ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯದ ಸ್ಪರ್ಶದಿಂದ ಬದುಕಿಗೆ ಸಂಸ್ಕಾರ'

Last Updated 3 ಜೂನ್ 2013, 7:02 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಸಾಹಿತ್ಯದ ಓದು, ಒಡನಾಟ ಮತ್ತು ಸ್ಪರ್ಶದಿಂದ ವ್ಯಕ್ತಿಯ ಬದುಕಿನಲ್ಲಿ ಸಂಸ್ಕಾರ ಸಿದ್ಧಿಸುತ್ತದೆ ಎಂದು ನಾಡೋಜ ಡಾ.ದೇ. ಜವರೇಗೌಡ ಅಭಿಪ್ರಾಯ ಪಟ್ಟರು.

 ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜು ಸಭಾಂಗಣದಲ್ಲಿ ತಾಲ್ಲೂಕು ಯುವ ಬರಹಗಾರರ ಬಳಗ ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಭಾನುವಾರ ನಡೆದ ಡಾ.ಸಿ. ಬಂದೀಗೌಡ ಸಮಾಜಮುಖಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಸಾಹಿತ್ಯಕ ಚಟುವಟಿಕೆಯಲ್ಲಿ ತೊಡಗಿರುವ ವ್ಯಕ್ತಿಯಲ್ಲಿ ಸಾಮಾಜಿಕ ಕಳಕಳಿ ಇರುತ್ತದೆ. ಸರಿ- ತಪ್ಪುಗಳನ್ನು ತುಲನೆ ಮಾಡುವ, ಒಪ್ಪಿತ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರವೃತ್ತಿ ಬರುತ್ತದೆ. ಸಾಹಿತ್ಯದಿಂದ ವಿಮುಖರಾದರೆ ಆದರ್ಶ, ಮೌಲ್ಯಗಳು ಮರೆಯಾಗುತ್ತವೆ. ಜಡತ್ವ ಆವರಿಸಿ, ಅಜ್ಞಾನ ಮತ್ತು ಬಡತನಕ್ಕೆ ಮೂಲವಾಗುತ್ತದೆ ಎಂದು ಹೇಳಿದರು.
 
ಸ್ವಾತಂತ್ರ್ಯ ಹೋರಾಟಗಾರ ಡಾ.ಸಿ. ಬಂದೀಗೌಡ ಮೌನ ಸಾಧಕರು. ತಮ್ಮ ಜೀವಿತದ ಉದ್ದಕ್ಕೂ ನಂಬಿದ ತತ್ವ, ಸಿದ್ಧಾಂತಗಳಿಗೆ ಬದ್ಧರಾಗಿ ಬದುಕಿದರು. ಗಾಂಧೀಜಿ ಹಾಗೂ ಕುವೆಂಪು ಅವರ ವಿಚಾರಗಳಿಂದ ಪ್ರಭಾವಿತರಾಗಿ ಅವರ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲು ಶ್ರಮಿಸಿದ್ದಾರೆ. ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದರಿಂದ ಪ್ರಶಸ್ತಿಗೇ ಗೌರವ ಬಂದಿದೆ ಎಂದರು.

ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪ ಕುಲಪತಿ ಹಾಗೂ ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎನ್.ಎಸ್. ರಾಮೇಗೌಡ ಮಾತನಾಡಿ, ಪ್ರಸಕ್ತ ಶಿಕ್ಷಣ ವ್ಯವಸ್ಥೆ ಹಣದ ಮಹತ್ವವನ್ನು ತಿಳಿಸಲು ಮಾತ್ರ ಶಕ್ತವಾಗಿದೆ. ಸಾರ್ಥಕ ಬದುಕು ರೂಪಿಸುವ ಸಾಮರ್ಥ್ಯ ಶಿಕ್ಷಣಕ್ಕೆ ಇಲ್ಲದೇ ಇರುವುದರಿಂದ ಮಾನವೀಯ ಮೌಲ್ಯಗಳು ದೂರಾಗುತ್ತಿವೆ. ನುಡಿದಂತೆ ನಡೆಯುವವರನ್ನು ದುರ್ಬೀನು ಹಾಕಿ ಹುಡುಕಬೇಕಾದ ಸ್ಥಿತಿ ಬಂದಿದೆ. ಭಾವ, ಮಾತು ಮತ್ತು ಕೃತಿಗಳಲ್ಲಿ ಸಾಮ್ಯತೆ ಇದ್ದರೆ ಆರೋಗ್ಯ, ಆಯಸ್ಸು ಎರಡೂ ವೃದ್ಧಿಸುತ್ತದೆ ಎಂಬುದನ್ನು ಅರಿಯಬೇಕು ಹೇಳಿದರು.

  ರೈತ ಮುಖಂಡ ಕೆ.ಎಸ್. ನಂಜುಂಡೇಗೌಡ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಶೇ.70ರಷ್ಟು ಇರುವ ರೈತ ಕುಲದ ಏಳಿಗೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಗಂಭೀರ ಪ್ರಯತ್ನ ಮಾಡುತ್ತಿಲ್ಲ. ಪರಿಣಾಮ ರೈತರು ಕೃಷಿ ಚಟುವಟಿಕೆಯಿಂದ ವಿಮುಖ  ರಾಗುತ್ತಿದ್ದಾರೆ. ಹಳ್ಳಿಗಳನ್ನು ತೊರೆದು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ವಿಷಾದಿಸಿದರು.

ಗಾಂಧಿವಾದಿ ಡಾ.ಬಿ. ಸುಜಯಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್. ಲಿಂಗರಾಜು, ಹಿರಿಯ ವಕೀಲ ಎಂ. ಪುಟ್ಟೇಗೌಡ, ಮೈಸೂರು ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಮಡ್ಡೀಕೆರೆ   ಗೋಪಾಲ್, ಯುವ ಬರಹಗಾರರ ಬಳಗದ ಜಿಲ್ಲಾಧ್ಯಕ್ಷ ಸತೀಶ್ ಜವರೇಗೌಡ ಮಾತನಾಡಿದರು. ಗಂಜಾಂ ನರಸಿಂಹಸ್ವಾಮಿ, ಬಳಗದ ತಾಲ್ಲೂಕು ಅಧ್ಯಕ್ಷ ಕೆ. ಶೆಟ್ಟಹಳ್ಳಿ ಅಪ್ಪಾಜಿ, ಸಿ.ಜೆ. ಶ್ರೀನಿವಾಸ್, ಕೊತ್ತತ್ತಿ ರಾಜು ಇದ್ದರು. ಡಾ.ಎನ್.ಎಸ್. ರಾಮೇಗೌಡ, ಕೆ.ಎಸ್. ನಂಜುಂಡೇಗೌಡ, ಗುಣಸಾಗರಿ ನಾಗರಾಜು, ಪಿ.ಎಸ್. ಪ್ರಭಾ ಅವರಿಗೆ `ಡಾ.ಸಿ. ಬಂದೀಗೌಡ ಸಮಾಜಮುಖಿ ಪ್ರಶಸ್ತಿ' ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT