ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗ್ ಮೇಲೆ ಹಲ್ಲೆ: ಕಠಿಣ ಕ್ರಮದ ಭರವಸೆ

Last Updated 21 ಫೆಬ್ರುವರಿ 2011, 20:25 IST
ಅಕ್ಷರ ಗಾತ್ರ

ಬೆಂಗಳೂರು: ಕೆರೆ ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಯು.ವಿ.ಸಿಂಗ್ ಮೇಲೆ ನಡೆದಿರುವ ಹಲ್ಲೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಘಟನೆ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಲೋಕಾಯುಕ್ತರಿಗೆ ಭರವಸೆ ನೀಡಿದ್ದಾರೆ.

ಸೋಮವಾರ ಬೆಳಿಗ್ಗೆಯೇ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಈ ಕುರಿತು ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿದರು. ಸಿಂಗ್ ಅವರ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳನ್ನು ಪತ್ತೆಹಚ್ಚಿ ತಕ್ಷಣವೇ ಬಂಧಿಸುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿರುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಡಿಜಿಪಿ ಭೇಟಿ: ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಸ್.ಟಿ.ರಮೇಶ್ ಅವರು ಸಂಜೆ ಖುದ್ದಾಗಿ ಲೋಕಾಯುಕ್ತರನ್ನು ಭೇಟಿಮಾಡಿ ಪ್ರಕರಣದ ಬಗ್ಗೆ ಚರ್ಚೆ ನಡೆಸಿದರು. ನಗರದ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಅವರೊಂದಿಗೆ ಲೋಕಾಯುಕ್ತ ಕಚೇರಿಗೆ ಆಗಮಿಸಿದ ಅವರು ಪ್ರಕರಣದ ತನಿಖೆ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರವಾಗಿ ತಿಳಿಸಿದರು.

ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ರಮೇಶ್ ಇದೇ ಮೊದಲ ಬಾರಿಗೆ ಲೋಕಾಯುಕ್ತರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಇತರೆ ಕೆಲವು ವಿಷಯಗಳ ಬಗ್ಗೆಯೂ ಅವರು ಚರ್ಚೆ ನಡೆಸಿದ್ದಾರೆ.

ಸಿಂಗ್ ಅವರಿಗೆ ಭದ್ರತೆ: ಈ ಮಧ್ಯೆ ಸಿಂಗ್ ಅವರಿಗೆ ಸೂಕ್ತ ಭದ್ರತೆ ಕಲ್ಪಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಅವರ ರಕ್ಷಣೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವುದಾಗಿಯೂ ಡಿಜಿಪಿ ಲೋಕಾಯುಕ್ತರಿಗೆ ಭರವಸೆ ನೀಡಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ರಮೇಶ್, ‘ಇದು ಒಂದು ಸೌಜನ್ಯದ ಭೇಟಿ ಅಷ್ಟೆ. ಈ ಸಂದರ್ಭದಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆದಿದೆ.ಯು.ವಿ.ಸಿಂಗ್ ಮೇಲಿನ ಹಲ್ಲೆ ಪ್ರಕರಣದ ಬಗ್ಗೆಯೂ ಚರ್ಚೆ ನಡೆದಿದೆ. ಅವರು ಬಯಸುವ ಎಲ್ಲ ಬಗೆಯ ರಕ್ಷಣೆಯನ್ನೂ ಒದಗಿಸಲು ಸಿದ್ಧವಿರುವುದಾಗಿ ಲೋಕಾಯುಕ್ತರಿಗೆ ತಿಳಿಸಿದ್ದೇನೆ’ ಎಂದರು.

ಅಮಾನತು ಅಗತ್ಯ: ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಲೋಕಾಯುಕ್ತರು, ‘ಇದೊಂದು ಗಂಭೀರ ಸ್ವರೂಪದ ಪ್ರಕರಣ. ಒಬ್ಬ ಪ್ರಾಮಾಣಿಕ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಕೃತ್ಯದಲ್ಲಿ ಬಿಬಿಎಂಪಿ ಸದಸ್ಯನ ಕೈವಾಡವೇ ಇರುವುದು ದೃಢಪಟ್ಟಿದೆ. ಆರೋಪಪಟ್ಟಿ ಸಲ್ಲಿಸಿದ ತಕ್ಷಣ ಆತನನ್ನು ಸದಸ್ಯತ್ವದಿಂದ ಅಮಾನತು ಮಾಡಬೇಕು’ ಎಂದರು.

‘ಆರೋಪಪಟ್ಟಿ ದಾಖಲಾದ ಬಳಿಕವೂ ಆರೋಪಿ ಪಾಲಿಕೆಯ ಸದಸ್ಯನಾಗಿ ಮುಂದುವರಿದರೆ ಬಿಬಿಎಂಪಿ ಇತಿಹಾಸದಲ್ಲಿ ಇದು ಒಂದು ಕರಾಳ ಅಧ್ಯಾಯವಾಗುತ್ತದೆ.ಕರ್ತವ್ಯನಿರತ ಅಧಿಕಾರಿ ಮೇಲೆ ಹಲ್ಲೆ ನಡೆಸಿರುವವರನ್ನು ಸದಸ್ಯತ್ವದಲ್ಲಿ ಮುಂದುವರಿಸುವ ಪರಿಪಾಠ ಬೆಳೆಯಬಾರದು’ ಎಂದು ಖಾರವಾಗಿ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT