ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಸಿ: ಇಬ್ಬಣ ಸಂಘರ್ಷ

Last Updated 26 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮೂವರು ಮಾಜಿ ಮುಖ್ಯಮಂತ್ರಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಸುಪ್ರೀಂಕೋರ್ಟ್‌ನ ಕೇಂದ್ರ ಉನ್ನತಾಧಿಕಾರ ಸಮಿತಿಗೆ (ಸಿಇಸಿ) ಸಲ್ಲಿಸಿರುವ ದೂರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೀಡಿರುವ ಪ್ರತಿಕ್ರಿಯೆ ಬಿಜೆಪಿಯ ಎರಡು ಬಣಗಳನ್ನು ಮತ್ತೆ ಸಂಘರ್ಷದ ದಾರಿಗೆ ಎಳೆದು ತಂದಿದೆ. ಈಗ ಸಲ್ಲಿಸಿರುವ ಪ್ರತಿಕ್ರಿಯೆಯನ್ನು ಹಿಂದಕ್ಕೆ ಪಡೆಯಬೇಕೆಂಬ ಒತ್ತಡವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಣ ಹೇರಲಾರಂಭಿಸಿದೆ.

ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಧರ್ಮಸಿಂಗ್ ಮತ್ತು ಎಚ್.ಡಿ.ಕುಮಾರಸ್ವಾಮಿ ವಿರುದ್ಧದ ಆರೋಪಗಳ ಕುರಿತು ಸಿಇಸಿಗೆ ರಾಜ್ಯ ಸರ್ಕಾರ ನೀಡಿರುವ ಉತ್ತರ ವಾಸ್ತವಾಂಶದಿಂದ ಕೂಡಿಲ್ಲ. ಅವರನ್ನು ರಕ್ಷಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಯಡಿಯೂರಪ್ಪ ಬಣದ ಹಲವು ಸಚಿವರು ಶನಿವಾರ ನೇರವಾಗಿ ಆರೋಪಿಸಿದ್ದಾರೆ. ಸಚಿವ ಸಂಪುಟ ಸಭೆಗೂ ಮುನ್ನ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರನ್ನು ಭೇಟಿಮಾಡಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಈ ಬೆಳವಣಿಗೆಯಿಂದ ಬಿಜೆಪಿಯಲ್ಲಿ ಮತ್ತೆ ಅಂತಃಕಲಹ ಗರಿಗೆದರಿದೆ. ಇದರೊಂದಿಗೆ ನಾಯಕತ್ವ ಬದಲಾವಣೆಯ ಕೂಗೂ ಕೇಳಲಾರಂಭಿಸಿದೆ. ಸಂಪುಟ ಸಭೆಗೂ ಮುನ್ನ ಮುಖ್ಯಮಂತ್ರಿಯವರನ್ನು ಅವರ ವಿಧಾನಸೌಧದ ಕಚೇರಿಯಲ್ಲಿ ಭೇಟಿ ಮಾಡಿದ ಸಚಿವರಾದ ಬಸವರಾಜ ಬೊಮ್ಮಾಯಿ, ಸಿ.ಎಂ.ಉದಾಸಿ, ವಿ.ಸೋಮಣ್ಣ, ಎಂ.ಪಿ.ರೇಣುಕಾಚಾರ್ಯ, ಉಮೇಶ ವಿ.ಕತ್ತಿ, ಮುರುಗೇಶ ನಿರಾಣಿ ಸೇರಿದಂತೆ ಹಲವರು ಸರ್ಕಾರ ಸಿಇಸಿಗೆ ಸಲ್ಲಿಸಿರುವ ಉತ್ತರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

`ಅಕ್ರಮ ಗಣಿಗಾರಿಕೆ ಹಿನ್ನೆಲೆಯಲ್ಲಿ ಮೂವರು ಮಾಜಿ ಮುಖ್ಯಮಂತ್ರಿಗಳ ಅವಧಿಯಲ್ಲಿನ ಅಕ್ರಮಗಳ ಬಗ್ಗೆಯೂ ಸಿಇಸಿ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಕೇಳಿತ್ತು. ಆದರೆ, ಸರ್ಕಾರ ಸಲ್ಲಿಸಿರುವ ಉತ್ತರದಲ್ಲಿ ವಾಸ್ತವಾಂಶಗಳನ್ನು ಮರೆಮಾಚಲಾಗಿದೆ. ಇದರ ಉದ್ದೇಶ ಏನು? ಯಡಿಯೂರಪ್ಪ ಅವರ ವಿಚಾರ ಬಂದಾಗ ಅವರ ವಿರುದ್ಧ ತಕ್ಷಣವೇ ಪ್ರತಿಕ್ರಿಯೆ ಸಲ್ಲಿಸಿದಿರಿ. ಮೂವರು ಮಾಜಿ ಮುಖ್ಯಮಂತ್ರಿಗಳ ವಿಷಯದಲ್ಲಿ ಈಗ ಏಕೆ ನಿಲುವು ಬದಲಿಸಿದ್ದೀರಿ~ ಎಂದು ಈ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.

`ಯಡಿಯೂರಪ್ಪ ವಿರುದ್ಧ ಸಿಇಸಿಗೆ ಉತ್ತರ ಸಲ್ಲಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನೇ ದೆಹಲಿಗೆ ಕಳುಹಿಸಿದಿರಿ. ಅದೂ ಎರಡೇ ದಿನದಲ್ಲಿ ಉತ್ತರ ಸಲ್ಲಿಕೆಯಾಗಿದೆ. ಆದರೆ, ಈ ಮಾಜಿ ಮುಖ್ಯಮಂತ್ರಿಗಳ ವಿಷಯದಲ್ಲಿ ಪ್ರತಿಕ್ರಿಯೆ ಸಲ್ಲಿಸುವುದಕ್ಕೆ ವಿಳಂಬ ಧೋರಣೆ ಅನುಸರಿಸಿದ್ದು ಏಕೆ?  ಅಷ್ಟೇ ಅಲ್ಲದೆ, ಉತ್ತರ ಕೂಡ ಅವರ ಪರವಾಗಿಯೇ ಇದೆ. ಇದು ತಾರತಮ್ಯ ಅಲ್ಲವೇ? ನಿಮ್ಮನ್ನು ಮುಖ್ಯಮಂತ್ರಿ ಮಾಡಿದ ವ್ಯಕ್ತಿಗೇ ಈ ರೀತಿ ಮಾಡಿದ್ದು ಸರಿಯೇ?~ ಎಂದು ಸಚಿವರು ಮುಖ್ಯಮಂತ್ರಿಯವರನ್ನು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.

ಇದಕ್ಕೆ ಸಮಜಾಯಿಷಿ ನೀಡಿದ ಮುಖ್ಯಮಂತ್ರಿ, `ವಾಸ್ತವಾಂಶವನ್ನು ಸಿಇಸಿಗೆ ತಿಳಿಸಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರೇ ಉತ್ತರ ನೀಡಿದ್ದು, ನನ್ನ ಪ್ರಕಾರ ಅದು ವಾಸ್ತವಾಂಶದಿಂದ ಕೂಡಿದೆ~ ಎಂದು ಸಮರ್ಥಿಸಿಕೊಂಡರು. ಈ ಸಮರ್ಥನೆ ಸಚಿವರ ಸಿಟ್ಟು ಮತ್ತಷ್ಟು ಹೆಚ್ಚಾಗಲು ಕಾರಣವಾಯಿತು ಎನ್ನಲಾಗಿದೆ. `ತಕ್ಷಣವೇ ಪರಿಷ್ಕೃತ ಉತ್ತರವನ್ನು ಸಿಇಸಿಗೆ ಸಲ್ಲಿಸಬೇಕು. ಅಗತ್ಯ ಮಾಹಿತಿ ಇಲ್ಲದಿದ್ದರೆ ನಮ್ಮ ಬಳಿ ಇರುವ ಮಾಹಿತಿ ಕೊಡುತ್ತೇವೆ~ ಎಂದೂ ಸಚಿವರು ಒತ್ತಾಯಿಸಿದರು ಎಂದು ಗೊತ್ತಾಗಿದೆ.

`ಈ ಮೂವರು ಮಾಜಿ ಮುಖ್ಯಮಂತ್ರಿಗಳ ಆಡಳಿತಾವಧಿಯಲ್ಲೂ ಅಕ್ರಮಗಳು ನಡೆದಿವೆ. ಅದಕ್ಕೆ ಪೂರಕವಾದ ದಾಖಲೆಗಳು ನಮ್ಮ ಬಳಿ ಇವೆ~ ಎಂದರು ಎನ್ನಲಾಗಿದೆ. `ಮುಖ್ಯ ಕಾರ್ಯದರ್ಶಿ ಜತೆ ಮಾತುಕತೆ ನಡೆಸಿದ ಬಳಿಕ ಪರಿಷ್ಕೃತ ಉತ್ತರವನ್ನು ಸಲ್ಲಿಸುವ ಬಗ್ಗೆ ತೀರ್ಮಾನಿಸುವ ಭರವಸೆ ನೀಡಿದ್ದಾರೆ~ ಎಂದು ಯಡಿಯೂರಪ್ಪ ಬಣದ ಮೂಲಗಳು ತಿಳಿಸಿವೆ. ಆದರೆ, ಸದಾನಂದಗೌಡ ಸುದ್ದಿಗಾರರ ಜತೆ ಮಾತನಾಡಿ, `ಸತ್ಯಾಂಶವನ್ನು ಸಿಇಸಿಗೆ ಸಲ್ಲಿಸಲಾಗಿದೆ~ ಎಂದಷ್ಟೇ ಹೇಳಿದರು.

ಬಹಿರಂಗ ಬಂಡಾಯ: ಸಚಿವ ರೇಣುಕಾಚಾರ್ಯ ಅವರು ಯಡಿಯೂರಪ್ಪ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಸದಾನಂದಗೌಡರ ವಿರುದ್ಧ ವಾಗ್ದಾಳಿ ನಡೆಸಿದರು. `ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಸಲುವಾಗಿಯೇ ಅವರ ವಿರುದ್ಧ ಸಿಇಸಿಗೆ ಉತ್ತರ ನೀಡಿದ ಸದಾನಂದ ಗೌಡ ಮಾಜಿ ಮುಖ್ಯಮಂತ್ರಿಗಳ ವಿಷಯದಲ್ಲಿ ಸಲ್ಲಿಸಿರುವ ಪ್ರತಿಕ್ರಿಯೆಯಲ್ಲಿ  ಸತ್ಯಾಂಶವಿಲ್ಲ~ ಎಂದು ಆಕ್ಷೇಪಿಸಿದರು.
 

`ಯಡಿಯೂರಪ್ಪ ಬಣದಲ್ಲಿದ್ದೇವೆ ಎನ್ನುವ ಕಾರಣಕ್ಕೆ ನಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ. ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಈ ಎಲ್ಲ ವಿಷಯಗಳ ಕುರಿತು ಪಕ್ಷದ ವರಿಷ್ಠರಿಗೆ ದೂರು ನೀಡಲಾಗುವುದು~ ಎಂದರು.

ರೆಸಾರ್ಟ್ ರಾಜಕಾರಣ ನಡೆಸಿದ ಆರೋಪದ ಮೇಲೆ ಸದಾನಂದಗೌಡ ಅವರು ತಮ್ಮ ವಿರುದ್ಧ ವರಿಷ್ಠರಿಗೆ ದೂರು ನೀಡಿದ್ದಾರೆ. ಆದರೆ, ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದು ಯಾವ ಹೋಟೆಲ್‌ನಲ್ಲಿ ಎಂಬುದನ್ನು ಮರೆಯಬಾರದು ಎಂದೂ ರೇಣುಕಾಚಾರ್ಯ ತಿರುಗೇಟು ನೀಡಿದರು.

29ಕ್ಕೆ ಶಾಸಕರ ಸಭೆ
: ಸಿಇಸಿಗೆ ಸಲ್ಲಿಸಿರುವ ಪ್ರತಿಕ್ರಿಯೆಯನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರವನ್ನು ಮತ್ತೊಮ್ಮೆ ಇಕ್ಕಟ್ಟಿಗೆ ಸಿಲುಕಿಸಲು ಯಡಿಯೂರಪ್ಪ ಬಣ ಸಿದ್ಧತೆ ನಡೆಸಿದೆ. ಇದುವರೆಗೂ ಮುಖ್ಯಮಂತ್ರಿ ಸ್ಥಾನಕ್ಕೆ ಸಚಿವ ಜಗದೀಶ ಶೆಟ್ಟರ್ ಹೆಸರನ್ನು ಸೂಚಿಸಲು ಹಿಂದೇಟು ಹಾಕುತ್ತಿದ್ದ ಯಡಿಯೂರಪ್ಪ ಈಗ ತಮ್ಮ ನಿಲುವು ಬದಲಿಸಿದ್ದಾರೆ.
 
ಅವರ ಬಣದ ಸಚಿವರು ಮತ್ತು ಶಾಸಕರ ಅಭಿಪ್ರಾಯದಂತೆ ಶೆಟ್ಟರ್ ಹೆಸರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಬಿಂಬಿಸಲು ಒಪ್ಪಿದ್ದು, ಆ ಕುರಿತು ಚರ್ಚಿಸಲು ಇದೇ 29ರಂದು ಬೆಳಿಗ್ಗೆ ಶಾಸಕರ ಸಭೆ ಕರೆದಿದ್ದಾರೆ. ಉಪಾಹಾರ ಕೂಟದ ನೆಪದಲ್ಲಿ ಸಭೆ ಸೇರಿ ನಾಯಕತ್ವ ಬದಲಾವಣೆಗೆ ಪಟ್ಟುಹಿಡಿಯುವ ಸಾಧ್ಯತೆ ಇದೆ.

ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಯ ಆರು ಮಂದಿ ಆಯ್ಕೆಯಾಗುವುದು ಖಚಿತ. ಈ ಆರು ಮಂದಿಯಲ್ಲಿ ಕನಿಷ್ಠ ನಾಲ್ಕು ಮಂದಿ ತಾವು ಹೇಳಿದವರೇ ಆಗಬೇಕು ಎಂದು ಯಡಿಯೂರಪ್ಪ ಪಟ್ಟುಹಿಡಿದಿದ್ದಾರೆ. ಈ ಕುರಿತು ಆಪ್ತರ ಜತೆ ಮಾತುಕತೆ ನಡೆಸಿದ ನಂತರ 29ರಂದು ಶಾಸಕರ ಸಭೆ ಕರೆಯಲು ತೀರ್ಮಾನಿಸಿದರು ಎಂದು ಗೊತ್ತಾಗಿದೆ.

ಪಕ್ಷ ಮತ್ತು ಸರ್ಕಾರ ತಾವು ಹೇಳಿದವರಿಗೆ ಟಿಕೆಟ್ ನೀಡದಿದ್ದಲ್ಲಿ ಬಂಡಾಯ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಬಗ್ಗೆಯೂ ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ. ಈ ಕುರಿತು 29ರ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

ಬಿಜೆಪಿ ಕಚೇರಿಗೆ ಬಿಎಸ್‌ವೈ: ಇತ್ತೀಚಿನ ದಿನಗಳಲ್ಲಿ ಮಲ್ಲೇಶ್ವರದ ಪಕ್ಷದ ಕಚೇರಿಯಿಂದ ದೂರವೇ ಉಳಿದಿದ್ದ ಯಡಿಯೂರಪ್ಪ ಅವರು ಶನಿವಾರ ಸಂಜೆ ದಿಢೀರ್ ಪಕ್ಷದ ಕಚೇರಿಗೆ ತೆರಳಿ, `ಕೋರ್ ಸಮಿತಿ~ ಸಭೆಯಲ್ಲಿ ಭಾಗವಹಿಸಿದರು. ಇದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಸೇರಿದಂತೆ ಹಲವರಲ್ಲಿ ಅಚ್ಚರಿ ಮೂಡಿಸಿತು.

ವಿಧಾನ ಪರಿಷತ್ ಚುನಾವಣೆಯ ಪೂರ್ವ ತಯಾರಿ ಕುರಿತು ಚರ್ಚಿಸಲಾಯಿತು. ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಯಡಿಯೂರಪ್ಪ ಅವರು, `ಪರಿಷತ್ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತೇನೆ. ಆರು ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ~ ಎಂದರು.

ಜೂನ್ 1ರಿಂದ ಪಕ್ಷದ ಕಚೇರಿಗೆ ಭೇಟಿ ನೀಡಲಾಗುವುದು. ಬಳಿಕ ಮಲ್ಲೇಶ್ವರದ 17ನೇ ಅಡ್ಡರಸ್ತೆಯಲ್ಲಿನ ಸ್ವಂತ ಕಚೇರಿಗೆ ತೆರಳಿ, ಜನಸಂಪರ್ಕ ಸಭೆಗಳನ್ನು ನಡೆಸಲಾಗುವುದು ಎಂದು ಯಡಿಯೂರಪ್ಪ ಹೇಳಿದರು. ಸಚಿವರಾದ ಗೋವಿಂದ ಕಾರಜೋಳ, ಜಗದೀಶ ಶೆಟ್ಟರ್, ವಿಶ್ವೇಶ್ವರ ಹೆಗಡೆ ಕಾಗೇರಿ, ರೇಣುಕಾಚಾರ್ಯ ಸೇರಿದಂತೆ ಇತರರು ಈಶ್ವರಪ್ಪ ಜತೆ ನಡೆಸಿದ ಸಭೆಯಲ್ಲಿ ಹಾಜರಿದ್ದರು.

ಈಶ್ವರಪ್ಪ ಅವರು ಪರಿಷತ್ ಚುನಾವಣೆಯ ಪೂರ್ವ ತಯಾರಿ ಕುರಿತು ಪಕ್ಷದ ಕಚೇರಿಯಲ್ಲಿ ಇಡೀ ದಿನ ಸಭೆ ನಡೆಸಿದರು. ಬೆಳಿಗ್ಗೆ ನಡೆದ ಸಭೆಗೆ ಯಡಿಯೂರಪ್ಪ ಬಣದ ಸಚಿವರು ಕೂಡ ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT