ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗಪುರಕ್ಕೆ ಕುಮಟಾ ಏಡಿ

Last Updated 2 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ಕುಮಟಾ ಸುತ್ತಲಿನ ನದಿ, ಗಜನಿ ಹಾಗೂ ಹಿನ್ನೀರು ಪ್ರದೇಶದ ಏಡಿಗಳು ನಿತ್ಯ ಗೋವಾ ಮೂಲಕ ವಿಮಾನದಲ್ಲಿ ಸಿಂಗಪುರಕ್ಕೆ ಹೋಗುತ್ತಿವೆ. ಸಿಂಗಪುರದ ಜನರು ಕುಮಟಾ ಏಡಿಗಳನ್ನು ಖರೀದಿಸಿ ತಮಗೆ ಬೇಕಾದ ಖಾದ್ಯಗಳನ್ನು ಮಾಡಿ ತಿನ್ನುತ್ತಿದ್ದಾರೆ.
ಕರ್ನಾಟಕದಲ್ಲಿ ಅತಿ ಹೆಚ್ಚು ಹಿನ್ನೀರು ಪ್ರದೇಶ ಇರುವುದು ಕುಮಟಾ ತಾಲ್ಲೂಕಿನಲ್ಲಿ. ಅಘನಾಶಿನಿ ನದಿ, ನದಿಯಂಚಿನ ಗಜನಿ, ಹಿನ್ನೀರು ಪ್ರದೇಶ ನೈಸರ್ಗಿಕ ಮೀನು, ಏಡಿ ಹಾಗೂ ಸಿಗಡಿಗಳ ತಾಣ. ಕೆಸರು ಹೆಚ್ಚಾಗಿರುವ ಕಡೆಗಳಲ್ಲಿ ಏಡಿಗಳ ವಂಶಾಭಿವೃದ್ಧಿ ಹೆಚ್ಚು. ಕೆಸರಿನ ಸೂಕ್ಷ್ಮಜೀವಿಗಳು  ಹಾಗೂ ಸತ್ತ ಜಲಚರಗಳನ್ನು ತಿಂದು ಬೆಳೆಯುವ ಹಲವು ಬಗೆಯ ಏಡಿಗಳು ಇಲ್ಲಿ ಸಹಜವಾಗಿ ಬೆಳೆಯುತ್ತವೆ. ಈ ಏಡಿಗಳಿಗೆ ಸ್ಥಳೀಯವಾಗಿಯೂ ಬೇಡಿಕೆ ಇದೆ. ಇಲ್ಲಿ ಸಿಗುವ ಮೀನು,ಸಿಗಡಿ, ಮೀನು ಹಾಗೂ ಬೆಳಚಿಗಳಂತೆ ಏಡಿಗಳೂ ರುಚಿಯಾಗಿರುತ್ತವೆ.

ಸ್ಥಳೀಯ ಮಾರುಕಟ್ಟೆಯಲ್ಲಿ ಒಂದು ಕಿಲೋ ತೂಗುವ ಏಡಿಗಳಿಗೆ  40 ರೂ. ಬೆಲೆ ಇದೆ. ಆದರೆ ಸಿಂಗಪುರದಲ್ಲಿ ಸುಮಾರು 400 ರೂ ಬೆಲೆ ಸಿಗುತ್ತದೆ. ಹೀಗಾಗಿ  ಏಡಿಗಳನ್ನು ಅಲ್ಲಿಗೆ ಸಾಗಿಸುವುದು ಉದ್ಯಮವಾಗಿ ಬೆಳೆಯುತ್ತಿದೆ. ಏಡಿಗಳನ್ನು ಮೀನು, ಸಿಗಡಿಗಳಂತೆ ಐಸ್‌ನಲ್ಲಿ ಪ್ಯಾಕ್ ಮಾಡಿ ಅಲ್ಲಿಗೆ  ಕಳಿಸುವಂತಿಲ್ಲ. ಸಿಂಗಪುರದಲ್ಲಿ ಬೇಡಿಕೆ ಇರುವುದು ಜೀವಂತ ಏಡಿಗಳಿಗೆ. ಅವು ಬದುಕಿರಬೇಕು ಮತ್ತು   ಕೊಂಬು(ಕೊಂಡಿ), ಕಾಲುಗಳು ಇರಬೇಕು. ಏಡಿಗಳ ಕೊಂಬು, ಕಾಲುಗಳಿಗೆ ಧಕ್ಕೆಯಾಗದಂತೆ ಹಿಡಿದು ಅವಕ್ಕೆ ‘ಚಾವಿ’ (ಕೊಂಬನ್ನು ಮಡಿಚಿ ಅದರ ದೇಹ ಭಾಗಕ್ಕೆ ಒತ್ತಿ ಹಿಡಿದು ಪ್ಲಾಸ್ಟಿಕ್ ದಾರದಿಂದ ಕಟ್ಟುವ ವಿಧಾನ)ಹಾಕುವ ಪರಿಣಿತರು ಇಲ್ಲಿದ್ದಾರೆ. ಚಾವಿ ಹಾಕುವಾಗ ಸಾಕಷ್ಟು ಎಚ್ಚರವಹಿಸಬೇಕು. ಏಡಿಗಳನ್ನು ಹಿಡಿದು ಬುಟ್ಟಿಯೊಳಗೆ ಹಾಕಿದರೆ ಅವು ಅಲ್ಲಿ ಓಡಾಡುವಾಗ ಕೊಂಬು ಕಳಚಿ ಬೀಳುವ ಸಾಧ್ಯತೆ ಇರುತ್ತದೆ. ಚಾವಿ ಹಾಕಿದ ಏಡಿ ಕನಿಷ್ಠ ಎರಡು-ಮೂರು ದಿನ ಬದುಕಿರುತ್ತವೆ. ಚಾವಿ ಹಾಕಿದ ತಕ್ಷಣ ಅವನ್ನು ಗೋವಾಕ್ಕೆ ಸಾಗಿಸಿ ಅಲ್ಲಿಂದ ವಿಮಾನ ಮೂಲಕ ಸಿಂಗಪುರಕ್ಕೆ ಕಳಿಸುತ್ತಾರೆ. ಕನಿಷ್ಠ 400 ಗ್ರಾಂನಿಂದ ಒಂದೂವರೆ ಕಿಲೋ ತೂಗುವ ಏಡಿಗಳು ರಫ್ತಿಗೆ ಅರ್ಹ. ಏಡಿಗಳ ಕೊಂಬಿನಲ್ಲಿರುವ ಮಾಂಸ ಹೆಚ್ಚು ರುಚಿಯಾದ್ದರಿಂದ ಕೊಂಬುಗಳಿರುವುದು ಕಡ್ಡಾಯ. ಕೆಸರಿನಲ್ಲಿ ಬಿಲಗಳಲ್ಲಿ ಇರುವ ಏಡಿಗಳನ್ನು ಕೈಯಿಂದ ಹಿಡಿಯಲು ಸಾಧ್ಯವಿಲ್ಲ. ಏಡಿ ತನ್ನ ಸಮೀಪ ಬಂದ ಯಾವುದೇ ವಸ್ತುವನ್ನು ತನ್ನ ಕೊಂಬಿನಿಂದ ಹಿಡಿಯುತ್ತದೆ. ಕೊಂಬು ತುಂಡಾದರೂ ಅದು ತನ್ನ ಹಿಡಿತ ಸಡಿಲಿಸುವುದಿಲ್ಲ.

ಏಡಿಗಳ ಬಿಲದೊಳಗೆ ಕಬ್ಬಿಣದ ಸರಳು ಹಾಕುತ್ತಾರೆ. ಏಡಿ ಅದನ್ನು ಕಚ್ಚಿ ಹಿಡಿಯುತ್ತದೆ. ಸರಳನ್ನು ಹೊರಕ್ಕೆ ಎಳೆದಾಗ ಏಡಿಯೂ ಹೊರಬರುತ್ತದೆ. ಆಗ ಅದನ್ನು ಚಾಕಚಕ್ಯತೆಯಿಂದ ಹಿಡಿದು ಚಾವಿ  ಹಾಕುತ್ತಾರೆ. ಅಘನಾಶಿನಿ ನದಿ ಹರಿಯುವ ಹೆಗಡೆ, ಮಿರ್ಜಾನ, ಕೊಡಕಣಿ, ಕಿಮಾನಿ, ಐಗಳಕುರ್ವೆ,  ಕಾಗಾಲ, ಅಘನಾಶಿನಿ, ಹಿರೇಗುತ್ತಿ, ಮಾದನಗೇರಿ, ಬೆಟ್ಕುಳಿ, ಸಾಣೆಕಟ್ಟಾ, ತದಡಿ, ಗಂಗಾವಳಿ ಭಾಗದ  ಗಜನಿ ಹಾಗೂ ಹಿನ್ನೀರು ಪ್ರದೇಶದಲ್ಲಿ ಏಡಿಗಳು ಹೇರಳವಾಗಿವೆ. ಏಡಿಗಳಿಗೆ ಸಿಂಗಪುರ ಮತ್ತಿತರ ದೇಶಗಳಲ್ಲಿ ಬೇಡಿಕೆ ಹೆಚ್ಚಾಗಿರುವುದರಿಂದ ಚೆನ್ನೈನಲ್ಲಿ ಅವುಗಳನ್ನು ನೈಸರ್ಗಿಕವಾಗಿ ಸಾಕುವವರಿದ್ದಾರೆ. ಈ ಉದ್ಯಮ ಸ್ಥಳೀಯ ಜನರಿಗೆ ಉದ್ಯೋಗ ಒದಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT