ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಆರ್‌ಜೆಡ್: ಇನ್ನಷ್ಟು ಕಡಿತಕ್ಕೆ ಪ್ರಸ್ತಾವನೆ

Last Updated 16 ಏಪ್ರಿಲ್ 2011, 8:50 IST
ಅಕ್ಷರ ಗಾತ್ರ

ಉಡುಪಿ: ಕರಾವಳಿ ನಿಯಂತ್ರಣ ವಲಯ (ಸಿಆರ್‌ಜೆಡ್)ದ ಹೊಸ ಅಧಿಸೂಚನೆಯಲ್ಲಿ ಇನ್ನಷ್ಟು ಮಾರ್ಪಾಡು ಮಾಡಿ ನದಿಪಾತ್ರದಲ್ಲಿ 100 ಮೀಟರ್ ನಿಷೇಧಿತ ವಲಯದ ಬದಲು ಅದನ್ನು 50 ಮೀಟರ್‌ಗೆ ಕಡಿಮೆ ಮಾಡುವಂತೆ ಕೋರಿ ಕೇಂದ್ರಕ್ಕೆ ಪ್ರಸ್ತಾವನೆಯೊಂದನ್ನು ಸಲ್ಲಿಸುವಂತೆ ಇಲ್ಲಿ ತೀರ್ಮಾನಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಂಸದ ಡಿ.ವಿ.ಸದಾನಂದ ಗೌಡ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಸಿಆರ್‌ಜೆಡ್ ಹೊಸ ಅಧಿಸೂಚನೆ 2011ರ ಜ.6ರಂದು ಹೊರಬಿದಿದ್ದು ಅದರ ಅನ್ವಯ ಈ ಹಿಂದಿಗಿಂತ ಹಲವು ಮಾರ್ಪಾಡು ಮಾಡಲಾಗಿದೆ. ಆದರೂ ಕೂಡ ಹೊಸ ಅಧಿಸೂಚನೆಯಂತೆ ನದಿಪಾತ್ರದಲ್ಲಿ 100 ಮೀಟರ್‌ವರೆಗೂ ಮನೆಕಟ್ಟುವಂತಿಲ್ಲ. ಆದರೆ ಎರಡೂ ಭಾಗದಲ್ಲಿ ನದಿ ಇರುವ ಪ್ರದೇಶಗಳಲ್ಲಿ ಈ ನೀತಿಯಿಂದಾಗಿ ಮೀನುಗಾರರಿಗೆ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಇನ್ನಷ್ಟು ಬದಲಾವಣೆ ಮಾಡಿಕೊಡುವಂತೆ ಕೇಂದ್ರವನ್ನು ಕೋರಲಾಗುವುದು ಎಂದು ಡಿ.ವಿ. ತಿಳಿಸಿದರು.

ಕರಾವಳಿಯುದ್ದಕ್ಕೂ ಅಭಿವೃದ್ಧಿ ಹೊಂದಿರುವ ಪ್ರದೇಶ ಇರುವುದರಿಂದ ಕರಾವಳಿ ನಿಯಂತ್ರಣ ವಲಯ ವರ್ಗ-3ನ್ನು ವಲಯ-2, ನದಿ, ಹಿನ್ನೀರಿನ ವಲಯ-1ನ್ನು ವಲಯ -2ರ ಅಡಿಯಲ್ಲಿ ಬರುವಂತೆ ಈಗಾಗಲೇ ಹಲವರು ಆಗ್ರಹಿಸಿದ್ದರು. ನದಿ, ಖಾರಿ, ಹಿನ್ನೀರಿಗೆ ಸಂಬಂಧಿಸಿದಂತೆ ಸಿಆರ್‌ಝಡ್ ವ್ಯಾಪ್ತಿಯನ್ನು 50 ಮೀಟರ್‌ಗೆ ಇಳಿಸಬೇಕು ಎಂದು ಹಲವರು ಬೇಡಿಕೆ ಇಟ್ಟಿದ್ದರು. ಅದರಂತೆ ಈಗ ಬೇಡಿಕೆ ಈಡೇರಿದೆ. ಆದರೂ ಕೂಡ ಹಲವು ಕಡೆಗಳಲ್ಲಿ ಇದರಿಂದಲೂ ಸಮಸ್ಯೆಯಾಗಿದೆ. ಅದನ್ನು 25ಮೀಟರ್‌ಗೆ ಕಡಿತಗೊಳಿಸಲು ಕೇಂದ್ರಕ್ಕೆ ಕೂಡಲೇ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಸಿಆರ್‌ಝಡ್ ವಲಯಗಳಲ್ಲಿ ಐಸ್‌ಪ್ಲಾಂಟ್, ಸಾಂಪ್ರದಾಯಿಕ ದೋಣಿ ನಿರ್ಮಾಣ ಘಟಕ ಸ್ಥಾಪಿಸುವಾಗ  ಅದನ್ನು ಜಿಲ್ಲಾಕೇಂದ್ರಗಳೇ ಅನುಮತಿ ನೀಡಲು ಸಾಧ್ಯವಾಗುವಂತೆ ತಿದ್ದುಪಡಿ ತರಬೇಕು ಎಂಬ ನಿರ್ಣಯ ಮಾಡಿ ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದು ಸಂಸದರು ತಿಳಿಸಿದರು.

ವಿವಿಧ ಇಲಾಖೆಗಳ ಪ್ರಗತಿ ಚರ್ಚೆ: ಶಿಕ್ಷಣ, ಆರೋಗ್ಯ, ಕುಟುಂಬ ಕಲ್ಯಾಣ, ತೋಟಗಾರಿಕೆ, ಕೃಷಿ, ಕುಡಿಯುವ ನೀರು, ಮೀನುಗಾರಿಕೆ, ಸಮಾಜ ಕಲ್ಯಾಣ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಬಗ್ಗೆ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಯಿತು.

ಉದ್ಯೋಗ ಖಾತರಿ ಯೋಜನೆಯಲ್ಲಿ ಉಡುಪಿ ಜಿಲ್ಲೆ ಹಿಂದುಳಿದಿದ್ದು ಆ ಯೋಜನೆಯಲ್ಲಿ ಇನ್ನಷ್ಟು ಪ್ರಗತಿ ಸಾಧಿಸುವಂತೆ ಸಂಸದರು ಅಧಿಕಾರಿಗಳಿಗೆ ಸೂಚಿಸಿದರು. ಈ ಯೋಜನೆಗಾಗಿ ಪ್ರಸಕ್ತ ಸಾಲಿನಲ್ಲಿ ಸುಮಾರು ರೂ 18 ಕೋಟಿ ಮಂಜೂರಾಗಿದ್ದು ಆ ಗುರಿ ತಲುಪುವಂತೆ ಸೂಚಿಸಿದರು.

‘ಬಸವ ಇಂದಿರಾ ಆವಾಸ ಯೋಜನೆ’ ಅಡಿಯಲ್ಲಿ ಹಲವು ಕಡೆಗಳಲ್ಲಿ ಅರ್ಹ ಫಲಾನುಭವಿಗಳಿಗೆ ಸೂಕ್ತ ನಿವೇಶನ ನೀಡುವಲ್ಲಿ ಪಿಡಿಒಗಳು ಎಡವುತ್ತಿದ್ದು ಅವರಿಗೆ ಈ ಯೋಜನೆಯ ಬಗ್ಗೆ ಸೂಕ್ತವಾದ ಮಾಹಿತಿ ನೀಡುವಂತೆ ಸಭೆಯಲ್ಲಿ ಸೂಚಿಸಲಾಯಿತು.

ಶಾಸಕರಾದ ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಗೋಪಾಲ ಭಂಡಾರಿ, ಜಿಲ್ಲಾಧಿಕಾರಿ ಹೇಮಲತಾ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಶೇಖರ್, ಉಪ ಕಾರ್ಯದರ್ಶಿ ಪ್ರಾಣೇಶ್ ರಾವ್, ಯೋಜನಾಧಿಕಾರಿ ವಿಜಯಕುಮಾರ್ ಶೆಟ್ಟಿ, ಜಿ.ಪಂ.ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ಉಪಾಧ್ಯಕ್ಷೆ ಜ್ಯೋತಿ ಎಸ್.ಶೆಟ್ಟಿ, ತಾ.ಪಂ. ಅಧ್ಯಕ್ಷ ದೇವದಾಸ ಹೆಬ್ಬಾರ್ ಮತ್ತಿತರರು ಇದ್ದರು.

ಸಿಆರ್‌ಜೆಡ್ ಹೊಸ ಅಧಿಸೂಚನೆಹಲವು ಮಾರ್ಪಾಡು
ಕೇಂದ್ರ ಸರ್ಕಾರ 2011ರ ಜ.6ರಂದು ಪ್ರಕಟಿಸಿರುವ ಕರಾವಳಿ ನಿಯಂತ್ರಣ ವಲಯ ಅಧಿಸೂಚನೆಯಲ್ಲಿ ಹಲವು ಮಾರ್ಪಾಡುಗಳನ್ನು ಮಾಡಲಾಗಿದೆ.
ಭರತ ಇಳಿತದ ಪ್ರಭಾವಕ್ಕೊಳಗಾಗುವ ನದಿ, ಖಾರಿ, ಹಿನ್ನೀರು, ಕೊಲ್ಲಿಗಳ ಸಂಬಂಧ ಕರಾವಳಿ ನಿಯಂತ್ರಣ ವಲಯ ವ್ಯಾಪ್ತಿಯಲ್ಲಿ ಗರಿಷ್ಠ 100ಮೀ ಗೆ ನಿಗದಿಪಡಿಸಲಾಗಿದೆ. ಈ ಹಿಂದೆ ಇದು ಗರಿಷ್ಠ 150 ಮೀಟರ್ ಆಗಿತ್ತು.

ಸ್ಥಳೀಯ ಮೀನುಗಾರರ ಮನೆಗಳನ್ನು (ವಲಯ-3) ನಿರ್ಮಿಸಲು ಈ ಹಿಂದೆ ಇದ್ದ ಅಭಿವೃದ್ಧಿ ನಿಷೇಧ ಪ್ರದೇಶವನ್ನು 200 ಮೀ. ಬದಲಿಗೆ 100 ಮೀಟರ್‌ಗೆ ಇಳಿಸಿ ಸ್ಥಳೀಯ ಮೀನುಗಾರರ ಮೂಲಸೌಕರ್ಯದ ಅವಶ್ಯಕತೆಯಾದ ವಸತಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಭಿವೃದ್ಧಿ ನಿಷಿದ್ಧ ಪ್ರದೇಶದ ಹೊರಗೆ ಮನೆ ನಿರ್ಮಾಣಕ್ಕೆ ಇರುವ ನಿರ್ಬಂಧ ಸಡಿಲಿಸಲಾಗಿದೆ. ಕ.ನಿ.ವಲಯ -3ರ ಅಭಿವೃದ್ಧಿ ನಿಷಿದ್ಧ ಪ್ರದೇಶದೊಳಗೆ ಹಳೆಮನೆ ದುರಸ್ತಿಗೆ ಮಾತ್ರ ಈ ಹಿಂದೆ ಅವಕಾಶವಿದ್ದು ಈಗ ಪುನರ್‌ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ.

ಮೀನುಗಾರಿಕೆಯ ಪೂರಕ ಸೌಲಭ್ಯಗಳಾದ ಐಸ್‌ಪ್ಲಾಂಟ್, ಬಲೆ ರಿಪೇರಿ ಶೆಡ್, ಸಾಂಪ್ರದಾಯಿಕ ದೋಣಿ ನಿರ್ಮಾಣ ಇತ್ಯಾದಿಗಳಿಗೆ ಅಭಿವೃದ್ಧಿ ನಿಷಿದ್ಧ ಪ್ರದೇಶದೊಳಗೆ ಅನುಮತಿ ನೀಡಲಾಗಿದೆ.

ಮೊಬೈಲ್ ಬಳಕೆಗೆ ಡಿ.ವಿ. ಕಿಡಿ
‘ಏನ್ರಿ ನಾವು ಗಂಭೀರವಾಗಿ ಚರ್ಚೆ ಮಾಡ್ತಾ ಇದ್ದರೆ ನೀವು ಮೊಬೈಲ್‌ನಲ್ಲಿ ಚಾಟ್ ಮಾಡಿಕೊಂಡು ಕೂತಿದ್ದೀರಲ್ರಿ? ಜವಾಬ್ದಾರಿ ಸ್ಥಾನದಲ್ಲಿ ಕುಳಿತುಕೊಂಡ ಅಧಿಕಾರಿಯಾಗಿ ಇಷ್ಟು ಪರಿಜ್ಞಾನ ಬೇಡವೇನ್ರಿ? ನೀವು ಬೇರೆಯವರ ಮೀಟಿಂಗ್‌ನಲ್ಲಿ ಏನಾದ್ರೂ ಮಾಡಿಕೊಳ್ಳಿ. ನನ್ನ ಮೀಟಿಂಗ್‌ಗೆ ಬರುವಾಗ ನಿಮ್ಮ ಮೊಬೈಲ್ ಸ್ವಿಚ್‌ಆಫ್ ಮಾಡಿಕೊಂಡು ಬನ್ನಿ’

-ಹೀಗೆಂದು ಖಾರವಾಗಿ ನುಡಿದವರು ಸಂಸದ ಡಿ.ವಿ.ಸದಾನಂದ ಗೌಡ. ಲೋಕೋಪಯೋಗಿ ಇಲಾಖೆ ಕುರಿತಾಗಿ ವಿಷಯ ಚರ್ಚೆಯಾಗುತ್ತಿದ್ದ ಸಂದರ್ಭ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಸುರೇಶ್ ಶೆಟ್ಟಿ ಮೊಬೈಲ್‌ನಲ್ಲಿ ಚಾಟ್ ಮಾಡುತ್ತಿದ್ದರು. ಸಿಟ್ಟಿಗೆದ್ದ ಸಂಸದರು ‘ಎಲ್ಲ ಅಧಿಕಾರಿಗಳು ಮೊಬೈಲ್ ಸ್ವಿಚ್‌ಆಫ್ ಮಾಡಿ’ ಎಂದು ಗುಡುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT