ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗುವುದೇ ಬಡದೇಶಗಳಿಗೆ ನ್ಯಾಯ?

ಹವಾಮಾನ ಶೃಂಗಸಭೆ
ಅಕ್ಷರ ಗಾತ್ರ

ಪ್ಯಾರಿಸ್‌ನಲ್ಲಿ ಭಾನುವಾರದಿಂದ ಆರಂಭವಾಗಲಿರುವ ಹವಾಮಾನ ವೈಪರೀತ್ಯ ಸಮಾವೇಶದಲ್ಲಿ ಏನಾಗಲಿದೆ?
ಭೂಮಿಯ ತಾಪಮಾನ ಏರಿಕೆ ಬಗ್ಗೆ   ಚರ್ಚಿಸಲು ಜಾಗತಿಕ ನಾಯಕರೆಲ್ಲ 21ನೇ ವಾರ್ಷಿಕ ಸಮಾವೇಶಕ್ಕಾಗಿ ಪ್ಯಾರಿಸ್‌ನಲ್ಲಿ ಸಭೆ ಸೇರುತ್ತಿದ್ದಾರೆ. ಆದರೆ, ಈ ಬಾರಿಯ ಸಮಾವೇಶ ಹಿಂದಿನ ಸಮಾವೇಶಗಳಂತೆ ಇರುವುದಿಲ್ಲ.

ಹವಾಮಾನ ವೈಪರೀತ್ಯದ ಕುರಿತು ವಿಶ್ವನಾಯಕರ ಮನೋಭಾವ ಸ್ವಲ್ಪವಾದರೂ ಬದಲಾಗಿದೆ. ಭೂಮಿಯ ವಾತಾವರಣ ಬಿಸಿಯಾಗುತ್ತಿದೆ ಎಂಬ ಅಂಶವನ್ನು ಒಪ್ಪಿಕೊಳ್ಳಲು ಎಲ್ಲರೂ ತಯಾರಾಗಿದ್ದಾರೆ. ಆದರೆ, ಹವಾಮಾನ ವೈಪರೀತ್ಯದ  ಬಿಸಿ ಬಡದೇಶಗಳಿಗೇ  ಹೆಚ್ಚಾಗಿ ತಟ್ಟುತ್ತಿದೆ.

ಹವಾಮಾನ ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವ ದೇಶಗಳೆಲ್ಲ ಈ ಬಾರಿ ಹಿಂದಿನ ಶೃಂಗಸಭೆಗಳಲ್ಲಿ ತಳೆದದ್ದಕ್ಕಿಂತ ವಿಭಿನ್ನ ನಿಲುವು ತಳೆಯಲು ಸಿದ್ಧವಾಗಿವೆ. ಆದರೆ, ತಾವು ಏಕೆ ಈ ಹೆಜ್ಜೆ ಇಡಬೇಕು ಎಂಬ ಕುರಿತು ಅವರಲ್ಲಿ ಸ್ಪಷ್ಟ ಕಲ್ಪನೆ ಇಲ್ಲ. ಈ ಹಿಂದಿನ ಶೃಂಗಸಭೆಗಳಲ್ಲಿಯೂ ಇದೇ ಅಸ್ಪಷ್ಟ ಕಲ್ಪನೆಯೊಂದಿಗೆ ವಿವಿಧ ಬಣಗಳು ಚರ್ಚೆಯಲ್ಲಿ ಭಾಗವಹಿಸಿದ್ದವು.

ಆದರೆ, ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. 2009ರ ಕೋಪನ್‌ಹೇಗನ್‌ ಸಮಾವೇಶದಲ್ಲಿ ಕೆಲ ದೇಶಗಳ ನಡುವಣ ಒಳಒಪ್ಪಂದದಿಂದಾಗಿ ವಿಶ್ವಾಸ ಭಂಗವಾಗಿ ಶೃಂಗಸಭೆ ವಿಫಲವಾಗಿತ್ತು. ಡೆನ್ಮಾರ್ಕ್‌ ಸರ್ಕಾರಕ್ಕೆ ಈ ಸಂಕಷ್ಟ ನಿಭಾಯಿಸಲು ಸಾಧ್ಯವಾಗಿರಲೇ ಇಲ್ಲ.

ಆದರೆ, ಈ ಬಾರಿ ಹೀಗಾಗಲು ಸಾಧ್ಯವಿಲ್ಲ. ಸಮಾವೇಶ ನಡೆಯುತ್ತಿರುವುದು ಪ್ಯಾರಿಸ್‌ನಲ್ಲಿ. ರಾಜತಾಂತ್ರಿಕ ಮಾತುಕತೆಗಳನ್ನು ನಡೆಸುವಲ್ಲಿ ಫ್ರೆಂಚರು ಸಿದ್ಧಹಸ್ತರು.

ಅಲ್ಲದೇ, ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರ ಅಧಿಕಾರಾವಧಿಯ ಕೊನೆಯ ಹವಾಮಾನ ಶೃಂಗಸಭೆ ಇದು. ಹೇಗಾದರೂ ಮಾಡಿ ಒಪ್ಪಂದವೊಂದಕ್ಕೆ ಸಹಿ ಹಾಕಿಸಬೇಕು, ಆ ಮೂಲಕ ಜಾಗತಿಕ ಮಟ್ಟದಲ್ಲಿ ತಮ್ಮ ಹೆಜ್ಜೆ ಗುರುತು ಬಿಟ್ಟುಹೋಗಬೇಕು ಎಂದು ಒಬಾಮ ಬಯಸುತ್ತಿದ್ದಾರೆ. ಅಮೆರಿಕನ್ನರು ಈಗಾಗಲೇ ಪ್ಯಾರಿಸ್‌ ಒಪ್ಪಂದ ಐತಿಹಾಸಿಕವಾಗಲಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ಹಾಗಿದ್ದರೆ ಪ್ಯಾರಿಸ್‌ನಲ್ಲಿ ಏನಾಗಲಿದೆ? ಕಳೆದ ಇಪ್ಪತ್ತು ಹವಾಮಾನ ವೈಪರೀತ್ಯ ಸಮಾವೇಶಗಳ ಅನುಭವ ಮುಂದಿಟ್ಟುಕೊಂಡು ನಾನು ಮಾತನಾಡುತ್ತೇನೆ. ಅಭಿವೃದ್ಧಿಯ ಹಕ್ಕು ಅತ್ಯಗತ್ಯವಾಗಿರುವ ಆದರೆ, ಈಗಾಗಲೇ ಋತುಮಾನದ ಏರುಪೇರಿನ ಸಂಕಷ್ಟ ಅನುಭವಿಸುತ್ತಿರುವ ನಮ್ಮ ತರಹದ ದೇಶಗಳಿಗೆ ಈ ಒಪ್ಪಂದ ಎಷ್ಟು ಮಹತ್ವದ್ದಾಗಲಿದೆ ಎಂಬುದನ್ನೂ ವಿವರಿಸುತ್ತೇನೆ.

* ಮೊದಲಿಗೆ ಪ್ಯಾರಿಸ್‌ ಒಪ್ಪಂದವಾಗಲಿದೆ. ಅದಂತೂ ನಿಶ್ಚಿತ. ನಾಲ್ಕು ವರ್ಷಗಳ ಕಾಲ ಚರ್ಚಿಸಿ ಈ ಒಪ್ಪಂದದ ಕರಡು ರೂಪಿಸಲಾಗಿತ್ತು ಹಾಗೂ ಇದು ಸಂಪೂರ್ಣ ತದ್ವಿರುದ್ಧವಾದ ನಿಲುವುಗಳನ್ನು ಒಳಗೊಂಡ 50ಕ್ಕೂ ಹೆಚ್ಚು ಪುಟಗಳುಳ್ಳ ದೀರ್ಘ ದಾಖಲೆ ಎಂಬುದನ್ನು ಗಮನದಲ್ಲಿಟ್ಟು ಫ್ರೆಂಚರು ಈಗಾಗಲೇ ಕೆಲ ಜಾಣ ಹೆಜ್ಜೆಗಳನ್ನು ಇಟ್ಟಿದ್ದಾರೆ.

ಈ ಹಿಂದಿನ ಸಮಾವೇಶದ ನಡಾವಳಿಗೆ ವಿರುದ್ಧವಾಗಿ ದೇಶಗಳ ಮುಖ್ಯಸ್ಥರನ್ನು ಶೃಂಗಸಭೆಯ ಮೊದಲ ದಿನವೇ ಚರ್ಚೆಗೆ ಆಹ್ವಾನಿಸಲಾಗಿದೆ. ಒಬಾಮ
ರಿಂದ, ಜರ್ಮನಿಯ ಚಾನ್ಸಲರ್‌ ಏಂಜೆಲಾ ಮರ್ಕೆಲ್‌ ಅವರ ತನಕ, ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರತನಕ ಎಲ್ಲರೂ ಸಮಾವೇಶಕ್ಕೆ ಹಾಜರಾಗಲಿದ್ದಾರೆ.

ಫ್ರೆಂಚರು, ಎರಡು ವಾರಗಳ ಕಾಲ ನಡೆಯಲಿರುವ ಸಮಾವೇಶದ ಆರಂಭದಲ್ಲೇ ಒಪ್ಪಂದದ ಕರಡನ್ನು ಮುಂದಿಟ್ಟು ಸಹಿ ಹಾಕಿಸಿಕೊಳ್ಳಲಿದ್ದಾರೆ. ದೇಶಗಳ ಮುಖ್ಯಸ್ಥರಿಗೆ ಈ ಸ್ಥೂಲ ಒಪ್ಪಂದವನ್ನು ಅನುಮೋದಿಸದೇ ಬೇರೆ ವಿಧಿ ಇರುವುದಿಲ್ಲ.

ಶೃಂಗಸಭೆಯ ಕೊನೆಯ ದಿನ ಒಪ್ಪಂದಕ್ಕೆ ಅಂತಿಮ ಒಪ್ಪಿಗೆ ನೀಡುವವರೆಗೆ ಆಯಾ ದೇಶಗಳ ಅಧಿಕಾರಿಗಳು, ರಾಜತಾಂತ್ರಿಕರು ಎರಡು ವಾರಗಳ ಕಾಲ ಯಾವುದೇ ಅವಸರವಿಲ್ಲದೇ  ಚರ್ಚೆ ನಡೆಸಬಹುದಾಗಿದೆ.

* ಎರಡನೆಯದಾಗಿ ದೇಶಗಳ ಮುಖ್ಯಸ್ಥರು ಸಹಿ ಹಾಕಲಿರುವ ಆರಂಭಿಕ ಒಪ್ಪಂದ ಸರಳವಾಗಿರುತ್ತದೆ, ಹಾಗಾಗಿಯೇ ಅದು ಅವಿವಾದಾತ್ಮಕವಾಗಿರುತ್ತದೆ.
ಇಂಗಾಲದ ಪ್ರಮಾಣ ಕಡಿತಗೊಳಿಸಲು ಆಯಾ ದೇಶಗಳು ಸ್ವಯಂಪ್ರೇರಿತವಾಗಿ ಸಲ್ಲಿಸಿರುವ ‘ರಾಷ್ಟ್ರೀಯವಾಗಿ ನಿಶ್ಚಯಿಸಿರುವ ಉದ್ದೇಶಿತ ಇಂಗಾಲ ಕಡಿತ ದೇಣಿಗೆ’ಯನ್ನು (Intended Nationally Determined Contributions- INDCs ) ಈ ಆರಂಭಿಕ ಒಪ್ಪಂದ ಅನುಮೋದಿಸಲಿದೆ.

ವಿವಿಧ ದೇಶಗಳು ವ್ಯಕ್ತಪಡಿಸಿರುವ ಬದ್ಧತೆಯಿಂದ ಭೂಮಿಯ ತಾಪಮಾನ 2 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗುವುದನ್ನು ತಡೆಯಲು ಸಾಧ್ಯವಿಲ್ಲ ಎಂಬುದನ್ನೂ ಈ ಒಪ್ಪಂದ ಒಪ್ಪಿಕೊಳ್ಳಲಿದೆ. ಸದ್ಯಕ್ಕೆ ಇದು ಅತ್ಯಂತ ಕಡಿಮೆ ಅಪಾಯದ ಆಯ್ಕೆಯಾಗಿ ಕಾಣುತ್ತದೆ. ಆದರೆ, ಭವಿಷ್ಯದಲ್ಲಿ ನಮ್ಮ ಬದ್ಧತೆಯನ್ನು ಹೆಚ್ಚಿಸಿಕೊಳ್ಳಲು ಈ ಒಪ್ಪಂದವು ಸ್ಥಿರವಾದ ಹಾಗೂ ಊಹಿಸಿಕೊಳ್ಳಬಹುದಾದ ಬುನಾದಿಯೊಂದನ್ನು ಹಾಕಿಕೊಡುತ್ತದೆ.

* ಮೂರನೆಯದು, ಇಂಗಾಲ ಪ್ರಮಾಣ ಕಡಿತಗೊಳಿಸಲು ದೇಶಗಳು ವ್ಯಕ್ತಪಡಿಸುವ ಬದ್ಧತೆ ಅಥವಾ ನಿರೀಕ್ಷಿತ ಫಲಿತಾಂಶವನ್ನು ಕಾನೂನುಬದ್ಧ ನಿಬಂಧನೆಗೆ ಒಳಪಡಿಸಲಾಗುವುದಿಲ್ಲ. ಆದರೆ, ಈ ಸಂಬಂಧ ಸಲ್ಲಿಸುವ ವರದಿಗಳಿಗೆ ನಿಬಂಧನೆ ಇರುತ್ತದೆ. ‘ಐಎನ್‌ಡಿಸಿ’ಗಳನ್ನು ಪರಾಮರ್ಶೆಗೆ ಒಳಪಡಿಸುವ ವಿವಾದಾತ್ಮಕ ವಿಚಾರವನ್ನು ಸಹ ಬದಿಗಿಡಲಾಗಿದೆ. ಆಶ್ಚರ್ಯಕರ ವಿಚಾರವೆಂದರೆ ಭಾರತದಂತಹ ದೇಶಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ.

ಐದು ವರ್ಷಗಳ ನಂತರ ಎಲ್ಲ ದೇಶಗಳ ‘ಐಎನ್‌ಡಿಸಿ’ಗಳನ್ನು ಒಟ್ಟಾಗಿ ತೆಗೆದುಕೊಂಡು ಪರಾಮರ್ಶೆ ಮಾಡಲಾಗುತ್ತದೆ. ಇಂಗಾಲ ಹೊರಸೂಸುವಿಕೆ  ಪ್ರಮಾಣ ಕಡಿಮೆ ಮಾಡಲು ದೇಶಗಳು ಸಾಧಿಸಿದ ಪ್ರಗತಿಯನ್ನು ಒಂದೊಂದಾಗಿ ಅಳೆಯಲಾಗುವುದಿಲ್ಲ. ಬದಲಾಗಿ ಎಲ್ಲ ದೇಶಗಳ ಕೈಗೊಂಡ ಕ್ರಮಗಳನ್ನು ಒಟ್ಟಾಗಿ ಪರಿಗಣಿಸಿ ಭೂಮಿಯ ತಾಪಮಾನ 2 ಡಿಗ್ರಿ ಸೆಲ್ಸಿಯಸ್‌ ಏರದಂತೆ ತಡೆಯಲು ಈ ಕ್ರಮಗಳು ಎಷ್ಟು ಪರಿಣಾಮಕಾರಿಯಾಗಿವೆ ಎಂಬುದನ್ನು ಅಳೆಯಲಾಗುತ್ತದೆ ಎಂದು ಒಪ್ಪಂದ ಹೇಳುತ್ತದೆ.

ಇಂಗಾಲ ಪ್ರಮಾಣ ಕಡಿತಗೊಳಿಸಲು ಅಭಿವೃದ್ಧಿಶೀಲ ದೇಶಗಳಿಗೆ ಸಿರಿವಂತ ದೇಶಗಳು ನೀಡಬೇಕಾದ ಹೆಚ್ಚುವರಿ ಹಣಕಾಸಿನ ನೆರವಿನ ಕುರಿತೂ ಈ ಒಪ್ಪಂದ ಚಕಾರವೆತ್ತುವುದಿಲ್ಲ. ಆರ್ಥಿಕ ನೆರವಿನ ಕುರಿತು ಒಂದು ಸ್ಥೂಲವಾದ ಭರವಸೆ ಮಾತ್ರ ಒಪ್ಪಂದಲ್ಲಿ ಕಾಣುತ್ತದೆ. ಹಣಕಾಸು ನೆರವಿನ ವಿಚಾರದಲ್ಲಿ ಅಮೆರಿಕನ್ನರನ್ನು ಖುಷಿಯಾಗಿಡುವ ಉದ್ದೇಶದಿಂದ ಒಪ್ಪಂದಕ್ಕೆ ಹೊರತಾದ ದಾಖಲೆ ಪತ್ರದಲ್ಲಿ ಸಹಿ ಹಾಕಿಸಿಕೊಳ್ಳಲಾಗುತ್ತದೆ.

ಈ ರೀತಿಯಾಗಿ ಜಾಗತಿಕ ನಾಯಕರು ಹವಾಮಾನ ಶೃಂಗಸಭೆಗೆ ಪ್ರಯಾಣ ಆರಂಭಿಸುವುದಕ್ಕಿಂತ ಮುನ್ನವೇ ಪ್ಯಾರಿಸ್‌ ಶೃಂಗಸಭೆಯ ಒಪ್ಪಂದ ಸಹಿಗೆ ಸಿದ್ಧವಾಗಿಬಿಟ್ಟಿದೆ. ಈ ಒಪ್ಪಂದ ದುರ್ಬಲವಾಗಿದೆ. ಆದರೆ, ಭರವಸೆ ಹುಟ್ಟಿಸುವಂತಿದೆ. ಭವಿಷ್ಯದಲ್ಲಿ ಕೈಗೊಳ್ಳಬಹುದಾದ ಕ್ರಮಗಳಿಗೆ ಭದ್ರ ಬುನಾದಿ ಹಾಕುವಂತಿದೆ.

ಪ್ಯಾರಿಸ್‌ ಒಪ್ಪಂದದಲ್ಲಿ, ಬಡ ದೇಶಗಳು ಹೊರಸೂಸುತ್ತಿರುವ ಇಂಗಾಲದ ಪ್ರಮಾಣಕ್ಕೆ ಅನುಗುಣವಾಗಿ ಅವುಗಳಿಗೆ ಗುರಿ ನಿಗದಿ ಮಾಡುವ ಬದಲು ಅವುಗಳೇ ಸ್ವಯಂಪ್ರೇರಿತವಾಗಿ ತಮ್ಮ ಗುರಿ ನಿರ್ಧರಿಸಲು ಅವಕಾಶ ಮಾಡಿಕೊಡಬಹುದಿತ್ತು. ಆಗ ಈ ಒಪ್ಪಂದವು ಅಭಿವೃದ್ಧಿಹೊಂದಿದ ಸಿರಿವಂತ ದೇಶಗಳು ಹಾಗೂ ಅಭಿವೃದ್ಧಿಶೀಲ ಬಡ ರಾಷ್ಟ್ರಗಳ ನಡುವಣ ವ್ಯತ್ಯಾಸವನ್ನು ಒಮ್ಮೆಲೇ ತೊಡೆದುಹಾಕುತ್ತಿತ್ತು.

ಹವಾಮಾನ ವೈಪರೀತ್ಯ ಒಪ್ಪಂದದ ಪರಿಪಾಠ (Framework Convention on climate change)ದಲ್ಲಿ ಒಪ್ಪಿಕೊಂಡಂತೆ ಅಭಿವೃದ್ಧಿಹೊಂದಿದ ದೇಶಗಳು ಅತಿಯಾದ ಕೈಗಾರೀಕರಣ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಎಗ್ಗಿಲ್ಲದ ಬಳಕೆಯಿಂದ ಮಾಲಿನ್ಯ ಪ್ರಮಾಣ ಹೆಚ್ಚಳಕ್ಕೆ ನೀಡಿರುವ ಕೊಡುಗೆಯಿಂದಾಗಿ ಮಾಲಿನ್ಯ ಪ್ರಮಾಣ ತಗ್ಗಿಸಲು ಸಹ ಅಷ್ಟೇ ಮಹತ್ತರ ಹೊಣೆಗಾರಿಕೆ ಹೊರುವಂತೆ ನಿಬಂಧನೆ ವಿಧಿಸಬೇಕಿತ್ತು.

ಅಮೆರಿಕದ ‘ಐಎನ್‌ಡಿಸಿ’ ಮಹತ್ವಾಕಾಂಕ್ಷೆಯಿಂದ ಕೂಡಿಲ್ಲದೇ ಇರುವುದರಿಂದ ‘ಕಾರ್ಬನ್‌ ಬಜೆಟ್‌’ಗೆ ಅದು ಹೆಚ್ಚುವರಿ ಹಣ ನೀಡುವಂತೆ ಆಗ್ರಹಿಸಬೇಕಿತ್ತು.
ಇನ್ನು ಮುಂದೆ, ಭೂಮಿಯ ತಾಪಮಾನ ಅಪಾಯಕಾರಿ ಮಟ್ಟಕ್ಕೆ ಏರದಂತೆ ತಡೆಯಲು ಜಗತ್ತಿನ ದೇಶಗಳೆಲ್ಲ ಒಂದು ನಿರ್ದಿಷ್ಟ ಮಿತಿಯಲ್ಲಿಯೇ ‘ಹಸಿರುಮನೆ ಅನಿಲಗಳನ್ನು’ ಹೊರಸೂಸಬೇಕಾಗುತ್ತದೆ.

ಇನ್ನೂ ಪ್ರಗತಿಯ ದಾರಿಯಲ್ಲಿರುವ ಭಾರತ ಮತ್ತು ಆಫ್ರಿಕಾ ಖಂಡದ ಎಲ್ಲ ದೇಶಗಳು ತಮ್ಮ ಅಭಿವೃದ್ಧಿಗಾಗಿ ಇಂಗಾಲ ಹೊರಸೂಸುವಿಕೆ ಪ್ರಮಾಣ ಹೆಚ್ಚಿಸುವುದು ಅನಿವಾರ್ಯವಾಗಿದೆ. ಆದರೆ, 2030ರ ಹೊತ್ತಿಗೆ ಪ್ಯಾರಿಸ್‌ ಒಪ್ಪಂದಲ್ಲಿ ಹೇಳಲಾದ ‘ಕಾರ್ಬನ್‌ ಬಜೆಟ್‌’ನ ಮಿತಿ ಮುಗಿದಿರುತ್ತದೆ.
ಪ್ಯಾರಿಸ್‌ ಒಪ್ಪಂದದ ಕರಡು ಈಗಿರುವ ಸ್ವರೂಪದಲ್ಲೇ ಅಂಗೀಕಾರಗೊಂಡಲ್ಲಿ, ಭವಿಷ್ಯದ ದಿನಮಾನಗಳಲ್ಲಿ ಅಭಿವೃದ್ಧಿ ಹೊಂದಲು ನಮಗಿರುವ ಹಕ್ಕನ್ನು ನಾವು ಬಿಟ್ಟುಕೊಟ್ಟಿರುತ್ತೇವೆ. ಆರ್ಥಿಕವಾಗಿ ಪ್ರಗತಿ ಹೊಂದಲು ವಿಭಿನ್ನ ಮಾರ್ಗ ಕಂಡುಕೊಳ್ಳುವಂತೆ ನಮಗೆ ಸೂಚಿಸಲಾಗುತ್ತದೆ.

ನಾವು ಕಡಿಮೆ ಇಂಗಾಲ ಅಥವಾ ಕಡಿಮೆ ಮಾಲಿನ್ಯ ಹೊಂದಿದ ಅಭಿವೃದ್ಧಿಯ ಹಾದಿಯನ್ನು ಕಂಡುಕೊಳ್ಳಬೇಕಾಗುತ್ತದೆ. ಈ ಮಾರ್ಗ ದುಬಾರಿಯಾದಲ್ಲಿ ಅದು ನಮ್ಮ ತಲೆನೋವಾಗಿರುತ್ತದೆ. ಈ ಉದ್ದೇಶಕ್ಕಾಗಿ ನಮಗೆ ಹಣಕಾಸು ನೆರವು ಅಥವಾ ತಂತ್ರಜ್ಞಾನ ಒದಗಿಸಲಾಗುವುದಿಲ್ಲ. ನಮ್ಮ ಹಿತಾಸಕ್ತಿಗಳಿಗೆ ಧಕ್ಕೆಯಾಗದಂತೆ ಪ್ಯಾರಿಸ್‌ ಒಪ್ಪಂದಕ್ಕೆ ಸಹಿ ಹಾಕಿಸಲು ಭಾರತ ಸರ್ಕಾರ ಹೇಗೆ ಯತ್ನಿಸಲಿದೆ ಎಂಬುದು ಮುಂದಿರುವ ಪ್ರಶ್ನೆ. ಈ ಒಪ್ಪಂದ ಮಹತ್ವಾಕಾಂಕ್ಷೆಯಿಂದ ಕೂಡಿರಬೇಕು. ಅಲ್ಲದೇ ಸಮಾನ ತಳಹದಿಯನ್ನೂ ಹೊಂದಿರಬೇಕು. ಅಂತಹ ಒಪ್ಪಂದ ಮಾತ್ರ ನಮ್ಮೆಲ್ಲರ ಹಿತಾಸಕ್ತಿಗೆ ಪೂರಕವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT