ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಪುರವಣಿ ಪ್ರತಿಕ್ರಿಯೆ

Last Updated 31 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ನನ್ನ ವಿದ್ಯಾಗುರುಗಳಾದ ಡಾ. ಸಿ.ಪಿ.ಕೆ. ಅವರ ಲೇಖನ (ಸಮನ್ವಯ ವಾಙ್ಮಯ) ಓದುತ್ತಾ, ನಾನು ಅವರ ವಿದ್ಯಾರ್ಥಿಯಾಗಿದ್ದಾಗ ತರಗತಿಯಲ್ಲಿ ಮಾಡುತ್ತಿದ್ದ ಪಾಠದ ಧ್ವನಿ ತರಂಗ ಮತ್ತೊಮ್ಮೆ ಕಿವಿಯಲ್ಲಿ ರಿಂಗಣಿಸಿತು. ಅವರ ಎದುರು ಕೂತು ಕೇಳಿದಂತಹ ಅನುಭವದ ತನ್ಮಯತೆ ಅವರ ಲೇಖನದಲ್ಲಿತ್ತು. ಅವರ ಮಾತು ಬರಹ ಎರಡೂ ಒಂದೇ ಶೈಲಿಯನ್ನು ಹೋಲುತ್ತದೆ. ಅವರ ಬರಹದ ಹಾದಿಯ ನೋಟದಿಂದ ಅವರು `ಸಮನ್ವಯ ವಾಙ್ಮಯ'ದಲ್ಲಿ ಸಾಧಕರೆಂದೇ ಹೇಳಬಹುದು.
-ಸುಶೀಲಾ ಸದಾಶಿವಯ್ಯ, ತುಮಕೂರು

ಸಿ.ಪಿ. ಕೃಷ್ಣಕುಮಾರ ಸಾಹಿತ್ಯ ಕ್ಷೇತ್ರದಲ್ಲಿ ಓದುಗರಿಗೆ ಹತ್ತಿರವಾಗಿದ್ದಾರೆ. ನಿರಂತರವಾಗಿ ಕನ್ನಡ ಸಾರಸ್ವತ ಲೋಕದಲ್ಲಿ ವಿಶಿಷ್ಟತೆ ಮೆರೆದಿದ್ದಾರೆ. ಸೀಮೆಎಣ್ಣೆ ದೀಪದಲ್ಲಿ ಓದಿ ಇಂದು ಕನ್ನಡ ಸಾಹಿತ್ಯದಲ್ಲಿ ಎಲ್ಲರೂ ಗುರುತಿಸುವಂತಹ ಲೇಖಕರಾಗಿರುವುದು ನಿಜಕ್ಕೂ ಸಂತೋಷ ತಂದಿದೆ. ಎಣ್ಣೆ ದೀಪದ ಓದು ಮೆದುಳಿಗೆ ಹೆಚ್ಚು ಶಕ್ತಿ ತುಂಬುತ್ತದೆಯ `ಸರ್' ಎಂದು ನಾವು ಕೇಳಲೇಬೇಕು.
-ಶಂಕರ ಶೆಟ್ಟಿ, ಕೊತ್ತಾಡಿ-ವಡ್ಡರ್ಸೆ

ಲೇಖನ ಅವರ ಇಡಿಯಾದ ಸಾಹಿತ್ಯಕ ಚಿತ್ರಣವನ್ನು ಕಟ್ಟಿಕೊಟ್ಟಿದೆ. 75ರ ಹರೆಯದಲ್ಲೂ ಇನ್ನಷ್ಟು ಸಾಧಿಸಬೇಕೆಂಬ ಅವರ ಬಯಕೆ, ಸಾಹಿತ್ಯ ವಿದ್ಯಾರ್ಥಿಗಳಿಗೆ ಹಾಗೂ ಹೊಸ ಲೇಖಕರಿಗೆ ಸ್ಫೂರ್ತಿಯಾಗಿದೆ. ಇವರಿಗೆ ದಕ್ಕಿದ ಗುರು ಪರಂಪರೆ ಅವರ ಅದೃಷ್ಟವೇ ಸರಿ.
-ಮೋಹನ್ ಮಿರ್ಲೆ, ಕೆ. ಆರ್. ನಗರ

ಸಿ.ಪಿ.ಕೆ. ಅವರ ಆತ್ಮನಿವೇದನೆ ಆಪ್ತವಾಗಿತ್ತು. ಬಹುಶಃ ನಾನು ಪತ್ರಿಕೆಗಳನ್ನು ಓದಲಾರಂಭಿಸಿದ ದಿನಗಳಿಂದ ಈವರೆಗೆ ಸಿಪಿಕೆಯವರ ಹನಿ-ಮಿನಿಗವನಗಳಿಲ್ಲದ ಯಾವ ಪತ್ರಿಕೆಯನ್ನೂ ನೋಡಿಲ್ಲ ಎಂದರೆ ಉತ್ಪ್ರೇಕ್ಷೆಯಂತೂ ಅಲ್ಲ. ಅವುಗಳಲ್ಲಿ ಕಾವ್ಯರಸ ಎಷ್ಟಿದೆ ಎನ್ನುವುದಕ್ಕಿಂತಲೂ `ಅಲ್ಲಿರುವ ಕಾವ್ಯಾಸಕ್ತಿ, ಜೀವನೋತ್ಸಾಹ ಮತ್ತು ಅನುಭವಗಳು' ವೈಶಿಷ್ಟ್ಯಪೂರ್ಣವಾಗಿರುತ್ತವೆ. ಸಿಪಿಕೆಯವರ ಮುಗ್ಧ-ನಿಷ್ಕಪಟ ಆತ್ಮನಿವೇದನೆ ಇಷ್ಟವಾಯಿತು.
-ಚನ್ನಬಸವ ಪುತ್ತೂರ್ಕರ, ಚಿತ್ರದುರ್ಗ

ಪ್ರಕಾಶಕರ ನೋವು-ನಲಿವಿಗೆ ವೇದಿಕೆ ಒದಗಿಸಿದ `ಸಾಹಿತ್ಯ ಪುರವಣಿ' ಅವರ ನೋವನ್ನು ಓದುಗರಿಗೆ ತಲುಪಿಸಿದೆ. ಒಂದು ಪುಸ್ತಕ ಖರೀದಿಗೆ ನೂರೆಂಟು ಬಾರಿ ಯೋಚಿಸುವ ಇಂದಿನ ಕೆಲ ಓದುಗರು ಈಗಲಾದರೂ ಪ್ರಕಾಶಕರ ನೋವು ತಿಳಿಯಬೇಕು. ಸರ್ಕಾರ ಇಂಥ ಪ್ರಕಾಶಕರಿಗೆ ಸಹಾಯಹಸ್ತ ನೀಡಿ ಅವರ ಕಷ್ಟ ಅರಿಯಬೇಕು. ಪ್ರಕಾಶನ ಕ್ಷೇತ್ರದಲ್ಲಿ ಬಳ್ಳಾರಿಯ `ಪಲ್ಲವ ವೆಂಕಟೇಶ್' ಅವರ ಶ್ರಮವನ್ನು ಓದಿ ನಿಜಕ್ಕೂ ಬೇಸರವಾಯಿತು. ಓದುಗರು ಓದುವ ಹವ್ಯಾಸದ ಜೊತೆಗೆ ಪುಸ್ತಕ ಖರೀದಿಗೂ ಮುಂದಾಗಬೇಕು. ಪ್ರಕಾಶಕರಿಗೆ ನೈತಿಕ ಬೆಂಬಲ-ಬಲ ನೀಡಬೇಕು. ಪುಸ್ತಕ ಕೊಳ್ಳುವ ಮೂಲಕ ಪುಸ್ತಕ ಸಂಸ್ಕೃತಿ ಬೆಳೆಸಬೇಕು.
-ಡಾ. ಕೆ.ವಿ. ಸಂತೋಷ್ ಹೊಳಲ್ಕೆರೆ, ಚಿತ್ರದುರ್ಗ

`ಸಾಹಿತ್ಯ ಸಾಂಗತ್ಯ'ದಲ್ಲಿ ಲೇಖಕಿ ಹೇಮಾ ಪಟ್ಟಣಶೆಟ್ಟಿ ಅವರು ಹೇಳಿದಂತೆ `ಬೆಳವಣಿಗೆಯ ಅನುಭವ ಕೊಡುವುದೇ ಉತ್ತಮ ಕೃತಿ'. ಇದು ಒಂದು ಉತ್ತಮ ಸಂದರ್ಶನವೂ ಹೌದು. ಇದು ಹೇಮಾ ಅವರ ಓದಿನ ಮೋಹ, ದಾಹದ ಕುರಿತು ಪರಿಪೂರ್ಣ ಚಿತ್ರಣ ನೀಡುವಂತಿದೆ. ಬುದ್ಧಿ-ಭಾವನೆಗಳ ಸಾಧ್ಯತೆಗಳನ್ನು ಬಳಸಿಕೊಳ್ಳಲು ಅಕ್ಷರಜ್ಞಾನ ಒಂದು ಸಾಧನವಷ್ಟೇ ಹೊರತು ಅನಿವಾರ್ಯವಲ್ಲ ಎಂಬ ಅವರ ಮಾತನ್ನೂ ಒಪ್ಪಬೇಕು. ಒಂದಿಷ್ಟೂ ಕೃತ್ರಿಮತೆ ತೋರದ ಲೇಖಕಿಯ ಒಂದೊಂದು ಮಾತು ಕೂಡಾ ತೀರಾ ಸಹಜ, ಸರಳ. ಅವರ ಸೀದಾಸಾದಾ ಅನುಭವ ಸಂದರ್ಶನದಲ್ಲಿ ವ್ಯಕ್ತವಾಗಿದೆ.
-ನಾಗರತ್ನ ಎಸ್. ಗೌಡರ್, ಬಾಗಲಕೋಟೆ

ಪಲ್ಲವ ಪ್ರಕಾಶನದ ವೆಂಕಟೇಶ್ ಅವರ ಅನುಭವ ಅನನ್ಯ. ಅವರ ಪುಸ್ತಕ ಪ್ರೀತಿಯ ಬದ್ಧತೆ ಸ್ಫೂರ್ತಿ ಕೊಡುವಂತಿದೆ. ಬದ್ಧತೆಯೊಂದಿಗೆ ಆ ಕ್ಷೇತ್ರದ ಬವಣೆಯನ್ನೂ ವ್ಯಕ್ತಪಡಿಸಿದ ಈ ಯುವಕನ ಮನೋಸ್ಥೈರ್ಯ ಮೆಚ್ಚುವಂತದ್ದು.
ಮಲ್ಲಿಕಾ ಘಂಟಿಯವರ `ರೊಟ್ಟಿ ಮತ್ತು ಹುಡುಗಿ' ಕವನ ದಟ್ಟ ವಾಸ್ತವತೆಯೊಂದಿಗೆ ಮಾರ್ಮಿಕವಾಗಿ ಪ್ರಸ್ತುತಗೊಂಡಿದೆ. ಅದನ್ನು ಉತ್ತಮವಾಗಿ ಡಾ. ಅನುಸೂಯಾ ಕಾಂಬಳೆ ವಿಶ್ಲೇಷಿಸಿದ್ದಾರೆ.
-ಡಾ. ವೆಂಕಟಯ್ಯ ಅಪ್ಪಗೆರೆ, ಬಳ್ಳಾರಿ

`ಪುಸ್ತಕ ಪ್ರೀತಿ ಬೆಳೆಸುವುದೇ ನಮ್ಮ ಕಾಯಕ' ಎಂಬ ಲೇಖನ ತುಂಬಾ ಚೆನ್ನಾಗಿತ್ತು. `ಪಲ್ಲವ ಪ್ರಕಾಶನ'ದ ವೆಂಕಟೇಶ್ ತಮ್ಮ ಪ್ರಕಾಶನ ಕ್ಷೇತ್ರದಲ್ಲಿನ ಅನುಭವಗಳನ್ನು ಉತ್ತಮವಾಗಿ ಹಂಚಿಕೊಂಡಿದ್ದಾರೆ.
-ಪಂಪಾಪತಿ ಗಾಳೆಮ್ಮನಗುಡಿ,  ಹಂಪಿ

ಪಂಪ ರಾಮಾಯಣದಲ್ಲಿ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಚರ್ಚಿಸಿದಂತೆ ಭಾರತೀಯ ಸಾಹಿತ್ಯವೂ ದುರಂತದ ಪರಿಕಲ್ಪನೆಯನ್ನು ಒಳಗೊಂಡ ಸಾಹಿತ್ಯವನ್ನು ಹಲವು ಸಂದರ್ಭಗಳಲ್ಲಿ ನೀಡಿದೆ ಎನ್ನುವುದನ್ನು ಮರೆಯಲಾಗದು. ನಮ್ಮ ಕನ್ನಡದ `ಕೆರೆಗೆ ಹಾರ' ಎಂಬ ಜಾನಪದ ಹಾಡಿನಲ್ಲಿ ಆ ಪರಿಕಲ್ಪನೆಯನ್ನು ಕಾಣಬಹುದು. ಸಮಾಜದ  ಹಿತಕ್ಕಾಗಿ ಹೆಣ್ಣೊಬ್ಬಳು ಸ್ವಯಂ ಪ್ರೇರಣೆಯಿಂದ ತನ್ನ ಬದುಕನ್ನೇ ತ್ಯಾಗ ಮಾಡುವುದು ಇಲ್ಲಿನ ವಿಶೇಷ. ತಮಿಳು ಭಾಷೆಯ `ಶಿಲಪ್ಪದಿಕಾರಂ' ಕಥೆಯಲ್ಲಿನ ಕನ್ನಗಿ ಎಂಬ ಮಹಿಳೆಯು ಕೂಡಾ ದುರಂತ ಪರಿಕಲ್ಪನೆಗೆ ಸಾಕ್ಷಿಯಾಗಿದ್ದಾಳೆ.
-ಹಸನಸಾಬ. ಸೈದುಸಾಬ ಹಂಚಿನಾಳ, ತಾ. ನವಲಗುಂದ, ಧಾರವಾಡ ಜಿ.

ಡಾ. ಸಿ.ಪಿ.ಕೆ. ಅವರ ಲೇಖನ ಉತ್ತಮವಾಗಿದೆ. ಜೀವನದಲ್ಲಿ ಹಲವು ಕವಲುಗಳಿದ್ದರೂ, ಬೇರು ಒಂದೇ ಎಂಬಂತೆ ವೃತ್ತಿಗೂ, ಹವ್ಯಾಸಕ್ಕೂ ಕೊಂಡಿ ಬೆಸೆದುಕೊಂಡಾಗಲೇ ಜೀವನಕ್ಕೆ ಸಾರ್ಥಕತೆ ಬರುತ್ತದೆ ಎಂಬುದು ಅವರ ಲೇಖನದಲ್ಲಿ ಎದ್ದುಕಾಣುವ ಅಂಶ.. `ಸಾಹಿತ್ಯ ಸಾಂಗತ್ಯ'ದಲ್ಲಿ ಹೇಮಾ ಪಟ್ಟಣಶೆಟ್ಟಿ ಅವರ ಸಂದರ್ಶನ ಮನಮುಟ್ಟುವಂತಿದೆ. ಬದುಕಿನಲ್ಲಿ ದುಡ್ಡೇ ಮುಖ್ಯವಲ್ಲ. ಮನಸ್ಸಿಗೆ ತೃಪ್ತಿ ನೀಡವ ಸಾಹಿತ್ಯ ಒಂದಿದ್ದರೆ ಏನೆಲ್ಲಾ ಸುಖ-ಸಂತೋಷ ಪಡೆಯಬಹುದು ಎಂಬುದನ್ನು ಲೇಖಕಿ ಹೇಮಾ ತಿಳಿಸಿದ್ದಾರೆ. ಅವರೆಂದಂತೆ ಇಂದಿನ ಮಕ್ಕಳಿಗೆ ಕಲ್ಪನಾಶಕ್ತಿ ಉತ್ಸಾಹ ಜೀವನ ಮೌಲ್ಯಗಳ ಅರಿವು ಆಗಿಲ್ಲ.
`ಕಾವ್ಯಕಾರಣ' ಅಂಕಣದಲ್ಲಿ ಮಲ್ಲಿಕಾ ಘಂಟಿ ಅವರ ಕವನದ ವಿಮರ್ಶೆಯನ್ನು ಡಾ. ಅನಸೂಯಾ ಕಾಂಬಳೆ ಚೆನ್ನಾಗಿ ಮಾಡಿದ್ದಾರೆ.
-ಎಸ್.ಎಸ್. ಸೂಳಿಕೇರಿ, ಬೆನಕನಕೊಪ್ಪ ತಾ. ಗದಗ ಜಿ.

ನಿಮ್ಮ ಪ್ರತಿಕ್ರಿಯೆ ಇಲ್ಲಿಗೆ ಕಳುಹಿಸಿ...
ಸಂಪಾದಕರು, ಸಾಹಿತ್ಯ ಪುರವಣಿ, ಪ್ರಜಾವಾಣಿ, ನಂ. 75, ಮಹಾತ್ಮಾಗಾಂಧಿ ರಸ್ತೆ, ಬೆಂಗಳೂರು-1 sahithyapuravani@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT