ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ ಕಾಯ್ದೆ ಜಾರಿಯಾದರೆ ಉಗ್ರ ಹೋರಾಟ

ಬಿಎಸ್ ಆರ್ ಸಂಸ್ಥಾಪಕ ಶ್ರೀರಾಮುಲು ಎಚ್ಚರಿಕೆ
Last Updated 19 ಡಿಸೆಂಬರ್ 2013, 9:47 IST
ಅಕ್ಷರ ಗಾತ್ರ

ಚಿತ್ರದುರ್ಗ:  ‘2006ರ ಸಿಇಟಿ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಡ ವಿದ್ಯಾರ್ಥಿಗಳ ಪಾಲಿನ ಖಳನಟನಂತೆ ವರ್ತಿಸುತ್ತಿದೆ’ ಎಂದು ಬಿಎಸ್ಆರ್ ಕಾಂಗ್ರೆಸ್ ಸಂಸ್ಥಾಪಕ ಶ್ರೀರಾಮುಲು ಆರೋಪಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ,
ಬಡವರ ಪರ ಎಂದು ಹೇಳಿಕೊಂಡು ಅಧಿಕಾರದ ಗದ್ದುಗೆ ಹಿಡಿದ ಸಿದ್ದರಾಮಯ್ಯ ಅವರು, 2006ರ ಸಾಮಾನ್ಯ ಪ್ರವೇಶ ಪರೀಕ್ಷೆ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಖಾಸಗಿ ಕಾಲೇಜುಗಳ ಲಾಬಿಗೆ ಮಣಿಯುತ್ತಿದ್ದಾರೆ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿರುವ ಬಹುತೇಕ ಖಾಸಗಿ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳು ಕಾಂಗ್ರೆಸ್ ನಾಯಕರು, ಸಚಿವರು, ಶಾಸಕರ
ಕೈಲಿವೆ. ಅಂಥ ಖಾಸಗಿ ಕಾಲೇಜುಗಳಿಗೆ ಅನುಕೂಲ ಆಗುವಂತಹ ಸಿಇಟಿ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ಸಿದ್ದರಾಮಯ್ಯನವರು ಅವರ ಪಕ್ಷದವರಿಗೇ ಅನುಕೂಲ ಮಾಡಿಕೊಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಬಡ ವಿದ್ಯಾರ್ಥಿಗಳಿಗೆ ಅನಾನುಕೂಲವಾಗುವ, ಏಳು ವರ್ಷಗಳ ಹಿಂದೆ ರಚನೆಯಾಗಿರುವ 2006ರ ಸಾಮಾನ್ಯ ಪ್ರವೇಶ
ಪರೀಕ್ಷೆಗೆ ಸಂಬಂಧಿಸಿದ ಕಾಯ್ದೆಯನ್ನು ಸರ್ಕಾರ ಜಾರಿ ಮಾಡಬಾರದು. ಒಂದು ವೇಳೆ ಮೊಂಡತನ ಪ್ರದರ್ಶಿಸಿ ಕಾಯ್ದೆ ಜಾರಿಗೆ ಮುಂದಾದರೆ, ಬಿಎಸ್ಆರ್ ಪಕ್ಷದಿಂದ ರಾಜ್ಯದಾದ್ಯಂತ ವಿದ್ಯಾರ್ಥಿಗಳೊಂದಿಗೆ  ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಎಸ್ಆರ್ ಕಾಂಗ್ರೆಸ್ ಮುಖಂಡರು ಹಾಜರಿದ್ದರು.

ಐದು ಕ್ಷೇತ್ರಗಳಿಂದ ಲೋಕಸಭೆಗೆ ಸ್ಪರ್ಧೆ ‘ಮುಂದಿನ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ, ಕೊಪ್ಪಳ, ಹಾವೇರಿ, ಬಳ್ಳಾರಿ ಹಾಗೂ ರಾಯಚೂರು ಕ್ಷೇತ್ರಗಳಿಂದ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸ ಲಾಗುವುದು’ ಎಂದು ಶ್ರೀರಾಮುಲು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ನಾನು ಬಿಜೆಪಿ ಸೇರುತ್ತೇನೆ ಎಂಬುದು ಮಾಧ್ಯಮಗಳ ಸುದ್ದಿಯಷ್ಟೇ. ಇಲ್ಲಿಯವರೆಗೂ ಬಿಜೆಪಿಯವರು ಪಕ್ಷ ಸೇರಲು ಆಹ್ವಾನಿಸಿಲ್ಲ, ನಾನು ಹೋಗಿ ಕೇಳಿಲ್ಲ. ಅದೊಂದು ರಾಷ್ಟ್ರೀಯ ಪಕ್ಷ. ನಮ್ಮದು ಸಣ್ಣ ಪ್ರಾದೇಶಿಕ ಪಕ್ಷ. ಅವರು ನನ್ನ ಬಳಿ ಬಂದು ಯಾಕೆ ಮನವೊಲಿಸುತ್ತಾರೆ’ ಎಂದು ಪ್ರಶ್ನಿಸಿದರು.

‘ಯಡಿಯೂರಪ್ಪ ಮತ್ತು ನಾನು ಬಿಜೆಪಿಯಿಂದ ಹೊರ ಬಂದ ಮೇಲೆ ಕಾಂಗ್ರೆಸ್‌ ಪಕ್ಷಕ್ಕೆ ಅನುಕೂಲವಾಗಿರುವ ವಿಚಾರ ಹಳೆಯದು. ಈ ಬಗ್ಗೆ ಮೂರು ಪಕ್ಷಗಳಿಗೂ (ಕೆಜೆಪಿ, ಬಿಜೆಪಿ, ಬಿಎಸ್ಆರ್ ಕಾಂಗ್ರೆಸ್) ಅರಿವಾಗಿದೆ. ಮುಂದಿನ ದಿನಗಳಲ್ಲಿ ಸಂದರ್ಭ ಹೇಗೆ ಒದಗಿಬರುತ್ತದೆ ಎಂದು ಕಾದು ನೋಡೋಣ’ ಎಂದು ಹೇಳಿದರು.

ಈ ನಡುವೆ ಶ್ರೀರಾಮುಲು ಸುದ್ದಿಗೋಷ್ಠಿ ಆರಂಭಿಸುವುದಕ್ಕೆ ಮುನ್ನ ಬಿಜೆಪಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರು ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿದ್ದರು. ಒಂದು ಕಡೆ ಶ್ರೀರಾಮುಲು ಅವರು ಬಿಜೆಪಿಯೊಂದಿಗೆ ಮೃದು ಧೋರಣೆಯ ಮಾತುಗಳನ್ನಾಡಿದ್ದು, ಇನ್ನೊಂದೆಡೆ ಶ್ರೀರಾಮುಲು – ತಿಪ್ಪಾರೆಡ ಭೇಟಿ ಹಲವು ಊಹಾಪೋಹಗಳ ಉದ್ಭವಕ್ಕೆ ಎಡೆ ಮಾಡಿಕೊಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT