ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ವಿರುದ್ಧ ಕಾಂಗ್ರೆಸ್ ಬೀದಿ ಸಮರ

Last Updated 30 ಜನವರಿ 2011, 17:30 IST
ಅಕ್ಷರ ಗಾತ್ರ

ಬೆಂಗಳೂರು: ಅಲ್ಲಿ, ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ರಣಕಹಳೆ ಮೊಳಗಿತ್ತು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಮೇಲೆ ಬೈಯ್ಗುಳಗಳ ಬಾಣ ಬೀಸುತ್ತಿತ್ತು. ಕೇಂದ್ರ ಸಚಿವರಾದ ಎಸ್.ಎಂ.ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ಧರಾಮಯ್ಯ ಹೀಗೆ ಒಬ್ಬರ ಮೇಲಾದರೊಬ್ಬರು ಯಡಿಯೂರಪ್ಪನವರನ್ನು ಮಾತಿನ ಬಹ್ಮಾಸ್ತ್ರದಿಂದ ತಿವಿಯುತ್ತಿದ್ದರು.

- ಇದು ನಗರದ ಜಕ್ಕರಾಯನಕೆರೆ ಮೈದಾನದಲ್ಲಿ ಭಾನುವಾರ ಕಂಡುಬಂದ ದೃಶ್ಯ. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕೆ ಇಳಿಸಲೇಬೇಕೆಂಬ ಪಣತೊಟ್ಟ ಕಾಂಗ್ರೆಸ್ ಪಕ್ಷ ‘ನಾಡ ರಕ್ಷಣಾ ರ್ಯಾಲಿ’ ಹಮ್ಮಿಕೊಂಡಿತ್ತು. ಭ್ರಷ್ಟಾಚಾರಿ, ಡಿನೋಟಿಫೈ ಸರದಾರ, ಅಕ್ರಮ ಗಣಿಗಾರಿಕೆಯಿಂದ ಜನತೆಗೆ ವಂಚನೆ- ಮೋಸಗಾರ, ಸ್ವಜನಪಕ್ಷಪಾತಿ, ಭಂಡ, ಎಮ್ಮೆ ಚರ್ಮದವ.. ಹೀಗೆ ಮುಖ್ಯಮಂತ್ರಿಗಳ ವಿರುದ್ಧ ತೀವ್ರವಾದ ಪದ ಪ್ರಯೋಗ ಮಾಡಿದ ಕಾಂಗ್ರೆಸ್ ನಾಯಕರು, ಯಡಿಯೂರಪ್ಪನವರು ತಮ್ಮ ಪದವಿ ತ್ಯಜಿಸುವವರೆಗೆ ಹೋರಾಟ ಮುಂದುವರಿಸುವುದಾಗಿ ಘೋಷಿಸಿದರು.

ಸರ್ಕಾರದಿಂದ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ಕೆಲ ತಿಂಗಳ ಹಿಂದಷ್ಟೇ ಬೆಂಗಳೂರಿನಿಂದ ಬಳ್ಳಾರಿಯವರೆಗೆ ‘ನಾಡ ರಕ್ಷಣಾ ನಡಿಗೆ’ ಹಮ್ಮಿಕೊಂಡು ಜನರ ಗಮನ ಸೆಳೆದಿದ್ದರೆ, ಈಗ ಮುಖ್ಯಮಂತ್ರಿಯ ಭ್ರಷ್ಟಾಚಾರದ ವಿರುದ್ಧ ಪ್ರಥಮ ಬಾರಿಗೆ ಬೃಹತ್ ಪ್ರಮಾಣದಲ್ಲಿ ರ್ಯಾಲಿ ಹಮ್ಮಿಕೊಂಡಿತ್ತು.

ಎನ್‌ಕೌಂಟರ್ ಆಗುತ್ತೆ: ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಮಾತನಾಡಿ, ‘ಯಡಿಯೂರಪ್ಪನವರೇ, ನೀವು ಪಟ್ಟು ಹಿಡಿದು ಕುಳಿತುಕೊಂಡಿರುವ ವಿಧಾನಸೌಧದ ಸುತ್ತಮುತ್ತ ಇರುವ ಹೈಕೋರ್ಟ್, ರಾಜಭವನ ಹಾಗೂ ಲೋಕಾಯುಕ್ತ ಮೂರೂ ಸಂಸ್ಥೆಗಳು ನಿಮ್ಮನ್ನು ಸುತ್ತುವರಿದಿವೆ. ಕಾನೂನಿನ ಎನ್‌ಕೌಂಟರ್ ನಿಮ್ಮ ಮೇಲೆ ಆಗುತ್ತಾ ಇದೆ. ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಬೇಗನೆ ಖುರ್ಚಿ ಬಿಟ್ಟು ಇಳಿಯಿರಿ...’ ಎಂದರು.ನೆರೆ ಸಂತ್ರಸ್ತರಿಗೆ ಸೂರು ನೀಡದೇ ಇರುವುದು, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಬಂದರೂ ಅದನ್ನು ಜಾರಿ ಮಾಡದೇ ಇರುವುದು, ನಿರುದ್ಯೋಗಿಗಳಿಗೆ ಪ್ರೋತ್ಸಾಹ ಧನ ನೀಡುವ ವಾಗ್ದಾನವನ್ನು ಮರೆತಿರುವುದು ಹೀಗೆ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಒಂದೊಂದಾಗಿ ಬಿಡಿಸಿ ಹೇಳಿದರು.

‘ಉದ್ಯೋಗ ಖಾತರಿ ಯೋಜನೆಯಡಿ ಕೇಂದ್ರದಿಂದ ಮಂಜೂರಾದ 5600 ಕೋಟಿ ರೂಪಾಯಿಗಳಲ್ಲಿ 1140 ಕೋಟಿ ರೂಪಾಯಿ ಮಾತ್ರ ಬಳಕೆ ಆಗಿದ್ದು, ಉಳಿದ ಹಣ ಎಲ್ಲಿ ಹೋಗಿದೆ ಎಂದು ಜನರಿಗೆ ತಿಳಿಸಿ. ವಿವಿಧ ಕಾರ್ಯಗಳಿಗೆಂದು ರೂ 90 ಸಾವಿರ ಕೋಟಿ ಸಾಲ ಪಡೆದುಕೊಂಡಿದ್ದೀರಿ, ಆ ಹಣ ಎಲ್ಲಿಗೆ ಹೋಗಿದೆ ಎಂದು ಜನತೆ ಮುಂದಿಡಿ’ ಎಂದು ಯಡಿಯೂರಪ್ಪನವರಿಗೆ ಅವರು ಸವಾಲು   ಎಸೆದರು.

ರಾಮನಾಮ ಜಪ ಸಾಕಾಗಲ್ಲ: ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಮಾತನಾಡಿ, ‘ನಾನು ಮುಖ್ಯಮಂತ್ರಿಯಾಗಿದ್ದಾಗ, ಐಟಿ-ಬಿಟಿಯನ್ನು ಬೆಂಗಳೂರಿಗೆ ತಂದು ಇಡೀ ವಿಶ್ವ ಕರ್ನಾಟಕದತ್ತ ದೃಷ್ಟಿಹಾಯಿಸುವ ಹಾಗೆ ಮಾಡಿದೆ. ಬೆಂಗಳೂರಿನ ಅನೇಕ ರಸ್ತೆಗಳ ದುರಸ್ತಿ ಮಾಡಿಸಿದ್ದೆ. ಆದರೆ ಈಗ ಕರ್ನಾಟಕದವರು ಎಂದು ಹೇಳಿಕೊಳ್ಳಲು ನಾಚಿಕೆಯಾಗುವಂತಹ ಪರಿಸ್ಥಿತಿ ತಲೆದೋರಿದೆ. ಕರ್ನಾಟಕ ಎಂದರೆ ಭ್ರಷ್ಟರಾಜ್ಯ ಎಂದು ಜನರು ತಿಳಿಯುವಂತಾಗಿದೆ. ಇನ್ನು ರಸ್ತೆಗಳಾವುದೂ ಪಾದಚಾರಿ ಮಾರ್ಗ ಯಾವುದು ಎಂದು ತಿಳಿಯದಂತಹ ವಾತಾವರಣ ನಿರ್ಮಾಣವಾಗಿದೆ’ ಎಂದರು.

ಬೆಂಗಳೂರನ್ನು ಸಿಂಗಪುರ ಮಾಡುತ್ತೇನೆ ಎಂಬ ಯಡಿಯೂರಪ್ಪನವರ ಮಾತಿಗೆ ಪ್ರತಿಕ್ರಿಯೆ ನೀಡಿದ ಕೃಷ್ಣ ಅವರು, ‘ಬರಿ ರಾಮನಾಮದ ಜಪ ಮಾಡಿದ್ರೆ ರಾಜ್ಯ ಉದ್ಧಾರ ಆಗಲ್ಲ. ಮುಖ್ಯಮಂತ್ರಿಯಾದವರಿಗೆ ದೂರದೃಷ್ಟಿ ಇರಬೇಕು. ಆದರೆ ಈಗಿನ ಸರ್ಕಾರ ಡಿನೋಟಿಫೈನತ್ತ ದೃಷ್ಟಿ ಕೇಂದ್ರೀಕರಿಸಿರುವ ಕಾರಣ, ರಾಜ್ಯದ ಉದ್ಧಾರ ಹೇಗೆ ಸಾಧ್ಯ’ ಎಂದು ಲೇವಡಿ ಮಾಡಿದರು.

ಸಿಬಿಐ ತನಿಖೆ ಒಪ್ಪಿಕೊಳ್ಳಲಿ: ವಾಗ್ದಾಳಿ ಮುಂದುವರಿಸಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು, ‘ಅಕ್ರಮ ಗಣಿಗಾರಿಕೆ, ಭ್ರಷ್ಟಾಚಾರ, ಡಿನೋಟಿಫಿಕೇಷನ್ ಇತ್ಯಾದಿಗಳು ನಡೆಯುತ್ತಲೇ ಇಲ್ಲ ಎನ್ನುವ ಯಡಿಯೂರಪ್ಪನವರು ತಾಕತ್ತಿದ್ದರೆ ಸಿಬಿಐ ತನಿಖೆ ಎದುರಿಸಲಿ, ಅದಕ್ಕೆ ಹಿಂದೇಟು ಹಾಕುತ್ತಿರುವುದು ಏತಕ್ಕೆ’ ಎಂದು ಪ್ರಶ್ನಿಸಿದರು.

‘ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಬೇರೆಯವರಿಗೆ ಗೊತ್ತಾಗಲ್ಲ ಅಂದುಕೊಳ್ಳುತ್ತದೆ ಎಂಬ ಗಾದೆ ಅಂತೆ ಯಡಿಯೂರಪ್ಪನವರು ಮಾಡುತ್ತಿರುವ ಭ್ರಷ್ಟಾಚಾರ, ಮೋಸ, ವಂಚನೆ ಜನರಿಗೆ ತಿಳಿಯುತ್ತಿಲ್ಲ ಎಂದರೆ ಅದರಷ್ಟು ಹಾಸ್ಯಾಸ್ಪದವಾದುದು ಇನ್ನಾವುದೂ ಇಲ್ಲ’ ಎಂದ ಸಿದ್ಧರಾಮಯ್ಯ, ಬಿಜೆಪಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಮಿದುಳು ಇಲ್ಲದ ಮನುಷ್ಯ’ ಎಂದು ಲೇವಡಿ ಮಾಡಿದರು.

ಜಮೀನು ಹೇಗೆ ಸಿಗುತ್ತದೆ: ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ‘ಬೆಂಗಳೂರು, ಗುಲ್ಬರ್ಗ ಸೇರಿದಂತೆ ಕೆಲವು ಕಡೆಗಳಲ್ಲಿ ಮಹತ್ವದ ಯೋಜನೆಗಳನ್ನು ಜಾರಿ ಮಾಡಲು ನಮಗೆ ಜಮೀನು ಸಿಗುತ್ತಾ ಇಲ್ಲ. ಕೇಂದ್ರ ಸರ್ಕಾರದಿಂದ ‘ಸ್ಕಿಲ್ ಡೆವಲಪ್ ಯೋಜನೆ’ ಜಾರಿ ಮಾಡಲು ಅನುಮತಿ ಸಿಕ್ಕಿದೆ. ಆದರೆ ಅದಕ್ಕೂ ಜಮೀನಿನ ಕೊರತೆ ಇದೆ. ಆದರೆ ಯಡಿಯೂರಪ್ಪನವರಿಗೆ ಸಾವಿರ, ಸಾವಿರ ಎಕರೆ ಜಮೀನು ಹೇಗೆ ಸಿಗುತ್ತದೆ ಎನ್ನುವುದೇ ಯಕ್ಷಪ್ರಶ್ನೆ ಎಂದು ಅವರು ಹೇಳಿದರು.

40 ವರ್ಷ ಶಿಕ್ಷೆ: ಮಾತಿನ ಚಾಟಿಏಟು ಬೀಸಿದ ಎಐಸಿಸಿ ಕಾರ್ಯದರ್ಶಿ ಶಾಂತಾರಾಮ ನಾಯಕ್ ಅವರು, ‘ಯಡಿಯೂರಪ್ಪನವರು ನಡೆಸಿರುವ ಭ್ರಷ್ಟಾಚಾರ, ಮೋಸ, ವಂಚನೆ ಎಲ್ಲವನ್ನೂ ಒಟ್ಟಿಗೆ ಸೇರಿಸಿ, ಪ್ರತ್ಯೇಕ ಶಿಕ್ಷೆ ನೀಡಿದರೆ ಅವರಿಗೆ ಕನಿಷ್ಠ 40 ವರ್ಷ ಜೈಲು ಶಿಕ್ಷೆ ಆಗಬೇಕಾಗುತ್ತದೆ. ಇದನ್ನು ವಕೀಲನಾಗಿ ನಾನು ಹೇಳುತ್ತಿದ್ದೇನೆ’ ಎಂದರು.

ಯಡಿಯೂರಪ್ಪನವರನ್ನು ಕೆಳಕ್ಕೆ ಇಳಿಸಿ ಸಂಸದ ಅನಂತಕುಮಾರ್ ಮುಖ್ಯಮಂತ್ರಿಯಾಗಲು ಹವಣಿಸುತ್ತಿದ್ದಾರೆ. ಇದರ ಹಿಂದೆ ರಾಜ್ಯವನ್ನು ಉದ್ಧಾರ ಮಾಡಬೇಕು ಎನ್ನುವ ಯೋಚನೆ ಇಲ್ಲ, ಬದಲಿಗೆ ಅವರಿಗಿಂತ ಹೆಚ್ಚಿಗೆ ಹಣ ಲೂಟಿ ಮಾಡುವ ಹವಣಿಕೆ ಅಷ್ಟೇ ಎಂದರು. ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಮುಖಂಡರಾದ ಜಾಫರ್ ಷರೀಫ್, ಬಿ.ಕೆ.ಹರಿಪ್ರಸಾದ್ ಮುಂತಾದವರು ಕೂಡ ಯಡಿಯೂರಪ್ಪನವರ ವಿರುದ್ಧ ವಾಗ್ದಾಳಿ ನಡೆಸಿದರು. ಆರ್‌ಎಸ್‌ಎಸ್ ಕಚೇರಿಯ ಮೇಲೆ ರಾಷ್ಟ್ರಧ್ವಜ ಹಾರಿಸದ ಬಿಜೆಪಿ, ಶ್ರೀನಗರದಲ್ಲಿ ಧ್ವಜ ಹಾರಿಸಲು ಪ್ರಯತ್ನಿಸಿರುವುದು ವಿಪರ್ಯಾಸ ಎಂದರು.

ಮುಖಂಡರಾದ ಡಿ.ಕೆ.ಶಿವಕುಮಾರ್, ಪ್ರೊ. ಬಿ.ಕೆ. ಚಂದ್ರಶೇಖರ್, ಮೋಟಮ್ಮ, ರಾಣಿ ಸತೀಶ್, ಮಂಜುಳಾ ನಾಯ್ಡು, ಸಲೀಂ ಅಹಮದ್ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT