ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂಗೆ ಪೌರ ಸನ್ಮಾನ: ಪಾಲಿಕೆ ನಿರ್ಧಾರ

Last Updated 19 ಜುಲೈ 2012, 8:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಜ್ಯದ ಮುಖ್ಯಮಂತ್ರಿ ಹುದ್ದೆಗೇರಿದ ನಗರದ ಶಾಸಕ ಜಗದೀಶ ಶೆಟ್ಟರ್ ಅವರಿಗೆ ಅವಳಿನಗರದ ಜನತೆ ಪರವಾಗಿ ಪೌರ ಸನ್ಮಾನ ಮಾಡಲು ಬುಧವಾರ ಜರುಗಿದ ವಿಶೇಷ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.

`ಪಾಲಿಕೆ ಕೈಗೊಂಡ ನಿರ್ಣಯದ ಪ್ರತಿಯನ್ನು ಮುಖ್ಯಮಂತ್ರಿಗಳ ಕಚೇರಿಗೆ ತಕ್ಷಣ ಕಳುಹಿಸಿ ಕೊಡಲಾಗುತ್ತದೆ. ಮುಖ್ಯಮಂತ್ರಿಗಳು ನಮಗೆ ಸಮಯ ನಿಗದಿಮಾಡಿದ ದಿನ ಪೌರ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗುತ್ತದೆ. ಎಲ್ಲಿ ನಡೆಸಬೇಕು ಎಂಬುದನ್ನು ನಂತರ ನಿರ್ಧರಿಸೋಣ. ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಕೂಡ ಈ ಕಾರ್ಯಕ್ರಮಕ್ಕೆ ಸಹಯೋಗ ನೀಡುತ್ತದೆ~ ಎಂದು ಚರ್ಚೆಯ ಬಳಿಕ ಮೇಯರ್ ಡಾ. ಪಾಂಡುರಂಗ ಪಾಟೀಲ ಪ್ರಕಟಿಸಿದರು.

`ಶೆಟ್ಟರ್ ಸ್ವತಃ ಸರಳ, ಸಜ್ಜನ ವ್ಯಕ್ತಿ. ಹಾರ-ತುರಾಯಿ ಆಡಂಬರವನ್ನು ಅವರು ಇಷ್ಟಪಡುವುದಿಲ್ಲ. ರಾಜ್ಯದಲ್ಲೂ ಬರದ ಛಾಯೆ ಇದೆ. ವೈಭವದ ಸಮಾರಂಭ ನಡೆಸುವ ಮೂಲಕ ಅವರಿಗೆ ಮುಜುಗುರ ತರುವುದು ಬೇಡ. ಅದ್ದೂರಿ ಅಲ್ಲದಂತಹ ಹೃದಯಸ್ಪರ್ಶಿ ಹಾಗೂ ಭಾವನಾತ್ಮಕ ಸನ್ಮಾನವನ್ನು ಮಾಡೋಣ~ ಎಂದು ಅವರು ಹೇಳಿದರು.

ಪೌರ ಸನ್ಮಾನದ ಕುರಿತಂತೆ ನಡೆದ ಚರ್ಚೆಯಲ್ಲಿ ಎಲ್ಲ ಸದಸ್ಯರು ಪಕ್ಷಭೇದ ಮರೆತು ಮಾತನಾಡಿದರು. ಶೆಟ್ಟರ್‌ಗೆ ಅದ್ದೂರಿಯಾದ ಸನ್ಮಾನ ಮಾಡಬೇಕು ಎಂಬುದಾಗಿ ಎಲ್ಲರೂ ಆಗ್ರಹಿಸಿದರು.

`ಎರಡೂವರೆ ದಶಕಗಳ ಬಳಿಕ ನಗರದ ವ್ಯಕ್ತಿಯೊಬ್ಬರು ಮುಖ್ಯಮಂತ್ರಿಯಾಗಿದ್ದು ನಮಗೆಲ್ಲ ಹೆಮ್ಮೆ ತಂದಿದೆ. ಅವಳಿನಗರಕ್ಕೆ ಮಾತ್ರವಲ್ಲದೆ ಉತ್ತರ ಕರ್ನಾಟಕದ ಪಾಲಿಗೆ ಇದೊಂದು ಸೌಭಾಗ್ಯದ ಸಂಗತಿಯಾಗಿದೆ. ಎಲ್ಲೆಡೆ ಕಟೌಟ್‌ಗಳನ್ನು ಹಾಕಬೇಕು. ಬ್ಯಾನರ್‌ಗಳನ್ನು ಕಟ್ಟಬೇಕು. ಹಬ್ಬದ ವಾತಾವರಣವನ್ನು ನಿರ್ಮಾಣ ಮಾಡಬೇಕು~ ಎಂದು ಕಾಂಗ್ರೆಸ್‌ನ ಗಣೇಶ ಟಗರಗುಂಟಿ ಹೇಳಿದರು.

`ಯಾವುದೇ ಒಂದು ಪಕ್ಷದ ಕಾರ್ಯಕ್ರಮ ಇದಾಗಬಾರದು. ಒಂದೇ ಪಕ್ಷದವರಿಗೆ ವೇದಿಕೆಯನ್ನು ಬಿಟ್ಟು ಕೊಡುವುದೂ ಉಚಿತವಲ್ಲ. ಪಕ್ಷಭೇದ ಮರೆತು ಅವಳಿನಗರದ ಜನತೆ ಸಮಾರಂಭ ಇದಾಗುವಂತೆ ಎಚ್ಚರಿಕೆ ವಹಿಸಬೇಕು~ ಎಂದು ಜೆಡಿಎಸ್‌ನ ರಾಜಣ್ಣ ಕೊರವಿ ಆಗ್ರಹಿಸಿದರು. `ಹುಬ್ಬಳ್ಳಿ ಮಾತ್ರವಲ್ಲದೆ ಧಾರವಾಡವನ್ನೂ ಸಿಂಗರಿಸಬೇಕು. ಮುಖ್ಯಮಂತ್ರಿಗಳ ಜೊತೆ ಎಲ್ಲ ಸದಸ್ಯರ ಗ್ರೂಪ್ ಫೋಟೋ ತೆಗೆಸಬೇಕು~ ಎಂದು ಬಿಜೆಪಿಯ ಪೂರ್ಣಾ ಪಾಟೀಲ ಮನವಿ ಮಾಡಿದರು.

ಕಾಂಗ್ರೆಸ್‌ನ ಯಾಸಿನ್ ಹಾವೇರಿಪೇಟ್, `ಬರಗಾಲದ ಈ ಸಂದರ್ಭದಲ್ಲಿ ಅದ್ದೂರಿ ಸಮಾರಂಭ ಬೇಡ~ ಎಂದು ಸಲಹೆ ನೀಡಿದರೆ, `ಸನ್ಮಾನ ಸಮಾರಂಭವನ್ನು ಧಾರವಾಡದಲ್ಲೇ ನಡೆಸಬೇಕು~ ಜೆಡಿಎಸ್‌ನ ವಿಜಯಲಕ್ಷ್ಮಿ ಲೂತಿಮಠ  ಎಂದು ಒತ್ತಾಯ ಮಾಡಿದರು. ಬಿಜೆಪಿಯ ರಾಘವೇಂದ್ರ ರಾಮದುರ್ಗ, `ಸಾಹಿತಿಗಳು, ಕಲಾವಿದರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು~ ಎಂದು ಸೂಚಿಸಿದರು.

`ಸ್ಮರಣ ಸಂಚಿಕೆಯೊಂದನ್ನು ಹೊರತರಬೇಕು~ ಎಂದು ರಾಜಶ್ರೀ ಜಡಿ ಸಲಹೆ ನೀಡಿದರು. ಸದಸ್ಯರಾದ ಸರೋಜಾ ಪಾಟೀಲ, ಅಲ್ತಾಫ್ ಕಿತ್ತೂರ, ಅಶೋಕ ನಿಡುವಣಿ, ಲಕ್ಷ್ಮಿ ಬಿಜವಾಡ, ರಾಧಾಬಾಯಿ ಸಫಾರೆ, ರಾಮಣ್ಣ ಬಡಿಗೇರ, ಡಿ.ಕೆ. ಚವ್ಹಾಣ, ಸಂಜಯ್ ಕಪಾಟಕರ್, ಶಿವಾನಂದ ಮುತ್ತಣ್ಣವರ, ಭಾರತಿ ಪಾಟೀಲ, ಲಕ್ಷ್ಮಣ ಕಲಾಲ ಚರ್ಚೆಯಲ್ಲಿ ಪಾಲ್ಗೊಂಡರು. ಎಲ್ಲರೂ ನೂತನ ಮುಖ್ಯಮಂತ್ರಿಗಳನ್ನು ಅಭಿನಂದಿಸಿ, ಅವರ ವ್ಯಕ್ತಿತ್ವದ ಗುಣಗಾನ ಮಾಡಿದರು.

ಪಾಲಿಕೆ ವಿರೋಧ ಪಕ್ಷದ ನಾಯಕ ದಶರಥ ವಾಲಿ ನಿಲುವಳಿ ಮಂಡಿಸಿದರು. ಸಭಾನಾಯಕ ಪ್ರಕಾಶ ಗೋಡಬೊಲೆ ಅನುಮೋದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT