ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗ್ನಲ್ ಹತ್ರ ಬದುಕಿನ ಚಿತ್ರ

Last Updated 8 ಮೇ 2012, 19:30 IST
ಅಕ್ಷರ ಗಾತ್ರ

ಅಯ್ಯೋ ದುರದೃಷ್ಟವೇ... ಬರುತ್ತಲೇ ಸಿಗ್ನಲ್ ಬೀಳಬೇಕೇ. ಇನ್ನೂ ಒಂದೂವರೆ ನಿಮಿಷ ಕಾಯಲೇಬೇಕು. ಓ ಮುಂದೆಯೇ ಒಂದು ಆಟೊ ನಿಂತಿದೆ. ಒಳಗೆ ಯಾರೂ ಕುಳಿತಂತಿಲ್ಲ. ಎಂಜಿ ರಸ್ತೆಗೆ ಬರಲು ಒಪ್ಪುವವನಾದರೆ ಸಾಕಿತ್ತು... ಆತ ಭಾರೀ ಕನ್ನಡ ಪ್ರೇಮಿಯೇ ಇರಬೇಕು. ರಾಜ್ಯೋತ್ಸವ ಕಳೆದು ನಾಲ್ಕು ತಿಂಗಳಾದರೂ ಕೆಂಪು ಬಾವುಟ ತೆಗೆದಿಲ್ಲ. ಇರಲಿ... ಮಾತಿಗೆ ಸಿಕ್ಕರೆ ಒಂದು ಲೇಖನಕ್ಕೆ ವಿಷಯವಾಗುತ್ತಿತ್ತು.

ಗೆಳತಿ ಅದೇ ಬೈಯುತ್ತಿರುತ್ತಾಳೆ, ಯಾವಾಗಲೂ ನಿನಗೆ ಕೆಲಸದ್ದೇ ಚಿಂತೆ, ಅವಳ ಸಮಾಧಾನಕ್ಕಾದರೂ ಇಂದು ಭೇಟಿಯಾಗಲು ಹೊರಟರೆ ಮತ್ತೆ ಅದರ ಬಗ್ಗೆ ಯೋಚಿಸುತ್ತಿದ್ದೇನೆ. ಪಾಪ, ಅವಳಾದರೂ ಏನು ಮಾಡಿಯಾಳು... ದೂರದ ಊರಿನಲ್ಲಿ ಕೆಲಸ ಸಿಕ್ಕಿದೆ ಎಂದು ಮನೆಯವರಲ್ಲಿ ಹೇಳಿದಾಗಲೇ ಅಡ್ಡಿ ಎದುರಾಗಿತ್ತಲ್ಲ. ಆಗ ಹಠ ಹಿಡಿದಿದ್ದಳು, ಈಗ ಒಬ್ಬಂಟಿತನ, ದೊಡ್ಡ ಊರಿನಲ್ಲಿ ಒಂಟಿ ಹಕ್ಕಿ ಎಂಬ ಭಾವ ಕಾಡುತ್ತಿದೆಯಂತೆ. ಕಳೆದ ವಾರವೇ ಸಿಗಲು ಹೇಳಿದ್ದಳು, ಯಾಕೋ ಸಮಯ ಹೊಂದಿಸುವುದೇ ಕಷ್ಟ.

ಅಯ್ಯೋ ಇನ್ನೂ 76 ಸೆಕೆಂಡು... ಅಷ್ಟರಲ್ಲೇ ಇವರ ತುತ್ತಿನ ಚೀಲವೂ ತುಂಬಬೇಕಲ್ಲ. ಕಪ್ಪು ಬಣ್ಣದ ಸನ್‌ಗ್ಲಾಸ್ ಮಾರುವ ವ್ಯಾಪಾರಿ ಹತ್ತಿರ ಬಂದಾಗ ಹೆಲ್ಮೆಟ್ ಧರಿಸಿದಾತನ ಮುಖ ಅತ್ತ ತಿರುಗುತ್ತದೆ. ಬಣ್ಣದ ವಾಚು, ಬ್ರಶ್, ಪುಟ್ಟ ಟಾರ್ಚ್ ಇಷ್ಟಕ್ಕೂ ಮೂವತ್ತು ರೂಪಾಯಿ ಎನ್ನುವಾತನ ಮುಖದ ಬಣ್ಣವೂ ಬದಲಾಗಿದೆ. ಬಿಸಿಲಿನ ತಾಪಕ್ಕೆ ಬೆವರು ಜಾರುತ್ತಿದ್ದರೂ ಲೆಕ್ಕಿಸುವ ಗೋಜಿಗೆ ಆತ ಹೋಗಿಲ್ಲ. ಸಿಕ್ಕ ಒಂದೂವರೆ ನಿಮಿಷದಲ್ಲಿ ತನ್ನ ಕುಟುಂಬದ ಆರು ಮಂದಿಯ ಹೊಟ್ಟೆ ತುಂಬುವಷ್ಟು ಹಣ ಗಳಿಸಬೇಕೆಂದರೆ... ಅದರಲ್ಲೂ ಐದು ರೂಪಾಯಿಗಾಗಿ ಚೌಕಾಶಿ ನಡೆಸುವವರ ಮಧ್ಯೆ.

ತಂಪಾಗಿ ಎಸಿ ಕಾರೊಳಗೆ ಕುಳಿತ ದಂಪತಿಗೆ ಈತನ ಕೂಗು ಕೇಳುವುದಾದರೂ ಹೇಗೆ, ಅರೆ...ಒಳಗೆ ಕುಳಿತ ಆ ಮಹಿಳೆ... ಪಕ್ಕದಲ್ಲಿ ಕುಳಿತವ ಪತಿಯೇ ಇರಬೇಕು. ಕೈ ತುತ್ತು ತಿನಿಸುತ್ತಿದ್ದಾಳೆ! ಇವರು ಕಾರಿನಲ್ಲೇ ಬ್ರೇಕ್‌ಫಸ್ಟ್ ಮುಗಿಸುವ ಐಟಿ ಉದ್ಯೋಗಿಗಳಿರಬೇಕು, ಗೆಳೆಯ ದೀಪು ಹೇಳುತ್ತಿದ್ದ, ಇದೆಲ್ಲಾ ಇಲ್ಲಿ `ಕಾಮನ್~ ಅಂತೆ. ಬೆರಗು ಕಣ್ಣಿನಿಂದ ನೋಡುವ ನಮ್ಮಂತಹ ಹೊಸಮಂದಿಗಷ್ಟೇ ಇದು ಹೊಸದು.

ಸ್ಕೂಟಿಯಲ್ಲಿ ಕುಳಿತ ಹುಡುಗಿ ಇಹ ಲೋಕದಲ್ಲಿ ಇದ್ದಂತಿಲ್ಲ, ಆಕೆಗೆ ಸಿಕ್ಕ ತೊಂಬತ್ತು ಸೆಕೆಂಡ್‌ಗಳಲ್ಲಿ ಪ್ರೇಮಿಯ ಬಳಿ ಪಿಸುಗುಡುವ ಕಾತರ, ಮುಖದಲ್ಲೇ ಆ ಭಾವದ ಪ್ರತಿಫಲನ. ಆಕೆಯ ಕಣ್ಣುಗಳೋ ಸಿಗ್ನಲ್ ಬೋರ್ಡನ್ನೇ ನೋಡುತ್ತಿವೆ. ವೇಗವಾಗಿ ಚಲಿಸುವ ಸೆಕೆಂಡು ಮುಳ್ಳಿನ ಮೇಲೆ ಆಕೆಗೆ ಮುನಿಸು. ಅಪ್ಪನ ಹಿಂದೆ ಕುಳಿತ ಇನ್ನೊಬ್ಬ ಚಕೋರಿಯೂ ಟ್ರಾಫಿಕ್ ಸಿಗ್ನಲ್ ನೋಡಿ ಪ್ರಿಯಕರನಿಗೆ ಬಾಯ್ ಹೇಳಿ ಫೋನ್ ಕಟ್ ಮಾಡಿದ್ದಾಳೆ, ಅಪ್ಪನಿಗೆ ವಿಷಯ ಗೊತ್ತಾಗಬಾರದಲ್ಲ!

ಓ ದೀಪಾ, ಮತ್ತೆ ಮೆಸೇಜ್ ಮಾಡಿದ್ದಾಳೆ, ಅಯ್ಯೋ ಅವ್ಳ ಆಗ್ಲೇ ಬಸ್‌ಸ್ಟ್ಯಾಂಡ್ ಬಳಿ ಕಾಯ್ತಾ ಇದ್ದಾಳಂತೆ. ಏನು ಮಾಡೋದು ಇನ್ನೂ 36 ಸೆಕೆಂಡು ಸಿಗ್ನಲ್‌ನಲ್ಲೇ ಕಾಯ್ಬೇಕಲ್ಲ. ಹೊರಟಿದ್ದೀನಿ ಕಣೇ, ಆನ್ ದಿ ವೇ ಅಂತ ರಿಪ್ಲೈ ಮಾಡಿ ಬಿಡೋಣ...
ಎಲ್ಲರೂ ಉಚಿತ ಸಲಹೆ ಕೊಡುವವರೇ, `ವರ್ಕ್ ಹಾರ್ಡ್, ಸಕ್ಸ್‌ಸ್ ಈಸ್ ಇನ್ ಯುವರ್ ಹ್ಯಾಂಡ್~ ಅಂತೆ. ಇದ್ನ ಅಷ್ಟು ದೂರದ ಬೆಳಗಾವಿಯಿಂದ ಮೆಸೇಜ್ ಮಾಡಿ ಹೇಳ್ಬೇಕಾ... ಏನೋ ಜೋಕ್ ಮೆಸೇಜ್ ಕಳ್ಸಿದ್ರೆ ಓದಿ ಒಂದು ಕ್ಷಣ ಆದ್ರೂ ಖುಷಿ ಪಡ್ಬೋದು. ದಿನಕ್ಕೆ ನೂರು ಮೆಸೇಜ್ ಫ್ರೀ ಕೊಟ್ಟು ದೊಡ್ಡ ತಪ್ಪು ಮಾಡಿದ್ರು. ಓ ಮೆಸೇಜ್ ಪ್ಯಾಕೇಜ್ ಬೇರೆ ಮುಗಿದಿದೆ. ನಾಳೆನೇ 19 ರೂ ಹಾಕ್ಸಿ ಒಂದು ತಿಂಗಳ ಮೆಸೇಜ್ ಫ್ರೀ ಪ್ಯಾಕೇಜ್ ಹಾಕಿಸ್ಕೋಬೇಕು.

ಅಬ್ಬಾ, ಇನ್ನೂ ಸಿಗ್ನಲ್ ಬಿಡೋಕೆ 13 ಸೆಕೆಂಡ್ ಇದೆ. ಈಗ್ಲೇ ಬೈಕ್‌ನವ್ರಿಗೆ ಎಷ್ಟೊಂದು ಅವಸರ. ಸಿಗೋ ಸ್ಪಲ್ಪ ಜಾಗದಲ್ಲೇ ತಳ್ಳಾಡಿ, ತಾಗಿಸಿಕೊಂಡು ಮುಂದೆ ಬಂದು ನಿಂತಿದ್ದೂ ಸಾಲದು ಎಂಬಂತೆ ಮತ್ತೆ ಆಕ್ಸಿಲೇಟರ್ ರೈಸ್ ಮಾಡ್ತಿದ್ದಾರೆ, ಈ ಅವಸರದಿಂದಲೇ ತಾನೆ ಮೊನ್ನೆ ಪಕ್ಕದ ಅಪಾರ್ಟ್‌ಮೆಂಟ್ ಸ್ಟೈಲ್ ರಾಜ, ಜೀವನ್ ಬೈಕ್ ಬಿಎಂಟಿಸಿ ಬಸ್‌ಗೆ ಢಿಕ್ಕಿ ಹೊಡೆದು ಅವನ ತಲೆ ಹೋಳಾಗಿದ್ದು. ಅಪ್ಪ ಹೇಳುತ್ತಿದ್ದರು, ಆ ರಭಸಕ್ಕೆ ಮೆದುಳಿನ ಕೆಲ ತುಂಡುಗಳು ಸುಮಾರು ಹೊತ್ತು ರಸ್ತೆಯಲ್ಲೇ ಬಿದ್ದಿದ್ದವಂತೆ. ಈಗಿನವರು ಹೋಗುವ ವೇಗಕ್ಕೆ ಬ್ರೇಕ್ ಆದ್ರೂ ಎಲ್ಲಿ...

ಆಯ್ತು ಇನ್ನೇನು ಸಿಗ್ನಲ್ ಬಿಡ್ತಾರೆ. ಈ ಆಟೋದವ್ನ ನಿಲ್ಲಿಸ್ತಾನೋ ಇಲ್ವೊ. ಈಗ್ಲೇ ಈ ರೋಡ್ ಕ್ರಾಸ್ ಮಾಡೋರ‌್ಗೂ ಅವಸರ. ಟೈಂ ನೋಡ್ಬಾರ‌್ದಾ. ಹಳದಿ ಲೈಟ್ ಹೊತ್ಕೊತ್ತಿದೆ. ಆದ್ರೂ ಅಡ್ಡ ರಸ್ತೆಗೆ ಓಡ್ತಾರೆ. ಮತ್ತೆ ಚೂರು ಕಾದ್ರೆ ಏನು ಅಂತ. ಏನ್ ಅವಸರ ಈ ಜನಕ್ಕೆ.

ಅಬ್ಬಾ ಅಂತೂ ಸಿಗ್ನಲ್ ಬಿಟ್ಟರು. ಈ ಒಂದು.. ಎರಡು... ಮೂರು.. ನಾಲ್ಕು ಬೈಕ್‌ಗಳು, ಉಫ್.. ದೀಪಾವಳಿ ಹಬ್ಬದ ರಾಕೆಟ್‌ಗಳಂತೆ ಎಲ್ಲವೂ ಹಾರಿ ಹೋದುವಲ್ಲಾ, ಅದ್ಭುತ! ಅಂತೂ ಆಟೊ ಬಂತು. ಕೈ ಹಿಡಿದು ನೋಡೋಣ... ಸರ್ ಎಂ.ಜಿ. ರಸ್ತೆಗೆ ಬರ‌್ತೀರಾ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT