ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಟಿಯಲ್ಲಿ ಕೊಡವರು...

Last Updated 11 ನವೆಂಬರ್ 2011, 19:30 IST
ಅಕ್ಷರ ಗಾತ್ರ

ತವರಿನಿಂದ ಬೇರಾಗಿ ಪರದೇಶ, ಪರ ಊರಿನಲ್ಲಿ ನೆಲೆಸಿರುವ ಒಂದೇ ಭಾಷಿಕರು, ಸಮುದಾಯದವರು ಸಂಘ, ಸಂಸ್ಥೆಯನ್ನು ಕಟ್ಟಿಕೊಂಡಾಗ ಪರ ನೆಲದಲ್ಲಿ ತಮ್ಮ ಬಾಂಧವ್ಯ ಉಳಿಸಿಕೊಳ್ಳಬೇಕು ಎಂಬ ಹಂಬಲ ಅದರ ಹಿಂದೆ ಕೆಲಸ ಮಾಡುತ್ತಿರುತ್ತದೆ.

ವರ್ಷ ಕಳೆದಂತೆ ಈ ಸಂಘ, ಸಂಸ್ಥೆ ಅಲ್ಲಿ ಆಯಾ ಭಾಷಿಕರು, ಜನಾಂಗದವರು ಒಟ್ಟಿಗೆ ಕಲೆಯುವ ಸ್ಥಳವಾಗಿ, ಅವರ ಭಾಷೆ, ಸಂಸ್ಕೃತಿ, ಅನನ್ಯತೆಯನ್ನು ಜತನವಾಗಿ ಕಾಪಾಡುವ ಕೇಂದ್ರವಾಗುತ್ತದೆ. ಅದೇ ಹೊತ್ತಿಗೆ ತಾನಿರುವ ನಗರ, ನಾಡಿನ ಅಭಿವೃದ್ಧಿಗೂ ಸದ್ದಿಲ್ಲದೇ ಕಾಣಿಕೆ ಸಲ್ಲಿಸುತ್ತಿರುತ್ತದೆ.

ಇಂತಹದ್ದೇ ಉದ್ದೇಶದಿಂದ ಆರಂಭವಾದ ಬೆಂಗಳೂರಿನ `ಕೊಡವ ಸಮಾಜ~ ಈಗ ಶತಮಾನೋತ್ಸವ ಸಂಭ್ರಮದಲ್ಲಿದೆ. ವಸಂತನಗರದಲ್ಲಿರುವ ಕೊಡವ ಸಮಾಜದಲ್ಲಿ ತಿಂಗಳಿನಿಂದ ಎಡೆಬಿಡದೇ ವಿವಿಧ ಚಟುವಟಿಕೆಗಳು ನಡೆಯುತ್ತಿವೆ.

ಹಿನ್ನೆಲೆ: 1911ರಲ್ಲಿ ಕೇವಲ 30 ಸದಸ್ಯರಿಂದ ಆರಂಭವಾದ ಕೊಡವ ಸಮಾಜ ಈಗ 25 ಸಾವಿರ ಸದಸ್ಯರನ್ನು ಹೊಂದಿದೆ. ಶತಮಾನದ ಹಿಂದೆ ಕಣ್ಣು ಹಾಯಿಸಿದರೆ ಆಗ ಬೆಂಗಳೂರಿನಲ್ಲಿ ನೆಲೆಸಿದ್ದ ಕೊಡವ ಜನಾಂಗದ ಹಿರಿಯರ ದೂರದೃಷ್ಟಿ, ವಿಶಾಲ ಮನೋಭಾವ ಕಣ್ಣಿಗೆ ಕಟ್ಟುತ್ತದೆ.

ಕಾಫಿ ಸೀಮೆ ಕೊಡಗು ಗಿರಿ, ಬೆಟ್ಟಗಳ ನಾಡು. ಅಲ್ಲಿನ ಕೊಡವರು ಶೌರ್ಯಕ್ಕೆ ಹೆಸರಾದ ಜನಾಂಗ. ಅವರ ಜೀವನ ವಿಧಾನದ ಪ್ರತಿಯೊಂದು ಅಂಶವೂ ಜನಪದ ಸಂಸ್ಕೃತಿಯ ಕಣಜ. ಹುಟ್ಟು, ಸಾವು, ಮದುವೆ, ಗದ್ದೆ ಹಸನು, ಪೂರ್ವಿಕರ ಆರಾಧನೆ ಇತ್ಯಾದಿ ಆಚರಣೆಗಳಲ್ಲಿ ಅವರು ತಮ್ಮದೇ ಆದ ರೀತಿ ರಿವಾಜು ಹೊಂದಿದ್ದಾರೆ. ಬೇಟೆ ಮತ್ತು ಕೃಷಿ ಸಂಸ್ಕೃತಿಯ ಕೊಡವರಲ್ಲಿ ಕೆಲ ಸಿರಿವಂತರು 19ನೇ ಶತಮಾನದ ಅಂತ್ಯದಲ್ಲಿ ಉನ್ನತ ಶಿಕ್ಷಣಕ್ಕಾಗಿ ಮಂಗಳೂರು, ಮೈಸೂರು, ಬೆಂಗಳೂರಿಗೆ ಬರಲಾರಂಭಿಸಿದರು. ಹಾಗೆ ಬಂದವರು ಅಲ್ಲಲ್ಲೇ ನೆಲೆಯೂರಿ ವೃತ್ತಿ ಆರಂಭಿಸಿದರು.

1911ರ ಹೊತ್ತಿಗೆ ಕೆಲ ಹಿರಿಯ ಕೊಡವ ಅಧಿಕಾರಿಗಳು ಬೆಂಗಳೂರಿಗೆ ಬಂದು ನೆಲೆಸಿದ ಕೊಡವರ ಮಧ್ಯೆ ಸಂಪರ್ಕ ಕೇಂದ್ರ ಸ್ಥಾಪಿಸಬೇಕೆಂಬ ಉದ್ದೇಶದಿಂದ ಒಂದೆಡೆ ಸೇರುವ ಆಲೋಚನೆ ಮಾಡಿದರು. ಕೊಡವರ ನಾಡಹಬ್ಬ `ಕೈಲ್ ಪೊದ್~ ನೆಪದಲ್ಲಿ ಕಲೆಯಲಾರಂಭಿಸಿದರು. ಅರಣ್ಯಾಧಿಕಾರಿಯಾಗಿದ್ದ ಕುಪ್ಪಂಡ ಮುದ್ದಪ್ಪ, ವೈದ್ಯರಾಗಿದ್ದ ಡಾ. ಕೋದಂಡ ಎ. ನಂಜಪ್ಪ ಅವರ ಮನೆಯಲ್ಲಿ ಔತಣ ಕೂಟ ಏರ್ಪಡಿಸಿ `ಕೂರ್ಗ್ ಅಸೋಸಿಯೇಷನ್~ ಎಂಬ ಪುಟ್ಟ ಸಂಸ್ಥೆ ಹುಟ್ಟುಹಾಕಿದರು.

ಮೊದ, ಮೊದಲು ಈ ಸಂಸ್ಥೆ `ಕೈಲ್ ಪೊದ್~, `ಹುತ್ತರಿ ಹಬ್ಬ~ದ ಸಂದರ್ಭಗಳಲ್ಲಿ ಸಂತೋಷ ಕೂಟ ಏರ್ಪಡಿಸಿ ವಿಚಾರ ವಿನಿಮಯ, ಕ್ರೀಡಾ ಸ್ಪರ್ಧೆ, ಉಮ್ಮತಾಟ್, ಬೊಳಕಾಟ್ ಹಾಗೂ ಕೋಲಾಟ್ ನಡೆಸುತ್ತಿತ್ತು. 1917ರವರೆಗೆ ಇದು ಹೀಗೆ ನಡೆಯಿತು. ನಂತರ ಇದಕ್ಕೆ ನಿರ್ದಿಷ್ಟ ರೂಪು ನೀಡಲು ನಿರ್ಧರಿಸಿ ಕಾರ್ಯಕಾರಿ ಸಮಿತಿ ರಚನೆ.

1950ರಲ್ಲಿ `ಕೊಡವ ಸಮಾಜ~ ಎಂದು ಮರುನಾಮಕರಣ. 1960ರಲ್ಲಿ ಫೀಲ್ಡ್ ಮಾರ್ಷಲ್ ಕೊಡಂದೇರ ಎಂ. ಕಾರ್ಯಪ್ಪ ಮೈಸೂರು ಅರಸರಾಗಿದ್ದ, ನಂತರ ರಾಜ್ಯಪಾಲರಾದ ಜಯಚಾಮರಾಜೇಂದ್ರ ಒಡೆಯರ್ ಅವರೊಡನೆ ಇದ್ದ ಸ್ನೇಹದ ಫಲವಾಗಿ ಸಮಾಜಕ್ಕೆ ವಸಂತನಗರದಲ್ಲಿ ಒಂದು ಏಕರೆ ಖಾಲಿ ಜಾಗ ದಾನವಾಗಿ ಪಡೆದರು.
 
ಈಗ ಅಲ್ಲಿ ಕೊಡವ ಸಮಾಜದ ಕಟ್ಟಡ, ಕೆ. ಎಂ. ಕಾರ್ಯಪ್ಪ ಭವನ, ಜನರಲ್ ತಿಮ್ಮಯ್ಯ ಭವನ, ಹರಿದಾಸ ಅಪ್ಪಚ್ಚ ಕವಿ ಸಭಾಂಗಣಗಳು ತಲೆ ಎತ್ತಿವೆ.

ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕೊಡವ ಸಮಾಜ `ಬಿಡಿಎ~ಯಿಂದ ಇಂದಿರಾನಗರದಲ್ಲಿ ನಿವೇಶನ ಪಡೆಯಿತು. ಅಲ್ಲಿ ಕೊಡವರು ಆರಾಧಿಸುವ ಕಾವೇರಿ ಮಾತೆ ಹೆಸರಿನಲ್ಲಿ ಎಲ್ಲ ಜನಾಂಗದವರಿಗಾಗಿ ಶಾಲೆ ಆರಂಭಿಸಲಾಯಿತು. 1982ರಲ್ಲಿ 40 ವಿದ್ಯಾರ್ಥಿಗಳಿಂದ ಆರಂಭವಾದ ಈ ಶಾಲೆಯಲ್ಲಿ ಈಗ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅದು ಬೆಳೆದಿದ್ದು ಕಾವೇರಿ ಪದವಿ ಕಾಲೇಜು, ಮ್ಯಾನೇಜ್‌ಮೆಂಟ್ ಕಾಲೇಜು ನಡೆಸುತ್ತಿದೆ.

ಅನನ್ಯ ಕೊಡವರು
ಆಧುನಿಕತೆಯ ಹೊಡೆತಕ್ಕೆ ಸಿಕ್ಕಿ ಜಾಗತಿಕ ನಗರವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಕೊಡವರು ತಮ್ಮ ಅನನ್ಯತೆ ಉಳಿಸಿಕೊಂಡಿದ್ದಾರೆ.  `ಕೈಲ್ ಪೌದ್~, ಕಾವೇರಿ ಸಂಕ್ರಮಣ, `ಹುತ್ತರಿ ಹಬ್ಬ~ದ ಸಂದರ್ಭಗಳಲ್ಲಿ ಪುರುಷರು, ಮಹಿಳೆಯರು ತಮ್ಮ  ಸಾಂಪ್ರದಾಯಿಕ ಉಡುಪು ತೊಟ್ಟು ಬರುತ್ತಾರೆ. ಸಾವಿನ ಸಂದರ್ಭದಲ್ಲೂ ತಮ್ಮ ಸಂಪ್ರದಾಯದಂತೆ ಬಿಳಿಯ ಬಟ್ಟೆಯನ್ನೇ ಧರಿಸುತ್ತಾರೆ.

ಬೆಂಗಳೂರಿನಲ್ಲಿರುವ 40 ಸಾವಿರಕ್ಕೂ ಹೆಚ್ಚು ಕೊಡವರಿಗೆ `ಕೊಡವ ಸಮಾಜ~ ಸಾಂಸ್ಕೃತಿಕ ಕೇಂದ್ರವಾಗಿದೆ.

ಸೆಪ್ಟೆಂಬರ್ ಮೊದಲ ವಾರದಲ್ಲಿ ಬರುವ  `ಕೈಲ್ ಪೊದ್~ನಲ್ಲಿ ತಮ್ಮ ಬಳಿ ಇರುವ ಕತ್ತಿ, ರೈಫಲ್ ಇತ್ಯಾದಿ ಆಯುಧಗಳನ್ನಿಟ್ಟು ಪೂಜಿಸುತ್ತಾರೆ. ಅಕ್ಟೋಬರ್‌ನಲ್ಲಿ ಆಚರಿಸುವ ಕಾವೇರಿ ಸಂಕ್ರಮಣದಲ್ಲಿ ತಲಕಾವೇರಿಯಲ್ಲಿ ತೀರ್ಥೋದ್ಭವವಾದ ಮಾರನೇ ದಿನ ಆ ತೀರ್ಥ ತಂದು ಇಲ್ಲಿ ಪೂಜಿಸುತ್ತಾರೆ. ನಂತರ ಎಲ್ಲರಿಗೂ ಆ ತೀರ್ಥ ಹಂಚಲಾಗುತ್ತದೆ. ನವೆಂಬರ್- ಡಿಸೆಂಬರ್‌ನಲ್ಲಿ ಸುಗ್ಗಿಯ ಕಾಲದ `ಹುತ್ತರಿ ಹಬ್ಬ~. ಆಗ ಎಲ್ಲ ಸದಸ್ಯರಿಗೂ ಬತ್ತದ ತೆನೆ ಕೊಡಲಾಗುತ್ತದೆ.

ಕೊಡುಗೆ
ಶೌರ್ಯಕ್ಕೆ ಹೆಸರಾದ ಕೊಡವರ ಪ್ರತಿ ಮನೆಯಲ್ಲೂ ಯೋಧರಿದ್ದಾರೆ. ಸೇನೆಯಲ್ಲಿ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ ಕೊಡವರ ಸಂಖ್ಯೆಯೂ ಕಡಿಮೆಯೇನಲ್ಲ. ಹಾಗೆಯೇ ಕ್ರೀಡೆ, ಸಿನಿಮಾ ಕ್ಷೇತ್ರದಲ್ಲೂ ಈ ಸಮುದಾಯ ಹೆಸರು ಮಾಡಿದೆ. ನಗರದ ಅಭಿವೃದ್ಧಿಗೆ ಇವರ ಕೊಡುಗೆಯನ್ನು ಕಡೆಗಣಿಸುವಂತಿಲ್ಲ.

ದೇಶಕ್ಕೆ ಕೀರ್ತಿ ತಂದ ಕ್ರೀಡಾಪಟು ಅರ್ಜುನ್ ದೇವಯ್ಯ ಬೆಂಗಳೂರಿನಲ್ಲಿ ನೆಲೆಸಿ ಎಳೆಯರಿಗೆ ತಮ್ಮ ಅಕಾಡೆಮಿ ಮೂಲಕ ಮಾರ್ಗದರ್ಶನ ಮಾಡುತ್ತಿದ್ದಾರೆ. ಭಾರತೀಯ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಎಂ.ಪಿ. ಗಣೇಶ್, ಓಟಗಾರ್ತಿ ಅಶ್ವಿನಿ ನಾಚಪ್ಪ, ರೀತ್ ಅಬ್ರಹಾಂ, ಕ್ರಿಕೆಟ್ ಆಟಗಾರ ರಾಬಿನ್ ಉತ್ತಪ್ಪ, ಟೆನಿಸ್ ಆಟಗಾರ ರೋಹನ್ ಬೋಪಣ್ಣ, ಮೋಟಾರ್ ರೇಸಿಂಗ್‌ನಲ್ಲಿ ಹೆಸರು ಮಾಡಿರುವ ಜಗತ್ ಮತ್ತು ಅನಿತಾ ನಂಜಪ್ಪ ದಂಪತಿ ಕೊಡವರು.

ಬೆಂಗಳೂರಿನ ಮೇಯರ್ ಆಗಿದ್ದ ಪ್ರೇಮಾ ಕಾರ್ಯಪ್ಪ, ಹಿರಿಯ ರಾಜಕಾರಣಿಗಳಾದ ಎಂ.ಸಿ. ನಾಣಯ್ಯ, ಎ.ಕೆ. ಸುಬ್ಬಯ್ಯ, ಎಂ. ಎಂ. ನಾಣಯ್ಯ ಎಲ್ಲರೂ ಕೊಡವರು.
ಕೊಡಗಿನ ಮಹಿಳೆಯರು ಸಹಜ ಚೆಲುವಿಗೆ ಹೆಸರಾದವರು. 90ರ ದಶಕದಲ್ಲಿ ನಾಯಕಿಯಾಗಿದ್ದ ಪ್ರೇಮಾ ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಪಡೆದ ತಾರೆ. ಡೈಸಿ ಬೋಪಣ್ಣ, ಹರ್ಷಿಕಾ ಪೂಣಚ್ಚ, ನಿಧಿ ಸುಬ್ಬಯ್ಯ ಮುಂತಾದ ನವನಾಯಕಿಯರು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.

ಬೆಂಗಳೂರನ್ನು ದೇಶದ ಫ್ಯಾಷನ್ ಕೇಂದ್ರಗಳಲ್ಲಿ ಒಂದಾಗಿಸಿದ ಹೆಗ್ಗಳಿಕೆ ಕೊಡಗು ಮೂಲದ ಪ್ರಸಾದ್ ಬಿದ್ದಪ್ಪಗೆ ಸೇರುತ್ತದೆ. ಎಂಟಿವಿಯ ಖ್ಯಾತ ವಿಜೆ ನಿಖಿಲ್ ಚಿನ್ನಪ್ಪ ಕೊಡಗಿನವರು.

 ನೂರಾಂಡ್ ನಮ್ಮೆ
ಇಂತಹ ಕೊಡವರು ಸ್ಥಾಪಿಸಿದ ಬೆಂಗಳೂರು ಕೊಡವ ಸಮಾಜಕ್ಕೆ ಈಗ ನೂರರ ಹೆಮ್ಮೆ. ಶತಮಾನೋತ್ಸವದ ಸಂಭ್ರಮದ ನೆನಪಾಗಿ ದಾಸರಹಳ್ಳಿಯಲ್ಲಿ ಕಾವೇರಿ ಶಾಲೆಯ ಶಾಖೆಯೊಂದನ್ನು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ದುರ್ಬಲರಿಗೆ ಆಸರೆ ಒದಗಿಸಲು ವೃದ್ಧಾಶ್ರಮ, ಆಸ್ಪತ್ರೆ ಆರಂಭಿಸುವ ಯೋಜನೆಯೂ ಸಮಾಜಕ್ಕಿದೆ.

ಶತಮಾನೋತ್ಸವ ಆಚರಣೆಯಲ್ಲಿ ದೇಶದ ಇತರ ನಗರಗಳಲ್ಲಿ, ವಿದೇಶಗಳಲ್ಲಿ ನೆಲೆಸಿರುವ ಕೊಡವರು ಭಾಗಿಯಾಗಿದ್ದಾರೆ. ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಆಹಾರ ಮೇಳ, ವಸ್ತು ಪ್ರದರ್ಶನ, ಕ್ರೀಡಾ ಕೂಟ ನಡೆಯುತ್ತಿದೆ. ಕೊಡವರ ವಿಶಿಷ್ಟ ಸಂಸ್ಕೃತಿಗೆ ಸಾಕ್ಷಿಯಾಗುವ ಆಸಕ್ತಿ, ಉತ್ಸಾಹ ನಿಮಗಿದ್ದರೆ ಅರಮನೆ ಮೈದಾನಕ್ಕೆ ಬನ್ನಿ...! 

ಕೊಡವ ಸಮಾವೇಶ

ಕೊಡವ ಸಮಾಜ:
ಸಮಾಜದ ಶತಮಾನೋತ್ಸವ. ಶನಿವಾರ ಬೆಳಿಗ್ಗೆ 10ಕ್ಕೆ ಸಮಾವೇಶ. ಸಾಧಕರಿಗೆ ಸನ್ಮಾನ. ಅತಿಥಿಗಳು: ಹಂಸರಾಜ್ ಭಾರದ್ವಾಜ್, ಪ್ರೇಮಾ ಕಾರ್ಯಪ್ಪ, ಕೆ. ಮೊಣ್ಣಪ್ಪ, ಕೆ. ಅಯ್ಯಪ್ಪ, ಬ್ರಿ. ಅರ್ಜುನ್ ಮುತ್ತಣ್ಣ. ಮಧ್ಯಾಹ್ನ 2.30ಕ್ಕೆ ವಸ್ತು ಪ್ರದರ್ಶನ. 3.30ಕ್ಕೆ ಕೊಡವ ಸಂಸ್ಕೃತಿ ಕುರಿತು ವಿಚಾರ ಗೋಷ್ಠಿ. 4.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ.

ಭಾನುವಾರ ಬೆಳಿಗ್ಗೆ 9ಕ್ಕೆ ಕೊಡವ ಸಮಾಜದಿಂದ ಅರಮನೆ ಮೈದಾನ ವರೆಗೆ ಸಾಂಸ್ಕೃತಿಕ ಮೆರವಣಿಗೆ. 11ಕ್ಕೆ ಡಿ.ವಿ. ಸದಾನಂದಗೌಡ ಅವರಿಂದ ಸಮಾವೇಶ ಉದ್ಘಾಟನೆ , ಸ್ಮರಣ ಸಂಚಿಕೆ ಲೋಕಾರ್ಪಣೆ. ಸಂಜೆ 4.15ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ. ಸ್ಥಳ: ವೈಟ್ ಪೆಟಲ್ಸ್, ಅರಮನೆ ಮೈದಾನ, ಬಳ್ಳಾರಿ ರಸ್ತೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT