ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಸಮ್ಮೇಳನದ ಜೊತೆ ಜಾಲಿ ರೈಡ್‌

Last Updated 7 ಜನವರಿ 2014, 8:40 IST
ಅಕ್ಷರ ಗಾತ್ರ

ಮಡಿಕೇರಿ: ಜ.7ರಿಂದ ಮೂರು ದಿನಗಳ ಕಾಲ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿರುವ ಮಡಿಕೇರಿಯು ಅತ್ಯುತ್ತಮ ಪ್ರವಾಸಿ ತಾಣವೆನ್ನುವ ಖ್ಯಾತಿ ಪಡೆದಿದೆ. ಮಡಿಕೇರಿ ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಅತ್ಯುತ್ತಮ ಪ್ರವಾಸಿ ಕೇಂದ್ರಗಳಿವೆ.

ಆಯ್ದ ಪ್ರವಾಸಿ ಕೇಂದ್ರಗಳಿಗೆ ವಿಶೇಷ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಮಡಿಕೇರಿ ಮ್ಯಾನೇಜರ್‌ ಲಚ್ಮೇಗೌಡ ತಿಳಿಸಿದರು. ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಆಗಮಿಸುವ ಸಾಹಿತ್ಯಾಸಕ್ತರಿಗೆ ಈ ಸ್ಥಳಗಳ ಕಿರುಪರಿಚಯ ಇಲ್ಲಿದೆ;
ಮಡಿಕೇರಿ

ಕೊಡಗು ಜಿಲ್ಲೆಯ ಕೇಂದ್ರ ಸ್ಥಾನವಾಗಿರುವ ಮಡಿಕೇರಿಯು ಸಮುದ್ರ ಮಟ್ಟದಿಂದ 1,170 ಮೀಟರ್‌ ಎತ್ತರದಲ್ಲಿದೆ. ಬೆಟ್ಟ ಗುಡ್ಡ, ಅರಣ್ಯ, ಕಾಫಿ ತೋಟಗಳಿಂದ ಆವರಿಸಿದೆ. ಇಲ್ಲಿನ ತಂಪಾದ ವಾತಾವರಣ ಹಾಗೂ ಆಗಾಗ ಮೂಡುವ ಮಂಜಿನ ಪದರು ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ಮಡಿಕೇರಿ ನಗರದ ರಾಜಾಸೀಟ್‌, ಸ್ಟ್ಯುವರ್ಟ್‌ ಹಿಲ್‌ ಮೇಲೆ ಬೆಳಗಿನ ಜಾವ ನಿಂತು ನೋಡಿದರೆ ಮೋಡಗಲು ಧರೆಗೆ ಇಳಿದು ಬಂದಂತಹ ಅನುಭವವಾಗುತ್ತದೆ.

ಕೊಡಗು ರಾಜ್ಯವನ್ನು ಆಳಿದ ಮುದ್ದುರಾಜ ಅರಸರು 1681ರಲ್ಲಿ ಕಟ್ಟಿಸಿರುವ ಕೋಟೆಯು (ನಂತರದ ದಿನಗಳಲ್ಲಿ ಟಿಪ್ಪು ಸುಲ್ತಾನ್‌, ಲಿಂಗರಾಜೇಂದ್ರ–2, ಬ್ರಿಟಿಷರು ಇದನ್ನು ನವೀಕರಣ ಮಾಡಿದರು) ನಗರದಲ್ಲಿದೆ. ಕೋಟೆಯ ಆವರಣದಲ್ಲಿ ಚರ್ಚ್‌ವಿದ್ದು, ಅದನ್ನೀಗ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಗಿದೆ. ಅನೇಕ ವೀರಗಲ್ಲುಗಳು, ಪ್ರಾಚೀನ ವಸ್ತುಗಳು, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರಿಗೆ ಸೇರಿದ ಹಲವಾರು ವಸ್ತುಗಳು, ದಾಖಲೆ ಪತ್ರಗಳು, ರಾಜರ ಉಡುಪುಗಳು, ಇನ್ನಿತರ ಪುರಾತರನ ವಸ್ತುಗಳಿವೆ.

ನಗರ ವ್ಯಾಪ್ತಿಯೊಳಗೆ ರಾಜಾಸೀಟ್‌ ಉದ್ಯಾನವಿದೆ. ಪಶ್ಚಿಮ ಘಟ್ಟದ ಸೌಂದರ್ಯವನ್ನು ಸವಿಯಬಹುದಾಗಿದೆ. 1820ರಲ್ಲಿ ಲಿಂಗರಾಜೇಂದ್ರ–2 ಅರಸರು ಕಟ್ಟಿಸಿದ ಓಂಕಾರೇಶ್ವರ ದೇವಾಲಯವು ತನ್ನ ವಿಶಿಷ್ಟ ವಾಸ್ತುಶಿಲ್ಪದಿಂದಾಗಿ ಆಕರ್ಷಿಸುತ್ತದೆ. ನಗರಕೇಂದ್ರದಿಂದ 1.5 ಕಿ.ಮೀ ದೂರದಲ್ಲಿ ರಾಜರ ಗದ್ದುಗೆ ಇದೆ. ಕೊಡಗನ್ನು ಆಳಿದ ವೀರರಾಜೇಂದ್ರ, ಲಿಂಗರಾಜೇಂದ್ರ ಹಾಗೂ ಅವರ ಧರ್ಮಪತ್ನಿಯ ಸಮಾಧಿಯನ್ನು ನಿರ್ಮಿಸಲಾಗಿದೆ.

ತಲಕಾವೇರಿ 
ಜೀವನದಿ ಕಾವೇರಿಯ ಉಗಮಸ್ಥಳವಾಗಿರುವ ತಲಕಾವೇರಿಯು ಮಡಿಕೇರಿಯಿಂದ 46 ಕಿ.ಮೀ ದೂರದಲ್ಲಿದೆ. ಬ್ರಹ್ಮಗಿರಿ ತಪ್ಪಲಿನಲ್ಲಿರುವ ತಲಕಾವೇರಿಯು ಧಾರ್ಮಿಕ ಕೇಂದ್ರವಾಗಿದ್ದು, ದೇವಸ್ಥಾನದೊಳಗೆ ಪ್ರವೇಶಿಸಲು ವಸ್ತ್ರಸಂಹಿತೆ ಇದೆ. ಮೈತುಂಬಾ ಬಟ್ಟೆ ಹಾಕಿರಬೇಕು. ಶಾರ್ಟ್ಸ್‌ಗೆ ಅವಕಾಶವಿಲ್ಲ (ದೇವಸ್ಥಾನದ ಬಳಿ ಬದಲಿ ಪಂಚೆ– ಶಾಲು ಬಟ್ಟೆಯ ವ್ಯವಸ್ಥೆ ದೊರಕುತ್ತದೆ). 6 ಗಂಟೆ ನಂತರ ಪ್ರವೇಶವಿಲ್ಲ. ಇಲ್ಲಿಗೆ ತೆರಳಲು ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳ ಉತ್ತಮ ಸೌಕರ್ಯವಿದೆ.

ಭಾಗಮಂಡಲ
ಮಡಿಕೇರಿಯಿಂದ 39 ಕಿ.ಮೀ ದೂರದಲ್ಲಿ, ತಲಕಾವೇರಿಗೆ ತೆರಳುವ ಮಾರ್ಗಮಧ್ಯೆದಲ್ಲಿ  ಭಾಗಮಂಡಲವಿದೆ.  ತಲಕಾವೇರಿಯಲ್ಲಿ ಹುಟ್ಟುವ ಕಾವೇರಿಯು 7 ಕಿ.ಮೀ ಹರಿದು ಭಾಗಮಂಡಲದಲ್ಲಿ ಕನ್ನಿಕೆ ಹಾಗೂ ಸುಜ್ಯೋತಿ ನದಿಯನ್ನು ಸಂಧಿಸುತ್ತದೆ. ಇದಕ್ಕೆ ತ್ರಿವೇಣಿ ಸಂಗಮವೆಂದು ಕರೆಯಲಾಗುತ್ತದೆ. ಪಕ್ಕದಲ್ಲಿ ಶ್ರೀ ಭಗಂಡೇಶ್ವರ ದೇವಸ್ಥಾನವಿದೆ. ಆಗಮಿಸುವ ಭಕ್ತರಿಗೆ ಮಧ್ಯಾಹ್ನ ಅನ್ನಪ್ರಸಾದ ವ್ಯವಸ್ಥೆ ಇರುತ್ತದೆ. ಇಲ್ಲಿಯೂ ವಸ್ತ್ರಸಂಹಿತೆ ಇದೆ.

ಮಾಂದಲಪಟ್ಟಿ
ಮಡಿಕೇರಿಯಿಂದ 18 ಕಿ.ಮೀ. ದೂರದ ಈ ಗಿರಿಶಿಖರ ಇತ್ತೀಚಿನ ವರ್ಷಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕಷರ್ಿಸುತ್ತಿದೆ. ನಿಸರ್ಗ ಪ್ರೇಮಿಗಳು ಮಾಂದಲಪಟ್ಟಿಗೆ ಹೋಗಲೇ ಬೇಕು. ಇಲ್ಲಿ ಕಣ್ಣು ಹಾಯಿಸಿದಲ್ಲಿ ಎಲ್ಲಾ ಹಸಿರಿನ ಹಾಸು ಕಂಗೊಳಿಸುತ್ತದೆ. ಬೀಸಿ ಬರುವ ತಂಗಾಳಿ, ಮಂಜು ಮುಸುಕಿದ ವಾತಾವರಣ ಮಾಂದಲಪಟ್ಟಿಯ ವಿಶೇಷ. ಮಡಿಕೇರಿಯಿಂದ ಬಾಡಿಗೆ ವಾಹನದಲ್ಲಿ (ಜೀಪ್‌) ಮಾಂದಲಪಟ್ಟಿಗೆ ತೆರಳಬಹುದು. ರಸ್ತೆ ದುಸ್ಥಿತಿಯಲ್ಲಿರುವುದರಿಂದ ಎಚ್ಚರಿಕೆಯಿಂದಲೇ ಪ್ರಯಾಣಿಸುವುದು ಸೂಕ್ತ.

ನಿಸರ್ಗಧಾಮ
ಮಡಿಕೇರಿಯಿಂದ 36 ಕಿ.ಮೀ ದೂರದಲ್ಲಿ ಮೈಸೂರಿಗೆ ತೆರಳುವ  ಮಾರ್ಗದಲ್ಲಿದೆ. ಕಾವೇರಿ ನದಿಯಿಂದ ಆವೃತ್ತಗೊಂಡಿರುವ ಈ ಸ್ಥಳವನ್ನು ಅರಣ್ಯ ಇಲಾಖೆಯವರು ನಿರ್ವಹಿಸುತ್ತಾರೆ. ಆನೆ ಸವಾರಿ, ಜಿಂಕೆ ಪಾರ್ಕ್‌ ಇಲ್ಲಿದೆ. ನದಿಯಲ್ಲಿ ಬೋಟಿಂಗ್‌ ಮಾಡಲು ಅವಕಾಶ ಉಂಟು. ಇಲ್ಲಿಗೆ ತೆರಳಲು ಸಾಕಷ್ಟು ಬಸ್ಸಿನ ಸೌಕರ್ಯವಿದೆ.

ಬೈಲುಕುಪ್ಪೆ
ಮಡಿಕೇರಿ ನಗರದಿಂದ 34 ಕಿ.ಮೀ ದೂರದಲ್ಲಿದೆ. ಬೌದ್ಧ ಧರ್ಮಿಯರ ಅತಿದೊಡ್ಡ ಪುನರ್ವಸತಿ ಕೇಂದ್ರ ಇದಾಗಿದೆ. ಇಲ್ಲಿ ಬೌದ್ಧ ಧರ್ಮಗುರುಗಳ ಗೋಲ್ಡನ್‌ ಟೆಂಪಲ್‌ವಿದೆ. ಬೌದ್ಧ ಧಾರ್ಮಿಕ ವಿಶ್ವವಿದ್ಯಾಲಯವೂ ಇದರಲ್ಲಿದೆ. ಆಕರ್ಷಕ ಸ್ತೂಪಗಳಿವೆ. ಇಲ್ಲಿಗೆ ಪ್ರವಾಸಿಗರನ್ನು ಕರೆದೊಯ್ಯಲು ಮಡಿಕೇರಿ ಬಸ್‌ ನಿಲ್ದಾಣದಿಂದ ವಿಶೇಷ ಬಸ್‌ ಸೌಕರ್ಯವನ್ನು (ಜ.7ರಿಂದ 9ರವರೆಗೆ) ಕೆಎಸ್‌ಆರ್‌ಟಿಸಿ ಕಲ್ಪಿಸಿದೆ.

ಹಾರಂಗಿ ಜಲಾಶಯ
(ಮಡಿಕೇರಿಯಿಂದ 39 ಕಿ.ಮೀ ಅಂತರ) ಕುಶಾಲನಗರ ಸಮೀಪ ಹಾರಂಗಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಜಲಾಶಯವಿದೆ. ಸದ್ಯಕ್ಕೆ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣವು ಕಡಿಮೆಯಾಗಿರುವುದರಿಂದ ಮುಖ್ಯ ಗೇಟ್‌ಗಳ ಮೂಲಕ ನೀರು ಬಿಡುತ್ತಿಲ್ಲ. ಹೀಗಾಗಿ ಇಲ್ಲಿ ನೀರಿನ ಭೋರ್ಗರೆತ ಕೇಳದು. ಸುರಕ್ಷತೆಯ ಹಿನ್ನೆಲೆಯಲ್ಲಿ ಜಲಾಶಯದ ಒಳಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಸಾಧ್ಯವಾದರೆ, ಈ ಸ್ಥಳಕ್ಕೆ ಭೇಟಿ ನೀಡದಿರುವುದು ಒಳಿತು.

ದುಬಾರೆ ಆನೆ ಶಿಬಿರ
ಮಡಿಕೇರಿಯಿಂದ 42 ಕಿ.ಮೀ ದೂರದಲ್ಲಿದೆ. ಕಾವೇರಿ ನದಿಯಿಂದ ಆವೃತ್ತವಾಗಿರುವ ಶಿಬಿರದಲ್ಲಿ ಆನೆಗಳನ್ನು ಸಾಕಲಾಗಿದೆ. ಮೈಸೂರಿನಲ್ಲಿ ನಡೆಯುವ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಹಲವು ಆನೆಗಳು ಈ ಶಿಬಿರದಲ್ಲಿವೆ. ಇಲ್ಲಿ ಹರಿಯವ ಕಾವೇರಿ ನದಿಯಲ್ಲಿ ರ್‌್ಯಾಫ್ಟಿಂಗ್‌ (ಜಲಕ್ರೀಡೆ) ಮಾಡಲು ಅವಕಾಶವಿದೆ.

ನಾಲ್ಕುನಾಡು ಅರಮನೆ
ಮಡಿಕೇರಿಯಿಂದ ಸುಮಾರು 40 ಕಿ.ಮೀ. ದೂರದಲ್ಲಿ ನಾಲ್ಕುನಾಡು ಅರಮನೆ ಇದೆ. ಎರಡು ಶತಮಾನಗಳಷ್ಟು ಪ್ರಾಚೀನ ಇತಿಹಾಸವನ್ನು ಹೊಂದಿರುವ ಈ ಅರಮನೆ ತನ್ನ ಅಪೂರ್ವ ವಾಸ್ತುವಿನ್ಯಾಸ, ಚಿತ್ರಕಲಾ ವೈಭವದಿಂದ ಮನಸೆಳೆಯುತ್ತಿದ್ದು, ಕೊಡಗಿನ ಪ್ರವಾಸಿತಾಣಗಳಲ್ಲಿ ಒಂದೆನಿಸಿದೆ. ಬಹುತೇಕ ಮರದಿಂದಲೇ ನಿರ್ಮಿತವಾಗಿರುವ ಅರಮನೆಗೆ ಐತಿಹಾಸಿಕ ಮಹತ್ವವಿದೆ. ದೊಡ್ಡವೀರರಾಜೇಂದ್ರನಿಂದ ನಿರ್ಮಿತವಾಗಿರುವ ಅರಮನೆ ಇದು.

ಜಲಪಾತಗಳು
ಮಡಿಕೇರಿಯಿಂದ 9 ಕಿ.ಮೀ ದೂರದಲ್ಲಿ ಅಬ್ಬಿ ಫಾಲ್ಸ್‌, 85 ಕಿ.ಮೀ ದೂರದಲ್ಲಿ ಇರ್ಪು ಫಾಲ್ಸ್‌, 51 ಕಿ.ಮೀ ದೂರದಲ್ಲಿ ಮಲ್ಲಳ್ಳಿ ಫಾಲ್ಸ್‌, 45 ಕಿ.ಮೀ ದೂರದಲ್ಲಿ ಚೇಲಾವರ ಜಲಪಾತವು ಇದೆ.
ಪ್ರಸ್ತುತ ನೀರಿನ ಹರಿವು ಕಡಿಮೆ ಇರುವುದರಿಂದ ಜಲಪಾತದ ಸೊಬಗು ಮಳೆಗಾಲದಲ್ಲಿ ಇದ್ದಷ್ಟು ರಮಣೀಯವಾಗಿರಲ್ಲ ಎನ್ನುವುದನ್ನು ಪ್ರವಾಸಿಗರು ಗಮನಿಸಬೇಕು.

‘ಉಚಿತ ಕೈಪಿಡಿ’
ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಆಗಮಿಸುವ ಪ್ರತಿನಿಧಿಗಳಿಗೆ ಕೊಡಗು ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಪ್ರವಾಸಿ ಕೇಂದ್ರಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಕಸಾಪ ಉಚಿತವಾಗಿ ಕೈಪಿಡಿ ನೀಡಲಿದೆ. ಇದಕ್ಕಾಗಿ ಸುಮಾರು 10,000 ಕೈಪಿಡಿಗಳನ್ನು ಮುದ್ರಿಸಲಾಗುತ್ತಿದೆ ಎಂದು ಸಮ್ಮೇಳನದ ಕೈಪಿಡಿ ಸಮಿತಿ ಅಧ್ಯಕ್ಷ ಎಚ್‌.ಟಿ. ಅನಿಲ್‌ ತಿಳಿಸಿದರು.

ಆನೆ–ಹುಲಿ ಕಾಟ  ಎಚ್ಚರಿಕೆ’
ಕೊಡಗು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಕಾಡಾನೆಗಳ ಸಂಚಾರವಿರುತ್ತದೆ. ಕುಶಾಲನಗರ ಬಳಿಯ ಆನೆಕಾಡು, ದುಬಾರೆ, ವಿರಾಜಪೇಟೆ, ಗೋಣಿಕೊಪ್ಪಲು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆನೆಗಳ ಓಡಾಟವಿರುತ್ತದೆ. ನಾಗರಹೊಳೆ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ತಿತಿಮತಿ, ಶ್ರೀಮಂಗಲ ಪ್ರದೇಶದಲ್ಲಿ ಆಗಾಗ ಹುಲಿಗಳ ಸಂಚಾರ ಕಾಣುತ್ತದೆ. ಸಾಮಾನ್ಯವಾಗಿ ಬೆಳಗಿನ ಜಾವ ಹಾಗೂ ಸಂಜೆ ಹೊತ್ತಿನಲ್ಲಿ ಅವು ಕಾಣಿಸಿಕೊಳ್ಳುತ್ತವೆ. ಈ ಬಗ್ಗೆ ಪ್ರವಾಸಿಗರು ಕೊಂಚ ಎಚ್ಚರಿಕೆ ವಹಿಸುವುದು ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT