ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂದಗಿ ವಿದ್ಯಾರ್ಥಿಗಳ ಬೊಂಬಾಟ್ ಮನರಂಜನೆ

Last Updated 22 ಅಕ್ಟೋಬರ್ 2011, 10:50 IST
ಅಕ್ಷರ ಗಾತ್ರ

ವಿದ್ಯಾರ್ಥಿಗಳು ಉಣಬಡಿಸಿದ ಸಾಂಸ್ಕೃತಿಕ ಸಿರಿಯನ್ನು ಆ ಗ್ರಾಮಸ್ಥರು ಮರೆಯಲು ಸಾಧ್ಯವೇ ಇಲ್ಲ. ವಿವಿಧ ವೇಷ ಧರಿಸಿ ತಾವೂ ಕುಣಿದು ಪ್ರೇಕ್ಷಕರನ್ನೂ ಕುಣಿಸಿದ ಆ ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಸ್ಮರಿಸುತ್ತ ಗ್ರಾಮಸ್ಥರೆಲ್ಲ ಚಪ್ಪಾಳೆ ತಟ್ಟಿದರು.

ಸಿಂದಗಿ ಪಟ್ಟಣದ ಪದ್ಮರಾಜ ಬಿ.ಇಡಿ ಕಾಲೇಜಿನಿಂದ ಗಣಿಹಾರ ಗ್ರಾಮದಲ್ಲಿ ನಡೆದ ಪೌರತ್ವ ತರಬೇತಿ ಶಿಬಿರ ಇಂಥದ್ದೊಂದು ಕಾರ್ಯಕ್ರಮಕ್ಕೆ ವೇದಿಕೆಯಾಯಿತು. ಶಿಬಿರದ ಉದ್ದೇಶ ವ್ಯಕ್ತಿತ್ವ ವಿಕಸನ. ಶಿಬಿರದಲ್ಲಿ ಪಾಲ್ಗೊಂಡಿದ್ದ 80 ವಿದ್ಯಾರ್ಥಿಗಳು ಆ ಉದ್ದೇಶವನ್ನು ನಿಜಕ್ಕೂ ಯಶಸ್ವಿಗೊಳಿಸಿದರು.

ಹಗಲು ಹೊತ್ತು ಚಿಂತನ-ಮಂಥನ. ಸಂಜೆ ಅದ್ಭುತ ಮನರಂಜನಾ ಕಾರ್ಯಕ್ರಮ.
ಶಿಕ್ಷಕರ ಮಾರ್ಗದರ್ಶನವಿಲ್ಲ; ಪೂರ್ವ ಸಿದ್ಧತೆಯೂ ಇಲ್ಲ. ತಮ್ಮಷ್ಟಕ್ಕೆ ತಾವೇ ವೇಷ-ಭೂಷಣಗಳನ್ನು ಜೋಡಿಸಿಕೊಂಡು ವಿದ್ಯಾರ್ಥಿ-ವಿದ್ಯಾರ್ಥಿನಿಯರ ಜೊತೆಗೂಡಿ ಆಧುನಿಕತೆಯ ಸೋಂಕಿಲ್ಲದ, ಕೀಳು ಮಾತುಗಳಿಲ್ಲದ, ಪಕ್ಕಾ ಜನಪದ ಸಂಸ್ಕೃತಿಯನ್ನೊಳಗೊಂಡ ಅಪರೂಪದ ಕಲೆಯನ್ನು ಪ್ರದರ್ಶಿಸಿ ಇಡೀ ಗ್ರಾಮಸ್ಥರಿಂದ ಶಹಬ್ಬಾಸಗಿರಿ ಪಡೆದುಕೊಂಡರು.

ಡಾ.ಚಂದ್ರಶೇಖರ ಕಂಬಾರ, ಕಿತ್ತೂರು ಚೆನ್ನಮ್ಮ, ಸಿ.ವಿ. ರಾಮನ್, ಧ್ಯಾನಚಂದ ಹೀಗೆ ತಂಡಗಳನ್ನಾಗಿ ಮಾಡಿಕೊಂಡು ನಾಟಕ, ಗಾಯನ, ನೃತ್ಯಗಳ ಸ್ಪರ್ಧಾ ಕಾರ್ಯಕ್ರಮ ನಡೆಸುವ ಮೂಲಕ ಒಬ್ಬರಿಗಿಂತ ಇನ್ನೊಬ್ಬರು ವಿಶಿಷ್ಟ ಅಭಿನಯ ಪ್ರದರ್ಶಿಸಿದರು.

`ವಧು ಅನ್ವೇಷಣೆ~ಯ ಕಿರು ನಾಟಕದಲ್ಲಿ ವಿದ್ಯಾರ್ಥಿನಿ ಲಕ್ಷ್ಮಿ ಅರುಣಿ, ವಿದ್ಯಾರ್ಥಿ ಶರಣು ತೇಲಿ ಅಭಿನಯ ಅಮೋಘವಾಗಿತ್ತು. ಲಕ್ಷ್ಮಿ ಅರುಣಿ ಮತ್ತು ಕವಿತಾ ಈಳಗೇರರ ನೃತ್ಯವಂತೂ ಸೂಪರ್. ಸತೀಶ ಸ್ಥಾವರಮಠ, ಕಾಸೀಂ ದೊಡಮನಿಯನ್ನೊಳಗೊಂಡ `ಹೈ ಪಾಯ್ ಸಲೂನ್~ ನಾಟಕ ಪ್ರಸಂಗ ಇಡೀ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ಅರ್ಚನಾ ಕುಲಕರ್ಣಿ ಸಂಗಡಿಗರ `ವಂದೇ ಮಾತರಂ~ ಗೀತೆ ಮೈ ರೋಮಾಂಚನಗೊಳಿಸಿತು.

ಭವ್ಯಾ ಡಾಂಗಿ, ಜ್ಯೋತಿ ನಾಗರಾಜ ಮುರಗೋಡ ಸಂಗಡಿಗರು ಇಲಕಲ್ ಸೀರೆ, ಗುಳೇದಗುಡ್ಡ ಕುಪ್ಪಸ ತೊಟ್ಟು ಮಗುವಿನ ನಾಮಕರಣ ಸಾಂಪ್ರದಾಯಿಕ ಚಟುವಟಿಕೆಗಳ ಜೊತೆಗೆ ಸುಂದರ ಗೀತೆ ಹಾಡಿದರು. ಆನಂದ ಕೆಳಗಿನಮನಿ ಸಂಗಡಿಗರ ಸಾಂಪ್ರದಾಯಿಕ ಶೈಲಿ ಡೊಳ್ಳಿನ ಪದ ಇಡೀ ಹಳ್ಳಿಗರನ್ನು ಬೆರಗುಗೊಳಿಸಿತು.

ಕವಿತಾ ತಮ್ಮಣ್ಣ ಈಳಗೇರ ನೇತೃತ್ವದ `ಏನು ಕೊಡ ಏನ ಕೊಡವ...~ ಜಾನಪದ ನೃತ್ಯದ ಸಂದರ್ಭದಲ್ಲಿ ಪ್ರೇಕ್ಷಕ–ರು- ಶಿಕ್ಷಕರು ಸಹ ಅತ್ಯುತ್ಸಾಹದಿಂದ ಹೆಜ್ಜೆ ಹಾಕಿದರು.

`ವಿಧವಾ ಮರು ವಿವಾಹ~ಕ್ಕೆ ಬೆಂಬಲಿಸಿದ ಕಿರು ನಾಟಕ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ವಿದ್ಯಾರ್ಥಿ ಮಹೇಶ ಬೆಲ್ಲದ, ಸಿದ್ದಮ್ಮ ನಾಯ್ಕೋಡಿ ಅಭಿನಯ ಹೃದಯಸ್ಪರ್ಶಿಯಾಗಿತ್ತು. ಮಾಸ್ಟರ್ ರವಿ ಗೋಲಾ, ಮೇಡಂ ಸವಿತಾ ಹಾಬಾಳ, ಜಯಶ್ರೀ ನಂದಿಕೋಲ ಅವರ ಪ್ರೋತ್ಸಾಹ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT