ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗರೇಟ್ ಒಬ್ಬರದು, ಕ್ಯಾನ್ಸರ್ ಮತ್ತೊಬ್ಬರದು

Last Updated 4 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ತಂಬಾಕು ಸೇವನೆ ಮಾಡಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವವರು ಹಲವರು. ಆದರೆ ಜೀವನದಲ್ಲಿ ಒಮ್ಮೆ ಕೂಡ ಧೂಮಪಾನ ಮಾಡದಿದ್ದರೂ ಅದರ ಹೊಗೆಯ ಸೇವನೆ ಮಾಡಿದ `ತಪ್ಪಿಗೆ~ ಗಂಟಲು ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಧ್ವನಿಪೆಟ್ಟಿಗೆ ಕಳೆದುಕೊಂಡಿರುವ ವ್ಯಕ್ತಿಯೊಬ್ಬರ ಕಥೆ ಇದು.

ಅವರ ಹೆಸರು ಮೋಹನರಾಜ್. ವಯಸ್ಸು 77. ಭಾರತೀಯ ವಾಯುಪಡೆಯ ನಿವೃತ್ತ ವಿಂಗ್ ಕಮಾಂಡರ್. 20ರ ಹರೆಯದಲ್ಲಿ ಒಮ್ಮೆ ಮಾತ್ರ ಸಿಗರೆಟ್ ಸೇವನೆ ಮಾಡಲು ಪ್ರಯತ್ನಿಸಿದ್ದೇ ಕೊನೆ. ವಾಕರಿಕೆ ಬಂದು ನಂತರ ಅದನ್ನು ದೂರ ಇಟ್ಟಿದ್ದರು.

ಆದರೆ ಸಿಗರೆಟ್ `ಹೊಗೆ~ ಮಾತ್ರ ಅವರನ್ನು ಬಿಡಲಿಲ್ಲ. ಕೆಲಸದ ಸ್ಥಳದಲ್ಲಿ ಶೇ 90ಕ್ಕಿಂತ ಹೆಚ್ಚಿನ ಸಿಬ್ಬಂದಿ ಧೂಮಪಾನ ಪ್ರಿಯರು. ಇದರಿಂದ ಪರೋಕ್ಷವಾಗಿ ಹೊಗೆಯನ್ನು ನಿರಂತರವಾಗಿ ಸೇವಿಸುತ್ತ ಬಂದ ಕಾರಣ (ಪ್ಯಾಸೀವ್  ಸ್ಮೋಕಿಂಗ್) ಈಗ ಮೋಹನ್ ಅವರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದಾರೆ. ದಶಕದಿಂದ ಈಚೆಗೆ ಗಂಟಲಿನಲ್ಲಿ ತೊಂದರೆ ಕಾಣಿಸಿಕೊಂಡಿತ್ತು. ಕಳೆದ ಮಾರ್ಚ್‌ನಲ್ಲಿ  ಅವರ ಧ್ವನಿಪೆಟ್ಟಿಗೆ ತೆಗೆದುಹಾಕಲಾಗಿದೆ.

ಆಹಾರ ಸೇವನೆಗಾಗಿ ಹಾಕಿರುವ ಕೊಳವೆ (ಪೈಪ್) ಮೂಲಕ ಇವರು ಕಷ್ಟಪಟ್ಟು ಮಾತನಾಡುತ್ತಾರೆ. ಗಾಳಿ ಕೊಳವೆ ಹಾಗೂ ಆಹಾರದ ಕೊಳವೆ ನಡುವೆ ಚಿಕ್ಕ ರಂಧ್ರ ಮಾಡಲಾಗಿದೆ. ಇಲ್ಲಿ ಉಂಟಾಗುವ ಕಂಪನದಿಂದ ಅವರಿಗೆ ಮಾತನಾಡಲು ಸಾಧ್ಯವಾಗುತ್ತಿದೆ.

ಅವರು ಹೇಳುವುದೇನು?: ತಮಗೆ ಉಂಟಾಗಿರುವ ಸಮಸ್ಯೆ ಕುರಿತು ಮೋಹನ್ ಹೇಳುವಂತೆ-
`ನಾನು ಚಿಕ್ಕವನಿದ್ದಾಗ ಧೂಮಪಾನ ಸಾಮಾನ್ಯವಾಗಿತ್ತು. ಅದನ್ನು ಮಾಡದಿದ್ದರೆ ಅವರಲ್ಲಿ ಏನೋ ತಪ್ಪು ಇದೆ ಎಂದೇ ತಿಳಿಯುವ ಕಾಲವಾಗಿತ್ತು ಅದು. ಆದರೆ ನಾನು ಆ ಚಟಕ್ಕೆ ಬೀಳಲಿಲ್ಲ. ಆದರೆ ನನ್ನ ಸುತ್ತಮುತ್ತಲೂ ಧೂಮಪಾನಿಗಳೇ ತುಂಬಿದ್ದರು.

`ಪಾರ್ಟಿಗಳಿಗೆ ಹೋದರೆ, ಕಚೇರಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಡೆಯೂ ಇದು ಸಾಮಾನ್ಯವಾಗಿತ್ತು. ಆದರೆ `ಪ್ಯಾಸೀವ್ ಸ್ಮೋಕಿಂಗ್~ ಇಷ್ಟೊಂದು ಗಂಭೀರ ಪರಿಣಾಮ ಬೀರುತ್ತದೆ ಎನ್ನುವುದನ್ನು ನಾನು ಕನಸು ಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ.

`ನೀವು ನೋಡಿರಬಹುದು. ಹೋಟೆಲ್‌ಗಳಲ್ಲಿ, ಕಾರುಗಳಲ್ಲಿ, ಅಷ್ಟೇ ಏಕೆ ವಿಮಾನಗಳಲ್ಲಿಯೂ ಧೂಮಪಾನ ಬಟ್ಟಲು (ಆ್ಯಷ್ ಟ್ರೇ) ಇಟ್ಟಿರುತ್ತಾರೆ. ಆದರೆ ಅದನ್ನು ಎಷ್ಟೋ ಸಂದರ್ಭಗಳಲ್ಲಿ ಶುಚಿಗೊಳಿಸಿ ಇಡುವುದಿಲ್ಲ. ಹೊಗೆ ಬರುತ್ತಲೇ ಇರುತ್ತದೆ. ಆದರೆ ಇದನ್ನು ಯಾರು ಕೂಡ ಗಂಭೀರವಾಗಿ ಪರಿಗಣಿಸದೇ ಇರುವುದು ಶೋಚನೀಯ~.

`ಪ್ಯಾಸೀವ್ ಸ್ಮೋಕಿಂಗ್~ ಬಗ್ಗೆ ಜಾಗೃತಿ ಮೂಡಿಸುವ ಸಂಬಂಧ ಜಾಗೃತಿ ಸಂಸ್ಥೆಯೊಂದನ್ನು ಮೋಹನ್ ಹುಟ್ಟುಹಾಕಿದ್ದಾರೆ. ವೆಬ್‌ಸೈಟ್‌ಗಳ ಮೂಲಕವೂ ಇದರ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಇದರಿಂದ ತಮಗೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.
ಎರಡುಪಟ್ಟು ಭಯಾನಕ: ಧೂಮಪಾನಿಗಳಿಂತ `ಪ್ಯಾಸಿವ್ ಸ್ಮೋಕಿಂಗ್~ ಎರಡು ಪಟ್ಟು ಭಯಾನಕವಾಗಿದೆ ಎಂದು ಮೋಹನ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ಫೋರ್ಟಿಸ್ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ. ವಿಶಾಲ್ ರಾವ್ `ಪ್ರಜಾವಾಣಿ~ಗೆ ತಿಳಿಸಿದರು.

ಇದಕ್ಕೆ ಕಾರಣ ನೀಡಿದ ಅವರು, `ಧೂಮಪಾನದಿಂದ ಹೊರಬರುವ ರಾಸಾಯನಿಕಕ್ಕೆ ಧೂಮಪಾನಿಗಳ ಶರೀರ ಒಗ್ಗಿಕೊಂಡಿರುತ್ತದೆ. ಆದರೆ ಇದನ್ನು ಸೇವನೆ ಮಾಡದೇ ಇರುವ ವ್ಯಕ್ತಿಯ ಶರೀರ ಹಾಗಲ್ಲ. ಇದರಿಂದಾಗಿ ಅವರಲ್ಲಿ ಕಾಯಿಲೆ ಉಲ್ಭಣಗೊಳ್ಳುತ್ತದೆ.

`ಬೆಂಗಳೂರು ಒಂದರಲ್ಲಿಯೇ ಶೇ 38ಕ್ಕಿಂತ ಅಧಿಕ ಜನರು ಪರೋಕ್ಷವಾಗಿ ಸಿಗರೆಟ್ ಹೊಗೆ ಸೇವಿಸುತ್ತಿದ್ದಾರೆ. `ಪ್ಯಾಸಿವ್ ಸ್ಮೋಕರ್~ಗಳು ಹೃದಯ ಸಮಸ್ಯೆ, ಆಸ್ತಮಾ, ಅಲರ್ಜಿ ಮುಂತಾದ ಕಾಯಿಲೆಗೆ ತುತ್ತಾಗುವ ಸಾಧ್ಯತೆಗಳೂ ಹೆಚ್ಚು~ ಎಂದು ಅವರು ವಿವರಿಸಿದರು.

`ಇದೇ ಕಾರಣಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ. ಆದರೂ `ಪ್ಯಾಸಿವ್ ಸ್ಮೋಕರ್~ಗಳ ಸಂಖ್ಯೆ ಹೆಚ್ಚುತ್ತಲೇ ಇದೆ~ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT