ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಟ್ಟು, ಸೊಕ್ಕು ಬಿಡಿ ಆರೋಗ್ಯದಿಂದಿರಿ - ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ

Last Updated 18 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಆಧುನಿಕ ಜೀವನದ ಅರಿಷಡ್ವರ್ಗಗಳಾದ ಸಿಟ್ಟು, ಸೊಕ್ಕು, ಸೇಡು ಹಾಗೂ ಆಹಾರದಲ್ಲಿ ಉಪ್ಪು, ಜಿಡ್ಡು ಮತ್ತು ಸಕ್ಕರೆಯನ್ನು ನಿಯಂತ್ರಿಸುವವರ ಆರೋಗ್ಯ ಉತ್ತಮವಾಗಿರುತ್ತದೆ~ ಎಂದು ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ ಹೇಳಿದರು.

ನಗರದಲ್ಲಿ ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ `ಮನೆಯಂಗಳದಲ್ಲಿ ಮಾತುಕತೆ~ ಯ ತಿಂಗಳ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, `ರೋಗಗಳು ಬಂದ ನಂತರ ಮರುಗುವ ಬದಲು ರೋಗಗಳು ಬಾರದಂತೆ ಜಾಗೃತಿ ವಹಿಸುವುದು ಮುಖ್ಯ. ಬಾಯಿಯ ಹಾಗೂ ಮನಸ್ಸಿನ ಚಪಲಗಳನ್ನು ಮೀರಿದರೆ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳಬಹುದು~ ಎಂದು ನುಡಿದರು.

`ಆಧುನಿಕ ಜೀವನ ಶೈಲಿಯಿಂದಾಗಿ ಮನುಷ್ಯನ ಆರೋಗ್ಯದಲ್ಲಿ ಏರುಪೇರುಗಳು ಕಂಡುಬರುತ್ತಿವೆ. ಪ್ರಸ್ತುತ ದಿನಗಳಲ್ಲಿ ಯುವ ಜನಾಂಗ ಹಣದ ಮೋಹಕ್ಕೆ ಮರುಳಾಗಿ ಸಮಾಜದ ಬಗೆಗಿನ ಕಾಳಜಿಯನ್ನೇ ಕಳೆದುಕೊಂಡಿದೆ. ಸಮಾಜದಿಂದ ಪಡೆದುಕೊಂಡ ಅನುಕೂಲಗಳಿಗೆ ಪ್ರತಿಫಲವಾಗಿ ಮನುಷ್ಯ ಸಮಾಜಕ್ಕೆ ಏನಾದರೂ ಸೇವೆ ಸಲ್ಲಿಸಬೇಕು. ಆದರೆ ಇತ್ತೀಚಿನ ಯುವಜನರು ನೈತಿಕತೆಯನ್ನೇ ಮರೆಯುತ್ತಿದ್ದಾರೆ~ ಎಂದು ಅವರು ವಿಷಾದಿಸಿದರು.

`ಕುಡಿತದಿಂದ ಮನುಷ್ಯನ ಪ್ರಜ್ಞೆ ಕ್ಷೀಣಿಸುತ್ತದೆ. ಪ್ರತಿಬಾರಿ ಕುಡಿದಾಗಲೂ ಮನುಷ್ಯನ ಮೆದುಳಿನ ಸುಮಾರು 10 ಸಾವಿರ ಮೆದುಳುಕೋಶಗಳು ಸಾಯುತ್ತವೆ. ಎಚ್‌ಐವಿಗೆ ತುತ್ತಾಗುವವರು ಬಹುಪಾಲು ಮದ್ಯ ವ್ಯಸನಿಗಳೇ ಆಗಿರುತ್ತಾರೆ. ಕುಡಿದಾಗ ತಾನು ಏನು ಮಾಡುತ್ತಿದ್ದೇನೆ ಎಂಬ ಅರಿವೇ ಮನುಷ್ಯನಿಗೆ ಇರುವುದಿಲ್ಲ.  ಮಹಿಳೆಯರ ಕುಡಿತದಿಂದ ಅವರಿಗೆ ಜನಿಸುವ ಮಕ್ಕಳು ಅಪರಾಧಿಗಳಾಗಿ, ಸಮಾಜಕ್ಕೆ ಮಾರಕವಾಗುತ್ತಾರೆ. ಇಷ್ಟೆಲ್ಲ ಅನನುಕೂಲಗಳಿರುವ ಕುಡಿತದಿಂದ ಜನರು ದೂರವಿರುವುದೇ ಒಳಿತು. ಆದರೆ ಕೇಂದ್ರ ಸರ್ಕಾರ ಕುಡಿತದ ವಯೋಮಿತಿಯನ್ನು 21 ರಿಂದ 18 ಕ್ಕೆ ಇಳಿಸುವ ಚಿಂತನೆ ನಡೆಸಿರುವುದು ದುರಂತ~ ಎಂದರು.

`ಆಧುನಿಕ ಜಗತ್ತಿನಲ್ಲಿಯೂ ಜ್ಯೋತಿಷಿಗಳಿಂದ ಮೋಸ ಹೋಗುವವರು ಹೆಚ್ಚಾಗಿದ್ದಾರೆ. ಮೂಢನಂಬಿಕೆಗಳಿಗೆ ಗುಲಾಮರಾಗಿ ಬದುಕುವುದಕ್ಕಿಂತ ದೇವರ ಮೇಲೆ ನಂಬಿಕೆ ಇಟ್ಟು ಕಷ್ಟಗಳನ್ನು ಎದುರಿಸಬೇಕು. ಕಾಯಕ ತತ್ವವನ್ನು ನಂಬಿ ಬದುಕುವವರು ಯಶಸ್ಸು ಪಡೆಯಲು ಸಾಧ್ಯ. ಜೀವನದಲ್ಲಿ ಆರೋಗ್ಯದಷ್ಟೇ ಅಧ್ಯಾತ್ಮವೂ ಮುಖ್ಯ. ಹೀಗಾಗಿ `ವಚನಾಮೃತ ವರ್ಷಿಣಿ~ ಎಂಬ ವಚನಗಳ ಧ್ವನಿಮುದ್ರಿಕೆಯನ್ನು ಹೊರತರುವ ಕಾರ್ಯ ನಡೆದಿದೆ~ ಎಂದರು.

`ಪ್ರಜಾವಾಣಿ~ ಜೊತೆಗಿನ ತಮ್ಮ ಸಂಬಂಧವನ್ನು ನೆನಪಿಸಿಕೊಂಡ ಅವರು `ನನ್ನ ಬರವಣಿಗೆಗೆ ಪ್ರೋತ್ಸಹ ನೀಡಿದ `ಪ್ರಜಾವಾಣಿ~ ಪತ್ರಿಕೆ ನನ್ನನ್ನು ಅಂಕಣಕಾರ್ತಿಯನ್ನಾಗಿ ರೂಪಿಸಿತು. ಇಂದಿಗೂ ಜನರು `ಪ್ರಜಾವಾಣಿ~ ಯಲ್ಲಿನ ಅಂಕಣ ಬರಹದಿಂದಲೇ ಗುರುತಿಸುತ್ತಾರೆ. ಪತ್ರಿಕೆ ನೀಡಿದ ಈ ಪ್ರೋತ್ಸಾಹಕ್ಕೆ ನಾನು ಕೃತಜ್ಞೆ. ಸುಮಾರು 38 ದೇಶಗಳ ಆರೋಗ್ಯ ಸಮಾವೇಶಗಳಲ್ಲಿ ಹೃದ್ರೋಗದ ಬಗ್ಗೆ ವಿಷಯ ಮಂಡಿಸಿದ ನಂತರ ನನ್ನ ತಂದೆಯ ಸಲಹೆಯ ಮೇರೆಗೆ ಕನ್ನಡದಲ್ಲಿ ಹೃದ್ರೋಗದ ಬಗ್ಗೆ ಬರೆಯಲು ಆರಂಭಿಸಿದೆ~ ಎಂದರು.

`ಮಕ್ಕಳ ಹೃದ್ರೋಗ ವೈದ್ಯರ ಕೊರತೆಯ ಕಾರಣದಿಂದ ಮಕ್ಕಳ ಹೃದಯ ಚಿಕಿತ್ಸೆಯ ಕ್ಷೇತ್ರವನ್ನು ಆರಿಸಿಕೊಂಡೆ. ಈ ವರೆಗೆ ಸುಮಾರು ಆರು ಸಾವಿರ ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ಇಲ್ಲದೇ ಹೃದಯ ಚಿಕಿತ್ಸೆ ನೀಡಿ ಯಶಸ್ಸು ಕಂಡಿದ್ದೇನೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಮಕ್ಕಳ ಆರೋಗ್ಯ ಸುರಕ್ಷತೆಗಾಗಿ ಸರ್ಕಾರ `ಹೃದಯ ಸಂಜೀವಿನಿ~ ಯೋಜನೆಯನ್ನೂ ಜಾರಿಗೆ ತಂದಿದೆ. ಬಜೆಟ್‌ನಲ್ಲಿ ಏಳು ಕೋಟಿ ರೂ.ಗಳನ್ನು ಸರ್ಕಾರ ಈ ಯೋಜನೆಗಳಿಗಾಗಿಯೇ ಮೀಸಲಿರಿಸಿರುವುದು ಉತ್ತಮ ಕಾರ್ಯ~ ಎಂದು ಅವರು ತಿಳಿಸಿದರು.

ಅಜ್ಜಿಯ ಸೀರೆಗೆ 98 ವರ್ಷ : ತಮ್ಮ ಸೀರೆಯ ಮೋಹವನ್ನು ಹೊರಹಾಕಿದ ಅವರು `ನಾನು ಈಗ ಉಟ್ಟಿರುವ ಸೀರೆಗೆ 98 ವರ್ಷ ವಯಸ್ಸಾಗಿದೆ. ಇದು ನನ್ನ ಅಜ್ಜಿಯ ಮದುವೆ ಸೀರೆ. ನಾನು ವಿದೇಶಗಳಿಗೆ ಹೋದ ಸಂದರ್ಭಗಳಲ್ಲಿಯೂ ಸೀರೆ ಉಡುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸುತ್ತಿದ್ದೇನೆ ಎಂಬ ಹೆಮ್ಮೆ ಇದೆ. ನಮ್ಮ ಪರಂಪರೆ ನಶಸುತ್ತಿದೆ ಎಂದು ಕೊರಗುವ ಬದಲು ಸಂಸ್ಕೃತಿ ಉಳಿಸುವ ಬಗ್ಗೆ ಗಮನ ನೀಡಬೇಕು~ ಎಂದು ಅವರು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT