ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಟಿಜನ್ -ಗೂಡಿನ ಅಗತ್ಯ

ಅಕ್ಷರ ಗಾತ್ರ

ಗೂಡಿನ ಅಗತ್ಯ
ಕೆಂಪೇಗೌಡರಿಗೆ ಅಜ್ಜಿಯೊಬ್ಬಳು ಬೆಂದಕಾಳು ಕೊಟ್ಟಳು. ಅದನ್ನು ತಿಂದ ಕೆಂಪೇಗೌಡರು ಈ ಪ್ರದೇಶವನ್ನು ಬೆಂದಕಾಳೂರು ಎಂದು ಕರೆದು ಮುಂದೆ ಅದು ಬೆಂಗಳೂರಾಯಿತು ಎಂಬ ಕಥೆ ಎಲ್ಲರಿಗೂ ಗೊತ್ತು.
 
ಆದರೆ ಈ ಬೆಂದಕಾಳು ಅಥವಾ ಉಸುಳಿಯನ್ನು ಕೊಟ್ಟ ಅಜ್ಜಿಯ ಹೇಗಿದ್ದಳು ಎಂಬುದು ಬಹಳ ಕಡಿಮೆ ಜನಕ್ಕಷ್ಟೇ ಗೊತ್ತು. ಆ ಕಾಲದಲ್ಲಿ ಈ ಅಜ್ಜಿ ಬೇಯಿಸುತ್ತಿದ್ದ ಕಾಳು ಅರ್ಥಾತ್ ಉಸುಳಿ ಎಷ್ಟು ಪ್ರಖ್ಯಾತ ಎಂದರೆ ಅದನ್ನು ತಿನ್ನಲು ರಾಜ ಮಹಾರಾಜರೇ ಬರುತ್ತಿದ್ದರು. ಈ ಅಜ್ಜಿ ಕೇವಲ ಉಸುಳಿ ತಯಾರಿಸುವುದರಲ್ಲಿ ಪರಿಣತಳಾಗಿದ್ದಂತೆಯೇ ಆ ಆಧ್ಯಾತ್ಮಿಕ ಜ್ಞಾನದಲ್ಲೂ ಪರಿಣತಳು.
 
ಈಕೆಯ ಜ್ಞಾನದ ಕುರಿತಂತೆ ಮರಳುಗಾಡಿನ ಮಹಾಮುನಿ ಆಲ್-ಹಾಲ್‌ರಿಂದ ತೊಡಗಿ ವಿಶ್ವವ್ಯಾಪಿಯಾಗಿದ್ದ ಈಶಾಸತ್ವಳ ತನಕ ಎಲ್ಲರಿಗೂ ತಿಳಿದಿತ್ತು. ಆಕೆಯ ಉಸುಳಿಯ ಗುಣಗಾನದ ಜೊತೆ ಅವಳ ನಿಗೂಢ ಅರಿವುಗಳ ಬಗ್ಗೆಯೂ ಇವರೆಲ್ಲಾ ಹೇಳುತ್ತಿದ್ದರು. ಹೀಗೆ ಗುರುಮುಖದಿಂದ ಅಜ್ಜಿಯ ಆಧ್ಯಾತ್ಮಿಕ ಜ್ಞಾನವನ್ನು ಅರಿತವನೊಬ್ಬ ಬಹುದೂರ ಪ್ರಯಾಣ ಮಾಡಿ ಬಂದು ಅಜ್ಜಿಯನ್ನು ಭೇಟಿಯಾದ.

ಬಸವಳಿದು ಬಂದಿದ್ದ ಅತಿಥಿಯನ್ನು ಕಂಡ ಅಜ್ಜಿ ಲೋಟವೊಂದಕ್ಕೆ ನೀರನ್ನೂ ರುಚಿಯಾಗಿ ಬಟ್ಟಲೊಂದಕ್ಕೆ ರುಚಿಯಾಗಿ ಬೇಯಿಸಿಟ್ಟಿದ್ದ ಕಾಳನ್ನೂ ಸುರಿದು ಅವನೆದುರು ಇಟ್ಟಳು. ಅದನ್ನು ಮುಟ್ಟದ ಆತ ಅಜ್ಜಿಯನ್ನು ಉದ್ದೇಶಿಸಿ `ಅವಿನಾಶಿಯಾಗಿರುವ ಆತ್ಮಕ್ಕೆ ನಶ್ವರವಾದ ದೇಹವೆಂಬ ಗೂಡಿನ ಅಗತ್ಯವಾದರೂ ಏನು?~ ಎಂದು ಕೇಳಿದ. ಅಜ್ಜಿ ಒಳಹೋಗಿ ಸಟ್ಟುಗ ತಂದು ಅವನನ್ನು ಹಿಗ್ಗಾಮುಗ್ಗ ಥಳಿಸತೊಡಗಿದಳು. ಆ ಕ್ಷಣದಲ್ಲಿ ಅವನಿಗೆ ಅವಿನಾಶಿ ಆತ್ಮಕ್ಕೆ ಗೂಡೇಕೆ ಬೇಕು ಎಂಬುದು ಅರ್ಥವಾಯಿತು.

ನಾನಲ್ಲದ ನೀನು
ಕಲ್ಯಾಣಪ್ಪನಿಗೆ ಎಲ್ಲಾ ಬಗೆಯವರೂ ಗೆಳೆಯರಾಗುತ್ತಿದ್ದರು. ಐಟಿಪಿಎಲ್ ಸುತ್ತ ಮುತ್ತ ಕಾಣಿಸಿಕೊಳ್ಳಲಾರಂಭಿಸಿದ ಮೇಲೆ ಹಲವು ಐಐಟಿ ಪ್ರತಿಭೆಗಳೂ ಅವನ ಗೆಳೆಯರೇ. ಒಂದು ದಿನ ರಾತ್ರಿ ಚರಂಡಿಯಿಂದ ಮೇಲೆ ಬಂದು ಕಾರುಗಳನ್ನು ನೋಡುತ್ತಾ ಪಿಳಿಪಿಳಿ ಕಣ್ಣು ಮಿಟುಕಿಸುತ್ತಾ ನಿಂತಿದ್ದ ಇಲಿಯೊಂದನ್ನು ಕಂಡು ಜೊತೆಗಿದ್ದ ಸಾಫ್ಟ್‌ವೇರ್ ಗೆಳೆಯನ ಬಳಿ ಕಲ್ಯಾಣಪ್ಪ ಹೇಳಿದ `ಇಲಿ ಏನು ಸಂತೋಷದಿಂದ ಇದೆಯಲ್ಲಾ...?~ ಎಂದ. ಕಾರ್ಯ-ಕಾರಣ ತತ್ವದ ಮೇಲೆ ಪ್ರೋಗ್ರಾಮಿಂಗ್ ಮಾಡುವ ಸಾಫ್ಟ್‌ವೇರ್ ಇಂಜಿನಿಯರ್ ಮರುಪ್ರಶ್ನೆ ಎಸೆದ- `ನೀವು ಇಲಿಯಲ್ಲದೇ ಇರುವುದರಿಂದ ಅದು ಸಂತೋಷವಾಗಿದೆಯೆಂದು ನಿನಗೆ ಹೇಗೆ ಗೊತ್ತಾಗಲು ಸಾಧ್ಯ?~

ಕಲ್ಯಾಣಪ್ಪ ಕೇಳಿದ, `ನಾನಲ್ಲದ ನಿನಗೆ ನಾನು ಇಲಿಯಲ್ಲವೆಂಬುದು ಹೇಗೆ ಗೊತ್ತಾಗಲು ಸಾಧ್ಯ?~
-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT