ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಪರಿಶೆಯಲ್ಲೂ ಲಿಂಗತಾರತಮ್ಯವೇ?

Last Updated 1 ಫೆಬ್ರುವರಿ 2011, 16:15 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಆರಂಭವಾಗಲಿರುವ ಕನ್ನಡದ ಸಾಹಿತ್ಯ ಪರಿಶೆಗೆ ಎಲ್ಲವೂ ಸಜ್ಜಾಗುತ್ತಿರುವ ವರದಿಗಳು ಮಾಧ್ಯಮಗಳಲ್ಲಿ ಬರುತ್ತಿವೆ. ಆಹ್ವಾನ ಪತ್ರಿಕೆ ಅಚ್ಚಾಗಿ ಎಲ್ಲಕಡೆ ಓಡಾಡುತ್ತಿದೆ. ಅನೇಕರು ಸಾಹಿತ್ಯ ಪರಿಶೆಗೆ ಹೋಗುವ ತರಾತುರಿಯಲ್ಲಿ ಇದ್ದಾರೆ. 

 1915ರಲ್ಲಿ ಪ್ರಾರಂಭವಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಶತಮಾನದ ಹೊಸ್ತಿಲಿನಲ್ಲಿದೆ. ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದು ಅಂದಿನಿಂದ ಇಂದಿನವರೆಗೆ ಹೇಳುತ್ತ ಬರಲಾಗುತ್ತಿದೆ. ಕನ್ನಡ ಸಮ್ಮೇಳನಗಳು ನಡೆಯುತ್ತವೆ; ಪುಸ್ತಕಗಳು ಪ್ರಕಟವಾಗುತ್ತವೆ; ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪ್ರಕಟವಾಗುವ ಪುಸ್ತಕಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ಕನ್ನಡ ಭಾಷೆಗೆ, ಭಾಷಿಕರಿಗೆ ತೊಂದರೆಯಾದಾಗ ‘ದನಿ’ ಎತ್ತಲಾಗುತ್ತದೆ. ಪ್ರಾತಿನಿಧಿಕ ಸಂಸ್ಥೆ ಎನಿಸಿಕೊಳ್ಳಲು ಇದಕ್ಕಿಂತ ಇನ್ನೇನು ಬೇಕು? ಕನ್ನಡ ಸಾಹಿತ್ಯ ಪರಿಷತ್ತು ನಿಜವಾದ ಅರ್ಥದಲ್ಲಿ ಕನ್ನಡಿಗರೆಲ್ಲರ ಪ್ರಾತಿನಿಧಿಕ ಸಂಸ್ಥೆಯಂತೆ ಕೆಲಸ ಮಾಡುತ್ತಿದೆಯೇ ಎನ್ನುವ ಪ್ರಶ್ನೆಯನ್ನು ಈಗ ಎತ್ತುವ ತುರ್ತಿದೆ.

ಕರ್ನಾಟಕ ಹಲವು ಭಾಷೆ,  ಜಾತಿ, ವರ್ಗ, ಧರ್ಮಗಳ ನಾಡು. ಜೊತೆಗೆ, ಸ್ತ್ರೀ ಪುರುಷರಿಬ್ಬರೂ ಇಲ್ಲಿ ಇದ್ದಾರೆ. ಆದರೆ ಪರಿಷತ್ತಿನ ಇತಿಹಾಸವನ್ನು ಕೆದಕಿದರೆ; ಸಾಮಾಜಿಕ ನ್ಯಾಯ ಇಲ್ಲಿ ರೋದಿಸುತ್ತಿದೆ. ಲಿಂಗ ತಾರತಮ್ಯ ಕಣ್ಣಿಗೆ ರಾಚುತ್ತದೆ.

ಈ ಬಾರಿಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ನೋಡಿದಾಗ, ಲಿಂಗಾಧಾರಿತ ತಾರತಮ್ಯ ಢಾಳಾಗಿ ಗೋಚರಿಸುತ್ತದೆ. ಮೂರು ದಿನಗಳಲ್ಲಿ ಒಟ್ಟಾರೆ 17 ಗೋಷ್ಠಿಗಳು ನಡೆಯಲಿವೆ. ಒಟ್ಟು 45 ವಿದ್ವಾಂಸರು ಪ್ರಬಂಧ ಮಂಡಿಸಲಿದ್ದಾರೆ. ಅವರಲ್ಲಿ 6 ಜನ ಮಾತ್ರ ಮಹಿಳೆಯರು. ಅಂದರೆ ಶೇ.13ರಷ್ಟು. 10 ಗೋಷ್ಠಿಗಳಲ್ಲಿ ಒಬ್ಬ ಪ್ರಬಂಧಕಾರ ಮಹಿಳೆಯೂ ಇಲ್ಲ. ಇಬ್ಬರು ಮಹಿಳೆಯರು ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದರೆ, ಇಬ್ಬರು ಆಶಯ ಭಾಷಣ ಮಾಡಲಿದ್ದಾರೆ. ‘ಮಹಿಳೆ’ ಎನ್ನುವ ಗೋಷ್ಠಿಯನ್ನು ಹೊರತು ಪಡಿಸಿದರೆ ಅಧ್ಯಕ್ಷತೆ ಮತ್ತು ಆಶಯ ಭಾಷಣ ಮಾಡುವವರು ಒಬ್ಬೊಬ್ಬರೇ.

‘ಮಹಿಳೆ’ ಕುರಿತಂತೆ ಗೋಷ್ಠಿ ಇರುವುದರಿಂದ ಇತರೆಡೆ ಮಹಿಳೆಗೆ ಅವಕಾಶ ಯಾಕೆ ಎನ್ನುವ ಉಪೇಕ್ಷೆಯೋ? ಅಥವಾ ಮಹಿಳೆಯ ಸಾಮರ್ಥ್ಯದ ಬಗೆಗೆ ಅಪನಂಬಿಕೆಯೋ? ಪುರುಷ ಪಾರಮ್ಯದ ಅಹಮಿಕೆಯೋ?

 ಮಹಿಳಾ ವಿಷಯ ಕುರಿತು ಮಹಿಳೆಯೇ ಮಾತನಾಡಬೇಕು ಎನ್ನುವ ಬೇಲಿಯನ್ನು ನಿರ್ಮಿಸಿದ್ದು ಯಾರು? ಈ ಬಾರಿಯ ಸಮ್ಮೇಳನಕ್ಕೆ ಮಾತ್ರ ಇದು ಸೀಮಿತವಾದ ಸಂಗತಿಯಲ್ಲ. ಸಾಹಿತ್ಯ ಸಮ್ಮೇಳನದಲ್ಲಿ ಮಹಿಳೆ ಕುರಿತಂತೆ ಗೋಷ್ಠಿಯೊಂದನ್ನು ಸಂಯೋಜಿಸುವ ಸಂಪ್ರದಾಯ ಪ್ರಾರಂಭವಾದಾಗಿನಿಂದ ಹೀಗೆ ನಡೆಯುತ್ತ ಬಂದಿದೆ. ಮಹಿಳೆಯ ಸಮಸ್ಯೆಗಳನ್ನು, ಮಹಿಳೆಯರು ರಚಿಸಿದ ಸಾಹಿತ್ಯವನ್ನು ಪುರುಷರು ಅರ್ಥಮಾಡಿಕೊಳ್ಳಲು ಸಮರ್ಥರಲ್ಲ ಎಂದೋ ಅಥವಾ ಅವರಿಗೆ ಅದು ಬೇಕಿಲ್ಲ ಎಂದೋ? ಸಾಹಿತ್ಯದ ಬಗೆಗೆ ಚರ್ಚಿಸುವಾಗಲೂ ಮಹಿಳೆಯರಿಂದ ರಚಿತವಾದ ಕೃತಿಗಳ ಬಗೆಗೆ ಉಪೇಕ್ಷಿಸುವುದು ಇಂದು ನಿನ್ನೆಯ ಸಂಗತಿಯಲ್ಲ.

 ಈ ಉಪೇಕ್ಷೆಯನ್ನು ಮಹಿಳೆಯರು ಪ್ರತಿಭಟಿಸಿದ್ದರ ಫಲವಾಗಿ ಮಹಿಳಾ ಸಾಹಿತ್ಯ ಕುರಿತಂತೆ ಗೋಷ್ಠಿಗಳು ಶುರುವಾದವು. ಆದರೆ ಮಹಿಳೆಗೆ ಸಂಬಂಧಿಸಿದ ವಿಷಯದಲ್ಲಿ ಅದೇ ಪುರುಷ ಧೋರಣೆ ಮುಂದುವರಿದಿದೆ ಎನ್ನುವುದಕ್ಕೆ ಈ ಗೋಷ್ಠಿಯೊಂದು ಉದಾಹರಣೆ. ‘ಮಹಿಳೆ’ ಗೋಷ್ಠಿಗೆ ಸೂಚಿತವಾಗಿರುವ ವಿಷಯಗಳಲ್ಲಿ ಖಚಿತತೆಯಾಗಲಿ, ನಿರ್ದಿಷ್ಟತೆಯಾಗಲಿ ಇಲ್ಲ. ಮಹಿಳಾ ವಿಷಯದಲ್ಲಿ ತಿಳಿವಳಿಕೆಯ ಕೊರತೆ ಇರುವುದನ್ನು ಇದು ತೋರಿಸುತ್ತದೆ.

ಈ ಸಮ್ಮೇಳನದಲ್ಲಿ 140 ಜನರನ್ನು ಸನ್ಮಾನಿಸಲಾಗುತ್ತಿದೆ. ಅವರಲ್ಲಿ 12 ಜನ ಮಹಿಳೆಯರು. ಈ ಸನ್ಮಾನಕ್ಕೆ ಅಳತೆಗೋಲು ಯಾವುದು? ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಈ  ಸನ್ಮಾನ ಎಂದಾದರೆ, ಸಾಧನೆ ಮಾಡಿರುವ ಮಹಿಳೆಯರು ಪರಿಷತ್ತಿನ ಗಮನಕ್ಕೆ ಬಂದಿಲ್ಲವೇ? ಇದರರ್ಥ ಮಹಿಳೆಗೆ ಮೀಸಲಾತಿ ನೀಡಿ ಎಂದಲ್ಲ, ಪುರುಷನಷ್ಟೆ ಅವಳೂ ಸಮರ್ಥಳು ಎಂಬುದಕ್ಕಾಗಿ ಈ ಮಾತು.    

ಕರ್ನಾಟಕ ಲೇಖಕಿಯರ ಸಂಘ ಹಲವು ವರ್ಷಗಳಿಂದ ಮಹಿಳಾ ಸಂಬಂಧಿತ ಕಾರ್ಯಕ್ರಮಗಳನ್ನು  ನಡೆಸುತ್ತಿದೆ. ಅದಕ್ಕೆ ಪುರುಷರನ್ನು ಆಹ್ವಾನಿಸುತ್ತದೆ. ವಿಷಯ ಮಾತ್ರ ಮಹಿಳೆಗೆ ಸಂಬಂಧಿಸಿದ್ದಾಗಿರುತ್ತದೆ. ಈ ಮಾದರಿಯನ್ನು ಪರಿಷತ್ತು ನಡೆಸುವ ಸಮ್ಮೇಳನಗಳೂ ಅನುಸರಿಸಬೇಕು. ಆರು ದಶಕಗಳವರೆಗೆ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಮಹಿಳೆಯ ಹೆಸರನ್ನು ಸೂಚಿಸದ, ಇದುವರೆಗೆ ಪರಿಷತ್ತಿನ ಅಧ್ಯಕ್ಷಳಾಗಲು ಮಹಿಳೆಗೆ ಅವಕಾಶವನ್ನೇ ಕೊಡದ ಪರಿಷತ್ತು ತಾನು ಕ್ರಮಿಸುತ್ತಿರುವ ದಾರಿಯನ್ನು ಈಗಲಾದರೂ ತಿದ್ದಿಕೊಳ್ಳಬೇಕು ಎನ್ನುವ ಆಶಯ. ಹಿಂದೊಮ್ಮೆ ಬಂಡಾಯ ಸಾಹಿತ್ಯ ಸಂಘಟನೆ ಸಮಾನಾಂತರ ಸಮ್ಮೇಳನ ನಡೆಸಿರುವುದನ್ನು ನೆನಪಿಸಿಕೊಳ್ಳುವ ಅಗತ್ಯವಿದೆ.

ಪೂರ್ಣಕುಂಭ ಸ್ವಾಗತಕ್ಕೆ, ರಂಗೋಲಿಯಿಂದ ಅಲಂಕರಿಸಲಿಕ್ಕೆ ಮಹಿಳೆಯರನ್ನು ಬಳಸಿಕೊಳ್ಳಲು ಸಂಕೋಚಪಡದ ಪರಿಷತ್ತು, ಅವಕಾಶದ ವಿಷಯದಲ್ಲಿ ಮಹಿಳೆಯನ್ನು ನಗಣ್ಯವಾಗಿ ಕಾಣುತ್ತಿದೆ. ಈ ಬಾರಿ ಸಮ್ಮೇಳನಕ್ಕೆ 6 ಕೋಟಿ ರೂಪಾಯಿ ಸರಕಾರದ ಅನುದಾನ ದೊರೆತಿದೆ. ಅದು ಸೂಕ್ತ ರೀತಿಯಲ್ಲಿ  ವಿನಿಯೋಗವಾಗುವಂತೆ ನೋಡಿಕೊಳ್ಳುವುದು ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯೆಂದು ಹೇಳಿಕೊಳ್ಳುತ್ತಿರುವ ಪರಿಷತ್ತಿನ ಜವಾಬ್ದಾರಿ.

 ಈಗ ಆಗಿರುವ ನ್ಯೂನತೆಗಳಿಗೆ ಅಧ್ಯಕ್ಷರು ಸಮ್ಮೇಳನ ಸಮಿತಿಯ ಕಡೆ ಕೈತೋರಿಸಬಹುದು. ಆದರೆ ಅಧ್ಯಕ್ಷರ ಜವಾಬ್ದಾರಿ ಅಷ್ಟಕ್ಕೆ ಮುಗಿಯುವುದಿಲ್ಲ. ಈಗಾಗಲೇ ಸಾಹಿತ್ಯ ಸಮ್ಮೇಳನ ಬೇಕೇ ಎನ್ನುವ ಚರ್ಚೆ ಪ್ರಾರಂಭವಾಗಿದೆ.

ಇಷ್ಟರಲ್ಲೇ ವಿಶ್ವಕನ್ನಡ ಸಮ್ಮೇಳನ ಜರುಗಲಿದೆ. ಪರಿಷತ್ತು ಲಿಂಗಾಧಾರಿತ ತಾರತಮ್ಯವನ್ನು ಮುಂದುವರಿಸಿದರೆ, ಸಾಮಾಜಿಕ ನ್ಯಾಯವನ್ನು ಪರಿಗಣಿಸದಿದ್ದರೆ, ಅದು ಕೆಲವರ ಹಿತಾಸಕ್ತಿಯನ್ನು ಕಾಪಾಡುವ, ಬಲಾಢ್ಯರ, ಬಾಲ ಬಡುಕರ ಆಡುಂಬೊಲವಾಗುವಷ್ಟಕ್ಕೆ ಸೀಮಿತವಾಗುತ್ತದೆ.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT