ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗಳೀಕಗಳ ಬೆನ್ನತ್ತಿ...

Last Updated 9 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ನಿಮಗೊಂದು ಅಪರೂಪದ ಪ್ರಾಣಿ ತೋರಿಸುತ್ತೇನೆ ಎಂದು ವನ್ಯಜೀವಿಗಳ ಸಂಶೋಧಕರೊಬ್ಬರು ಹೇಳಿದ್ದರು. ಅವರ ಕರೆಯಂತೆ ಕೆಲವು ಸ್ನೇಹಿತರು ಅಪರೂಪದ ಪ್ರಾಣಿ ನೋಡಲು ಹೊರಟೆವು. ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಲುಪಿ ಅಲ್ಲಿಂದ ಮತ್ತೆ 30ಕಿ.ಮೀ ಹೋದರೆ ಬೀರ್ಲಮಕ್ಕಿ ಸಿಗುತ್ತದೆ. ಅಲ್ಲಿಂದ ಮುಂದೆ ಶಿರಸಿ-ಹೊನ್ನಾವರ ಕಡೆಯ ಪಶ್ಚಿಮಘಟ್ಟ ಅಭಯಾರಣ್ಯ.

ಸುತ್ತ ಹಸಿರಿನ ರಾಶಿ. ಮೇಲೆ  ಸೂರ್ಯಕಿರಣಗಳು. ಪಶ್ಚಿಮಘಟ್ಟದ ಬೆಟ್ಟ-ಗುಡ್ಡಗಳ ಸಾಲು, ಮುಗಿಲೆತ್ತರದ ಮರಗಳು, ಇಂಪಾದ ಪಕ್ಷಿಗಳ ಕಲರವ. ಶಿರಸಿ- ಹೊನ್ನಾವರ ನಡುವಿನ ಶರಾವತಿ-ಅಘನಾಶಿನಿ ನದಿಗಳ ಮಧ್ಯದ ದಟ್ಟ ಅರಣ್ಯ ಪ್ರದೇಶದ ವ್ಯಾಪ್ತಿ ಸುಮಾರು 150 ಚದರ ಕಿಲೋಮೀಟರುಗಳು. ತೇಗ, ಹೊನ್ನೆ, ಬೀಟೆ, ಮತ್ತಿ ಹಾಗೂ ಹತ್ತಾರು ಜಾತಿಯ ಮರಗಳು.ಔಷಧೀಯ ಸಸ್ಯಗಳು, ಚಿರತೆ, ಮುಳ್ಳಂದಿ, ಕಾಡುನಾಯಿ, ನರಿ, ಜಿಂಕೆ, ಕಾಡುಕೋಣ, ಹಂದಿ, ವಿಷ ಸರ್ಪಗಳು, ನಾನಾಜಾತಿ ಪಕ್ಷಿಗಳು ಈ ಅರಣ್ಯದಲ್ಲಿವೆ. 10ರಿಂದ 15 ಕಿ.ಮೀ ಕವಲುದಾರಿಯ ಬೆಟ್ಟ ಹತ್ತಿಳಿದು ದಣಿದೆವು. ನಮ್ಮ ಜತೆಯಲ್ಲಿದ್ದ ಸಂತೋಷ್ ಮತ್ತವರ ಸಹಾಯಕರು ಸಿಂಗಳೀಕಗಳ ಗುಂಪನ್ನು ತೋರಿಸಿದರು !

ಪಶ್ಚಿಮಘಟ್ಟ ಅರಣ್ಯಗಳಲ್ಲಿ ಕಂಡು ಬರುವ ಅಪರೂಪದ ಈ ಸಿಂಗಳೀಕಗಳು ನಮ್ಮ ದೇಶ ಹೊರತುಪಡಿಸಿದರೆ ಬೇರೆ ಯಾವ ದೇಶಗಳಲ್ಲೂ ಕಂಡು ಬರುವುದಿಲ್ಲ. ಶಿರಸಿ-ಹೊನ್ನಾವರ ಅರಣ್ಯಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಕಪ್ಪು ಮುಖದ, ಕುತ್ತಿಗೆಯ ಭಾಗ ಸಿಂಹದಂತೆ (ಕೇಸರದಂತೆ) ಕಾಣುವ ಸಿಂಗಳೀಕಗಳ ಬಾಲವೂ  ಸಿಂಹದ ಬಾಲದಂತೆ ಕಾಣುತ್ತದೆ. ಸಿಂಹ ಬಾಲದ ಕೋತಿಗಳನ್ನು ಸಿಂಗಳೀಕ ಎಂದೇ ಕರೆಯುತ್ತಾರೆ.

ಸಿಂಗಳೀಕಗಳು ತುಂಬಾ ನಾಚಿಕೆಯ ಸ್ವಭಾವದವು. ಅವು ಸದಾ ಗುಂಪುಗಳಲ್ಲಿರುತ್ತವೆ. ಒಂದು ಗುಂಪಿನಲ್ಲಿ  20ರಿಂದ 30 ಸಿಂಗಳೀಕಗಳಿರುತ್ತವೆ. ಗುಂಪಿಗೆ ಗಂಡು ಮುಖಂಡ. ಆದರೆ ಗುಂಪಿನಲ್ಲಿ  ಹೆಣ್ಣು ಸಿಂಗಳೀಕಗಳ  ಸಂಖ್ಯೆಯೇ ಹೆಚ್ಚು. ಎರಡು ವರ್ಷಕ್ಕೊಮ್ಮೆ ಸಂತಾನೋತ್ಪತ್ತಿ ಮಾಡುವ  ಸಿಂಗಳೀಕಗಳು ಆಹಾರದ ಕೊರತೆಯಿಂದ 3ರಿಂದ 4 ವರ್ಷಗಳಿಗೊಮ್ಮೆ ಗರ್ಭ ಧರಿಸುತ್ತವೆ. ಒಂದು ಸಿಂಗಳೀಕ ನಾಲ್ಕೈದು ಮರಿಗಳಿಗೆ ಜನ್ಮ ನೀಡುತ್ತದೆ. ಬೇರೆ ಕೋತಿಗಳಂತೆ ಇವು ಮನುಷ್ಯರ ವಾಸಸ್ಥಾನಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅರಣ್ಯದ ಮಧ್ಯಭಾಗದ ಎತ್ತರದ ಮರಗಳಲ್ಲಿ ವಾಸ ಮಾಡುತ್ತವೆ. ಆಹಾರ ಹುಡುಕುತ್ತ ದಿನಕ್ಕೆ ಸುಮಾರು ಹತ್ತು ಕಿಲೋಮೀಟರ್ ಸಂಚರಿಸುತ್ತವೆ.    
  
ಶತ್ರುಗಳು ಗೋಚರವಾಗುತ್ತಿದ್ದಂತೆ ಎಚ್ಚರಿಕೆಯ ಕೂಗು ಹಾಕುತ್ತವೆ. ಕೂಗು ಸುಮಾರು ಅರ್ಧ ಕಿ.ಮೀ. ವರೆಗೆ ಕೇಳಿಸುತ್ತದೆ. ಸಾಮಾನ್ಯವಾಗಿ ಹೆಣ್ಣು ಸಿಂಗಳೀಕ ನಾಲ್ಕು ವರ್ಷಕ್ಕೆ ಪ್ರೌಢಾವಸ್ಥೆಗೆ ಬರುತ್ತದೆ. ಮರಿಗಳು 6 ತಿಂಗಳವರೆಗೆ ತಾಯಿಯ ಜೊತೆಯಲ್ಲಿದ್ದು ನಂತರ ಗುಂಪಿನ ಸಂರ್ಪಕ ಕಳೆದುಕೊಳ್ಳುತ್ತವೆ.

ವೆಜ್-ನಾನ್‌ವೆಜ್: ಸಿಂಗಳೀಕಗಳಲ್ಲಿ ಸಸ್ಯಹಾರಿ ಮತ್ತು ಮಾಂಸಹಾರಿಗಳೂ ಇವೆ. ಸಸ್ಯಾಹಾರಿ ಸಿಂಗಳೀಕಗಳು  90 ನಮೂನೆಯ  ಹಣ್ಣುಗಳನ್ನು ತಿಂದು ಜೀವಿಸುತ್ತವೆ ಎನ್ನಲಾಗಿದೆ. ಪಶ್ಚಿಮಘಟ್ಟದ ಕಾಡುಗಳಲ್ಲಿ ಬಗನೆ, ಮಾವು, ಉಪ್ಪಾಗೆ, ಕಮ್ಮನಾಳು, ಪತ್ರೆ, ಹಲಸು, ಮಂಜರಳೆ, ಮುಂಡಿಗೆ, ಕರಿಮಿಟುಗ ಮತ್ತಿತರ ಹಣ್ಣುಗಳು ಅವುಗಳಿಗೆ ಇಷ್ಟ. ಮಾಂಸಾಹಾರಿ ಸಿಂಗಳೀಕಗಳು ಕಂಬಳಿಹುಳು, ಓತಿಕ್ಯಾತ, ಅಳಿಲು, ಕಬ್ಬೆಕ್ಕು, ಜೇಡ, ಮಿಡತೆ, ಇರುವೆ ಹಾಗೂ ಗೆದ್ದಲು ಹುಳುಗಳನ್ನು ತಿನ್ನುತ್ತವೆ. ಇವು ಸುಮಾರು ಇಪ್ಪತ್ತು ವರ್ಷಗಳ ಕಾಲ  ಜೀವಿಸುತ್ತವೆ.

ಹವಾಗುಣ, ಕಾಡಿನ ಅತಿಕ್ರಮಣ, ಮರಗಳ ಕಳ್ಳ ಸಾಗಾಣೆ, ಕಟ್ಟಿಗೆ ಬಳಸಲು ಮರಗಿಡ ಕಡಿಯುವುದರಿಂದ ಇವುಗಳ ಸಂತತಿಯು ಕಡಿಮೆಯಾಗುತ್ತಿದೆ; ಅಳಿವಿನ ಅಂಚಿನಲ್ಲಿರುವ ಜೀವಪ್ರಭೇದ ಎಂದೇ ಹೇಳಲಾಗಿರುವ ಸಿಂಗಳೀಕದ ಸಂಖ್ಯೆ ಶಿರಸಿ-ಹೊನ್ನಾವರ ಅರಣ್ಯ ಭಾಗದಲ್ಲಿ ಹೆಚ್ಚಳವಾಗಿದೆ ಎಂಬ ಅಂಶವನ್ನು ಇತ್ತೀಚಿನ ಸಂಶೋಧನೆಯೊಂದು ದೃಢಪಡಿಸಿದೆ.

 ಮಿನ್‌ಕೌಸ್ಕಿ ಎಂಬ ಸಂಶೋಧಕರು 1977ರಲ್ಲಿ  ಭಾರತದ ಅರಣ್ಯ ಪ್ರದೇಶಗಳಿಗೆ ಭೇಟಿ ನೀಡಿ  ತಮಿಳುನಾಡಿನ ಅಗಸ್ತ್ಯ ಮಲೈ ಅರಣ್ಯ ಪ್ರದೇಶದಲ್ಲಿ ಸುಮಾರು 700 ಸಿಂಗಳೀಕಗಳು ಹಾಗೂ ಕನ್ಯಾಕುಮಾರಿಯಿಂದ ಅಘನಾಶಿನಿ ಅರಣ್ಯ ಪ್ರದೇಶದ ವರೆಗೆ 3000 ಸಿಂಗಳೀಕಗಳಿರಬಹುದೆಂದು ಅಂದಾಜು ಮಾಡಿದ್ದರು. 2002ರಲ್ಲಿ  ವನ್ಯಜೀವಿ ಸಂಶೋಧಕರಾದ ಎಚ್.ಎನ್. ಕುಮಾರ್ ಹಾಗೂ  ಮೆವಸಿಗ್ ಸಿಂಗ್ ಅವರು 32 ಗುಂಪುಗಳನ್ನು ಗುರುತಿಸಿದ್ದಾರೆ.

 ಶಿರಸಿ-ಹೊನ್ನಾವರ ಅರಣ್ಯ ಪ್ರದೇಶವನ್ನು ‘ಸಿಂಗಳೀಕ ಸಂರಕ್ಷಿತ ಪ್ರದೇಶ’ ಎಂದು ಘೋಷಣೆ ಮಾಡಬೇಕೆಂದು ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಸಿಂಗಳೀಕಗಳಿರುವ ಅರಣ್ಯದ ನಕ್ಷೆ ಹಾಗೂ ವರದಿಯನ್ನು ಅರಣ್ಯ ಇಲಾಖೆ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ದಾಂಡೇಲಿ ಸುತ್ತಲಿನ ಅರಣ್ಯ ಪ್ರದೇಶವನ್ನು ‘ಹಾರ್ನಬಿಲ್ ಸಂರಕ್ಷಿತ ಪ್ರದೇಶ’ವೆಂದು ಘೋಷಿಸಲಾಗಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದು. ಸರ್ಕಾರ ಹೆಚ್ಚಿನ ಅನುದಾನ ನೀಡಿದರೆ ಅರಣ್ಯ ಸಿಬ್ಬಂದಿ ನೇಮಿಸಿ ಸಿಂಗಳೀಕಗಳನ್ನು ನೋಡ ಬಯಸುವವರಿಗೆ ಅನುಕೂಲ ಕಲ್ಪಿಸುವುದಾಗಿ ಅರಣ್ಯ ಇಲಾಖೆ ಸಂರಕ್ಷಣಾಧಿಕಾರಿ ಮನೋಜ ಕುಮಾರ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT