ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡಿಲಿಗೆ ಮಹಿಳೆ ಬಲಿ, ಇಬ್ಬರಿಗೆ ಗಾಯ

Last Updated 23 ಫೆಬ್ರುವರಿ 2011, 17:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಚಾಮರಾಜನಗರ, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬುಧವಾರ ಅಕಾಲಿಕ ಮಳೆ ಸುರಿದಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಸಿಡಿಲು ಬಡಿದು ಮೃತಪಟ್ಟು, ಇನ್ನಿಬ್ಬರು ಗಾಯಗೊಂಡಿದ್ದಾರೆ.

ಚಾಮರಾಜನಗರ ವರದಿ: ಜಿಲ್ಲೆಯ ವಿವಿಧೆಡೆ ಮಧ್ಯಾಹ್ನ ಅನಿರೀಕ್ಷಿತವಾಗಿ ಸುಮಾರು ಅರ್ಧ ಗಂಟೆ ಕಾಲ ಮಳೆ ಸುರಿಯಿತು.

ಚಾಮರಾಜನಗರ ತಾಲ್ಲೂಕಿನ ಬ್ಯಾಡಮೂಡ್ಲು ಗ್ರಾಮದಲ್ಲಿ ಕೂಲಿ ಕೆಲಸಕ್ಕೆ ಹೋಗಿದ್ದ ಮಹಿಳೆಯರು ಮಳೆ ಕಾರಣ ಗ್ರಾಮದ ಮಾರಮ್ಮ ದೇವಾಲಯದ ಬಳಿಯ ಬೇವಿನ ಮರದ ಕೆಳಗೆ ನಿಂತಿದ್ದರು. ಅದೇ ವೇಳೆ ಸಿಡಿಲು      ಬಡಿಯಿತು.

ಚಿಕ್ಕರಸಮ್ಮ ಎಂಬುವವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಮಹಿಳೆಯರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಕೊಡಗಿನ ಹಲವೆಡೆ ಮಳೆ (ಮಡಿಕೇರಿ ವರದಿ): ಜಿಲ್ಲೆಯ ಅನೇಕ ಕಡೆಗಳಲ್ಲಿ ಗುರುವಾರ ಮಳೆಯಾಗಿದೆ.  ಮಡಿಕೇರಿ ನಗರ ಹೊರತುಪಡಿಸಿ ದಕ್ಷಿಣ ಕೊಡಗು ಹಾಗೂ ಉತ್ತರ ಕೊಡಗಿನಲ್ಲಿ ಮಳೆ ಸುರಿದಿದೆ. ವರ್ಷದ ಮೊದಲ ಮಳೆ ಬಿದ್ದು ಜನತೆಗೆ ಹರ್ಷ ಉಂಟು ಮಾಡಿದರೆ, ಕಾಫಿ ಬೆಳೆಗಾರರಿಗೆ ಮಾತ್ರ ಒಂದೆಡೆ, ಸಂತಸ ಮತ್ತೊಂದೆಡೆ ತೊಂದರೆ.
ಮಳೆಯಿಂದಾಗಿ ಕಾಫಿ ಕಣದಲ್ಲಿ ಒಣಗಿಸಲು ಹಾಕಿದ್ದ ರೋಬಸ್ಟಾ ಕಾಫಿ ಒದ್ದೆಯಾಗಿದೆ.

ಇನ್ನೂ ಕಾಫಿ ಕೊಯ್ಲು ಕೆಲಸ ಮುಗಿಯದಿರುವುದರಿಂದ 15 ದಿನ ಬಿಟ್ಟು ಮಳೆ ಸುರಿದಿದ್ದರೆ ಎಲ್ಲರಿಗೂ ಅನುಕೂಲವಾಗುತ್ತಿತ್ತು ಎಂದು ಬೆಳೆಗಾರರು ಅಭಿಪ್ರಾಯಪಟ್ಟಿದ್ದಾರೆ.  ಈಗ ಮಳೆ ಬೀಳುವುದರಿಂದ ಕಾಫಿ ಹೂ ಅರಳಲು ಸೂಕ್ತ ಅವಧಿ.

ಆದರೆ, ಕಾರ್ಮಿಕರ ಕೊರತೆಯಿಂದ ಕಾಫಿ ಕೊಯ್ಲು ಕೆಲಸ ಮುಗಿಯದಿರುವುದರ ಜತೆಗೆ, ಕಣದಲ್ಲಿ ಬಿದ್ದಿರುವ ಕಾಫಿ ಮಳೆಗೆ ಒದ್ದೆಯಾಗಿರುವುದರಿಂದ ಬೆಳೆಗಾರರಿಗೆ ಒಂದೆಡೆ ಮಳೆ ಬಂದ ಸಂತಸ, ಮತ್ತೊಂದೆಡೆ ಕಾಫಿ ಒಣಗದ ಪರಿಸ್ಥಿತಿಯಿಂದ ತೊಂದರೆ ಸಿಲುಕಿದ್ದಾರೆ.

ದಕ್ಷಿಣ ಕೊಡಗಿನಲ್ಲಿ ಬೆಳಗಿನಿಂದ ಮೋಡ ಕವಿದ ವಾತಾವರಣವಿತ್ತು. ಬಳಿಕ ಮಧ್ಯಾಹ್ನದ ವೇಳೆಗೆ ಗೋಣಿಕೊಪ್ಪಲು ಪಟ್ಟಣದಲ್ಲಿ ಸುಮಾರು 10 ನಿಮಿಷಗಳ ಕಾಲ ಬಿರುಸಿನಿಂದ ಮಳೆ ಸುರಿಯಿತು. ಕುಟ್ಟ ಭಾಗದಲ್ಲಿ ಬೆಳಿಗ್ಗೆ 11 ಗಂಟೆ ವೇಳೆಗೆ ಸಾಧಾರಣ ಮಳೆಯಾಯಿತು. ತಿತಿಮತಿ, ಪೊನ್ನಪ್ಪಸಂತೆ, ಮಾಯಮುಡಿ, ಮೊದಲಾದ ಭಾಗಗಳಿಗೆ ಮಧ್ಯಾಹ್ನ ಮಳೆ ಬಿದ್ದಿತು. ಕಾಫಿ ಕೊಯ್ದ ಬೆಳೆಗಾರರು ಮಳೆಗಾಗಿ ಹಂಬಲಿಸುತ್ತಿದ್ದರು. ಕೆಲವರು ಸ್ಪ್ರಿಂಕ್ಲರ್ ಮಾಡುವಲ್ಲಿ ನಿರತರಾಗಿದ್ದರು. ಆದರೂ, ಬುಧವಾರ ಬಿದ್ದ ಮಳೆ ಸಾಕಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ಒಂದೆರಡು ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿ ಬೆಳೆಗಾರರಿದ್ದಾರೆ.

ಮಡಿಕೇರಿ ತಾಲ್ಲೂಕಿನ ನಾಪೋಕ್ಲು ವ್ಯಾಪ್ತಿಯಲ್ಲಿ ಒಂದು ಇಂಚಿನಷ್ಟು ಮಳೆಯಾಗಿದೆ. ಭಾಗಮಂಡಲ, ಕೊಳಕೇರಿ, ಕಕ್ಕಬ್ಬೆ ಮತ್ತಿತರ ಕಡೆ ಮಳೆಯಾಗಿದೆ. ಮಂಗಳವಾರ ಸಂಜೆ 5 ಗಂಟೆಗೆ ನೆಲಜಿ ಗ್ರಾಮ ವ್ಯಾಪ್ತಿಯಲ್ಲಿ 15 ಇಂಚಿನಷ್ಟು ಮಳೆಯಾಗಿದೆ.

ಸೋಮವಾರಪೇಟೆ ವರದಿ: ಗುಡುಗಿನ ಸಣ್ಣ ಆರ್ಭಟ ಹಾಗೂ ಆಲಿಕಲ್ಲಿನ ನಡುವೆ ವರ್ಷದ ಮೊದಲ ಮಳೆ ಬುಧವಾರ ಸಂಜೆ ಪಟ್ಟಣದಲ್ಲಿ ಬಿದ್ದಿದೆ. ಕಳೆದ ಎರಡು ಮೂರು ದಿನಗಳಿಂದ ಮೋಡದ ವಾತಾವರಣ ಕವಿದು ಬಿಸಿಯೇರಿದ ವಾತಾವರಣ ಬುಧವಾರ ಬಿದ್ದ ಮಳೆಯಿಂದಾಗಿ ಸ್ವಲ್ಪ ತಂಪು ಮೂಡಿ ಜನರಿಗೆ ಹರ್ಷ ತಂದಿತು. ಶಾಲೆ ಬಿಟ್ಟ ಸಮಯದಲ್ಲಿಯೇ ಮಳೆ ಬಂದಿದ್ದರಿಂದ ಮಕ್ಕಳು ನೆನೆಯುತ್ತಲೇ ಮನೆಯತ್ತ ಓಡಿದರು.

ಸುಮಾರು 20 ನಿಮಿಷಗಳ ಕಾಲ ಸಾಧಾರಣ ಮಳೆ ಸುರಿದಿದ್ದು, ಇಷ್ಟು ಅತ್ಯಲ್ಪ ಮಳೆ ಬಂದಿದ್ದರಿಂದ ಕಾಫಿಯ ಫಸಲಿನ ಮೇಲೆ ಯಾವ ಪರಿಣಾಮ ಉಂಟಾಗಬಹುದೆಂದು ಕಾದು ನೋಡಬೇಕಾಗಿದೆ. ವಿರಾಜಪೇಟೆ, ಅಮ್ಮತ್ತಿ, ಸಿದ್ದಾಪುರ ಮತ್ತಿತರ ಕಡೆಗಳಲ್ಲಿಯೂ ತುಂತುರು ಮಳೆಯಾದ ಬಗ್ಗೆ ವರದಿಯಾಗಿದೆ.

ಚಿಕ್ಕಮಗಳೂರು ವರದಿ: ಜಿಲ್ಲೆಯ ಮಲೆನಾಡಿನ ಮೂಡಿಗೆರೆ ಮತ್ತು ಬಾಳೆಹೊನ್ನೂರು ತಾಲ್ಲೂಕಿನಲ್ಲಿ ಬುಧವಾರ ಮಧ್ಯಾಹ್ನ ಆಲಿಕಲ್ಲು ಸಹಿತ ಮಳೆಯಾಗಿದೆ. ಅಕಾಲಿಕ ಮಳೆ ಈ ಬಾರಿಯ ಮಾವು ಮತ್ತು ಕಾಫಿ ಬೆಳೆಗೆ ಕಂಟಕವಾಗಲಿದೆ ಎಂದು ಕೃಷಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಮೂಡಿಗೆರೆ ವರದಿ: ಪಟ್ಟಣದ ಸುತ್ತ ಬುಧವಾರ ಮಧ್ಯಾಹ್ನ ಅಲಿಕಲ್ಲು ಸಹಿತ ಮಳೆಯಾಗಿದೆ. ಪಟ್ಟಣದಲ್ಲಿ ಒಂದು ಗಂಟೆಗೂ ಹೆಚ್ಚಿನ ಕಾಲ ಮಳೆಯಾಗಿದೆ. ಮಳೆಯೊಂದಿಗೆ ಸಣ್ಣ ಜಲ್ಲಿಕಲ್ಲಿನಷ್ಟು ಗಾತ್ರದ ಆಲಿಕಲ್ಲುಗಳು ಬಿದ್ದಿವೆ. ಇದೇ ವೇಳೆ ಹ್ಯಾಂಡ್ ಪೋಸ್ಟ್ ಬಳಿ ಕಡೂರು-ಮಂಗಳೂರು ರಸ್ತೆಗೆ ಮರ ಅಡ್ಡಬಿದ್ದು ಕೆಲವು ಸಮಯ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ತಾಲ್ಲೂಕಿನ ವಿವಿಧೆಡೆಯೂ ಮಳೆಯಾಗಿದೆ.

ಈಗ ದಿಢಿ ೀರ್ ಎಂದು ಬಂದಿರುವ ಮಳೆ ಕಾಫಿ ಮತ್ತು ಮಾವು ಫಸಲಿಗೆ ಮಾರಕವಾಗಲಿದೆ ಎಂದು ಬೆಳೆಗಾರರು ಕಳವಳ ವ್ಯಕ್ತಪಡಿಸಿದ್ದಾರೆ. ಕಾರ್ಮಿಕರ ಕೊರತೆ ಹಾಗೂ ಅಕಾಲಿಕವಾಗಿ ಸುರಿದ ಮಳೆಯಿಂದ ರೋಬಾಸ್ಟಾ ಕಾಫಿ, ಕಾಳು ಮೆಣಸು ಬಿಡಿಸದ ಬೆಳೆಗಾರರಿಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ.

ಕಳಸ ವರದಿ: ಹೋಬಳಿಯ ವಿವಿಧೆಡೆ ಹಾಗೂ ಕಳಸ ಪಟ್ಟಣ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಬುಧವಾರ ಅಲ್ಪ ಪ್ರಮಾಣದ ಮಳೆ ಸುರಿದಿದೆ. ಮಂಗಳವಾರ ಮಧ್ಯಾಹ್ನದಿಂದಲೇ ಮೋಡ ಕವಿದಿತ್ತು. ಕಳಸದಲ್ಲಿ 8 ಮಿ.ಮೀ, ಹೊರನಾಡಿನಲ್ಲಿ 12 ಮಿ.ಮೀ.ಗೂ ಹೆಚ್ಚು ಮಳೆ ಸುರಿದಿದೆ.

3-4 ಮಿ.ಮೀ. ಮಳೆ ಆಗಿರುವ ಕೆಲವೆಡೆ ಮುಂದಿನ 3 ದಿನದಲ್ಲಿ ಮತ್ತಷ್ಟು ಮಳೆ ಬಂದರೆ ಮಾತ್ರ ರೊಬಸ್ಟಾ ಕಾಫಿ ಹೂವು ಅರಳಲಿದೆ. ಇಲ್ಲದಿದ್ದಲ್ಲಿ ಬೆಳೆಗಾರರ ಸಂಕಷ್ಟ ಇನ್ನಷ್ಟು ಹೆಚ್ಚಲಿದೆ. ಹೆಚ್ಚು ಮಳೆ ಸುರಿದರೂ ಗಿಡದಲ್ಲಿನ ಕಾಫಿ ಹಣ್ಣು ನೆಲಕ್ಕೆ ಉದುರುತ್ತದೆ ಎಂಬ ಮಾತೂ ಕೇಳಿ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT