ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂದಗಿ ಪ್ರಕರಣ: ಜೆಡಿಎಸ್ ಪ್ರತಿಭಟನೆ

Last Updated 7 ಜನವರಿ 2012, 6:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ನಡೆದ ಪಾಕ್ ಧ್ವಜಾರೋಹಣ ಪ್ರಕರಣವನ್ನು ಖಂಡಿಸಿ ಜೆಡಿಎಸ್ ನಗರ ಘಟಕದ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಕೊಪ್ಪಿಕರ್ ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಬೆಳಿಗ್ಗೆ ನಡೆದ ಸಭೆಯ ನಂತರ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ತಹಸೀಲ್ದಾರ ಕಚೇರಿಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು ತಹಸೀಲ್ದಾರರಿಗೆ ಮನವಿ ಸಲ್ಲಿಸಿ, ಪಾಕ್ ಧ್ವಜ ಹಾರಿಸಿದ ಶ್ರೀರಾಮ ಸೇನೆಯ ಕಾರ್ಯಕರ್ತರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೂ ಮೊದಲು ಸಭೆಯಲ್ಲಿ ಮಾತನಾಡಿದ ಯತ್ನಾಳ, `ದೇಶದಲ್ಲಿ ಮುಸ್ಲಿಮರು ನಡೆಸಿದ್ದಾರೆ ಎಂದು ಆರೋಪಿಸಲಾಗುವ ಎಲ್ಲ ದುಷ್ಕೃತ್ಯಗಳ ಹಿಂದೆ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕೈವಾಡ ಇತ್ತು ಎಂಬುದು ಸಿಂದಗಿ ಪ್ರಕರಣದಿಂದ ಬಯಲಾಗಿದೆ~ ಎಂದು ಆರೋಪಿಸಿದರು. `ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ, ಹಿಂದುಗಳ ಅಭಿವೃದ್ಧಿಯಾಗಲಿ, ರಾಜ್ಯದ ಅಭಿವೃದ್ಧಿಯಾಗಲಿ ಮಾಡಲಿಲ್ಲ. ಬಿಜೆಪಿ ಹಿಂದುಗಳ ರಕ್ಷಕರಲ್ಲ, ದೇಶ ಒಡೆಯುವವರು~ ಎಂದು ದೂರಿದರು.

`ರಾಜ್ಯದಲ್ಲಿ ಕಾಂಗ್ರೆಸ್ ಸಮರ್ಥ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅವರಲ್ಲಿ ಪ್ರತಿಯೊಬ್ಬರಿಗೂ ಮುಖ್ಯಮಂತ್ರಿಯಾಗುವುದೊಂದೇ ಜೀವನದ ಕೊನೆಯ ಆಸೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡಿ ಮುಂದಿನ ಬಾರಿ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಪ್ರಯತ್ನಿಸಬೇಕು~ ಎಂದು ಅವರು ಸಲಹೆ ನೀಡಿದರು.

ಜನತಾದಳ ಜಗಳದಳವಾಗದಿರಲಿ:  ಜೆಡಿಎಸ್ ಕಾರ್ಯಕರ್ತರು ಸಣ್ಣ ಪುಟ್ಟ ವಿಷಯಗಳಿಗೆ ಜಗಳ ಮಾಡುವುದನ್ನು ಬಿಡಬೇಕು ಎಂದು ಸಲಹೆ ನೀಡಿದ ಯತ್ನಾಳ, `ಜನತಾದಳ ಜಗಳದಳವಾಗುವುದು ಬೇಡ, ಅಸಮಾಧಾನಗಳಿಗೆ ಕಾರಣಗಳನ್ನು ಹುಡುಕಿ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು, ಉತ್ತರ ಕರ್ನಾಟಕದಲ್ಲಿ ಪಕ್ಷವನ್ನು ವ್ಯವಸ್ಥಿತವಾಗಿ ಸಂಘಟಿಸಲು ನಾಯಕರು ಮುಂದಾಗಬೇಕು~ ಎಂದು ಹೇಳಿದರು.

ಜೆಡಿಎಸ್ ನಗರ ಜಿಲ್ಲಾ ಘಟಕದ ಅಧ್ಯಕ್ಷ ರಾಜಣ್ಣ ಕೊರವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವ ಆಲ್ಕೋಡ್ ಹನುಮಂತಪ್ಪ, ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ಎಚ್. ಕೋನರಡ್ಡಿ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ, ಮುಖಂಡರಾದ ಹಜರತ್ ಅಲಿ ದೊಡ್ಡಮನಿ, ಇಸ್ಮಾಯಿಲ್ ಕಾಲೇಬುಡ್ಡೆ, ದಾನಪ್ಪಣ್ಣ ಕಟ್ಟಿಮನಿ, ಅಬ್ದುಲ್ ಸಾಬ್ ಕರೀಂ, ವಿ.ಐ. ಅಳಗುಂಡಗಿ, ಅಲ್ತಾಫ್ ನವಾಜ್ ಕಿತ್ತೂರ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT