ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂಗೆ ಹುಬ್ಬಳ್ಳಿಯಲ್ಲಿ ನೀರಸ ಸ್ವಾಗತ

Last Updated 13 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕುಂದಗೋಳ ಶಾಸಕ ಎಸ್. ಐ.ಚಿಕ್ಕನಗೌಡರ ಪುತ್ರಿಯ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾನುವಾರ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರಿಗೆ ವಿಮಾನ ನಿಲ್ದಾಣದಲ್ಲಿ ನೀಡಿದ ಸ್ವಾಗತ ನೀರಸವಾಗಿತ್ತು.

ಮಧ್ಯಾಹ್ನ 12.30ಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ಸದಾನಂದಗೌಡ ಅವರನ್ನು ಸ್ವಾಗತಿಸಲು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೊರತುಪಡಿಸಿ ಯಾವುದೇ ಸ್ಥಳೀಯ ಬಿಜೆಪಿ ಮುಖಂಡರು, ಶಾಸಕರು ಹಾಗೂ ಪಕ್ಷದ ಕಾರ್ಯಕರ್ತರು ಆಗಮಿಸಿರಲಿಲ್ಲ.

ಪೊಲೀಸರು, ತಹಸೀಲ್ದಾರ್ ಸೇರಿದಂತೆ ಸರ್ಕಾರಿ ಅಧಿಕಾರಿಗಳು ಹಾಗೂ ಮಾಧ್ಯಮದವರನ್ನು ಹೊರತುಪಡಿಸಿ ಬೇರೆ ಯಾರೂ ಸಿಎಂ ಬಂದಾಗ ಹಾಜರಿರಲಿಲ್ಲ. ಮುಂಜಾನೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸ್ವಾಗತಿಸುವಾಗ ವಿಮಾನ ನಿಲ್ದಾಣದಲ್ಲಿ ಇದ್ದ ಸಂಭ್ರಮ ಮಧ್ಯಾಹ್ನ ಸದಾನಂದಗೌಡ ಬಂದಾಗ ಇರಲಿಲ್ಲ.

ವಿಮಾನ ನಿಲ್ದಾಣದ ಎದುರು ಪೊಲೀಸರಿಂದ ಗೌರವ ವಂದನೆ ಸ್ವೀಕರಿಸಿದ ಮುಖ್ಯಮಂತ್ರಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡದೆ ಕಾರು ಹತ್ತಿ ನೇರ ಮದುವೆ ಮಂಟಪಕ್ಕೆ ತೆರಳಿದರು.
ವಧು-ವರರಿಗೆ ಆಶೀರ್ವದಿಸಿದ ಸದಾನಂದಗೌಡ ನೇರ ಊಟದ ಹಾಲ್‌ಗೆ ತೆರಳಿ ಯಡಿಯೂರಪ್ಪ ಅವರೊಂದಿಗೆ ಕುಳಿತು ಊಟ ಮಾಡಿದರು.

ಮದುವೆಯ ಸಂಭ್ರಮ: ಶಾಸಕ ಚಿಕ್ಕನಗೌಡರ ದಂಪತಿಯ ಪುತ್ರಿ ನಂದಿತಾ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಾದಿನಿ ಮಗ ನಿಶಿತ್ ದಾಂಪತ್ಯ ಬದುಕಿಗೆ ಕಾಲಿಟ್ಟರು. ಗೋಕುಲ ಗಾರ್ಡನ್‌ನಲ್ಲಿ ನಡೆದ ಮದುವೆ ಅದ್ದೂರಿಯಾಗಿತ್ತು. ಸಮಾರಂಭಕ್ಕೆ ಸ್ಥಳೀಯ ಹಾಗೂ ರಾಜ್ಯಮಟ್ಟದ ನಾಯಕರು ಆಗಮಿಸಿ ವಧು-ವರರನ್ನು ಆಶೀರ್ವದಿಸಿದರು.

ಸಹಸ್ರಾರು ಬಿಜೆಪಿ ಕಾರ್ಯಕರ್ತರು, ಚಿಕ್ಕನಗೌಡರ ಅಭಿಮಾನಿಗಳು ಹಾಗೂ ಸಂಬಂಧಿಗಳು ಮದುವೆಯಲ್ಲಿ ಪಾಲ್ಗೊಂಡರು. ಬಾಳೆಹೊನ್ನೂರು ರಂಭಾಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮದುವೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT