ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ ವಿರುದ್ಧ ಮುಂದುವರಿದ ಎಚ್‌ಡಿಕೆ ವಾಗ್ದಾಳಿ

Last Updated 27 ಜೂನ್ 2011, 19:30 IST
ಅಕ್ಷರ ಗಾತ್ರ

ಧರ್ಮಸ್ಥಳ:  ಇಡೀ ರಾಜ್ಯದಲ್ಲಿ ಭಾರಿ ಚರ್ಚೆ, ಕುತೂಹಲಕ್ಕೆ ಕಾರಣವಾದ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡುವಿನ `ಆಣೆ- ಪ್ರಮಾಣ~ ವಿವಾದಕ್ಕೆ ಶ್ರೀ ಸನ್ನಿಧಿಯಲ್ಲಿ ಸೋಮವಾರ ವಿರಾಮ ಬಿದ್ದಿದೆ.

ಆಣೆ- ಪ್ರಮಾಣದಿಂದ ಹಿಂದೆ ಸರಿದರೂ, ತಮ್ಮ ಬೆಂಬಲಿಗರ ಜತೆ ಧರ್ಮಸ್ಥಳಕ್ಕೆ ಆಗಮಿಸಿದ ಇಬ್ಬರೂ ನಾಯಕರು, ದೇವರ ದರ್ಶನ ಮಾಡಿ, `ಮಾತು ಬಿಡ ಮಂಜುನಾಥ~ನ ಎದುರು ಮನಸ್ಸು ಬಿಚ್ಚಿಟ್ಟಿದ್ದಾರೆ.

ನಂತರ ಮಾಧ್ಯಮದವರಿಗೆ ಮುಖಾಮುಖಿಯಾದ ಮುಖ್ಯಮಂತ್ರಿ, ಆಣೆ- ಪ್ರಮಾಣ ಬಗ್ಗೆ ಚಕಾರ ಎತ್ತಲಿಲ್ಲ. ಆದರೆ ಕುಮಾರಸ್ವಾಮಿ, ಆಣೆ-ಪ್ರಮಾಣಕ್ಕೆ ಕಾರಣವಾದ ವಿಷಯ ಪ್ರಸ್ತಾಪಿಸಿ, `ಈಗಲೂ ನನ್ನ ನಿಲುವಿಗೆ ಬದ್ಧ. ಎಲ್ಲವನ್ನೂ ದೇವರ ಎದುರು ಮೌನವಾಗಿಯೇ ಅರಿಕೆ ಮಾಡಿಕೊಂಡಿದ್ದೇನೆ~ ಎಂದರು.

`ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ರಾಜಕೀಯ ಧರ್ಮ-ಅಧರ್ಮ, ನ್ಯಾಯ- ಅನ್ಯಾಯದ ವಿಷಯದಲ್ಲಿ ತಾವೇ ಮುಂದಿನ ದಿನಗಳಲ್ಲಿ ಒಂದು ತೀರ್ಮಾನ ನೀಡಬೇಕು. ಈ ರಾಜ್ಯದ ಜನರ ಮನಸ್ಸಿನಲ್ಲಿ ಯಾವುದು ನ್ಯಾಯ-ಅನ್ಯಾಯ, ಯಾವುದು ಸತ್ಯ-ಅಸತ್ಯ ಎಂಬ ಖಚಿತ ಭಾವ ಮೂಡಿಸಬೇಕು. ರಾಜ್ಯದ ಕುರಿತು ಇದೀಗ ಕೆಟ್ಟ ಭಾವನೆ ಮೂಡಿದೆ. ಎಲ್ಲದಕ್ಕೂ ತೆರೆ ಎಳೆಯಬೇಕು ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದೆ~ ಎಂದರು.

`ಜನಸಾಮಾನ್ಯರ ಜತೆ ಸರತಿ ಸಾಲಿನಲ್ಲಿ ದೇವರ ದರ್ಶನ ಮಾಡುವ ಉದ್ದೇಶವಿತ್ತು. ಆದರೆ ಧರ್ಮಾಧಿಕಾರಿಗಳು ಕ್ಷೇತ್ರದಲ್ಲಿ ಕೆಲವು ರೀತಿ ರಿವಾಜುಗಳಿದ್ದು, ಅದರಂತೆಯೇ ನಡೆದುಕೊಳ್ಳಬೇಕು ಎಂದು ಸೂಚನೆ ನೀಡಿದರು. ಅವರ ನಿರ್ದೇಶನಕ್ಕೆ ತಲೆಬಾಗಿದೆ~ ಎಂದರು.

`ಆಣೆ ಪ್ರಮಾಣ ರಾಜಕೀಯ ಪ್ರಹಸನ, ನಾಟಕೀಯ ಘಟನೆಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಅವಕಾಶ ಕಲ್ಪಿಸಿದವರು. ಮುಂದೆ ಕೆಲವು ತೀರ್ಮಾನ ಕೈಗೊಳ್ಳುವಾಗ ಮುಖ್ಯಮಂತ್ರಿ ಇಂತಹ ಅಚಾತುರ್ಯಗಳಿಗೆ ಅವಕಾಶ ಮಾಡಿ ಕೊಡಬಾರದು. ಅವರಿಗೆ ಭಗವಂತ ಸದ್ಬುದ್ಧಿಕೊಡಲಿ ಎಂದೂ ಪ್ರಾರ್ಥಿಸಿದೆ~ ಎಂದು ತಿಳಿಸಿದರು.

`ಪ್ರಮಾಣದ ಬಗ್ಗೆ ಕ್ಷೇತ್ರದಲ್ಲಿರುವ ಪದ್ಧತಿ ನನಗೆ ಮುಖ್ಯವಲ್ಲ. ಯಡಿಯೂರಪ್ಪ ಜಾಹೀರಾತು ನೀಡುವ ಮೂಲಕ ಬಹಿರಂಗವಾಗಿ ಸವಾಲು ಹಾಕಿದರು. ಅವರು ಪಲಾಯನವಾದಿ. ಆಣೆ-ಪ್ರಮಾಣ ವಿಚಾರದಲ್ಲಿ ಕ್ಷೇತ್ರದಲ್ಲಿನ ಪದ್ಧತಿಯಂತೆ ನಡೆಯದಿರಲು ಸಿಎಂ ಕಾರಣ. ಈ ಬಗ್ಗೆ ಧರ್ಮಾಧಿಕಾರಿ ಅವರ ಮುಂದೆಯೂ ಹೇಳಿದ್ದೇನೆ~ ಎಂದರು.

`ಜಾಹೀರಾತು ನೀಡುವ ಮೂಲಕ ಮುಖ್ಯಮಂತ್ರಿ ನನ್ನನ್ನು ವಚನ ಭ್ರಷ್ಟ, ನಂಬಿಕೆ ದ್ರೋಹಿ ಎಂದರು. ಎಂಟು ದಿನ ಮುಖ್ಯಮಂತ್ರಿ ಆಗಿ, ನಂತರ ಅಧಿಕಾರ ತ್ಯಜಿಸಲು ಜೆಡಿಎಸ್ ಪ್ರಮುಖ ಖಾತೆಗಳಿಗೆ ಬೇಡಿಕೆ ಇಟ್ಟಿದ್ದು, ಹಣ ಲೂಟಿ ಮಾಡಲು ಅಂತಹ ಖಾತೆ ಕೇಳಿದ್ದೇ ಕಾರಣ ಎಂದೂ ದೂರಿದ್ದರು. ಅಧಿಕಾರ ನಡೆಸುವುದೇ ಅಸಾಧ್ಯವಾಗಿ ಜನರ ಬಳಿಗೆ ಹೋದೆ ಎಂದೂ ಜಾಹೀರಾತಿನಲ್ಲಿ ಸ್ಪಷ್ಟಪಡಿಸಿದ್ದಾರೆ.
 
ಹಾಗಾಗಿ ನಾನು ವಚನ ಭ್ರಷ್ಟ, ನಂಬಿಕೆ ದ್ರೋಹಿ ಅಲ್ಲ ಎಂಬುದು ಸ್ಪಷ್ಟ~ ಎಂದೂ ಕುಮಾರಸ್ವಾಮಿ ಪ್ರತಿಪಾದಿಸಿದರು.ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಜೂ 19ರಂದು ಬರೆದ ಪತ್ರವನ್ನು  ಮಾಧ್ಯಮದ ಮುಂದೆ ಅವರು ಓದಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT