ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಜಿಕೆಗೆ ರಂಗಾಸಕ್ತಿ ಮೂಡಿಸಿದ ಹೆಗ್ಗಳಿಕೆ

Last Updated 27 ಜೂನ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಕರ್ನಾಟಕದ ರಂಗಭೂಮಿ ಚಳವಳಿಗೆ ಹೊಸ ಆಯಾಮ ಕೊಟ್ಟವರು ಸಿ.ಜಿ.ಕೃಷ್ಣಮೂರ್ತಿ~ ಎಂದು ವಿಮರ್ಶಕ ಡಾ.ನಟರಾಜ್ ಹುಳಿಯಾರ್ ಹೇಳಿದರು.

ರಂಗ ನಿರಂತರ ಸಂಸ್ಥೆಯು ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ಆಯೋಜಿಸಿದ್ದ `ಸಿಜಿಕೆ ನೆನಪು~ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

`ರಾಷ್ಟ್ರೀಯ ರಂಗಭೂಮಿಯಲ್ಲಿ ಹೊಸ ಸಂಚಲನ ಮೂಡಿಸಿದ್ದ ಪೀಪಲ್ಸ್ ಥಿಯೇಟರ್ ಅನ್ನು ರಾಜ್ಯದಲ್ಲಿ ಪ್ರಚಾರಕ್ಕೆ ತಂದವರು ಸಿಜಿಕೆ. ರಾಜ್ಯದಲ್ಲಿ ರಂಗಭೂಮಿಯ ಬಗ್ಗೆ ಅನಾದರವಿದ್ದ ಕಡೆಗಳಲ್ಲೂ ನಾಟಕಗಳನ್ನು ತೆಗೆದುಕೊಂಡು ಹೋಗಿ ಜನರಲ್ಲಿ ರಂಗಾಸಕ್ತಿ ಉಂಟು ಮಾಡಿದ ರಂಗ ಚೇತನ~ ಎಂದರು.

`ಕೇವಲ ರಂಗಭೂಮಿಗಷ್ಟೇ ಅಂಟಿಕೊಳ್ಳದೇ ಸಾಹಿತ್ಯದಲ್ಲೂ ಅವರು ಅಪಾರ ಆಸಕ್ತಿ ಹೊಂದಿದ್ದರು. ನಾಟಕ ನಿರ್ದೇಶನದ ಜೊತೆಗೆ ನಾಟಕ ಕೃತಿಗಳನ್ನು ಬರೆಸುವುದಕ್ಕೂ ಸಿಜಿಕೆ ಅವರು ಉತ್ಸಾಹ ತೋರುತ್ತಿದ್ದರು.

ಪಟ್ಟು ಬಿಡದೇ ಅವರು ಕಿ.ರಂ.ನಾಗರಾಜ ಅವರಿಂದ ಎರಡು ನಾಟಕಗಳನ್ನು ಬರೆಸಿದ್ದರು~ ಎಂದರು.
ಕೇಂದ್ರ ವಿಭಾಗದ ಡಿಸಿಪಿ ಬಿ.ಆರ್.ರವಿಕಾಂತೇಗೌಡ ಮಾತನಾಡಿ, `ಸಿಜಿಕೆ ಅವರು ಬಹುಬೇಗ ಆತ್ಮೀಯವಾಗುವ ವ್ಯಕ್ತಿತ್ವವನ್ನು ಹೊಂದಿದ್ದರು. ಅವರ ನಿರ್ದೇಶನದ `ತಬರನ ಕಥೆ~ ನಾಟಕದಲ್ಲಿ ನಾನು ಅಭಿನಯಿಸಿದ್ದು ಒಂದು ವಿಶಿಷ್ಟ ಅನುಭವ. ಸದ್ಯದ ಸಂದರ್ಭಕ್ಕೆ ಸಿಜಿಕೆ ಅವರ ಅಗತ್ಯವಿತ್ತು. ಅವರು ವಾಸ್ತವವನ್ನು ವಿಶ್ಲೇಷಿಸುವ ರೀತಿಯೇ ಭಿನ್ನವಾಗಿತ್ತು~ ಎಂದರು.

ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಟಿ.ತಿಮ್ಮೇಶ್ ಮತ್ತು ರಂಗಕರ್ಮಿ ಕೃಷ್ಣ ರಾಯಚೂರು ಅವರನ್ನು ಸನ್ಮಾನಿಸಲಾಯಿತು. ನಂತರ ಅಮರೇಶ ನುಗಡೋಣಿ ಅವರ ಕಥೆಯ ರೂಪಾಂತರ `ನೀರು ತಂದವರು~ ನಾಟಕ ಪ್ರದರ್ಶನ ನಡೆಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಿ.ಟಿ.ಮುನಿರಾಜಯ್ಯ, ಕರ್ನಾಟಕ ನಾಟಕ ಅಕಾಡೆಮಿಯ ರಿಜಿಸ್ಟ್ರಾರ್ ಟಿ.ಜಿ.ನರಸಿಂಹಮೂರ್ತಿ, ರಂಗ ನಿರಂತರ ಸಂಸ್ಥೆಯ ಅಧ್ಯಕ್ಷ ಶಶಿಧರ ಅಡಪ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT