ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯದಿಂದ ಮಾತ್ರ ಹಲವು ಜನ್ಮಗಳ ಅನುಭವ

Last Updated 7 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಒಂದು ಜನ್ಮದಲ್ಲಿ ಹಲವು ಜನ್ಮಗಳ ಅನುಭವವನ್ನು ಪಡೆಯಬೇಕಾದರೆ ಅದು ಸಾಹಿತ್ಯದಿಂದ ಮಾತ್ರ ಸಾಧ್ಯ~ ಎಂದು ಹಿರಿಯ ಸಾಹಿತಿ ಪ್ರೊ.ಎಲ್.ಎಸ್. ಶೇಷಗಿರಿರಾವ್ ಅಭಿಪ್ರಾಯಪಟ್ಟರು.

ನಗರದ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ದಿವಂಗತ ಕೆ. ಗೋಪಾಲಕೃಷ್ಣರಾಯರ `ಕೆನ್‌ಸಿಂಗ್‌ಟನ್ ಪಾರ್ಕ್~ ಎಂಬ ಮರು ಮುದ್ರಣ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

`ಯಾವುದೇ ಒಂದು ಸಾಹಿತ್ಯ ಕೃತಿ ಬದುಕಿನ ಎಲ್ಲ ಅನುಭವ ನೀಡಲು ಸಾಧ್ಯವಿಲ್ಲ. ಹಾಗಾಗಿ ಒಂದೇ ಕೃತಿಯಲ್ಲಿ ಬದುಕಿನ ಹಲವು ಅನುಭವಗಳನ್ನು ನಿರೂಪಿಸುವುದು ಸವಾಲಿನ ಕೆಲಸ. ಗೋಪಾಲ ಕೃಷ್ಣರಾಯರು ಅದನ್ನು ಈ ಕೃತಿಯಲ್ಲಿ ಯಶಸ್ವಿಯಾಗಿ ನಿರೂಪಿಸಿದ್ದಾರೆ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

`1943ರಲ್ಲಿ ಪ್ರಕಟವಾದ ಈ ಕೃತಿಯು ಸಾಹಿತ್ಯದ ಹಲವು ಪ್ರಕಾರಗಳನ್ನು ಒಳಗೊಂಡಿದೆ. ಪ್ರಬಂಧ, ನಾಟಕ, ಕತೆ, ಮಕ್ಕಳ ಸಾಹಿತ್ಯ... ಹೀಗೆ ವಿವಿಧ ಪ್ರಕಾರಗಳನ್ನು ಪರಿಣಾಮಕಾರಿಯಾಗಿ ಬಳಸಿದ್ದಾರೆ. ಸುಮಾರು 150 ಪುಟಗಳಲ್ಲಿ ಒಂದು ಜಗತ್ತನ್ನೇ ಸೃಷ್ಟಿಸಿದ್ದಾರೆ ಎಂದರೆ ತಪ್ಪಾಗಲಾರದು~ ಎಂದರು.

`ಸಣ್ಣ ಕತೆಗಳನ್ನು ಹೆಚ್ಚಾಗಿ ಬರೆದ ಅವರು ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ಕೃತಿಗಳನ್ನು ಉಳಿಸಬೇಕಿದೆ. ಆ ನಿಟ್ಟಿನಲ್ಲಿ ಅವರ ಮೇರು ಕೃತಿಯನ್ನು ಮರು ಮುದ್ರಣ ಮಾಡಿರುವುದು ಉತ್ತಮವಾಗಿದೆ~ ಎಂದು ಹೇಳಿದರು.

ದಿವಂಗತ ಕೆ.ಗೋಪಾಲಕೃಷ್ಣರಾಯ ಸಾಹಿತ್ಯ ಪ್ರತಿಷ್ಠಾನಕ್ಕೆ ಚಾಲನೆ ನೀಡಿದ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ, `ಗೋಪಾಲಕೃಷ್ಣರಾಯರು ಸಾಕಷ್ಟು ಸಣ್ಣ ಕತೆಗಳನ್ನು ಬರೆದಿದ್ದಾರೆ. ಅಂದಿನ ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯನವರ ಆಪ್ತ ಕಾರ್ಯದರ್ಶಿಯಾಗಿದ್ದ ಅವರು ಬಿಡುವಿನ ವೇಳೆಯಲ್ಲೇ ಸಾಕಷ್ಟು ಸಾಹಿತ್ಯ ರಚಿಸಿದ್ದು, ಅವು ಅಮೂಲ್ಯವೆನಿಸಿವೆ~ ಎಂದರು.

`ಕೃಷ್ಣರಾಯರು ತಾವು ಬರೆದ ಸಾಹಿತ್ಯವನ್ನು ಎಂದಿಗೂ ಪ್ರಚಾರ ಮಾಡಲಿಲ್ಲ. ಆದರೆ, ಇತರರು ಬರೆದಿದ್ದನ್ನು ಪ್ರಚಾರ ಮಾಡುವ ಮೂಲಕ ಪ್ರೋತ್ಸಾಹ ನೀಡುತ್ತಿದ್ದುದು ಅವರ ವ್ಯಕ್ತಿತ್ವವನ್ನು ತೋರುತ್ತದೆ. ಅವರ ಸಾಹಿತ್ಯ ಕೃತಿಗಳನ್ನು ಉಳಿಸಿ ಹೊಸ ಪೀಳಿಗೆಯವರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿರುವುದು ಅರ್ಥಪೂರ್ಣವಾಗಿದೆ~ ಎಂದು ಶ್ಲಾಘಿಸಿದರು.

ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾನಿರ್ದೇಶಕ ಡಾ.ಮಹೇಶ್ ಜೋಶಿ, ಪ್ರತಿಷ್ಠಾನದ ಅಧ್ಯಕ್ಷ ಡಾ.ಕೆ. ರಮೇಶ್ ಕಾಮತ್, ಕಾರ್ಯದರ್ಶಿ ಜಾನಕಿ ಶ್ರೀನಿವಾಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT