ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ ವಿರುದ್ಧ ಮತ್ತೆ ಮೂರು ಮೊಕದ್ದಮೆ

Last Updated 24 ಜನವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಕೀಲರಾದ ಸಿರಾಜುದ್ದೀನ್ ಬಾಷಾ ಮತ್ತು ಕೆ.ಎನ್.ಬಾಲರಾಜ್ ಸೋಮವಾರ ‘ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ’ ವಿಶೇಷ ನ್ಯಾಯಾಲಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಒಂಬತ್ತು ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂರು ಮೊಕದ್ದಮೆ ದಾಖಲಿಸಿದರು. ಇದರೊಂದಿಗೆ ಮುಖ್ಯಮಂತ್ರಿ ವಿರುದ್ಧ ಹೂಡಿರುವ ಮೊಕದ್ದಮೆಗಳ ಸಂಖ್ಯೆ ಐದಕ್ಕೇರಿದೆ.

ಮುಖ್ಯಮಂತ್ರಿಯವರ ಅಳಿಯ ಆರ್.ಎನ್.ಸೋಹನ್‌ಕುಮಾರ್ ಪರ ವಕೀಲರು ವಿಚಾರಣೆಗೆ ತಡೆ ನೀಡುವಂತೆ ವಿಶೇಷ ನ್ಯಾಯಾಲಯದಲ್ಲೇ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ. ಇದರೊಂದಿಗೆ ಯಡಿಯೂರಪ್ಪ ಅವರ ಕುಟುಂಬ ನೇರವಾಗಿ ಕಾನೂನು ಹೋರಾಟದ ಅಖಾಡಕ್ಕೆ ಇಳಿದಿದೆ. ಆದರೆ ಅವರ ಅರ್ಜಿಯನ್ನು ಮಾನ್ಯ ಮಾಡಬೇಕೇ ಬೇಡವೇ ಎಂಬ ವಿಷಯ ಇದೇ 31ರಂದು ವಿಚಾರಣೆಗೆ ಬರಲಿದೆ.

ಈ ಮೊದಲು ದಾಖಲಿಸಿದ್ದ ಎರಡು ಪ್ರಕರಣಗಳ ವಿಚಾರಣೆ ಜನವರಿ 31ಕ್ಕೆ ನಡೆಯಲಿದೆ. ಸೋಮವಾರ ಹೂಡಿರುವ ಮೂರು ಮೊಕದ್ದಮೆಗಳ ವಿಚಾರಣೆಯನ್ನು ಕ್ರಮವಾಗಿ ಫೆಬ್ರುವರಿ 1, 2 ಮತ್ತು 3ರಂದು ನಡೆಸುವುದಾಗಿ ನ್ಯಾಯಾಲಯ ಪ್ರಕಟಿಸಿದೆ. ಈ ಮಧ್ಯೆ ಈಗಿನಿಂದಲೇ ಮೊಕದ್ದಮೆಯಲ್ಲಿ ಸೇರಿಕೊಳ್ಳಲು ಮುಖ್ಯಮಂತ್ರಿ ಪರ ವಕೀಲರು ಪ್ರಯತ್ನ ಆರಂಭಿಸಿದ್ದಾರೆ.

ಬೆಳಿಗ್ಗೆ 11 ಗಂಟೆಗೆ ಕಲಾಪ ಆರಂಭವಾಗುತ್ತಿದ್ದಂತೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಹಿಪ್ಪರಗಿ ಅವರ ಎದುರು ವಕೀಲ ಸಿ.ಎಚ್.ಹನುಮಂತರಾಯ ಅವರೊಂದಿಗೆ ಹಾಜರಾದ ಸಿರಾಜಿನ್ ಬಾಷಾ ಮತ್ತು ಬಾಲರಾಜ್ ಮೂರು ಹೊಸ ಮೊಕದ್ದಮೆಗಳನ್ನು ದಾಖಲಿಸಿದರು. ಎಲ್ಲ ಎಲ್ಲ ಮೊಕದ್ದಮೆಗಳಲ್ಲೂ ಯಡಿಯೂರಪ್ಪ ಅವರನ್ನೇ ಮೊದಲನೇ ಆರೋಪಿ ಎಂದು ನಮೂದಿಸಲಾಗಿದೆ.

ಮೂರು ಮೊಕದ್ದಮೆಗಳಲ್ಲೂ ಸಿರಾಜಿನ್ ಅವರೊಬ್ಬರೇ ಅರ್ಜಿದಾರರು. ಹಿಂದಿನ ಮೊಕದ್ದಮೆಗಳಲ್ಲೂ ಅವರೊಬ್ಬರೇ ಅರ್ಜಿದಾರರಾಗಿದ್ದಾರೆ. ಹೊಸ ಮೊಕದ್ದಮೆಗಳಲ್ಲಿ ಬಾಲರಾಜ್ ಅವರನ್ನು ಸಾಕ್ಷಿದಾರರ ಪಟ್ಟಿಯಲ್ಲಿ ಹೆಸರಿಸಲಾಗಿದೆ.

ರೂ 189.71 ಕೋಟಿ ಲಾಭ: ಹೊಸ ಮೊಕದ್ದಮೆಗಳಲ್ಲಿ ಪ್ರಸ್ತಾಪಿಸಿರುವ ಒಂಬತ್ತು ಪ್ರಕರಣಗಳಲ್ಲಿ ಅಕ್ರಮ ಎಸಗಿರುವ ಮುಖ್ಯಮಂತ್ರಿ ಕುಟುಂಬಕ್ಕೆ 189.71 ಕೋಟಿ ರೂಪಾಯಿ ಲಾಭ ಆಗಿದೆ. ಆದರೆ ಈ ಕಾನೂನುಬಾಹಿರ ನಿರ್ಧಾರಗಳಿಂದ ಸರ್ಕಾರದ ಬೊಕ್ಕಸಕ್ಕೆ ರೂ 465.32 ಕೋಟಿ ನಷ್ಟವಾಗಿದೆ ಎಂದು ದೂರಿದ್ದಾರೆ.

‘ಆದರ್ಶ ಡೆವಲಪರ್ಸ್‌ಗೆ ಸಂಬಂಧಿಸಿದ ವಿಷಯದಲ್ಲಿ ‘ಅನುಕೂಲ’ ಮಾಡಿಕೊಟ್ಟ ಕಾರಣ ಮುಖ್ಯಮಂತ್ರಿಯವರ ನಂಬಿಕಸ್ಥ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ರೂ 3.15 ಕೋಟಿ ಹಣಕಾಸಿನ ನೆರವು ದೊರೆತಿದೆ’ ಎಂಬ ಉಲ್ಲೇಖ ದೂರಿನಲ್ಲಿದೆ. ಆದರೆ ಶೋಭಾ ವಿರುದ್ಧ ಮೊಕದ್ದಮೆ ದಾಖಲಿಸಲು ರಾಜ್ಯಪಾಲರಿಂದ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಅವರನ್ನು ಆರೋಪಿಗಳ ಪಟ್ಟಿಯಲ್ಲಿ ಸೇರಿಸಿಲ್ಲ.

ಸೋಮವಾರ ಹೂಡಿರುವ ಮೊದಲ ಮೊಕದ್ದಮೆಯಲ್ಲಿ ಮುಖ್ಯಮಂತ್ರಿ ಸೇರಿದಂತೆ ಆರು ಆರೋಪಿಗಳನ್ನು ಹೆಸರಿಸಲಾಗಿದೆ. ಯಡಿಯೂರಪ್ಪ ಕುಟುಂಬದ ಸದಸ್ಯರ ಒಡೆತನದ ಧವಳಗಿರಿ ಪ್ರಾಪರ್ಟಿ ಡೆವಲಪರ್ಸ್, ಭಗತ್ ಹೋಮ್ಸ್, ಸೋಹನ್‌ಕುಮಾರ್, ಆದರ್ಶ ಡೆವಲಪರ್ಸ್ ಮತ್ತು ಆದರ್ಶ ಡೆವಲಪರ್ಸ್‌ನ ಪಾಲುದಾರ ಬಿ.ಎಂ.ಜಯಶಂಕರ್ ಪುತ್ರ ಬಿ.ಎಂ.ಕರುಣೇಶ್ ಅವರನ್ನು ಆರೋಪಿಗಳೆಂದು ಉಲ್ಲೇಖಿಸಲಾಗಿದೆ.

ಎರಡನೇ ಮೊಕದ್ದಮೆಯಲ್ಲಿ ಯಡಿಯೂರಪ್ಪ ಸೇರಿದಂತೆ 11 ಆರೋಪಿಗಳಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಮುಖ್ಯಮಂತ್ರಿಯವರ ಪುತ್ರರಾದ ವಿಜಯೇಂದ್ರ, ರಾಘವೇಂದ್ರ, ಸೋಹನ್‌ಕುಮಾರ್, ಮಾಲೂರು ಶಾಸಕ ಎಸ್.ಎನ್.ಕೃಷ್ಣಯ್ಯ ಶೆಟ್ಟಿ, ಉದ್ಯಮಿ ಪ್ರವೀಣ್ ಚಂದ್ರ, ತ್ರಿಶೂಲ್ ಡೆವಲಪರ್ಸ್ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಶೆಟ್ಟಿ, ಬೆಸ್ಟೋ ಇನ್‌ಫ್ರಾಸ್ಟ್ರಕ್ಚರ್ ಬೆಂಗಳೂರು ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಬಿ.ಎಸ್.ಅಶೋಕ್‌ಕುಮಾರ್, ಉದ್ಯಮಿ ಬಿ.ಆರ್.ಶೆಟ್ಟಿ, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಮತ್ತು ಜಿ.ಸೆಲ್ವಕುಮಾರ್ (ವಿಳಾಸವಿಲ್ಲ) ಅವರನ್ನು ಆರೋಪಿಗಳ ಪಟ್ಟಿಯಲ್ಲಿ ಹೆಸರಿಸಲಾಗಿದೆ.

ಮೂರನೇ ಮೊಕದ್ದಮೆಯಲ್ಲೂ ಆರೋಪಿಗಳ ಪಟ್ಟಿಯಲ್ಲಿ 11 ಹೆಸರುಗಳಿವೆ. ಯಡಿಯೂರಪ್ಪ, ಧವಳಗಿರಿ ಪ್ರಾಪರ್ಟಿ ಡೆವಲಪರ್ಸ್, ಭಗತ್ ಹೋಮ್ಸ್, ಕೃಷ್ಣಯ್ಯ ಶೆಟ್ಟಿ, ಕೃಷ್ಣಯ್ಯ ಶೆಟ್ಟಿ ಒಡೆತನದ ಬಾಲಾಜಿ ಕೃಪ ಎಂಟರ್‌ಪ್ರೈಸಸ್, ಪ್ರವೀಣ್ ಚಂದ್ರ, ಎಲಿಯಾನ್ ಡೆವಲಪರ್ಸ್ ನಿರ್ದೇಶಕ ಎಸ್.ಎಸ್.ಉಗೇಂದರ್, ಕೋರಮಂಗಲ ಮೂರನೇ ಬ್ಲಾಕ್‌ನ ನಮ್ರತಾ ಶಿಲ್ಪಿ, ರಿಯಲ್ ಎಸ್ಟೇಟ್ ಉದ್ಯಮಿ ರೆಡ್ಡಿ ವೀರಣ್ಣ ಅವರ ಪತ್ನಿ ಆರ್.ಸುಗುಣಾ, ಮುಖ್ಯಮಂತ್ರಿಯವರ ಕುಟುಂಬದ ಸದಸ್ಯರ ಒಡೆತನದ ಸಹ್ಯಾದ್ರಿ ಹೆಲ್ತ್‌ಕೇರ್ ಅಂಡ್ ಡಯಾಗ್ನಾಸ್ಟಿಕ್ಸ್ ಮತ್ತು ಶಾಸಕ ಡಾ.ಡಿ.ಹೇಮಚಂದ್ರ ಸಾಗರ್ ಹೆಸರು ಈ ಪಟ್ಟಿಯಲ್ಲಿದೆ.

ತಡೆ ಕೋರಿ ಅರ್ಜಿ:
ಸೋಮವಾರ ಬೆಳಿಗ್ಗೆ ಹೊಸ ಮೊಕದ್ದಮೆಗಳ ಅರ್ಜಿಗಳನ್ನು ಸ್ವೀಕರಿಸಿದ ನ್ಯಾಯಾಧೀಶರು ಶನಿವಾರ ದಾಖಲಿಸಿದ್ದ ಮೊಕದ್ದಮೆಗಳ ವಿಚಾರಣೆಯನ್ನು ಮಧ್ಯಾಹ್ನ 3 ಗಂಟೆಗೆ ನಡೆಸುವುದಾಗಿ ಪ್ರಕಟಿಸಿದರು. ಮಧ್ಯಾಹ್ನ ಸೋಹನ್‌ಕುಮಾರ್ ಪರ ವಕೀಲರು ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆಗೆ ತಡೆ ನೀಡುವಂತೆ ಅರ್ಜಿ ಸಲ್ಲಿಸಿದರು.

‘ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಕಲಂ 210ರ ಪ್ರಕಾರ ಹೈಕೋರ್ಟ್‌ನಲ್ಲಿರುವ ವಿಷಯಗಳ ವಿಚಾರಣೆಯನ್ನು ಅಧೀನ ನ್ಯಾಯಾಲಯ ನಡೆಸುವಂತಿಲ್ಲ. ಭೂ ಹಗರಣಗಳ ತನಿಖೆ ಕುರಿತು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ಆದ್ದರಿಂದ ಈ ನ್ಯಾಯಾಲಯ ವಿಚಾರಣೆ ನಡೆಸುವುದು ಸರಿಯಲ್ಲ’ ಎಂದು ಸೋಹನ್‌ಕುಮಾರ್ ಪರ ವಕೀಲ ಸಂದೀಪ್ ಪಾಟೀಲ್ ವಾದಿಸಿದರು.

‘ಅರ್ಕಾವತಿ ಬಡಾವಣೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸ್ವಾಧೀನಪಡಿಸಿಕೊಂಡಿದ್ದ 60 ಎಕರೆ ಭೂಮಿಯನ್ನು ಎಚ್.ಡಿ.ಕುಮಾರಸ್ವಾಮಿ ಡಿನೋಟಿಫೈ ಮಾಡಿದ್ದರು. ಅವರನ್ನೂ ಪ್ರಕರಣದ ಆರೋಪಿಗಳ ಪಟ್ಟಿಯಲ್ಲಿ ಸೇರಿಸಬೇಕು’ ಎಂಬ ಬೇಡಿಕೆಯನ್ನೂ ಮುಂದಿಟ್ಟರು.
ಆದರೆ ನ್ಯಾಯಾಲಯವು ಮೊಕದ್ದಮೆಗಳನ್ನು ವಿಚಾರಣೆಗೆ ಸ್ವೀಕರಿಸುವ ಮುನ್ನವೇ ಆರೋಪಿ ಪರ ವಕೀಲರಿಗೆ ವಾದ ಮಂಡನೆಗೆ ಅವಕಾಶ ನೀಡದಂತೆ ಅರ್ಜಿದಾರರ ಪರ ವಕೀಲ ಹನುಮಂತರಾಯ ಆಕ್ಷೇಪ ವ್ಯಕ್ತಪಡಿಸಿದರು. ‘ಅರ್ಜಿದಾರರ ಹೇಳಿಕೆಗಳನ್ನು ಮೊದಲು ದಾಖಲಿಸಿಕೊಳ್ಳಬೇಕು. ಬಳಿಕವೇ ಆರೋಪಿಗಳು ವಿಚಾರಣೆಯಲ್ಲಿ ಹಾಜರಾಗಲು ಅವಕಾಶ ನೀಡಲು ಕಾನೂನಿನಲ್ಲಿ ಅವಕಾಶವಿದೆ’ ಎಂದರು.
ಬಳಿಕ ವಿಚಾರಣೆಯನ್ನು ಇದೇ 31ಕ್ಕೆ ಮುಂದೂಡಿದ ನ್ಯಾಯಾಧೀಶರು, ಸೋಹನ್‌ಕುಮಾರ್ ಪರ ವಕೀಲರ ಅರ್ಜಿಯನ್ನು ಮಾನ್ಯ ಮಾಡಬೇಕೆ? ಬೇಡವೇ ಎಂಬುದನ್ನು ಅಂದೇ ವಿಚಾರಣೆ ನಡೆಸುವುದಾಗಿ ಪ್ರಕಟಿಸಿದರು.

‘ಮುಖ್ಯಮಂತ್ರಿ ವಿರುದ್ಧದ ಅರ್ಜಿಗಳ ವಿಚಾರಣೆಗೆ ವಿಶೇಷ ಆದ್ಯತೆ ನೀಡಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಸಾಮಾನ್ಯ ನಾಗರಿಕರಿಗೆ ತೊಂದರೆ ಆಗುತ್ತದೆ. ಆದ್ದರಿಂದ ಮಧ್ಯಾಹ್ನದ ಬಳಿಕವೇ ಈ ಪ್ರಕರಣದ ವಿಚಾರಣೆ ನಡೆಸಲಾಗುವುದು’ ಎಂದು ನ್ಯಾಯಾಧೀಶರು ತಿಳಿಸಿದರು.

ಹೊಸ ಮೊಕದ್ದಮೆಗಳಲ್ಲಿ ಉಲ್ಲೇಖಿಸಿರುವ ಪ್ರಕರಣಗಳು:
1- ಮುಖ್ಯಮಂತ್ರಿಯವರ ಅಳಿಯ ಸೋಹನ್‌ಕುಮಾರ್ ಅವರ ಸೋದರಮಾವ ಆರ್.ಪಿ.ಶಂಕರ್ ಅವರಿಗೆ ಬೆಂಗಳೂರಿನ ಎಚ್‌ಎಸ್‌ಆರ್ ಬಡಾವಣೆಯಲ್ಲಿ 33ಎ ಸಂಖ್ಯೆಯ ನಿವೇಶನವನ್ನು ಅಕ್ರಮವಾಗಿ ಮಂಜೂರು ಮಾಡಿರುವುದು. ಬಳಿಕ ಸೋಹನ್‌ಕುಮಾರ್ ಅವರಿಗೆ ಕಾನೂನುಬಾಹಿರವಾಗಿ ಈ ಆಸ್ತಿಯನ್ನು ವರ್ಗಾವಣೆ ಮಾಡಿರುವುದು.
2- ಆದರ್ಶ ಡೆವಲಪರ್ಸ್‌ನಿಂದ ಯಡಿಯೂರಪ್ಪ, ಧವಳಗಿರಿ ಪ್ರಾಪರ್ಟಿ ಡೆವಲಪರ್ಸ್, ಭಗತ್ ಹೋಮ್ಸ್ ಮತ್ತು ಸಚಿವೆ ಶೋಭಾ ಕರಂದ್ಲಾಜೆ ಲಂಚ ಪಡೆದಿರುವುದು.
3- ನಾಗರಬಾವಿ ಮೊದಲನೇ ಹಂತದ ಬಡಾವಣೆ ನಿರ್ಮಾಣಕ್ಕಾಗಿ ಬಿಡಿಎ ನಾಗರಬಾವಿ ಗ್ರಾಮದಲ್ಲಿ ಸ್ವಾಧೀನಪಡಿಸಿಕೊಂಡಿದ್ದ 5.13 ಎಕರೆ ಭೂಮಿಯನ್ನು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ತೀರ್ಪುಗಳನ್ನು ಉಲ್ಲಂಘಿಸಿ, ಕಾನೂನುಬಾಹಿರವಾಗಿ ಡಿನೋಟಿಫೈ ಮಾಡಿರುವುದು.
4- ಮುಖ್ಯಮಂತ್ರಿಯವರ ಕುಟುಂಬದ ಸದಸ್ಯರ ಒಡೆತನದ ಧವಳಗಿರಿ ಪ್ರಾಪರ್ಟಿ ಡೆವಲಪರ್ಸ್ ಬಳಸಿಕೊಂಡು ಆರ್ಥಿಕ ಅನುಕೂಲ ಪಡೆದಿರುವುದು.
5- ಬಿಡಿಎ ಶ್ರೀರಾಮಪುರ ಗ್ರಾಮದ ಸರ್ವೇ ನಂಬರ್ 15/1 ಮತ್ತು 15/2ರಲ್ಲಿ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಬೆಸ್ಟೋ ಇನ್‌ಫ್ರಾಸ್ಟ್ರಕ್ಚರ್ ಬೆಂಗಳೂರು ಪ್ರೈವೇಟ್ ಲಿಮಿಟೆಡ್‌ಗೆ ಲಾಭ ಮಾಡಿಕೊಡಲು ಕಾನೂನುಬಾಹಿರವಾಗಿ ಡಿನೋಟಿಫೈ ಮಾಡಿರುವುದು.
6- ಆರ್‌ಎಂವಿ ಎರಡನೇ ಹಂತದ ಬಡಾವಣೆಯ 2 ಮತ್ತು 3ನೇ ಸಂಖ್ಯೆಯ ನಿವೇಶನಗಳನ್ನು ಸಂಸದ ಬಿ.ವೈ.ರಾಘವೇಂದ್ರ ಹಾಗೂ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರಿಗೆ ಅಕ್ರಮವಾಗಿ ಮಂಜೂರು ಮಾಡಿರುವುದು.
7- ಮುಖ್ಯಮಂತ್ರಿ ಕುಟುಂಬದ ಸದಸ್ಯರ ಒಡೆತನದ ಭಗತ್ ಹೋಮ್ಸ್ ಕಂಪೆನಿ ಮೂಲಕ ಆರ್ಥಿಕ ಲಾಭ ಪಡೆದಿರುವುದು.
8- ರಾಚೇನಹಳ್ಳಿಯಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯನ್ನು ಡಿನೋಟಿಫೈ ಮಾಡಿರುವುದಕ್ಕಾಗಿ ಹೆಲ್ತ್‌ರೆನ್ ಅಡ್ವೈಸರ್ಸ್‌ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಅದೇ ಗ್ರಾಮದ ಸರ್ವೇ ನಂಬರ್ 36/1 ಮತ್ತು 37/2ರಲ್ಲಿ ಭೂಮಿ ಪಡೆದಿರುವುದು.
9- ಉತ್ತರಹಳ್ಳಿಯ ಸರ್ವೇ ನಂಬರ್ 121ರ ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಿರುವುದಕ್ಕಾಗಿ ಸಹ್ಯಾದ್ರಿ ಹೆಲ್ತ್‌ಕೇರ್ ಅಂಡ್ ಡಯಾಗ್ನಾಸ್ಟಿಕ್ಸ್ ಮೂಲಕ ಆರ್ಥಿಕ ಅನುಕೂಲ ಪಡೆದಿರುವುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT