹಿಡಿದಿಟ್ಟುಕೊಂಡು ಕೂತಿದ್ದೇವೋ ಅವುಗಳ ಒಳಗೇ ಉತ್ತರಗಳನ್ನು ಕಂಡುಕೊಂಡು ಮತ್ತೆ ಓದಿಗೆ ತುಡಿಯ­ಬೇಕಾ­ಗಿದೆ.

ಕೆಲವರು ಪ್ರಶ್ನೆ ಮಾಡಬಹುದು ಈ ರೀತಿಯಾಗಿ– ‘ಹಾಗಾದರೆ ಮೊದಲಿಗಿಂತ ಇಂದೇಕೆ ಪುಸ್ತಕಗಳು ಹೆಚ್ಚೆಚ್ಚು ಪ್ರಕಟಗೊಳ್ಳು­ತ್ತಿವೆ?  ದಿನಕ್ಕೊಂದು ಪ್ರಕಾಶನ ಸಂಸ್ಥೆ ಏಕೆ ಹುಟ್ಟಿಕೊಳ್ಳುತ್ತಿದೆ? ಓದುವವರಿಲ್ಲದೆ ಇಷ್ಟೊಂದು ಪುಸ್ತಕಗಳು ಹೊರಬರಲು ಸಾಧ್ಯವೇ?’ ...ಹೀಗೇ ಮೊದಲಾಗಿ. ಆದರೆ, ಪ್ರಕಟವಾದ ಪುಸ್ತಕಗಳೆಲ್ಲ ‘ಓದು’ ಅನ್ನುವಂತಿರಬೇಕಲ್ಲ? ಒಳ್ಳೆಯ ಸಾಹಿತ್ಯ ರಚನೆಯೂ ಮುಖ್ಯವಾಗುತ್ತದೆ.

ಹಳೆಯದನ್ನು ತಿರಸ್ಕರಿಸಬೇಕೆಂಬ ಭರಾಟೆಯಲ್ಲಿ ಓದನ್ನೂ ನಾವು ತಿರಸ್ಕರಿಸುತ್ತಿರುವುದು ನಿಜಕ್ಕೂ ಬಹು­ದೊಡ್ಡ ದುರಂತ. ಹೀಗಾಗಿಯೇ ಬಹುಪಾಲು ಪುಸ್ತಕಗಳು ಗೆದ್ದಲಿಗೆ-, ದೂಳಿಗೆ, -ಕೊಳೆಯುವ ಸ್ಥಿತಿಗೆ ಬಂದು ತಲುಪಿವೆ. ಹಾಗೆಯೇ, ಓದುಗ­ರನ್ನು ಸೆಳೆಯಲೆಂದೇ ಮಸಾಲೆಭರಿತ, ಅಪಥ್ಯ, ಸುಳ್ಳು, -ಅಶ್ಲೀಲ ಸರಕನ್ನು ಸೇರಿಸಿ ಓದುಗರನ್ನು ತಪ್ಪು ದಾರಿಗೆಳೆದು ನಿಜವಾದ ಸದಭಿರುಚಿ ಓದನ್ನೇ ಹಳ್ಳ ಹಿಡಿಸುವ ಅನಾಹುತ ಬರಹ­ಗಾರರೂ ನಮ್ಮಲ್ಲಿ ಉಂಟು.

ಪ್ರಕಾಶನ ಸಂಸ್ಥೆ­ಗಳೂ ಉಂಟು. ಇಂಥ ಕೃತಿಗಳಿಗೂ ಪ್ರತ್ಯೇಕ ಓದುಗರ ಪಡೆಯೇ ನಿರ್ಮಾಣವಾಗಿದೆ. ಇಂಥ ಹೊತ್ತಿನಲ್ಲಿ ಸಂಘ–-ಸಂಸ್ಥೆಗಳು, ಬರಹ­ಗಾರರು, ಪಾಲಕರು, ಶಿಕ್ಷಕರು, ಪ್ರಜ್ಞಾವಂತರು ಎನಿಸಿಕೊಂಡವರು ಮತ್ತು ಸರ್ಕಾರಗಳು ಈ ಕುರಿತು ಗಂಭೀರವಾಗಿ ಚಿಂತಿಸಿ ಪರಿಹಾರ ಕಂಡು ಹಿಡಿಯದೇ ಹೋದಲ್ಲಿ ಸಾಹಿತ್ಯದ ಓದು ಇತಿಹಾಸದ ಭಾಗವಾಗುವ ಅಪಾಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT