ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗಮ್ಮನ ಜಾತ್ರೆಗೆ ಸಕಲ ಸಿದ್ಧತೆ

Last Updated 13 ಸೆಪ್ಟೆಂಬರ್ 2011, 6:50 IST
ಅಕ್ಷರ ಗಾತ್ರ

ಕೃಷ್ಣರಾಜಪೇಟೆ: ತಾಲ್ಲೂಕಿನ ಹೊಸಹೊಳಲು ಗ್ರಾಮದ ಅಧಿದೇವತೆ ಸಿಂಗಮ್ಮನ ಜಾತ್ರೆ ಸೆಪ್ಟೆಂಬರ್ 13ರಂದು ನಡೆಯಲಿದ್ದು, ಗ್ರಾಮ ಮತ್ತು ದೇವಾಲಯಗಳು ಅಲಂಕೃತಗೊಂಡಿವೆ.

ಈ ಭಾಗದ ಶಕ್ತಿದೇವತೆ ಎಂದೇ ಹೆಸರಾಗಿರುವ ಸಿಂಗಮ್ಮನ ದೇವಾಲಯ ಮತಿಘಟ್ಟ ರಸ್ತೆಯಲ್ಲಿ ಅರ್ಧ ಕಿ.ಮೀ  ದೂರದಲ್ಲಿದೆ. ಪ್ರತಿವರ್ಷ ಗೌರಿ ಹಬ್ಬದ ತರುವಾಯ ನಡೆಯುವ ಈ ಹಬ್ಬವು ಈ ಬಾರಿ ನಾಳೆ ಮಂಗಳವಾರ ನಡೆಯುತ್ತಿದೆ. ದೇವಾಲಯದ ಬಳಿ ಜಾತ್ರೆಯೂ ಸೇರುತ್ತದೆ. ಗ್ರಾಮದ ಪ್ರತಿ ಮನೆಯಿಂದ ಮುತ್ತೈದೆಯರು. ಹೆಣ್ಣುಮಕ್ಕಳು ಹಬ್ಬದ ದಿನದಂದು ತಂಬಿಟ್ಟಿನ ಆರತಿಯೊಂದಿಗೆ ಗುಡಿಗೆ ಬಂದು ಪೂಜೆ ಸಲ್ಲಿಸುತ್ತಾರೆ.   ಗ್ರಾಮದ ಪ್ರತಿ ಬೀದಿಗಳಲ್ಲಿ ಬಣ್ಣ ಬಣ್ಣದ ವಿದ್ಯುತ್ ದೀಪ ಮತ್ತು ಪುಷ್ಪಾಲಂಕೃತ ಟ್ರಾಕ್ಟರ್‌ನಲ್ಲಿ ಸಿಂಗಮ್ಮನ ಮೆರವಣಿಗೆ ನಡೆಯುತ್ತದೆ. ಜನರು ಇಲ್ಲಿ ತಮ್ಮ ಶಕ್ತ್ಯಾನುಸಾರ ಕೋಳಿ, ಕುರಿಗಳನ್ನು ಬಲಿ ಕೊಡುತ್ತಾರೆ. ವಿಶೇಷ ಪೂಜಾ ಕಾರ್ಯಕ್ರಮಗಳು, ಜಾನಪದ ಕಲಾಪ್ರದರ್ಶನಗಳು, ಪ್ರಸಾದ ವಿನಿಯೋಗ  ನಡೆಯುತ್ತದೆ. 

ವಿಶೇಷತೆ: ಮೈಸೂರು ಮಹಾರಾಜರ ದೃಷ್ಟಿ ಕಳೆದುಕೊಂಡ ಪಟ್ಟದ ಕುದುರೆಗೆ ದೃಷ್ಟಿ ಮರಳುವಂತೆ ಮಾಡಿದ ಕೀರ್ತಿ ಈ ದೇವಿಯದು. ಇದರಿಂದ ಸಂತೃಪ್ತರಾದ ಮಹಾರಾಜರು ಮಾಡಿಸಿಕೊಟ್ಟ ವಜ್ರದ ಕಣ್ಣುಗಳು, ಚಿನ್ನದ ಆಭರಣಗಳು, ಮೊಗವಾಡ ಇಂದಿಗೂ ಗ್ರಾಮದ ಪಟೇಲರ ಸುಪರ್ಧಿಯಲ್ಲಿವೆ. ಹಬ್ಬದ ಸಂದರ್ಭ ಇವುಗಳನ್ನು ದೇವಿಗೆ ಧರಿಸಲಾಗುತ್ತದೆ.

ಇಲ್ಲಿನ ದೇವಾಲಯದ ಎದುರಿಗೆ ರಾತ್ರಿ ವೇಳೆ ಉರಿಯುತ್ತಿದ್ದ ದೀಪದಲ್ಲಿ ಬೀಡಿಯನ್ನು ಹೊತ್ತಿಸಿಕೊಳ್ಳಲು ಹೋದ ಪೋಲೀಸನೊಬ್ಬ ದೇವಿಯ ಕೋಪಕ್ಕೆ ತುತ್ತಾಗಿ ಕಲ್ಲಾಗಿದ್ದಾನೆ   ಎಂಬ ಕಥೆ ಹೇಳುವ ಪೋಲೀಸ್ ಕಲ್ಲು ಸಹ ಇಲ್ಲಿದೆ. ಕೇಳಿದ್ದನ್ನು ಕೊಡುವ ದೇವಿ ಎಂಬ ನಂಬಿಕೆಗೆ   ಪಾತ್ರಳಾಗಿರುವ ಸಿಂಗಮ್ಮನಿಗೆ ನಾಡಿನ ತುಂಬೆಲ್ಲಾ ಭಕ್ತ ಸಮೂಹವಿದೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ನೆರೆಹೊರೆಯ ಜಿಲ್ಲೆಗಳು ಸೇರಿದಂತೆ ದೂರದ ಊರುಗಳಿಂದಲೂ ಜನರು ಇಲ್ಲಿಗೆ ಬರುತ್ತಾರೆ. ತಮ್ಮ ಭಕ್ತಿಗೆ ಅನುಗುಣವಾಗಿ ಮಾಡಿಕೊಂಡ ಹರಕೆಗಳನ್ನು ತೀರಿಸಲು    ವೈವಿಧ್ಯಮಯ ವಿಶೇಷ ಪೂಜೆ  ಸಲ್ಲಿಸುತ್ತಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT