ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಚರಿತ್ರೆ ಕಟ್ಟುವ ಪ್ರತಿ ರಾಜಕಾರಣ ಅಗತ್ಯ

Last Updated 14 ಸೆಪ್ಟೆಂಬರ್ 2011, 6:05 IST
ಅಕ್ಷರ ಗಾತ್ರ

ಶಿವಮೊಗ್ಗ: 20ನೇ ಶತಮಾನದ ಕೊನೆಯವರೆಗೂ ಸಾಹಿತ್ಯ ಚರಿತ್ರೆಗಳನ್ನು ಲಿಂಗ ರಾಜಕಾರಣ ಆಳಿದ್ದು, ಇದನ್ನು ಪ್ರಶ್ನಿಸುವ ಮೂಲಕ ಹೊಸ ಚರಿತ್ರೆ ಕಟ್ಟುವ ಪ್ರತಿ ರಾಜಕಾರಣ ಮಾಡುವ ತುರ್ತಿದೆ ಎಂದು ಲೇಖಕಿ ಡಾ.ಶಾಂತಾ ಇಮ್ರಾಪುರ ಪ್ರತಿಪಾದಿಸಿದರು.

ಕರ್ನಾಟಕ ಸಂಘ ಮಂಗಳವಾರ ಹಮ್ಮಿಕೊಂಡಿದ್ದ ಪುಸ್ತಕ ಬಹುಮಾನ ವಿತರಣಾ ಸಮಾರಂಭದಲ್ಲಿ ಎಂ.ಕೆ. ಇಂದಿರಾ ಪುಸ್ತಕ ಬಹುಮಾನ ಸ್ವೀಕರಿಸಿ ಅವರು ಮಾತನಾಡಿದರು.ಇದುವರೆಗಿನ ಸಾಹಿತ್ಯ ಚರಿತ್ರೆಗಳು ಮಹಿಳಾ ಸಾಹಿತ್ಯವನ್ನು ಒಟ್ಟು ಸೃಜನಶೀಲತೆಯ ಭಾಗವನ್ನಾಗಿ ಗುರುತಿಸಿಲ್ಲ.

ಮಹಿಳೆ ಸಾಹಿತ್ಯ ಕುರಿತು ವಿಶೇಷ ಅಧ್ಯಯನವನ್ನೂ ಕನ್ನಡ ಸಾಹಿತ್ಯ ಸಂದರ್ಭ ಬೆಳೆಸಿಲ್ಲ. ಹಾಗಾಗಿ, ಇದನ್ನು ಪ್ರಶ್ನಿಸುವ ಕೆಲಸ ಆಗಬೇಕಿದೆ ಎಂದರು.ಮಹಿಳೆ ತನ್ನ ಅಸ್ಮಿತೆಯನ್ನು ಅಕ್ಷರದಲ್ಲಿ ದಾಖಲಿಸಲು ಹೊರಟಿರುವುದು ಕ್ರಾಂತಿಕಾರಕ ಕೆಲಸ. ಅದನ್ನು ಸಾಹಿತ್ಯ ಚರಿತ್ರೆ ಗುರುತಿಸಬೇಕಿತ್ತು ಎಂದರು.

ಅನುವಾದ ಕೃತಿ `ಕಲಿ-ಕತೆ: ವ್ಹಾಯಾ ಬೈಪಾಸ್~ಗೆ ಪ್ರೊ.ಎಸ್.ವಿ. ಪರಮೇಶ್ವರ ಭಟ್ಟ ಬಹುಮಾನ ಸ್ವೀಕರಿಸಿದ ಪ್ರೊ.ಧರಣೇಂದ್ರ ಕುರಕುರಿ ಮಾತನಾಡಿ, ಅನುವಾದಿತ ಕೃತಿಗಳು ವ್ಯಾಪಕ ಚರ್ಚೆಗೆ ಒಳಗಾಗಬೇಕು ಎಂದರು.

ಅನುವಾದಿತ ಕೃತಿಗಳನ್ನು ಎರಡನೇ ಸಾಲಿನಲ್ಲಿ ನಿಲ್ಲಿಸುವ ಪ್ರಯತ್ನಗಳು ನಡೆದಿವೆ. ಆದರೆ, ಇತ್ತೀಚೆಗೆ ಅನುವಾದ ಸಾಹಿತ್ಯಕ್ಕೆ ಮಹತ್ವ ಬರುತ್ತಿದೆ; ಅನುವಾದ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳಾಗಬೇಕಾಗಿದೆ ಎಂದರು.

`ಕಲಿ-ಕತೆ: ವ್ಹಾಯಾ ಬೈಪಾಸ್~ ಕೃತಿ ಕುರಿತು ಡಾ.ಎಸ್. ಸಿರಾಜ್ ಅಹಮದ್ ಮಾತನಾಡಿ, ಇದು ಆಧುನಿಕ ಕಾದಂಬರಿಯೂ ಹೌದು, ಇತಿಹಾಸವನ್ನು ಹೊಸ ರೀತಿಯಲ್ಲಿ ನೋಡಲು ಒತ್ತಾಯಿಸುವ ಕಾದಂಬರಿಯೂ ಹೌದು ಎಂದು ವಿಶ್ಲೇಷಿಸಿದರು.

ಡಾ.ಶಾಂತ ಇಮ್ರಾಪುರ ಅವರ `ಮಧ್ಯ ಯುಗದ ಮಹಿಳಾ ಸಾಹಿತ್ಯ ಮತ್ತು ಸೃಜನಶೀಲತೆ~ ಕೃತಿ ಕುರಿತು ಡಾ.ಮೇಟಿ ಮಲ್ಲಿಕಾರ್ಜುನ ಮಾತನಾಡಿ, ಈ ಕೃತಿ ವಚನ ಚಳವಳಿಯನ್ನು ಆಕಾರ ವಸ್ತುವನ್ನಾಗಿ ಇಟ್ಟುಕೊಂಡಿದ್ದು, ಮಹಿಳೆಗೂ ವಿಶೇಷ ಅಭಿವ್ಯಕ್ತಿ ಕ್ರಮವಿದೆ ಎಂಬುದನ್ನು ಪ್ರತಿಪಾದಿಸುತ್ತದೆ ಎಂದರು.

ನಾ.ಡಿಸೋಜ ಬಹುಮಾನಕ್ಕೆ ಪಾತ್ರವಾದ ರಾಧೇಶ ತೋಳ್ಪಾಡಿ ಅವರ `ಹಲೋ ಹಲೋ ಚಂದಮಾಮ~ ಕೃತಿ ಕುರಿತು ಮಾತನಾಡಿದ ವಿಜಯಶ್ರೀ, ಈ ಕೃತಿಯಲ್ಲಿ ಶೈಲಿ, ಪ್ರಾಸ, ಲಾಲಿತ್ಯ ಅದ್ಭುತವಾಗಿ ಮೂಡಿಬಂದಿವೆ ಎಂದರು.

ಹಾ.ಮಾ.ನಾಯಕ ಬಹುಮಾನಕ್ಕೆ ಪಾತ್ರವಾದ `ಆಳ-ನಿರಾಳ 3~ ಕೃತಿಯ ಅಂಕಣ ಬರಹಗಾರ ಪ್ರೊ.ಕೆ.ವಿ. ತಿರುಮಲೇಶ್ ಅನುಪ ಸ್ಥಿತಿಯಲ್ಲಿ ಲೇಖಕ ಲೇಖಕ ಶೇಷಾದ್ರಿ ಕಿನಾರ ಬಹುಮಾನ ಸ್ವೀಕರಿಸಿದರು. 
ಕರ್ನಾಟಕ ಸಂಘದ ಉಪಾಧ್ಯಕ್ಷೆ ವಿಜಯಾ ಶ್ರೀಧರ್ ಪ್ರಶಸ್ತಿ ಪ್ರದಾನ ಮಾಡಿದರು. ಸಂಘದ ಗೌರವ ಕಾರ್ಯದರ್ಶಿ ಎಚ್.ಡಿ. ಉದಯಶಂಕರಶಾಸ್ತ್ರಿ ಸ್ವಾಗತಿಸಿದರು. ಪ್ರೊ. ಕಿರಣ್ ದೇಸಾಯಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT