ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡಬ್ಲ್ಯುಜಿ: ಹೊಸ ಪ್ರಕರಣ ಸಿಬಿಐ ತನಿಖೆಗೆ

Last Updated 16 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಾಮನ್‌ವೆಲ್ತ್ ಕ್ರೀಡಾಕೂಟ (ಸಿಡಬ್ಲ್ಯುಜಿ) ಕುರಿತಂತೆ ಕೆಲವು ಸರ್ಕಾರಿ ನೌಕರರು ಕ್ರಿಮಿನಲ್ ಪಿತೂರಿ, ಭ್ರಷ್ಟಾಚಾರ ನಡೆಸಿದ್ದಾರೆಂಬ ಆರೋಪದ ಬಗ್ಗೆ ತನಿಖೆ ನಡೆಸಲು ಸಿವಿಸಿ ಹೊಸ ಪ್ರಕರಣಗಳನ್ನು ಸಿಬಿಐಗೆ ನೀಡಲಿದೆ.

ಕೆಲವು ಸರ್ಕಾರಿ ಸಂಸ್ಥೆಗಳು ಕೈಗೊಂಡ ಸುಮಾರು 7 ಪ್ರಕರಣಗಳಲ್ಲಿ ಹಣಕಾಸು ಮತ್ತು ಆಡಳಿತಾತ್ಮಕ ಅವ್ಯವಹಾರಗಳು ನಡೆದಿರುವುದು ಪತ್ತೆಯಾಗಿದೆ ಎಂದು ಸಿವಿಸಿ ಮೂಲಗಳು ಹೇಳಿವೆ.

`ಕಾಮಗಾರಿಗೆ ಟೆಂಡರ್‌ಗಳನ್ನು ಆಹ್ವಾನಿಸುವಲ್ಲಿ ಅವ್ಯವಹಾರಗಳು ನಡೆದಿವೆ ಅಲ್ಲದೆ ಆಯ್ದ ಕೆಲವರಿಗೆ ಅನಗತ್ಯ ಲಾಭ ಮಾಡಿಕೊಡಲಾಗಿದೆ. ಖಾಸಗಿ ಸಂಸ್ಥೆಗಳ ಮಾಲೀಕರು, ನೌಕರರೂ ಭಾಗಿಯಾಗಿರುವ ಬಗ್ಗೆ ಸಾಕ್ಷ್ಯಾಧಾರಗಳು ಲಭಿಸಿವೆ~ ಎಂದು ಸಿವಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವಾರ ನಡೆದ ಕೇಂದ್ರ ಜಾಗೃತ ಆಯೋಗದ ಪರಿಶೀಲನಾ ಸಭೆಯಲ್ಲಿ ಈ ವಿಷಯವನ್ನು ಸಿಬಿಐ ಅಧಿಕಾರಗಳ ಜತೆ ಚರ್ಚಿಸಲಾಗಿದೆ.`ಎಲ್ಲಾ ಅಗತ್ಯ ದಾಖಲೆಗಳನ್ನು ಮತ್ತು ವಿಷಯದ ಬಗ್ಗೆ ಆಯೋಗ ಪತ್ತೆ ಹಚ್ಚಿರುವ ಮಾಹಿತಿಗಳನ್ನು ಸಿಬಿಐ ಪಡೆದುಕೊಂಡಿದೆ~ ಎಂದು ಹೇಳಿದ್ದಾರೆ.

ಕಳೆದ ವರ್ಷ ಅಕ್ಟೋಬರ್ 3-14ರ ಅವಧಿಯಲ್ಲಿ ನಡೆದ ಕ್ರೀಡಾಕೂಟಕ್ಕಾಗಿ ಜಾರಿಗೊಳಿಸಿದ ಯೋಜನೆಗಳ ಪೈಕಿ ಕನಿಷ್ಠ 71 ಯೋಜನೆಗಳ  ಬಗ್ಗೆ ಸಿವಿಸಿ ತನಿಖೆ ನಡೆಸುತ್ತಿದೆ.

`ಸಂಘಟನಾ ಸಮಿತಿಯಲ್ಲಿ ಅರ್ಹತೆ ಮತ್ತು ಸೂಕ್ತ ಹಿನ್ನೆಲೆ ಇರದ ಅನೇಕರನ್ನು ನೇಮಕ ಮಾಡಿಕೊಂಡಿರುವಲ್ಲಿ ಮಾಜಿ ಮತ್ತು ಹಾಲಿ ಅಧಿಕಾರಿಗಳ ಪಾತ್ರವಿದೆ ಎಂಬ ಆರೋಪದ ಅನೇಕ ದೂರುಗಳು ಬಂದಿವೆ. ಇವುಗಳನ್ನು ಪರಿಶೀಲಿಸಲಾಗುತ್ತಿದ್ದು ಸಿಬಿಐಗೆ ಹಸ್ತಾಂತರಿಸಲಾಗುವುದು~ ಎಂದು ಸಿವಿಸಿ ಅಧಿಕಾರಿ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT