ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯದಲ್ಲಿ ಸಂಕುಚಿತ ದೃಷ್ಟಿಕೋನವಿಲ್ಲ

Last Updated 18 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಆದಿಕವಿ ಪಂಪ, ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯದಿಂದ ಹಿಡಿದು ಈವರೆಗಿನ ಕನ್ನಡ ಸಾಹಿತ್ಯದಲ್ಲಿ ಸಂಕುಚಿತ ದೃಷ್ಟಿಕೋನವಿಲ್ಲ. ಬದಲಿಗೆ ಅದು ವಿಶಾಲ ಮನೋಭಾವದ ನೆಲೆಗಟ್ಟಿನಲ್ಲಿ ರಚನೆಯಾದ ಅಮೂಲ್ಯ ಸಾಹಿತ್ಯವೆನಿಸಿದೆ~ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಬುಧವಾರ ಇಲ್ಲಿ ಬಣ್ಣಿಸಿದರು.

ಕುವೆಂಪು ವಿದ್ಯಾವರ್ಧಕ ಟ್ರಸ್ಟ್, ದೇಜಗೌ ಟ್ರಸ್ಟ್ ಹಾಗೂ ವಿಕ್ರಾಂತ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ರಾಜಭವನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಹಿರಿಯ ಸಾಹಿತಿ ಪ್ರೊ. ಹಂಪ ನಾಗರಾಜಯ್ಯ ಅವರಿಗೆ `ವಿಶ್ವ ಮಾನವ~ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

`ಕುವೆಂಪು ಅವರ ಕನ್ನಡ ಸಾಹಿತ್ಯ ದಕ್ಷಿಣ ಭಾರತದ ಇತರ ಭಾಷೆಗಳಿಗೂ ಅನುವಾದಗೊಳ್ಳಬೇಕಿದೆ. ವಿಪರ್ಯಾಸದ ಸಂಗತಿಯೆಂದರೆ, ಕನ್ನಡ ಸಾಹಿತ್ಯ ಕರ್ನಾಟಕಕ್ಕೆ ಸೀಮಿತವಾದದ್ದು ಎನ್ನುವಂತಹ ಸಂಕುಚಿತ ಮನೋಭಾವದಿಂದ ಹೊರ ಬರುತ್ತಿಲ್ಲ.  ಸಮಾಜದ ಹಿತದೃಷ್ಟಿಯಿಂದ ಒಳ್ಳೆಯ ಸಾಹಿತ್ಯ ಇತರ ಭಾಷೆಗಳಿಗೂ ಭಾಷಾಂತರಗೊಳ್ಳಬೇಕಿದೆ~ ಎಂದು ಅವರು ಪ್ರತಿಪಾದಿಸಿದರು.

`ಸಾಹಿತ್ಯ ಕ್ಷೇತ್ರಕ್ಕೆ ಜೈನ ಸಮುದಾಯದ ಕೊಡುಗೆ ಅಪಾರ. ಅಲ್ಲದೆ, ಅಹಿಂಸೆ ಹಾಗೂ ತ್ಯಾಗ- ಬಲಿದಾನದ ತತ್ವಗಳನ್ನು ಪ್ರತಿಪಾದಿಸುತ್ತಿರುವುದು ಪ್ರಶಂಸನೀಯ. ಈ ಉದ್ದೇಶಕ್ಕಾಗಿ ನಾನು ಜೈನ ಸಮುದಾಯವನ್ನು ಹೆಚ್ಚು ಇಷ್ಟಪಡುತ್ತೇನೆ~ ಎಂದರು.

`ನಾನು ಕರ್ನಾಟಕಕ್ಕೆ ರಾಜ್ಯಪಾಲರಾಗಿ ಬಂದ ಆರಂಭದ ದಿನಗಳಿಂದ ಹಿಡಿದು ಇಲ್ಲಿಯವರೆಗೆ ಕನ್ನಡ ಸಾಹಿತ್ಯ ವಿಚಾರಗಳಿಗೆ ಸಂಬಂಧಿಸಿದಂತೆ ಪ್ರೊ. ಹಂಪ ನಾಗರಾಜಯ್ಯ ಅವರಿಂದ ಸಾಕಷ್ಟು ಮಾಹಿತಿ ಪಡೆದಿದ್ದೇನೆ. ಕರ್ನಾಟಕದ ಕೆಲವೇ ಕೆಲವು ಪ್ರಮುಖ ಗೆಳೆಯರಲ್ಲಿ ಹಂಪನಾ ಕೂಡ ಒಬ್ಬರು. ಅವರ ಪತ್ನಿ ಕಮಲಾ ಕೂಡ ಸಾಹಿತಿಯಾಗಿರುವುದರಿಂದ ಸಾಹಿತ್ಯ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಹಂಪನಾ ಹೆಚ್ಚು ಸಾಧನೆ ಮಾಡಲು ಸಹಕಾರಿಯಾಗಿರಬಹುದು~ ಎಂದರು.

`ಕುಟುಂಬದಲ್ಲಿ ಪತ್ನಿ ಸಹಕಾರ ಸಿಕ್ಕರೆ ಆ ಮನೆ ಸ್ವರ್ಗವಿದ್ದಂತೆ. ಇದು ಪ್ರಕೃತಿ ನಿಯಮ. ವಿಷ್ಣುವಿಗೆ ಲಕ್ಷ್ಮಿ, ಶಿವನಿಗೆ ಪಾರ್ವತಿ, ಬ್ರಹ್ಮನಿಗೆ  ಸರಸ್ವತಿ ಸಹಕಾರವಿದ್ದಂತೆ ಹಂಪನಾ ಅವರಿಗೆ ಕಮಲಾ ಬೆಂಬಲ ಸಿಕ್ಕಿದೆ~ ಎಂದರು.

ಕರ್ನಾಟಕ ಜ್ಞಾನಕ್ಕೆ ಪ್ರಶಸ್ತವಾದ ಸ್ಥಳ: `ಕರ್ನಾಟಕ ರಾಜ್ಯವು ಜ್ಞಾನಾರ್ಜನೆಗೆ ಅತ್ಯಂತ ಪ್ರಶಸ್ತವಾದ ಸ್ಥಳವಾಗಿದೆ. ಇಡೀ ದೇಶದಲ್ಲಿಯೇ ಜ್ಞಾನಕ್ಕೆ ಹೆಸರಾದ ಕರ್ನಾಟಕದಂತಹ ರಾಜ್ಯ ಮತ್ತೊಂದಿಲ್ಲ. ನಾನು ಇಲ್ಲಿಗೆ ರಾಜ್ಯಪಾಲನಾಗಿ ಬಂದ ಮೇಲೆ ಆರ್ಥಿಕವಾಗಿ ಲಾಭವಾಗದಿದ್ದರೂ ಜ್ಞಾನ ವಿಸ್ತರಣೆ ಜತೆಗೆ, ಮಾನಸಿಕ ನೆಮ್ಮದಿಯೂ ಸಿಕ್ಕಿದೆ~ ಎಂದು ನುಡಿದರು.

ಪ್ರಶಸ್ತಿ ಶಿಖರ ಪ್ರಾಯವಾದದ್ದು: ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ. ಹಂಪ ನಾಗರಾಜಯ್ಯ, `ಇಡೀ ಕರ್ನಾಟಕಕ್ಕೇ ಗುರುವಾದ ಕುವೆಂಪು ಹೆಸರಿನಲ್ಲಿ ವಿಶ್ವ ಮಾನವ ಪ್ರಶಸ್ತಿ ಸ್ವೀಕರಿಸಿರುವುದು ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಮಲೆನಾಡಿನ ಕುಪ್ಪಳಿಯ ಒಂಟಿ ಮನೆಯಲ್ಲಿ ಹುಟ್ಟಿದ ಕುವೆಂಪು 20ನೇ ಶತಮಾನದಲ್ಲಿ ಕೋಟಿ ಕೋಟಿ ಕನ್ನಡಿಗರ ಮನದಲ್ಲಿ ಹೊಸ ಚೈತನ್ಯ ಮೂಡಿಸಿದರು.

ಅವರ ಸಾಧನೆ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದು. ಹೀಗಾಗಿ, ಈ ಪ್ರಶಸ್ತಿ ನನಗೆ ಶಿಖರಪ್ರಾಯವಾದದ್ದು ಎಂದು ಭಾವಿಸಿ ತಲೆಬಾಗಿ, ಕೈಮುಗಿದು ಸ್ವೀಕರಿಸಿದ್ದೇನೆ~ ಎಂದು ಅವರು ಹೇಳಿದರು.
ಸಾಹಿತಿ ದೇ. ಜವರೇಗೌಡ, ಪ್ರೊ. ಮಳಲಿ ವಸಂತಕುಮಾರ್, ಪ್ರೊ.ಸಿ. ನಾಗಣ್ಣ ಅವರು ಅಭಿನಂದನಾ ನುಡಿಗಳನ್ನಾಡಿದರು.

ದಾನಿ ಬಿ. ಪ್ರಸನ್ನಯ್ಯ, ಕುವೆಂಪು ವಿದ್ಯಾ ಪರಿಷತ್ತಿನ ಅಧ್ಯಕ್ಷ ಡಾ.ಎಸ್.ಎನ್. ರಾಮಸ್ವಾಮಿ, ದೇಜಗೌ ಟ್ರಸ್ಟ್‌ನ ಅಧ್ಯಕ್ಷ ಶಿವಸುಂದರ ಸತ್ಯೇಂದ್ರ, ಡಾ.ಕಮಲಾ ಹಂಪನಾ ಮತ್ತಿತರರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT