ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಟ್ಟ್ಯಾಕೆ, ಸಿಡುಕ್ಯಾಕೆ...

Last Updated 25 ಫೆಬ್ರುವರಿ 2011, 16:40 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಬಜೆಟ್ ಭಾಷಣಕ್ಕೆ ಅಡ್ಡಿಪಡಿಸಿದ ವಿರೋಧಿ ಸದಸ್ಯರ ಮೇಲೆ ‘ದೀದಿ’ ಹಲವು ಬಾರಿ ಕೆರಳಿ ಕೆಂಡವಾದರು.ಪಶ್ಚಿಮ ಬಂಗಾಳಕ್ಕೆ ಯೋಜನೆಗಳನ್ನು ಪ್ರಕಟಿಸುವ ಸಂದರ್ಭದಲ್ಲಿ, ತಮ್ಮ ರಾಜ್ಯಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಬಿಹಾರ, ಪಂಜಾಜ್, ಕೇರಳ ಮತ್ತು ಆಂಧ್ರ ಪ್ರದೇಶದ ಸಂಸದರು ಗದ್ದಲ ಆರಂಭಿಸಿದ್ದು ಅವರ ಸಿಟ್ಟಿಗೆ ಕಾರಣವಾಯಿತು.

ಸುಮಾರು 90 ನಿಮಿಷಗಳ ಭಾಷಣದ ವೇಳೆ ಮಧ್ಯಪ್ರವೇಶಿಸಿದ ಬಿಹಾರದ ಜೆಡಿಯು ಸದಸ್ಯರು, ಕಳೆದ ವರ್ಷ ಘೋಷಿಸಿದ ಯೋಜನೆಗಳ ಸ್ಥಿತಿಗತಿಯ ವಿವರ ನೀಡುವಂತೆ ಒತ್ತಾಯಿಸಿದರು. ಆಗ ಕೋಪಗೊಂಡ ಬ್ಯಾನರ್ಜಿ ‘ಏನಿದು?’ ಎಂದು ಕೂಗಿದರು. ಒಮ್ಮೆಯಂತೂ ಸದಸ್ಯರ ಕೂಗಾಟವನ್ನೂ ಮೀರಿಸುವಂತೆ ಎತ್ತರದ ಧ್ವನಿಯಲ್ಲಿ ‘ಡೋಂಟ್ ಶೌಟ್’ ಎಂದು ಮೂರ್ನಾಲ್ಕು ಬಾರಿ ಅವರು ಅಬ್ಬರಿಸಿದರು.

ಜೆಡಿಯು ಜೊತೆ ಸೇರಿದ ಶಿರೋಮಣಿ ಅಕಾಲಿ ದಳ, ಟಿಡಿಪಿ ಮತ್ತಿತರ ಪಕ್ಷಗಳು, ಸಚಿವರು ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟು ಬಹಳಷ್ಟು ಯೋಜನೆಗಳನ್ನು ತಮ್ಮ ರಾಜ್ಯಕ್ಕೆ ಕೊಟ್ಟುಕೊಂಡಿದ್ದಾರೆ ಎಂದು ದೂರಿದರು.

ಇದಕ್ಕೆಲ್ಲಾ ಎದುರುತ್ತರ ಕೊಡುತ್ತಲೇ ಕೆಳಗೆ ಕುಳಿತ ಮಮತಾ, ತಮ್ಮ ಪಕ್ಕ ಕುಳಿತಿದ್ದ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರತ್ತ ತಿರುಗಿ ಯೋಜನೆಗಳನ್ನು ಸಮರ್ಥಿಸಿಕೊಳ್ಳಲು ಮುಂದಾದರು. ಆಗ ಸಂಸದೀಯ ವ್ಯವಹಾರ ಸಚಿವ ಪಿ.ಕೆ.ಬನ್ಸಲ್ ಮತ್ತು ವಿ.ನಾರಾಯಣ ಸ್ವಾಮಿ ಅವರು ವಿರೋಧಿ ಸದಸ್ಯರ ಬೆಂಚುಗಳತ್ತ ತೆರಳಿ ಜೆಡಿಯು ಸದಸ್ಯರನ್ನು ಸಮಾಧಾನಗೊಳಿಸಲು ಯತ್ನಿಸಿದರು. ಕೆಲ ವಿರೋಧಿ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂಭಾಗಕ್ಕೂ ತೆರಳಿ ಪ್ರತಿಭಟಿಸಿದರು.

ಸದಸ್ಯರ ಗೈರು
ಆಡಳಿತಾರೂಢ ಮತ್ತು ವಿರೋಧ ಪಕ್ಷಗಳ ಸದಸ್ಯರ ಹಾಜರಿ ನಿರೀಕ್ಷಿತ ಪ್ರಮಾಣದಲ್ಲಿ ಇರಲಿಲ್ಲ. ರಾಹುಲ್ ಗಾಂಧಿ, ಗೃಹ ಸಚಿವ ಪಿ.ಚಿದಂಬರಂ, ಕೃಷಿ ಸಚಿವ ಶರದ್ ಪವಾರ್, ಕಾಂಗ್ರೆಸ್ ಸಂಸದ ರಾಜ್ ಬಬ್ಬರ್ ಸೇರಿದಂತೆ ಹಲವರು ತಡವಾಗಿ ಆಗಮಿಸಿದರು.

ಗದ್ದಲ ಆರಂಭವಾಗುತ್ತಿದ್ದಂತೆಯೇ ಕೆಲ ಸದಸ್ಯರು ಹೊರನಡೆದರು. ಬ್ಯಾನರ್ಜಿ ಅವರ ಅರ್ಧ ಭಾಷಣ ಮುಗಿದಾಗ ಚಿದಂಬರಂ ಮತ್ತು ಬಿಜೆಪಿ ಸಂಸದ ರಾಜ್‌ನಾಥ್ ಸಿಂಗ್ ತೆರಳಿದರು.ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ನ ಯುವ ಸಂಸದರಾದ ಸಚಿನ್ ಪೈಲಟ್, ಜ್ಯೋತಿರಾದಿತ್ಯ ಸಿಂಧಿಯಾ, ಜಿತಿನ್ ಪ್ರಸಾದ್, ದೀಪೇಂದ್ರ ಸಿಂಗ್ ಹೂಡಾ, ಪ್ರಿಯಾ ದತ್, ಸಂದೀಪ್ ದೀಕ್ಷಿತ್, ಮಿಲಿಂದ್ ದೇವ್ರಾ ಮತ್ತಿತರರು ಒಂದೇ ಕಡೆ ಕುಳಿತು ತಮ್ಮ ತಮ್ಮಲ್ಲೇ ಚರ್ಚೆಯಲ್ಲಿ ನಿರತರಾಗಿದ್ದರು.

ದ್ವಿಪದಿ ಮೋಡಿ
ಕೆಲವೊಮ್ಮೆ ಸದನ ಲಘು ಸನ್ನಿವೇಶಗಳಿಗೂ ಸಾಕ್ಷಿಯಾಯಿತು. ಬ್ಯಾನರ್ಜಿ ಕೆಲ ದ್ವಿಪದಿಗಳನ್ನು ಹೇಳಿ ಸದಸ್ಯರ ಮುಖ ಅರಳಿಸಿದರು.

ಹಮ್ ಆಹ್ ಭೀ ಭರತೆ ಹೈ ತೊ ಹೋ ಜಾತೇ ಹೈ ಬದ್ನಾಮ್,
ವೋಹ್ ಕತ್ಲ್ ಭೀ ಕರ್ತೆ ಹೈ ತೊ ಚರ್ಚಾ ನಹಿ ಹೋತಿ

(ನಾನೊಂದು ನಿಟ್ಟುಸಿರು ಬಿಟ್ಟರೂ ಅದಕ್ಕೆ ತಪ್ಪು ಅರ್ಥ ಕಲ್ಪಿಸಲಾಗುತ್ತದೆ, ಆದರೆ ಅವರು ಕೊಲೆ ಮಾಡಿದರೂ ಅದು ಚರ್ಚೆಗೇ ಬರುವುದಿಲ್ಲ) ಎಂಬ ದ್ವಿಪದಿಯನ್ನು ಮಮತಾ ಅವರು ಹೇಳಿದರು.

ಹೊಸ ರೈಲುಗಳು ಮತ್ತು ಯೋಜನೆಗಳ ಬಗ್ಗೆ ಅವರು ಒಂದೇ ಉಸಿರಿನಲ್ಲಿ ವಿವರ ನೀಡುತ್ತಾ ಹೋದಾಗ ಮಧ್ಯೆ ತಡೆದ ಸಭಾಧ್ಯಕ್ಷೆ ಮೀರಾ ಕುಮಾರ್, ‘ನೀವು ಬರೆದು ತಂದಿರುವ ಸುಂದರ ದ್ವಿಪದಿಗಳನ್ನು ಹೇಳುವುದನ್ನು ಮಾತ್ರ ತಪ್ಪಿಸಬೇಡಿ’ ಎಂದು ಕೋರಿದರು.

ಇದರಿಂದ ಉತ್ತೇಜನಗೊಂಡ ಮಮತಾ ಇನ್ನೆರಡು ದ್ವಿಪದಿಗಳನ್ನು ಹೇಳಿದರು. ಅವೆರಡೂ ದೇಶಕ್ಕಾಗಿ ಜೀವ ತೇಯ್ದ ಸೈನಿಕರನ್ನು ಉದ್ದೇಶಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT