ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ ತರಬೇತಿ- ಸಚಿವ ಅಶೋಕ್

Last Updated 2 ಜೂನ್ 2011, 20:10 IST
ಅಕ್ಷರ ಗಾತ್ರ

ಬೆಂಗಳೂರು: `ಬಿಬಿಎಂಪಿ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪಿಯು ವಿದ್ಯಾರ್ಥಿಗಳಿಗೆ ಮೊದಲನೇ ವರ್ಷದಿಂದಲೇ ಸಿಇಟಿ ಕೋಚಿಂಗ್ ನೀಡಲಾಗುವುದು~ ಎಂದು ಗೃಹ ಸಚಿವ ಆರ್. ಅಶೋಕ ತಿಳಿಸಿದರು.

ಬಿಬಿಎಂಪಿ ವತಿಯಿಂದ ನಗರದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ `ಪಾಲಿಕೆಯ ಶಾಲಾ ಕಾಲೇಜುಗಳಲ್ಲಿ ಉನ್ನತ ಶ್ರೇಣಿ ಅಂಕಗಳನ್ನು ಪಡೆದ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮ~ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ವೃತ್ತಿಪರ ಶಿಕ್ಷಣದಲ್ಲಿ ಪಾಲಿಕೆ ವ್ಯಾಪ್ತಿಯ ಕಾಲೇಜಿನ ಮಕ್ಕಳು ಮುಂದೆ ಬರಬೇಕಿದೆ. ಅಪಾರ ಅನುಭವ ಹೊಂದಿದ ನಿವೃತ್ತ ಉಪನ್ಯಾಸಕರು ಸಿಇಟಿ ಕೋಚಿಂಗ್ ನೀಡಲಿದ್ದಾರೆ. ಕಾಲೇಜು ಪ್ರಾರಂಭವಾಗುವ ಮುನ್ನ ಹಾಗೂ ಮುಗಿದ ನಂತರ ಪ್ರತಿದಿನ ವಿದ್ಯಾರ್ಥಿಗಳು ಕೋಚಿಂಗ್ ಪಡೆಯಬಹುದಾಗಿದೆ~ ಎಂದರು.

`ಪಾಲಿಕೆ ಶಾಲಾ ಕಾಲೇಜುಗಳು ಖಾಸಗಿ ವಿದ್ಯಾಸಂಸ್ಥೆಗಳಿಗೆ ಸ್ಪರ್ಧೆ ಒಡ್ಡುತ್ತಿರುವುದು ಸಂತಸದ ಸಂಗತಿಯಾಗಿದೆ. ಕಳೆದ ವರ್ಷ ಶೇ 35ರಷ್ಟು ಫಲಿತಾಂಶ ಕಂಡಿದ್ದ ಪಾಲಿಕೆ ಶಾಲಾಕಾಲೇಜುಗಳು ಪ್ರಸಕ್ತ ಸಾಲಿನಲ್ಲಿ ಶೇ 57ರಷ್ಟು ಫಲಿತಾಂಶ ದಾಖಲಿಸಿವೆ. ಪಾಲಿಕೆ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕೂಡ ಏರಿಕೆಯಾಗುತ್ತಿದ್ದು ಶಿಫಾರಸು ಪತ್ರ ನೀಡಿ ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

`ಪ್ರೋತ್ಸಾಹ ಧನ ಮಾತ್ರವಲ್ಲದೇ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ರೂ 10 ಲಕ್ಷ ಧನ ಸಹಾಯ ಮಾಡಲಾಗುತ್ತಿದೆ. ರಂಗ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ~ ಎಂದು ಹೇಳಿದರು.

`ಓದು ಬರಹ ಬಾರದವರು ಎಂದರೆ ಸಮಾಜದಲ್ಲಿ ಕೀಳರಿಮೆ ಮೂಡುತ್ತದೆ. ಜಾತಿಯಂತಹ ಅನಿಷ್ಠ ಪದ್ದತಿಯನ್ನು ಹೋಗಲಾಡಿಸಲು ವಿದ್ಯಾಭ್ಯಾಸ ಅತಿ ಮುಖ್ಯವಾಗಿದೆ. ವಿದ್ಯಾರ್ಥಿಗಳು ಶ್ರಮವಹಿಸಿ ವಿದ್ಯಾಭ್ಯಾಸ ಮಾಡಬೇಕು. ಪೋಷಕರು ತಮ್ಮ ಮಕ್ಕಳಿಗೆ ಓದುವ ವಾತಾವರಣ ಕಲ್ಪಿಸಬೇಕು~ ಎಂದು ಅವರು ತಿಳಿಸಿದರು.

ಮೇಯರ್ ಪಿ.ಶಾರದಮ್ಮ ಮಾತನಾಡಿ `ಖಾಸಗಿ ಶಾಲಾ ಕಾಲೇಜುಗಳಲ್ಲಿ ವಂತಿಗೆ ಕೊಡಲಾಗದೆ ಪೋಷಕರು ಕಂಗಾಲಾಗುತ್ತಾರೆ. ಅಂತಹ ಪೋಷಕರು ತಮ್ಮ ಮಕ್ಕಳನ್ನು ಪಾಲಿಕೆ ಶಾಲೆಗಳಿಗೆ ಕಳುಹಿಸಬೇಕು. ಈ ಬಾರಿ ಪಾಲಿಕೆ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳು ನಿರೀಕ್ಷೆಗೂ ಮೀರಿ ಉತ್ತಮ ಫಲಿತಾಂಶ ದಾಖಲಿಸಿವೆ~ ಎಂದರು.

`ಎಸ್‌ಎಸ್‌ಎಲ್‌ಸಿಯಲ್ಲಿ ಉನ್ನತ ಅಂಕ ಪಡೆದ ಹತ್ತು ಮಕ್ಕಳಿಗೆ ತಲಾ 10 ಸಾವಿರ ರೂಪಾಯಿ ಹಾಗೂ ಪಿಯುಸಿಯಲ್ಲಿ ಉನ್ನತ ಅಂಕ ಗಳಿಸಿದ 12 ವಿದ್ಯಾರ್ಥಿಗಳಿಗೆ ತಲಾ 35 ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡಲಾಗಿದೆ. 2011 ಹಾಗೂ 2012ನೇ ಸಾಲಿನ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್‌ಗಳನ್ನು ವಿತರಿಸಲಾಗುತ್ತಿದೆ~ ಎಂದು ಹೇಳಿದರು.

ಪಾಲಿಕೆ ವಿರೋಧ ಪಕ್ಷದ ನಾಯಕ ಉದಯಶಂಕರ್ ಮಾತನಾಡಿ `ಶಿಸ್ತು ಇರುವಲ್ಲಿ ಉತ್ತಮ ಫಲಿತಾಂಶ ಮೂಡುತ್ತದೆ.  ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಯಾವುದೇ ರಂಗದಲ್ಲಿ ಕಡಿಮೆ ಇಲ್ಲ ಎಂಬಂತೆ ಪ್ರಗತಿ ಸಾಧಿಸಿದ್ದಾರೆ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

`ಮಕ್ಕಳನ್ನು ಓದಿಸಲು ಪೋಷಕರು ಕಷ್ಟ ಪಡುತ್ತಾರೆ. ವಿದ್ಯಾರ್ಥಿಗಳು ಶ್ರಮ ವಹಿಸಿ ಓದಿ ತಮ್ಮ ಪೋಷಕರಿಗೆ ಕೀರ್ತಿ ತರಬೇಕು~ ಎಂದು ಮನವಿ ಮಾಡಿದರು.

ಉಪ ಮೇಯರ್ ಎಸ್. ಹರೀಶ್, ಆಡಳಿತ ಪಕ್ಷದ ನಾಯಕ ಬಿ.ಆರ್. ನಂಜುಂಡಪ್ಪ ಮಾತನಾಡಿದರು. ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಕೆ.ರಮೇಶ್ ರಾಜು, ರೂಪಾ ರಮೇಶ್, ಎ.ಸಿ.ಶಿವಕುಮಾರ್, ಪಾಲಿಕೆ ಸದಸ್ಯ ಬಿ.ವಿ.ಗಣೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

`ಐಎಎಸ್ ಓದ್ತೀನಿ...~
`ನನಗೆ ಐಎಎಸ್ ಓದಬೇಕು ಅಂತ ತುಂಬಾ ಆಸೆ. ಬಿ.ಕಾಂ ಓದಿದ ನಂತರ ನನ್ನ ಮೊದಲ ಗುರಿ ಐಎಎಸ್ ಅಧಿಕಾರಿಯಾಗುವುದು...~

ಪಾಲಿಕೆಯ ಕಾಲೇಜೊಂದರಲ್ಲಿ ವ್ಯಾಸಂಗ ಮಾಡಿ ಶೇ 89 ಅಂಕ ಪಡೆದ ವಿದ್ಯಾರ್ಥಿನಿ ಎಂ.ನಿರ್ಮಲಾ ಅವರ ಕನಸುಗಳಿವು. ತಂದೆಯನ್ನು ಕಳೆದುಕೊಂಡಿರುವ ಈಕೆ ಆಟೊ ಡ್ರೈವರ್ ಆಗಿರುವ ಅಣ್ಣನ ಆಶ್ರಯದಲ್ಲಿ ಓದು ಮುಂದುವರಿಸುತ್ತಿದ್ದಾಳೆ. ಲೆಕ್ಕ ಪರಿಶೋಧನೆ (ಸಿ.ಎ) ಬಗ್ಗೆಯೂ ಈಕೆಗೆ ವಿಶೇಷ ಆಸಕ್ತಿ.

ವಿಜ್ಞಾನದಲ್ಲಿ ಶೇ 89.83ರಷ್ಟು ಅಂಕಗಳಿಸಿರುವ ವಿದ್ಯಾರ್ಥಿ ಶಿವರಾಜು ಗಣಿತಜ್ಞನಾಗಬೇಕೆಂಬ ಆಕಾಂಕ್ಷೆ ಹೊಂದಿದ್ದಾರೆ.

`ಸರ್ಕಾರಿ ಶಾಲೆಯಲ್ಲೇ ಓದಿದೆ~
`ನಾನೂ ಸಹ ಸರ್ಕಾರಿ ಶಾಲೆಯಲ್ಲಿ ಓದಿಯೇ ಐಎಎಸ್ ಪಾಸು ಮಾಡಿದವನು~ ಎಂದು ಪಾಲಿಕೆ ಆಯುಕ್ತ ಸಿದ್ದಯ್ಯ ತಿಳಿಸಿದರು.

`ಕನ್ನಡ ಮಾಧ್ಯಮದಲ್ಲಿ ಓದಿದ ನಾನು ಇಂಗ್ಲಿಷ್ ಮಾಧ್ಯಮಕ್ಕೆ ಸೇರ್ಪಡೆಯಾದಾಗ ಟೈಂ ಟೇಬಲ್ ಓದುವುದು ಕೂಡ ಕಷ್ಟವಾಗುತ್ತಿತ್ತು. ಆದರೆ ಐದು ವರ್ಷಗಳ ಅವಧಿಯಲ್ಲಿ ನಾನು ಮೊದಲಿಗನಾದೆ. ನನ್ನ ತರಗತಿಯಲ್ಲಿ ಐಎಎಸ್ ತೇರ್ಗಡೆಯಾದ ಏಕೈಕ ವಿದ್ಯಾರ್ಥಿ ಎಂಬ ಮೆಚ್ಚುಗೆಗೆ ಪಾತ್ರನಾದೆ. ಆದ್ದರಿಂದ ವಿದ್ಯಾರ್ಥಿಗಳು ಕನ್ನಡ ಮಾಧ್ಯಮ, ಸರ್ಕಾರಿ ಶಾಲೆ ಇತ್ಯಾದಿ ಕೀಳರಿಮೆ ತೊರೆದು ಶ್ರಮ ವಹಿಸಿ ಓದಬೇಕು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT