ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ ಶುಲ್ಕ ದುಬಾರಿ: ಪ್ರತಿಭಟನೆ

Last Updated 20 ಡಿಸೆಂಬರ್ 2013, 5:50 IST
ಅಕ್ಷರ ಗಾತ್ರ

ಗದಗ: 2006ರ ಸಿಇಟಿ ಕಾಯಿದೆ ಜಾರಿಗೊಳಿಸಲು ಮುಂದಾಗಿರುವ ಸರ್ಕಾರದ ಕ್ರಮ ವಿರೋಧಿಸಿ ಜೈ ಭೀಮ್‌ ಸೇನಾ ಸಂಘರ್ಷ ಸದಸ್ಯರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಗಾಂಧಿ ವೃತ್ತದಲ್ಲಿ ಜಮಾವಣೆಗೊಂಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ ಮೂಲಕ ಬಡವರ ಕಷ್ಟ ನೀಗಿಸುವುದಾಗಿ ಹೇಳಿದ ರಾಜ್ಯ ಸರ್ಕಾರ ಬಡವ, ದಲಿತ, ರೈತಾಪಿ ಮಕ್ಕಳ ಶಿಕ್ಷಣದ ಮೇಲೆ ಬರೆ ಹಾಕಲು ಹೊರಟಿದೆ. ಶ್ರೀಮಂತ ಮಕ್ಕಳಿಗೆ ಮಾತ್ರ ವೈದ್ಯಕೀಯ ಹಾಗೂ ತಾಂತ್ರಿಕ ಶಿಕ್ಷಣ, ಕೂಲಿ ಮಾಡುವವರ ಮಕ್ಕಳು, ಬಡವರು ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಇಲ್ಲ ಎಂಬುದನ್ನು ತೋರಿಸಲು  ನಿರ್ಧರಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ವೃತ್ತಿ ಶಿಕ್ಷಣ ಕಾಲೇಜು  ನಡೆಸುವವರಲ್ಲಿ ರಾಜಕಾರಣಿಗಳು ಇದ್ದಾರೆ. ಇವರ ಒತ್ತಡಕ್ಕೆ ಮಣಿದು  ಖಾಸಗಿ ಕಾಲೇಜು ಆಡಳಿತ ಮಂಡಳಿಗಳ ಏಜೆಂಟರಂತೆ ವರ್ತಿಸುತ್ತಿದೆ.  ಬಡವರ ಹಾಗೂ ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳ ವೈದ್ಯಕೀಯ ಹಾಗೂ ತಾಂತ್ರಿಕ ಶಿಕ್ಷಣದ ಭವಿಷ್ಯಕ್ಕೆ ಮಾರಕವಾಗುವ ಕಾಯ್ದೆಯನ್ನು ಸರ್ಕಾರ ಜಾರಿ ಮಾಡಬಾರದು ಎಂದು ಆಗ್ರಹಿಸಿದರು.

ಈ ಸಂಬಂಧ ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ   ಹುಬ್ಬಳ್ಳಿ, ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ಪಿ. ಪರಾಪೂರ, ರಾಜ್ಯ ಸಂಚಾಲಕ ಅಶೋಕ ಎಂ. ಹಾದಿಮನಿ, ಉಪಾಧ್ಯಕ್ಷ ಮಂಜುನಾಥ  ತೌಜಲ, ವಿಜಯ   ಕಲ್ಮನಿ, ಸುರೇಶ ಹೊಸಮನಿ, ದೀಪಕ ಕಲ್ಮನಿ, ಪರಶುರಾಮ ಸಂಗಾಪೂರ, ಓಬಳೇಶ ಯಶವಂತಪುರ, ಮಂಜುನಾಥ  ಪರಾಪೂರ, ಶಂಕರ ಹುಬ್ಬಳ್ಳಿ, ಯುವರಾಜ ಬಳ್ಳಾರಿ, ರಾಷ್ಟ್ರೀಯನ್ ಜೋಸೆಪ್, ಚಂದ್ರು ಚವ್ಹಾಣ, ಸಂತೋಷ ಬಳ್ಳಾರಿ, ವಿಜಯ ತಳಗೇರಿ, ಕೃಷ್ಣಾ ಸಂಗಾಪೂರ,  ಹೇಮಂತ ಹುಬ್ಬಳ್ಳಿ, ಪರಶುರಾಮ ಸೀತಿಮನಿ, ಪಂಪಾಪತಿ ಕೋಟ್ನಿಕಲ್ ಹಾಜರಿದ್ದರು.

ಮುಂಡರಗಿ ವರದಿ: ರಾಜ್ಯ ಸರ್ಕಾರವು 2006ರ ಸಿಇಟಿ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಿರುವ ಕ್ರಮವನ್ನು ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ತಾಲ್ಲೂಕು ಘಟಕದ ನೇತೃತ್ವದಲ್ಲಿ ಪಟ್ಟಣದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ನಂತರ ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಜಗದ್ಗುರು ಅನ್ನ­ದಾನೀಶ್ವರ ಪದವಿ ಪೂರ್ವ ಕಾಲೇಜಿ­ನಿಂದ ಹೊರಟ ವಿದ್ಯಾರ್ಥಿಗಳು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ  ವಿರುದ್ಧ ಘೋಷಣೆ ಕೂಗುತ್ತಾ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದರು. ಪಟ್ಟಣದ  ಕೊಪ್ಪಳ ಕ್ರಾಸ್‌ನಲ್ಲಿ ಮಾನವ ಸರಪಳಿ ನಿರ್ಮಿಸಿದ ವಿದ್ಯಾರ್ಥಿಗಳು ಕೆಲ ಕಾಲ ರಸ್ತೆತಡೆ ನಡಸಿ, ತಹಶೀಲ್ದಾರ್ ಕಚೇರಿಗೆ ಆಗಮಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ವಿದ್ಯಾರ್ಥಿ ಮುಖಂಡ ಶಿವು ನಾಡಗೌಡರ, ‘ಸರ್ಕಾರ ಜಾರಿಗೊಳಿಸಲು ಉದ್ದೇಶಿ­ಸಿರುವ ಕಾಯಿದೆಯಿಂದ ಸರ್ಕಾರಿ ಕೋಟಾದಲ್ಲಿರುವ ಶೇ.45 ಎಂಜಿನಿಯರಿಂಗ್‌, ಶೇ.40 ಮೆಡಿಕಲ್‌ ಹಾಗೂ ಶೇ.35 ದಂತವೈದ್ಯಕೀಯ ಸೀಟುಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲಾಗಲಿವೆ. ಇದರಿಂದಗಿ ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಸೀಟುಗಳು ಇಲ್ಲದಂತಾಗಿ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ತೀವ್ರ ತೊಂದೆಯಾಗಲಿದೆ’ ಎಂದರು.

ವಿದ್ಯಾರ್ಥಿ ಮುಖಂಡ ಕಿರಣ ಅಂಗಡಿ ಮಾತನಾಡಿದರು.   ಪುರಸಭೆ ಸದಸ್ಯ ಶಂಕರಗೌಡ ಪಾಟೀಲ ಮಾತನಾಡಿ, ’ಸರ್ಕಾರದ ಹೊಸ ನೀತಿಯಿಂದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಲಿದೆ. ಸಾಮಾಜಿಕ ನ್ಯಾಯದಾನದ ಮಾತನ್ನು ಹೇಳುತ್ತಲೆ ರಾಜ್ಯ ಸರ್ಕಾರ ಬಡವರನ್ನು ಸಾಮಾಜಿಕ ನ್ಯಾಯದಿಂದ ಹಾಗೂ ಶೈಕ್ಷಣಿಕ ಹಕ್ಕುಗಳಿಂದ ದೂರವಿಡಲು ಹುನ್ನಾರ ನಡೆಸಿದೆ ಎಂದರು.

ರಿಯಾಜ್‌ ತಪ್ಪಡಿ, ಅರುಣ ಕಳಾಸಾಪೂರ, ಪುಷ್ಪಾ ಗದಗ, ಶ್ರೀಧರ ಹಂದ್ರಾಳ, ರತ್ನಕ್ಕ ದೇವರಮನಿ, ಎಸ್‌. ಮಾದೇಶ, ಪುರಸಭೆ ಸದಸ್ಯ ಶಂಕರಗೌಡ ಪಾಟೀಲ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮಂಜುನಾಥ ಮುಧೋಳ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

  ನರಗುಂದ ವರದಿ: ಎಂಜನೀಯರಿಂಗ್‌ ಹಾಗೂ ವೈದ್ಯಕೀಯ ಸೀಟುಗಳಗೆ ಸಂಬಂಧಿ­ಸಿದಂತೆ  ನಡೆಸಲಾಗುವ ಸಿಇಟಿ ಕುರಿತು ರಾಜ್ಯ ಸರಕಾರ ಅನುಸರಿಸುತ್ತಿರುವ ಧೋರಣೆ ಖಂಡಿಸಿ ಹಾಗೂ ಜಾರಿ ಮಾಡಲು ಹೊರಟಿರುವ 2006ರ ಕಾಯ್ದೆ ವಿರೋಧಿಸಿ ಪಟ್ಟಣದಲ್ಲಿ  ಗುರುವಾರ  ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜಿನಿಂದ ಹೊರಟ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿತು. ಬಸ್‌ ನಿಲ್ದಾಣದ ಸಮೀಪ ಇರುವ ಶಿವಾಜಿ ವೃತ್ತದ ಬಳಿ ಮಾನವ ಸರಪಳಿ ರಚಿಸಿದ ಎಬಿವಿಪಿ ಕಾರ್ಯಕರ್ತರು  ರಾಜ್ಯ ಸರಕಾರ ಜಾರಿ ಮಾಡಲು ಹೊರಟಿರುವ  2006 ಸಿಇಟಿ ಕಾಯ್ದೆಯನ್ನು ತೀವ್ರವಾಗಿ ವಿರೋಧಿಸುವುದಾಗಿ ಸ್ಪಷ್ಟಪಡಿಸಿದರು.

  ಮಾನವ ಸರಪಳಿ ರಚಿಸಿದ್ದರಿಂದ ಕೆಲ ಕಾಲ ಸಂಚಾರಕ್ಕ ತಡೆ ಉಂಟಾಯಿತು, ಪ್ರಯಾಣಿಕರು ಪರದಾಡಬೇಕಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಎಬಿವಿಪಿ ಮುಖಂಡರು  ಸರಕಾರ ಜಾರಿ ಮಾಡುತ್ತಿರುವ 2006 ಕಾಯ್ದೆಯಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವಂಚಿಸುವಂತಿದೆ. ಇದು ರಾಜ್ಯ ಸರಕಾರದ ಹುನ್ನಾರವಾಗಿದೆ.  ಜೊತೆಗೆ ಕಾಮೆಡ್‌ ಕೆ ನಡೆಸುವ ಪರೀಕ್ಷೆಯಿಂದ ನ್ಯಾಯ ಸಿಗಲು ಸಾಧ್ಯವಿಲ್ಲ. ಇದು ಕಳ್ಳನ ಕೈಯಲ್ಲಿ ಕೀಲಿ ಕೈ ಕೊಟ್ಟಂತೆ ಆಗುತ್ತದೆ ಎಂದು ಎಬಿವಿಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಅಕ್ಷಯ ಜೋಷಿ, ಮಂಜು ಪಲ್ಲೇದ, ಸಂಜೀವ ನಲವಡೆ, ವಿಶ್ವನಾಥ ದೇಶಪಾಂಡೆ, ಪ್ರವೀಣ ಕುರಗೋವಿನ­ಕೊಪ್ಪ, ಶಶಿಕುಮಾರ ಭೋವಿ ಸೇರಿದಂತೆ   ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT