ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಡಿ.: ಸಂಕಷ್ಟದಲ್ಲಿ ಶಾಂತಿ ಭೂಷಣ್

Last Updated 21 ಏಪ್ರಿಲ್ 2011, 19:35 IST
ಅಕ್ಷರ ಗಾತ್ರ

ನವದೆಹಲಿ/ಬೆಂಗಳೂರು (ಪಿಟಿಐ): ಅಣ್ಣಾ ಹಜಾರೆ ಅವರ ಹೋರಾಟದಿಂದ ಕೊನೆಗೂ ಲೋಕಪಾಲ ಮಸೂದೆ ಬರುತ್ತದೆ ಎಂಬ ಆಶಾಭಾವನೆ ಮೂಡಿರುವಾಗಲೇ ಆ ಪ್ರಯತ ್ನವನ್ನು ಬುಡಮೇಲುಗೊಳಿಸಲು ನಡೆಯುತ್ತಿರುವ ಯತ್ನಕ್ಕೆ ಬಲ ಬರತೊಡಗಿದೆ.

ಹಿರಿಯ ವಕೀಲ ಶಾಂತಿ ಭೂಷಣ್ ಇದ್ದಾರೆಂದು ಹೇಳಿರುವ ಸಿ.ಡಿ. ಸಂಭಾಷಣೆ ನಕಲಿಯಲ್ಲ ಎಂಬ ಸರ್ಕಾರಿ ಪ್ರಯೋಗಾಲಯದ ವರದಿ ಮತ್ತೊಂದು ಭಾರಿ ಹೊಡೆತ ನೀಡುವ ಲಕ್ಷಣ ತೋರಿಸಿದೆ.

ಲೋಕಪಾಲ್ ಮಸೂದೆಯ ಕರಡು ರಚನಾ ಸಮಿತಿಯ ಸದಸ್ಯರನ್ನು ಅವಮಾನಿಸುವ ಪ್ರಸಂಗಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಬೇಸರಗೊಂಡಿರುವ ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿರುವ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಸಮಿತಿಯಿಂದ ಹೊರಬರುವ ಬಗ್ಗೆ ಚಿಂತನೆ ನಡೆಸತೊಡಗಿದ್ದಾರೆ.

‘ಅಣ್ಣಾ ಹಜಾರೆ ಆರಂಭಿಸಿದ ಭ್ರಷ್ಟಾಚಾರ ವಿರುದ್ಧದ ಧರ್ಮಯುದ್ಧದಿಂದ ಕೆಲವು ವರ್ಗದ ಜನರಲ್ಲಿ ನಡುಕ ಆರಂಭವಾಗಿದೆ. ಅವರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಜನಬೆಂಬಲ ಸಿಕ್ಕೀತು ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಇದೀಗ ನಡೆಯುತ್ತಿರುವುದು ಖಂಡಿತವಾಗಿಯೂ ಭ್ರಷ್ಟಾಚಾರ ವಿರುದ್ಧದ ಅಭಿಯಾನವನ್ನು ಹಾದಿ ತಪ್ಪಿಸುವ ಕೆಲಸ’ ಎಂದು ಬೆಂಗಳೂರಿನಲ್ಲಿ ನೊಂದು ನುಡಿದಿರುವ ಸಂತೋಷ್ ಹೆಗ್ಡೆ, ತಮ್ಮ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಸಮಿತಿಯಿಂದ ಹೊರ ಬರುವ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಸಿ.ಡಿ. ನಕಲಿ ಅಲ್ಲ:  ಶಾಂತಿ ಭೂಷಣ್ ಅವರು ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಮತ್ತು ಅಮರ್ ಸಿಂಗ್ ಜತೆಗೆ ಪ್ರಕರಣವೊಂದರ ಸಂಬಂಧ ದೂರವಾಣಿಯಲ್ಲಿ ಚರ್ಚಿಸಿರುವ ಸಿ.ಡಿ. ನಕಲಿಯಲ್ಲ, ಅಸಲಿ ಎಂದು ಹೈದರಾಬಾದ್‌ನ ಕೇಂದ್ರೀಯ ವಿಧಿ ವಿಜ್ಞಾನ  ಪ್ರಯೋಗಾಲಯದಲ್ಲಿ (ಸಿಎಫ್‌ಎಸ್‌ಎಲ್) ಹೇಳಿದೆ. ಹೀಗಾಗಿ  ಶಾಂತಿ ಭೂಷಣ್ ಅವರು ಇದೀಗ ಸಂಕಷ್ಟದಲ್ಲಿ ಸಿಲುಕಿದ್ದಾರೆ.

‘ಧ್ವನಿಮುದ್ರಣದಲ್ಲಿ ಎಲ್ಲೂ ಅಂತರ ಕಾಣುತ್ತಿಲ್ಲ, ಮಾತಿನ ನಿರಂತರತೆ ಹಾಗೆಯೇ ಇದೆ. ಧ್ವನಿಯಲ್ಲಿ ಬದಲಾವಣೆಯೂ ಗೊತ್ತಾಗುತ್ತಿಲ್ಲ. ಹಿನ್ನೆಲೆ ಧ್ವನಿಯಲ್ಲೂ ಬದಲಾವಣೆ ಕಾಣಿಸುತ್ತಿಲ್ಲ’ ಎಂದು ಸಿಎಫ್‌ಎಸ್‌ಎಲ್‌ನ ಪ್ರಾಥಮಿಕ ವರದಿ ತಿಳಿಸಿದೆ. ಇದರಿಂದಾಗಿ ಲೋಕಪಾಲ ಮಸೂದೆ ರಚನಾ ಸಮಿತಿಗೆ ಶಾಂತಿ ಭೂಷಣ್ ಅವರು ರಾಜೀನಾಮೆ ನೀಡಬೇಕು ಎಂಬ ಒತ್ತಾಯ ಹೆಚ್ಚಿದೆ.
 
ಆದರೆ ಇದೊಂದು ನಕಲಿ ಸಿ.ಡಿ. ಎಂದು ಹೇಳುವ ಮೂಲಕ ಟ್ರಥ್ ಲ್ಯಾಬ್‌ನ ನಿರ್ದೇಶಕ ಎಸ್. ಆರ್. ಸಿಂಗ್ ತಮ್ಮ ಈ ಮೊದಲಿನ ಹೇಳಿಕೆಯನ್ನೇ ಸಮರ್ಥಿಸಿಕೊಂಡಿದ್ದಾರೆ. ಪ್ರಮುಖ ಸ್ಥಳಗಳಲ್ಲಿ ಮಾತಿನಲ್ಲಿ ಭಾರಿ ಅಂತರ ಇದ್ದು, ಇದುವೇ ನಕಲಿ ಮಾಡಿದ್ದಕ್ಕೆ ಪ್ರಮುಖ ಸಾಕ್ಷಿಯಾಗುತ್ತದೆ ಎಂದು ಅವರು ಹೇಳಿದ್ದಾರೆ.
ಪ್ರಯೋಗಾಲಯಗಳ ವಿಭಿನ್ನ ವರದಿ ಬಂದಿರುವ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್ ಈ ಸಿ.ಡಿ. ಪ್ರಕರಣವನ್ನು ತನಿಖೆಗಾಗಿ ವಿಶೇಷ ಘಟಕಕ್ಕೆ ವಹಿಸಿದೆ.

ಪ್ರಯೋಗಾಲಯ ವರದಿಯಿಂದ ಅಮರ್ ಸಿಂಗ್ ಕೈಗೆ ಹೊಸ ಅಸ್ತ್ರ ಸಿಕ್ಕಿದಂತಾಗಿದ್ದು, ಮಸೂದೆ ರಚನಾ ಸಮಿತಿಯಿಂದ ಶಾಂತಿ ಭೂಷಣ್ ಹೊರಬರಲೇಬೇಕು ಎಂದು ಆಗ್ರಹಿಸಿದ್ದಾರೆ.

ಎರಡು ಪ್ರಯೋಗಾಲಯಗಳು ಸಿ.ಡಿ. ವಿಚಾರದಲ್ಲಿ ವಿಭಿನ್ನ ವರದಿ ನೀಡಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿರುವ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್, ಸ್ವತಃ ಅಮೆರಿಕದ ಪರಿಣಿತರೇ ಇದೊಂದು ನಕಲಿ ಸಿ.ಡಿ. ಎಂದು ಹೇಳಿದ್ದಾರೆ, ಹೀಗಾಗಿ ಸಿಎಫ್‌ಎಸ್‌ಎಲ್‌ನ ವರದಿಯನ್ನು ನಂಬುವುದು ಕಷ್ಟ ಎಂದಿದ್ದಾರೆ.

ಮಸೂದೆ ರಚನಾ ಸಮಿತಿಯ ಮತ್ತೊಬ್ಬ ಸದಸ್ಯ ಅರವಿಂದ ಕೇಜ್ರಿವಾಲ್ ಅವರು ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ‘ಸದ್ಯಕ್ಕೆ ಸಮಿತಿಯಲ್ಲಿರುವ ನಾವುಗಳಾರೂ ರಾಜೀನಾಮೆ ನೀಡುವುದಿಲ್ಲ’ ಎಂದೂ ಕೇಜ್ರಿವಾಲ್ ಹೇಳಿದ್ದಾರೆ.

ಪ್ರತಿಕ್ರಿಯೆಗೆ ಬಿಜೆಪಿ ನಕಾರ:
ಶಾಂತಿ ಭೂಷಣ್ ಸುತ್ತ ವಿವಾದಗಳು ಏಳುತ್ತಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿ, ತಾನು ಕೇವಲ ‘ಮೂಕ ಪ್ಷೇಕ್ಷಕ’ ಎಂದು ಹೇಳಿದೆ. ಆದರೂ ಈ ಎಲ್ಲ ವಿವಾದಗಳ ಹಿಂದೆ ಕಾಂಗ್ರೆಸ್‌ನ ಕೈವಾಡ ಇರುವ ಶಂಕೆ ವ್ಯಕ್ತಪಡಿಸಿದೆ.

‘ಜಂಟಿ ಸಮಿತಿ ರಚಿಸಿಗೊಂಡದ್ದು ಕಾಂಗ್ರೆಸ್ ಮತ್ತು ಪ್ರತಿಭಟನಾ ನಿರತರು. ನಿಮ್ಮಂತೆಯೇ ನಾವು ಸಹ ಇಡೀ ಪ್ರಸಂಗದಲ್ಲಿ ಕೇವಲ ಮೂಕ ಪ್ರೇಕ್ಷಕರು ಮಾತ್ರ, ಅಣ್ಣಾ ಹಜಾರೆ ಅವರೇ ಈ ಬಗ್ಗೆ ಹೇಳಿಕೆ ನೀಡಬೇಕು’ ಎಂದು ಪಕ್ಷದ ವಕ್ತಾರ ಪ್ರಕಾಶ್ ಜಾವಡೇಕರ್ ಗುರುವಾರ ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.

‘ಲೋಕಪಾಲ ಮಸೂದೆ ರಚನೆಗೆ ಅಡ್ಡಿಪಡಿಸಿ ಸಮಿತಿಯ ಸದಸ್ಯರನ್ನು ಅವಮಾನಿಸಲು ಕೆಲವು ಶಕ್ತಿಗಳು ಯತ್ನಿಸುತ್ತಿವೆ. ಒಂದು ಬದಿಯಿಂದ ಕೊಟ್ಟು ಮತ್ತೊಂದು ಬದಿಯಿಂದ ಕಿತ್ತುಕೊಳ್ಳುವುದು ಕಾಂಗ್ರೆಸ್ ಸ್ವಭಾವ’ ಎಂದು ಹೇಳಿದ ಅವರು, ಮೊದಲು ಜಂಟಿ ಸಮಿತಿ ರಚನೆಗೆ ಒಪ್ಪಿ, ಬಳಿಕ ಸಮಿತಿಯ ಸದಸ್ಯರ ವಿರುದ್ಧ ಆರೋಪ ಮಾಡುತ್ತಿರುವ ಪಕ್ಷದ ಧೋರಣೆಯನ್ನು ಟೀಕಿಸಿದರು.

ಸೋನಿಯಾ ಪತ್ರದಿಂದ ಸಂತಸವಾಗಿದೆ- ಹಜಾರೆ:  ಇನ್ನೊಬ್ಬರ ಹೆಸರಿಗೆ ಮಸಿ ಬಳಿಯುವ ಪ್ರಚಾರ ಕಾರ್ಯಗಳನ್ನು ತಾನು ಬೆಂಬಲಿಸುವುದಿಲ್ಲ ಎಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮಗೆ  ಬರೆದಿರುವ ಪತ್ರದಿಂದ  ಸಂತಸವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ತಿಳಿಸಿದ್ದಾರೆ.

‘ ನನ್ನ ವಿರುದ್ಧ ಕಿಡಿಕಾರುವವರನ್ನು ಅಥವಾ ದ್ವೇಷ ಸಾಧಿಸುವವರನ್ನು ಎಂದಿಗೂ ಬೆಂಬಲಿಸುವುದಿಲ್ಲ ಎಂದು ಸೋನಿಯಾ ಗಾಂಧಿ ಅವರು ಬರೆದಿರುವ ಪತ್ರವನ್ನು ಓದಿ ನನಗೆ ಸಂತಸವಾಗಿದೆ’ ಎಂದು ಹಜಾರೆ ಹೇಳಿದ್ದಾರೆ.

ಲೋಕಪಾಲ ಮಸೂದೆಯ ಕರಡು ಸಿದ್ಧಪಡಿಸುವ ಹಂತದಲ್ಲಿ ಅದನ್ನು ಬುಡಮೇಲುಗೊಳಿಸಲು ಭ್ರಷ್ಟ ಶಕ್ತಿಗಳು ಒಗ್ಗೂಡಿವೆ ಎಂದು ಹಜಾರೆ ಕಾಂಗ್ರೆಸ್ ಅಧ್ಯಕ್ಷೆಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

ನ್ಯಾಯಾಲಯದಲ್ಲೇ ಉತ್ತರ:   ಲೋಕಪಾಲ ಮಸೂದೆ ರಚನಾ ಸಮಿತಿಯ ಸಹ ಅಧ್ಯಕ್ಷ ಶಾಂತಿ ಭೂಷಣ್ ಅವರು ತಮ್ಮ ವಿರುದ್ಧ ಸಲ್ಲಿಸಿರುವ  ಮಾನನಷ್ಟ ಮೊಕದ್ದಮೆಗೆ ತಾವು ನ್ಯಾಯಾಲಯದಲ್ಲೇ ಉತ್ತರಿಸುವುದಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

‘ನಾನು ನನ್ನ ರಾಜಕೀಯ ಜೀವನದಲ್ಲಿ ಇಂತಹ ಹಲವು ನೋಟಿಸ್‌ಗಳನ್ನು ಪಡೆದುಕೊಂಡಿದ್ದೇನೆ. ಇದಕ್ಕೆ ನಾನು ನ್ಯಾಯಾಲಯದಲ್ಲೇ ಉತ್ತರ ನೀಡುವೆ’ ಎಂದು ಅವರು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT