ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಹಳೀಯರಿಗೆ ಗೇಲ್ ಅವರದ್ದೇ ಚಿಂತೆ

Last Updated 6 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕೊಲಂಬೊ: `ವೆಸ್ಟ್‌ಇಂಡೀಸ್ ಹಾಗೂ ಶ್ರೀಲಂಕಾ ನಡುವೆ ಫೈನಲ್ ನಡೆಯಲಿದೆ~ ಎಂದು ಆಸ್ಟ್ರೇಲಿಯಾ ಎದುರಿನ ಸೆಮಿಫೈನಲ್‌ಗೆ ಮುನ್ನವೇ ವೆಸ್ಟ್‌ಇಂಡೀಸ್ ತಂಡದ ಕ್ರಿಸ್ ಗೇಲ್ ಟ್ವಿಟರ್‌ನಲ್ಲಿ ಭವಿಷ್ಯ ನುಡಿದಿದ್ದರು. ಅಷ್ಟೇ ಅದ್ಭುತ ಆಟದ ಮೂಲಕ ತಮ್ಮ ಆ ಮಾತನ್ನು ನಿಜವಾಗಿಸಿದರು.

ಕಾಂಗರೂ ಪಡೆ ವಿರುದ್ಧ ಗೆದ್ದ ಬಳಿಕ ಶುಕ್ರವಾರ ಗೇಲ್ ಮತ್ತೊಂದು ಮಾತು ಹೇಳಿದ್ದಾರೆ. ಅದೆಂದರೆ `ಕ್ಷಮಿಸು ಲಂಕಾ, ಈ ಬಾರಿ ಪ್ರಶಸ್ತಿ ಕೆರಿಬಿಯನ್ ಪಡೆ ಪಾಲಾಗಲಿದೆ~ ಎಂಬುದು. ಅವರ  ಮಾತು ಈ ಬಾರಿಯೂ ನಿಜವಾಗುವುದೇ?

ಈಗ ಇಡೀ ವಿಶ್ವ ಕ್ರಿಕೆಟ್‌ನ ಗಮನ ಆರ್.ಪ್ರೇಮದಾಸ ಕ್ರೀಡಾಂಗಣದತ್ತ ನೆಟ್ಟಿದೆ. ಕಾರಣ ಭಾನುವಾರ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಮಹಾಸಮರ. ಪ್ರತಿಷ್ಠಿತ ಟ್ರೋಫಿ ತಮ್ಮದಾಗಿಸಿಕೊಳ್ಳಲು ಆತಿಥೇಯ ಶ್ರೀಲಂಕಾ ಹಾಗೂ       ವೆಸ್ಟ್‌ಇಂಡೀಸ್ ತಂಡಗಳು ಮುಖಾಮುಖಿಯಾಗುತ್ತಿವೆ.

ಆದರೆ ಟ್ರೋಫಿ ಹಾಗೂ ಲಂಕಾ ನಡುವೆ ನಿಂತಿರುವ ದೊಡ್ಡ ಸವಾಲು ಕ್ರಿಸ್ ಗೇಲ್! ಬ್ಯಾಟಿಂಗ್‌ನಲ್ಲಿ ಅಬ್ಬರಿಸುತ್ತಿರುವ ಈ ಆರಂಭಿಕ ಬ್ಯಾಟ್ಸ್ ಮನ್ ಎದುರಾಳಿ ತಂಡಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ.

ಗೇಲ್ ಈ ಟೂರ್ನಿಯಲ್ಲಿ ಇದುವರೆಗೆ 16 ಸಿಕ್ಸರ್ ಎತ್ತಿದ್ದಾರೆ. ಮೂರು ಅರ್ಧ ಶತಕ ಗಳಿಸಿದ್ದಾರೆ. ಪಂದ್ಯದ ಫಲಿತಾಂಶವನ್ನೇ ಬದಲಾಯಿಸುವ ತಾಕತ್ತು ಇವರ ಬಳಿ ಇದೆ. ಅದು ಹಿಂದಿನ ಪಂದ್ಯದಲ್ಲಿಯೇ ಸಾಬೀತಾಗಿದೆ.

`ಉತ್ತಮ ಪ್ರದರ್ಶನ ನೀಡುತ್ತಿರುವ ವಿಂಡೀಸ್ ತಂಡದಲ್ಲಿ ಗೇಲ್ ಮತ್ತೊಬ್ಬ ಆಟಗಾರ ಅಷ್ಟೇ. ಅವರ ಭಯ ನಮಗಿಲ್ಲ. ಏಕೆಂದರೆ ನಾವು ಒಬ್ಬ ಆಟಗಾರನನ್ನು ಗುರಿಯಾಗಿಟ್ಟುಕೊಂಡು ಕಣಕ್ಕಿಳಿಯುತ್ತಿಲ್ಲ. ಇಡೀ ಎದುರಾಳಿ ತಂಡ ನಮ್ಮ ಗುರಿ~ ಎಂದು ಲಂಕಾ ತಂಡದ ನಾಯಕ ಮಾಹೇಲ ಜಯವರ್ಧನೆ ಹೇಳಿದ್ದಾರೆ.

ಆದರೆ `ಗೇಲ್ ಅವರನ್ನು ಬೇಗನೇ ಔಟ್ ಮಾಡಿದರೆ ಫೈನಲ್ ಸಮರವನ್ನು ಅರ್ಧ ಗೆದ್ದಂತೆ~ ಎಂಬ ವಿಷಯ ಜಯವರ್ಧನೆಗೂ ಗೊತ್ತಿದೆ.

ಉಭಯ ತಂಡಗಳು ಇದುವರೆಗೆ ಚುಟುಕು ವಿಶ್ವಕಪ್ ಗೆದ್ದಿಲ್ಲ. ಕೆರಿಬಿಯನ್ ಬಳಗದವರು 30 ವರ್ಷಗಳ ನಂತರ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಸೆಣಸುತ್ತಿದ್ದಾರೆ. 1983ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ವಿರುದ್ಧ ಕೆರಿಬಿಯನ್ ಬಳಗ ಸೋಲು ಕಂಡಿತ್ತು. ಅಷ್ಟವರೆಗೆ ವಿಶ್ವ ಕ್ರಿಕೆಟ್‌ನಲ್ಲಿ ಪಾರುಪತ್ಯ ಸಾಧಿಸಿದ್ದ ಈ ತಂಡ ನಂತರದ ದಿನಗಳಲ್ಲಿ ಕುಸಿತ ಕಂಡಿತ್ತು. ಆದರೆ ಈ ಬಾರಿ ಚುಟಕು ವಿಶ್ವಕಪ್ ಗೆಲ್ಲುವ ಮೂಲಕ ಗತವೈಭವವನ್ನು ಕಂಡುಕೊಳ್ಳುವ ವಿಶ್ವಾಸದಲ್ಲಿದೆ.

2011ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತಕ್ಕೆ ಶರಣಾಗಿದ್ದ ಲಂಕಾ ಎರಡನೇ ಬಾರಿ ಚುಟುಕು ಕ್ರಿಕೆಟ್ ಫೈನಲ್ ತಲುಪಿದೆ. 2009ರ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಫೈನಲ್‌ನಲ್ಲಿ ಪಾಕ್‌ಗೆ ಶರಣಾಗಿತ್ತು. ಈ ತಂಡದ ಬ್ಯಾಟಿಂಗ್ ಜಯವರ್ಧನೆ, ಸಂಗಕ್ಕಾರ ಹಾಗೂ ದಿಲ್ಶಾನ್ ಅವರ ಮೇಲೆ ಹೆಚ್ಚು ಅವಲಂಬಿಸಿದೆ. ಆದರೆ ಬೌಲಿಂಗ್ ವಿಭಾಗ ವಿಂಡೀಸ್‌ಗಿಂತ ಚೆನ್ನಾಗಿದೆ. ಲಸಿತ್ ಮಾಲಿಂಗ, ಅಜಂತಾ ಮೆಂಡಿಸ್, ರಂಗನಾ ಹೇರತ್ ಅವರು ಪರಿಣಾಮಕಾರಿಯಾಗಿದ್ದಾರೆ.

ವಿಂಡೀಸ್ ತಂಡ ಗೇಲ್ ಅವರನ್ನೇ ಹೆಚ್ಚಾಗಿ ನಂಬಿಕೊಂಡಿದೆ. ಅಕಸ್ಮಾತ್ ಗೇಲ್ ಕೈಕೊಟ್ಟರೆ ಈ ತಂಡ ಸಂಕಷ್ಟಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಮಾರ್ಲೊನ್ ಸ್ಯಾಮುಯೆಲ್ಸ್, ಕೀರನ್ ಪೊಲಾರ್ಡ್ ಅವರ ಮೇಲೂ ಹೆಚ್ಚಿನ ಜವಾಬ್ದಾರಿ ಇದೆ.

ಆದರೆ ಸ್ವದೇಶದ ಅಭಿಮಾನಿಗಳ ಮುಂದೆ ವಿಶ್ವಕಪ್ ಎತ್ತಿ ಹಿಡಿಯಲು ಲಂಕಾಕ್ಕೆ ಅದ್ಭುತ ಅವಕಾಶ ಒಲಿದು ಬಂದಿದೆ. ಗೇಲ್ ಹೇಳಿದ ರೀತಿ ಈ ಪಂದ್ಯದ ಫಲಿತಾಂಶವೂ ಹೊರಹೊಮುತ್ತದೆಯೇ? ಅಥವಾ ಟ್ರೋಫಿ ಲಂಕಾ ಮಡಿಲು ಸೇರುವುದೇ? ಎಂಬುದು ಈಗ ಎಲ್ಲರ ಕುತೂಹಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT