ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಆರ್‌ಝೆಡ್ ವಿನಾಯಿತಿ

Last Updated 18 ಜನವರಿ 2011, 10:55 IST
ಅಕ್ಷರ ಗಾತ್ರ

ಮಂಗಳೂರು: ಕರಾವಳಿ ನಿಯಂತ್ರಣ ವಲಯದ(ಸಿಆರ್‌ಝೆಡ್) ಹೊಸ ನೀತಿ ಅನುಷ್ಠಾನದಿಂದ ಸಾಂಪ್ರದಾಯಿಕ ರೀತಿಯ ಮರಳುಗಾರಿಕೆಗೆ ತೊಂದರೆಯಾಗಿದ್ದು ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿಯ ಜಿಲ್ಲೆಗಳಿಗೆ ಈ ನಿಯಮದಿಂದ ವಿನಾಯಿತಿ ನೀಡಬೇಕು ಎಂದು ಮರಳು ಗುತ್ತಿಗೆದಾರರು, ಮಾಲೀಕರು, ಲಾರಿ ಮಾಲೀಕರ ಸಂಘದ ಜಂಟಿ ಕ್ರಿಯಾ ಸಮಿತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಹೊಯಿಗೆ ದೋಣಿ ಕಾರ್ಮಿಕರ ಸಂಘ ಒತ್ತಾಯಿಸಿದೆ.

ಸೋಮವಾರ ಈ ಕುರಿತು ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸಿದ ಸಂಘಟನೆಗಳ ಮುಖಂಡರು, ಕರಾವಳಿಯಲ್ಲಿ ಈಗ ನಡೆಯುತ್ತಿರುವ ಮರಳುಗಾರಿಕೆ ಪರಿಸರದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಪ್ರತಿಪಾದಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರುಳುಗಾರಿಕೆಗೆ ಸಂಬಂಧಿಸಿದ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಮಯೂರ ಉಳ್ಳಾಲ ಮಾತನಾಡಿ, ಈಗಾಗಲೇ ಜಿಲ್ಲೆಯಲ್ಲಿ 650 ಲಾರಿಗಳಿಗೆ ಜಿಪಿಎಸ್ ಉಪಕರಣ ಅಳವಡಿಸಲಾಗಿದ್ದು, ಕಾನೂನುಬದ್ಧವಾಗಿ ಮರಳು ಸಾಗಣೆ ನಡೆಯುತ್ತಿದೆ. ಆದರೆ ಈಗ ಪ್ರಕಟಿಸಲಾಗಿರುವ ಸಿಆರ್‌ಝೆಡ್ ಅಧಿಸೂಚನೆ ಮರಳುಗಾರಿಕೆ ಅವಲಂಬಿಸಿದವರಲ್ಲಿ ಆತಂಕ ತಂದಿದೆ ಎಂದರು.

ಕರಾವಳಿ ಪ್ರದೇಶವನ್ನು ಸಿಆರ್‌ಝೆಡ್ ವ್ಯಾಪ್ತಿಯಿಂದ ಹೊರತುಪಡಿಸಬೇಕು ಎಂಬುದನ್ನು ಸರ್ಕಾರಕ್ಕೆ ಮನದಟ್ಟು ಮಾಡಿಕೊಡಲು ಕ್ರಿಯಾ ಸಮಿತಿಯ ರಾಜರತ್ನ ಸನೀಲ್, ಬಿ.ಎಸ್.ಚಂದ್ರು ಮತ್ತಿತರ ಐವರು ಸದಸ್ಯರ ನಿಯೋಗ, ಸೋಮವಾರ ರಾತ್ರಿಯೇ ಬೆಂಗಳೂರಿಗೆ ತೆರಳಿದೆ. ಸಂಬಂಧಿಸಿದ ಇಲಾಖೆಗಳ ಸಚಿವರು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದೆ ಎಂದು ವಿವರ ನೀಡಿದರು.

ಜಿಲ್ಲಾ ಹೊಯಿಗೆ ದೋಣಿ ಕಾರ್ಮಿಕರ ಸಂಘದ ಅಧ್ಯಕ್ಷ ಜಿತೇಂದ್ರ ಸುವರ್ಣ ಮಾತನಾಡಿ, ‘ನಮ್ಮ ಮರಳು ಸಂಗ್ರಹ ವ್ಯಾಪ್ತಿಯಲ್ಲಿ  ಶೇ. 80ರಷ್ಟು ಸಿಆರ್‌ಝೆಡ್ ವ್ಯಾಪ್ತಿಯಲ್ಲೇ ಬರುತ್ತದೆ. ಇದರಿಂದ ದೋಣಿಯಲ್ಲಿ ಹೋಗಿ ನದಿಯಲ್ಲಿ ಮುಳುಗಿ ಮರಳು ಸಂಗ್ರಹಿಸುವ ಕಾಯಕ ಮಾಡುವ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕರಾವಳಿಯ ಮೂರು ಜಿಲ್ಲೆಗಳಲ್ಲಿ 15 ಸಾವಿರದಷ್ಟು ಕಾರ್ಮಿಕರು ಸಾಂಪ್ರದಾಯಿಕ ರೀತಿಯ ಮರಳು ಸಂಗ್ರಹ ಕಾಯಕದಲ್ಲಿ ತೊಡಗಿದ್ದಾರೆ’ ಎಂದರು.

‘ನಮ್ಮ ಸಂಘದಲ್ಲಿ 400 ದೋಣಿಗಳ ಮಾಲೀಕರು ಸದಸ್ಯರಾಗಿದ್ದಾರೆ. ಈಗ ಸರ್ಕಾರ ಹೊರಡಿಸಿರುವ ಸಿಆರ್‌ಝೆಡ್ ಹೊಸ ನೀತಿಯಿಂದಾಗಿ ಸಾಂಪ್ರದಾಯಿಕ ಮರಳುಗಾರಿಕೆಗೆ ತೊಂದರೆ ಆಗಲಿದೆ. ಜತೆಗೇ ಸಾವಿರಾರು ಕುಟುಂಬಗಳು ಬೀದಿಪಾಲಾಗುವ ಆತಂಕದಲ್ಲಿವೆ ಎಂದರು. ಈ ಬಗೆಯಲ್ಲಿ ಮರಳುಗಾರಿಕೆಗೆ ನಿರ್ಬಂಧ ಹೇರುತ್ತಾ ಹೋದರೆ ನಗರದ ಅಭಿವೃದ್ಧಿ, ನಿರ್ಮಾಣ ಉದ್ಯಮದ ಮೇಲೂ ಪ್ರತೀಕೂಲ ಪರಿಣಾಮವಾಗಲಿದೆ ಎಂದರು. ಕಾರ್ಯದರ್ಶಿ ನಜೀರ್, ಪುರುಷೋತ್ತಮ ಮಲ್ಲಿ ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT