ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಧೇಖಾನರ ಶಾಸ್ತ್ರನಿಷ್ಠೆ

Last Updated 22 ಅಕ್ಟೋಬರ್ 2010, 18:30 IST
ಅಕ್ಷರ ಗಾತ್ರ


ಉಸ್ತಾದ್ ಸಿಂಧೇಖಾನರ ಹೆಸರು ಸಂಗೀತ ಲೋಕದಲ್ಲಿ ಅಷ್ಟೊಂದು ಪ್ರಚಲಿತವಾದುದಲ್ಲ. ಈಗಿನ ತಲೆಮಾರಿನವರಿಗಂತೂ ಅವರ ಹೆಸರು ತೀರಾ ಅಪರಿಚಿತ. ಗ್ವಾಲಿಯರ್ ಘರಾಣೆಯ ಸಿಂಧೇಖಾನರು ವಿಚಿತ್ರ ವ್ಯಕ್ತಿತ್ವವುಳ್ಳವರಾಗಿದ್ದರು. ಅವರು ಯಾರಿಗೂ ‘ಗುರು’ಗಳಾಗಿರಲಿಲ್ಲ.ವೇದಿಕೆಯನ್ನೇರಿ ಬೈಠಕ್ ನಡೆಸುವ ಖಯಾಲಿಯೂ ಅವರಿಗಿರಲಿಲ್ಲ. ಆದರೆ ಕುಮಾರಗಂಧರ್ವರ ಗುರುಗಳಾದ, ಸಂಗೀತ ವಿದ್ವಾಂಸರೆನಿಸಿದ ಪಂ.ಬಿ.ಆರ್.ದೇವಧರರಂಥವರು ಕೂಡ ಅವರನ್ನು ಗುರುಗಳು ಎಂದೇ ಭಾವಿಸಿ ಗೌರವಿಸುತ್ತಿದ್ದರು.

ಸಿಂಧೇಖಾನರು ಬಂದಿಶ್‌ಗಳ ಖಜಾನೆಯಾಗಿದ್ದರು. ಅವರನ್ನು ‘ನಡೆದಾಡುವ ಚೀಜ್‌ಗಳ ಖಜಾನೆ’ ಎಂದು ಸಂಗೀತಗಾರರು ಗುರುತಿಸುತ್ತಿದ್ದರು.ತಾವು ಕಲಿತದ್ದು ಗ್ವಾಲಿಯರ್ ಘರಾಣೆಯ ಹಾಡುಗಾರಿಕೆಯಾದರೂ, ಯಾವುದೇ ಘರಾಣೆಗೆ ಕಲಾವಿದನಾದವನು ಬದ್ಧನಾಗಿರಬಾರದು ಮತ್ತು ಎಲ್ಲ ಘರಾಣೆಗಳ ಉತ್ತಮ ಅಂಶಗಳನ್ನು ಮೈಗೂಡಿಸಿಕೊಂಡು ಹಾಡಬೇಕು ಎಂಬ ಪ್ರಗತಿಪರ ನಿಲುವು ಅವರದಾಗಿತ್ತು. ಅವರ ಅಂದಿನ ಕನಸು ಇಂದು ನನಸಾಗಿ ಬಹುತೇಕ ಗಾಯಕರು ಆ ರೀತಿ ಹಾಡುತ್ತಿದ್ದಾರೆ. ಇದಕ್ಕೆ ಪಂ.ಭೀಮಸೇನ ಜೋಷಿ ಹಾಗೂ ಕುಮಾರ ಗಂಧರ್ವರು ಅತ್ಯುತ್ತಮ ಉದಾಹರಣೆ. ಆದರೆ, ನೂರು ವರ್ಷಗಳ ಹಿಂದೆ ಈ ಮಾತು ಅಷ್ಟು ಸರಳವಾಗಿರಲಿಲ್ಲ. ಘರಾಣೆ-ಘರಾಣೆಗಳ ನಡುವಿನ ತಿಕ್ಕಾಟ, ಮೂದಲಿಕೆ, ಮೇಲುಕೀಳೆಂಬ ಧೋರಣೆ ಆಗ ಸಾಮಾನ್ಯವಾಗಿತ್ತು. ಅಂಥ ವಾತಾವರಣದಲ್ಲಿ ಸಿಂಧೇಖಾನರ ವಿಚಾರ ಖಂಡಿತವಾಗಿಯೂ ಕ್ರಾಂತಿಕಾರಿ ಎನಿಸಿತ್ತು. ಯಾವುದೇ ಘರಾಣೆ ಪ್ರಚಲಿತಕ್ಕೆ ಬಂದರೆ, ಹೆಚ್ಚು ಚಾಲ್ತಿಯಲ್ಲಿದೆ ಎಂದು ಅನ್ನಿಸಿದರೆ ಸಿಂಧೇಖಾನರು ‘ಉನಕಿ ದುಕಾನ್ ಅಚ್ಛಿ ಚಲ್ ರಹೀ ಹೈ’ ಎಂದು ನಗೆಯಾಡುತ್ತಿದ್ದರು.

ಪಂ.ಬಿ.ಆರ್.ದೇವಧರರು ಮುಂಬೈನಲ್ಲಿ ನಡೆಸುತ್ತಿದ್ದ ‘ದಿ ಸ್ಕೂಲ್ ಆಫ್ ಇಂಡಿಯನ್ ಮ್ಯೂಸಿಕ್’ಗೆ ಸಿಂಧೇಖಾನ್‌ರು ಆಗಾಗ ಬರುತ್ತಿದ್ದರು.ಅವರು ಬಂದಾಗಲೆಲ್ಲ ತಮ್ಮ ಖಜಾನೆಗಳ ಭಂಡಾರ ತುಂಬಿಸಿಕೊಳ್ಳುತ್ತಿದ್ದರು. ಸಿಂಧೇಖಾನರಿಗೆ ಹಣದ ಅಗತ್ಯವಿರುತ್ತಿತ್ತು. ತಮಗೆ ಶೆರೆ ಕುಡಿಯಲು ಹಣ ಕಡಿಮೆ ಬಿದ್ದಾಗಲೆಲ್ಲ ಅವರು ದೇವಧರರಲ್ಲಿಗೆ ಬರುತ್ತಿದ್ದರು. ಆಗಿನ ಕಾಲದಲ್ಲಿ (1936) ದೇವಧರ ಮಾಸ್ತರರು ಹತ್ತು ರೂಪಾಯಿಗಳಷ್ಟು ದೊಡ್ಡ ಮೊತ್ತವನ್ನು ನೀಡಿ ಸಿಂಧೇಖಾನರಿಂದ ಚೀಜ್‌ಗಳನ್ನು ಸಂಗ್ರಹಿಸುತ್ತಿದ್ದರು. ಶಾಸ್ತ್ರೋಕ್ತ ರೀತಿಯಲ್ಲಿ ಚೀಜುಗಳನ್ನು ಸಂಗ್ರಹಿಸಿ ದೇವಧರರು ಹಿಂದೂಸ್ತಾನಿ ಸಂಗೀತಲೋಕಕ್ಕೆ ದೊಡ್ಡ ಉಪಕಾರವನ್ನೇ ಮಾಡಿದ್ದಾರೆ.

ಒಮ್ಮೆ ಸಿಂಧೇಖಾನರು ದೇವಧರರ ಸಂಗೀತಶಾಲೆಗೆ ಆಗಮಿಸಿದರು. ಆಗ ದೇವಧರರು ತಮ್ಮ ಶಿಷ್ಯರಿಗೆ ‘ಯಮನೀಬಿಲಾವಲ್’ ಕಲಿಸುತ್ತಿದ್ದರು. ಜೋಡು ರಾಗವಾದ ಇದರಲ್ಲಿ ಯಮನ್ ಮತ್ತು ಬಿಲಾವಲ್ ರಾಗಗಳ ಮಿಶ್ರಣವಿದೆ. ಉಸ್ತಾದ ಸಿಂಧೇಖಾನರು ಇದನ್ನು ಗಮನಿಸಿ ಕೇಳಿದರು-
‘ಏನು ಮಾಡುತ್ತಿದ್ದೀರಿ ಮಾಸ್ತರಜಿ?’
ಮಾಸ್ತರರು ತಾವು ಯಮನಿಬಿಲಾವಲ್ ಕಲಿಸುತ್ತಿರುವುದಾಗಿ ಹೇಳಿದರು. ತಕ್ಷಣ ಸಿಂಧೇಖಾನರು ಸಿಡಿದೆದ್ದರು-

‘ಅರೆ ಭಾಯಿ, ಶಾಮಕೋ ಕ್ಯೂಂ ಸುಬಹ್ ಮೇ ಘುಸೇಡ್ ರಹೆ ಹೋ’ (ಅಲ್ಲಯ್ಯ, ಮುಂಜಾನೆಯೊಳಗೆ ಸಂಜೆಯನ್ನೇಕೆ ಒತ್ತಾಯದಿಂದ ತುರುಕುತಿದ್ದೀಯ?)ದೇವಧರ ಮಾಸ್ತರರು ನಿರುತ್ತರರಾದರು; ಇಂಥದೊಂದು ಅಪಚಾರಕ್ಕೆ ಸಾಕ್ಷಿಯಾಗಿರುವುದೇ ಪಾಪವೆಂದುಕೊಂಡು.ಸಿಂಧೇಖಾನರು ಗಲ್ಲಗಲ್ಲ ಬಡಿದುಕೊಂಡರು. ದುರ್ದಾನ ತೆಗೆದುಕೊಂಡವರಂತೆ ಅಲ್ಲಿಂದ ನಿರ್ಗಮಿಸಿದರು.

ಯಮನ್ ಸಾಯಂಕಾಲ ಹಾಡುವ ರಾಗ. ಬಿಲಾವಲ್ ಬೆಳಗಿನ ರಾಗ. ಅವೆರಡನ್ನೂ ಸೇರಿಸಲಾಗದು ಎನ್ನುವುದು ಸಿಂಧೇಖಾನರ ವಿಚಾರ.ಸಂಗೀತಶಾಸ್ತ್ರ ಇವೆರಡರ ಮಿಲನವನ್ನು ಒಪ್ಪುವುದಿಲ್ಲವೆಂದು ಅವರು ಭಾವಿಸಿದ್ದರು. ಹಿಂದೂಸ್ತಾನಿಯಲ್ಲಿ ದೈನಂದಿನ ಸಮಯಕ್ಕೂ ರಾಗಗಳಿಗೂ ನಿಕಟ ನಂಟಿದೆ. ಎಲ್ಲ ರಾಗಗಳಿಗೂ ಕಾಲಮಿತಿಯಿದೆ. ಪ್ರಾತಃಕಾಲ, ಮಧ್ಯಾಹ್ನ, ಸಂಜೆ, ರಾತ್ರಿ, ಮಧ್ಯರಾತ್ರಿ ಹಾಡುವ ರಾಗಗಳು ಬೇರೆಬೇರೆಯಾಗಿವೆ. ಸಮಯಕ್ಕನುಗುಣವಾಗಿ ಸ್ವರಗಳ ವಿನ್ಯಾಸವಿರುವುದು ಹಿಂದೂಸ್ತಾನಿಯ ಹೆಚ್ಚುಗಾರಿಕೆ. ಹೀಗಾಗಿ ಸಿಂಧೇಖಾನರು ಯಮನಿಬಿಲಾವಲ್ ರಾಗ ರಚನೆ ಅಪಚಾರವೆಂದುಕೊಂಡರು. ಘರಾಣೆಯ ಬಂಧನವನ್ನು ಮೀರುವುದು ಉಚಿತವೆಂದುಕೊಂಡ ಸಿಂಧೇಖಾನರು ಸಮಯ ಬಂಧನವನ್ನು ಮೀರುವುದು ಅನುಚಿತವೆಂದು ಭಾವಿಸಿದ್ದರು.

ನಂತರದ ದಿನಗಳಲ್ಲಿ ಅನೇಕ ಪ್ರಖ್ಯಾತ ಕಲಾವಿದರು ಜೋಡುರಾಗಗಳನ್ನು ನಿರ್ಮಾಣ ಮಾಡಿದ್ದಾರೆ. ಪಂ.ಭೀಮಸೇನ ಜೋಷಿಯವರು ನಿರ್ಮಾಣ ಮಾಡಿದ ಕಲಾಶ್ರೀ (ಕಲಾವತಿ ಮತ್ತು ಶ್ರೀ ರಾಗಗಳ ಜೋಡಣೆ), ಲಲತ್‌ಭಟಿಯಾರ್ ಹಾಗೂ ಕುಮಾರ ಗಂಧರ್ವರು ನಿರ್ಮಿಸಿದ ಗೌರಿಕೇದಾರ, ಗೌರಿಬಸಂತ, ನಂದಕೇದಾರ ಮೊದಲಾದ ರಾಗಗಳು ಪ್ರಸಿದ್ಧವಾಗಿವೆ. ಇಂದಿನ ಮಟ್ಟಿಗೆ ಜೋಡು ರಾಗಗಳು ಶಾಸ್ತ್ರ ಸಮ್ಮತವೆನಿಸಿವೆ. ಪಂ.ಮಲ್ಲಿಕಾರ್ಜುನ ಮನ್ಸೂರ್ ಹಾಗೂ ಪಂ.ಬಸವರಾಜ ರಾಜಗುರು ಕೂಡ ಜೋಡುರಾಗಗಳ ಆನಂದ ಸವಿದಿದ್ದಾರೆ. ಕಾಲ ಶಾಸ್ತ್ರವನ್ನೂ ಬದಲಾಯಿಸಬಲ್ಲುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT