ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ ವಿದ್ಯಾರ್ಥಿಗಳ ಶೋಷಣೆ: ಎಬಿವಿಪಿ ಆರೋಪ

Last Updated 18 ಜುಲೈ 2013, 5:47 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಸಿಇಟಿ ಶುಲ್ಕದಲ್ಲಿ ಈ ವರ್ಷ ಯಾವುದೇ ಹೆಚ್ಚಳ ಇಲ್ಲ ಎಂದು ಹೇಳಿಕೆ ನೀಡಿದ್ದ ಸರ್ಕಾರ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಗೊಂದಲ ಸೃಷ್ಟಿಸಿ, ಕಾಲೇಜುಗಳಲ್ಲಿ ಪಡೆದುಕೊಳ್ಳುತ್ತಿರುವ ಹೆಚ್ಚುವರಿ ಶುಲ್ಕದ ಬಗ್ಗೆ ಯಾವುದೇ ನಿಯಮ ರೂಪಿಸದೆ ಅನ್ಯಾಯ ಎಸಗಿದೆ' ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಆರೋಪಿಸಿದೆ.

ಸಿಇಟಿ ವಿದ್ಯಾರ್ಥಿಗಳ ಶೋಷಣೆಗೆ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಪ್ರತಿಭಟಿಸಿ ಎಬಿವಿಪಿ ವತಿಯಿಂದ ಬುಧವಾರ ನಗರದಲ್ಲಿ ಮೆರವಣಿಗೆ ನಡೆಯಿತು.

`ಶುಲ್ಕ ಹೆಚ್ಚಿಸುವುದಿಲ್ಲ ಎಂದು ಹೇಳಿದ ಸರ್ಕಾರ ಹಿಂಬಾಗಿಲ ಮೂಲಕ ಖಾಸಗಿ ಕಾಲೇಜುಗಳಿಗೆ ಅನುಕೂಲ ಮಾಡಿಕೊಟ್ಟಿದೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಾಮೆಡ್-ಕೆ ಕೌನ್ಸೆಲಿಂಗ್ ಆರಂಭಿಸಿದ ನಂತರ ಸರ್ಕಾರ ಕೌನ್ಸೆಲಿಂಗ್ ಆರಂಭಿಸಿದೆ. ಮೂರು ಬಾರಿ ಕೌನ್ಸೆಲಿಂಗ್ ವೇಳಾಪಟ್ಟಿ ಬದಲಿಸಿ ಗೊಂದಲ ಉಂಟು ಮಾಡಿದೆ.

ಸಿಇಟಿ ಶುಲ್ಕ ಪಾವತಿಸಿದ ವಿದ್ಯಾರ್ಥಿಗಳು ಪ್ರವೇಶ ಪ್ರತಿಗಾಗಿ 3-4 ದಿನ ಅಲೆದಾಡಬೇಕಾಯಿತು. ಪ್ರವೇಶ ಪ್ರತಿ ಪಡೆದು ಹೋದಾಗ ಅಭಿವೃದ್ಧಿ ನಿಧಿ ಮತ್ತಿತರ ಹೆಸರುಗಳಲ್ಲಿ ವಿದ್ಯಾರ್ಥಿಗಳಿಂದ ಕಾಲೇಜುಗಳು ಹೆಚ್ಚಿನ ಹಣ ವಸೂಲಿ ಮಾಡುತ್ತಿವೆ. ಇದು ಖಂಡನೀಯ ಎಂದು ಎಬಿವಿಪಿ ಕಾರ್ಯಕರ್ತರು ಘೋಷಣೆ ಕೂಗಿದರು.

ಈ ಎಲ್ಲ ಗೊಂದಲಗಳಿಗೆ ಸರ್ಕಾರ ತಕ್ಷಣ ತೆರೆ ಎಳೆಯಬೇಕು. ಕೌನ್ಸೆಲಿಂಗ್‌ನ ಎಲ್ಲ ಹಂತಗಳನ್ನೂ ಪಾರದರ್ಶಕವಾಗಿ ಮತ್ತು ಪ್ರಾಮಾಣಿಕವಾಗಿ ನಡೆಸಬೇಕು. ಸಿಇಟಿ ಶುಲ್ಕ ಪಾವತಿಸಿದ ನಂತರ ಯಾವುದೇ ಶುಲ್ಕವನ್ನು ಕಾಲೇಜು ಆಡಳಿತ ಮಂಡಳಿ ಪಡೆಯದಂತೆ ಆದೇಶ ಹೊರಡಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನೆ ನಿರತರು ಆಗ್ರಹಿಸಿದರು. ಸಂಘಟನೆಯ ನಗರ ಕಾರ್ಯದರ್ಶಿ ತೇಜಸ್ ಗೋಕಾಕ, ಸುಚೇತ್ ಬುಳ್ಳಾನವರ, ಪ್ರವೀಣ ಬಾರ್ಕಿ, ಮನೋಹರ ಜಮಾದಾರ, ನವೀನ ಪಾಟೀಲ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT