ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಗಂಗೆಯಲ್ಲಿ 121 ಅಡಿ ಶಿವಲಿಂಗ

Last Updated 10 ಫೆಬ್ರುವರಿ 2012, 8:50 IST
ಅಕ್ಷರ ಗಾತ್ರ

ತುಮಕೂರು: ಸಿದ್ದಗಂಗೆ ಮಠದ ಆವರಣದಲ್ಲಿ ಕೋಟಿ ಲಿಂಗಗಳ ಜತೆಗೆ ವಿಶ್ವ ದಾಖಲೆ ಎತ್ತರದ ಶಿವಲಿಂಗ ಪ್ರತಿಷ್ಠಾಪನೆ ಆಗಲಿದೆ. ಕೋಟಿ ಲಿಂಗೇಶ್ವರ ಪ್ರತಿಷ್ಠಾಪನಾ ಸಮಿತಿ ಕೋಟಿಲಿಂಗೇಶ್ವರದ ಪ್ರತಿಷ್ಠಾಪನೆಗೆ ಮುಂದಾಗಿದ್ದು, ಸುಮಾರು ರೂ. 12 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಮಠದ ಆವರಣದಲ್ಲಿ ಸ್ಥಾಪನೆಯಾಗಲಿರುವ ಈ ಲಿಂಗದ ಅಗಲ 111 ಅಡಿ, ಎತ್ತರ 121 ಅಡಿ. ಈ ಬೃಹತ್ ಲಿಂಗದಲ್ಲಿ ಒಂದು ಕೋಟಿ ಸಣ್ಣ ಸಣ್ಣ ಶಿವಲಿಂಗ ಅಳವಡಿಸಲಿದ್ದು, ವಿಶ್ವದ ಪ್ರಪ್ರಥಮ ಕೋಟಿಲಿಂಗೇಶ್ವರ ಎಂಬ ಖ್ಯಾತಿಗೆ ಭಾಜನವಾಗಲಿದೆ. ವಿಶೇಷ ತಂತ್ರಜ್ಞಾನ ಬಳಸಿ ಕಾಂಕ್ರೀಟಿನಲ್ಲಿ ಲಿಂಗ ನಿರ್ಮಾಣ ಮಾಡಲಾಗುತ್ತಿದೆ.

ಕೋಲಾರ ಜಿಲ್ಲೆಯ ಕೋಟಿಲಿಂಗೇಶ್ವರ ಕ್ಷೇತ್ರದಲ್ಲಿರುವ 108 ಅಡಿಗಳ ಶಿವಲಿಂಗವೇ ಪ್ರಸ್ತುತ ವಿಶ್ವದ ಅತಿ ಎತ್ತರದ ಬೃಹತ್ ಲಿಂಗ ಎನ್ನಲಾಗಿದೆ. ಆದರೆ ಸಿದ್ದಗಂಗೆ ಕೋಟಿಲಿಂಗೇಶ್ವರ ಇದನ್ನು ಮೀರಿಸಲಿದ್ದು, ವಿಶ್ವದ ಅತಿ ಎತ್ತರದ ಲಿಂಗವೆಂಬ ದಾಖಲೆಗೆ ಸೇರಲಿದೆ. ಒಂದೇ ಲಿಂಗದಲ್ಲಿ ಕೋಟಿ ಲಿಂಗದ ದರ್ಶನ ಭಾಗ್ಯ ಸಿಗಲಿರುವುದು ಮತ್ತೊಂದು ವಿಶೇಷವಾಗಿದೆ.

ಲಿಂಗದ ಶಿಖರ ಭಾಗದಲ್ಲಿ (ಪಾಣ) ಶಿವನ ಐದು ಮುಖಗಳನ್ನು ರೂಪಿಸಲಾಗುತ್ತದೆ. ಲಿಂಗದ ಪೂರ್ವಕ್ಕೆ ಸದ್ಯೋಜಾತ, ದಕ್ಷಿಣಕ್ಕೆ ಭವೋದ್ಭವ, ಪಶ್ಚಿಮಕ್ಕೆ  ವಾಮದೇವ, ಉತ್ತರಕ್ಕೆ ತತ್ಪುರುಷ, ಊರ್ಧ್ವಕ್ಕೆ ಈಶಾನ ಮುಖ ಇರಲಿದೆ. ಐದು ಮುಖಗಳಿರುವ ಶಿವಲಿಂಗ ನೇಪಾಳದ ಪಶುಪತಿನಾಥ ಕ್ಷೇತ್ರದಲ್ಲಿ ಮಾತ್ರವಿದೆ. ಇದನ್ನು ಹೊರತುಪಡಿಸಿದರೆ ಎರಡನೇ ಕ್ಷೇತ್ರ ಸಿದ್ದಗಂಗೆಯಾಗಲಿದೆ.

ಲಿಂಗದ ಮುಂಭಾಗ 30 ಅಡಿ ಉದ್ದದ ನಂದಿ ವಿಗ್ರಹ, ನಿತ್ಯಪೂಜೆಗಾಗಿ ಕೋಟಿಲಿಂಗೇಶ್ವರ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಆಗಲಿದೆ. ಯೋಜನೆಯ ಮೊದಲ ಹಂತದಲ್ಲಿ ಲಿಂಗ, ನಂದಿಯ ಪ್ರತಿಷ್ಠಾಪನೆ, 2ನೇ ಹಂತದಲ್ಲಿ ಲಿಂಗದ ಒಳಾವರಣ ಪ್ರಾಕಾರದಲ್ಲಿ ದ್ವಾದಶ ಜ್ಯೋತಿರ್ಲಿಂಗ, ಶಿವನ 10 ರೂಪಗಳ ಮೂರ್ತಿ, ಶಿವನ ಗಣಗಳನ್ನು ಸ್ಥಾಪನೆ ಮಾಡಲಾಗುವುದು. 3ನೇ ಹಂತದಲ್ಲಿ ಶೈವ ಸಂಶೋಧನಾ ಕೇಂದ್ರ, ರಂಗಭೂಮಿ, ಶಿವನಿಗೆ ಸಂಬಂಧಿಸಿದ ಮಾಹಿತಿ ಸಿಗುವ ಬಹುಪಯೋಗಿ ಕೇಂದ್ರ ಸ್ಥಾಪಿಸಲಾಗುತ್ತದೆ.

ಸಭೆ: ಕೋಟಿಲಿಂಗೇಶ್ವರ ಸ್ಥಾಪನೆಗೆ ಸಂಬಂಧಿಸಿದಂತೆ ಕೋಟಿಲಿಂಗೇಶ್ವರ ಪ್ರತಿಷ್ಠಾಪನಾ ಸಮಿತಿ ಪದಾಧಿಕಾರಿ ಗಳು ಸಿದ್ದಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ ಜತೆ ಗುರುವಾರ ಮಠದಲ್ಲಿ ಸಭೆ ನಡೆಸಿ ಸ್ವಾಮೀಜಿ ಒಪ್ಪಿಗೆ ಪಡೆಯಿತು.

ಸಭೆಯಲ್ಲಿ ಸಮಿತಿ ಅಧ್ಯಕ್ಷರಾದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಉಪಾಧ್ಯಕ್ಷರಾದ ಆದಿಕೇಶವಲು, ಶಾಸಕರಾದ ಎಸ್.ಶಿವಣ್ಣ, ಅರವಿಂದ ಲಿಂಬಾವಳಿ, ವಾಸ್ತು ಶಿಲ್ಪಿ ಎ.ಆರ್.ದೇವ ಸೇರಿದಂತೆ ಸಮಿತಿಯ ಬಹುತೇಕ ಪದಾಧಿಕಾರಿಗಳು ಹಾಜರಿದ್ದರು.

ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೋಟಿಲಿಂಗೇಶ್ವರ ಸ್ಥಾಪನೆಯ ವಿವರಗಳನ್ನು ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಎಲ್.ಎನ್.ಸ್ವಾಮಿ ನೀಡಿದರು.

ಸಿದ್ದಗಂಗೆ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ 105ನೇ ವಸಂತಕ್ಕೆ ಕಾಲಿಡುತ್ತಿರುವ ಸಂಭ್ರಮದಲ್ಲಿ ಕೋಟಿ ಭಕ್ತ ಹೃದಯಗಳ ನಮನವಾಗಿ ಜನ್ಮದಿನೋತ್ಸವ ಆಚರಿಸಬೇಕೆಂಬ ಉದ್ದೇಶದಿಂದ ಕೋಟಿ ಲಿಂಗಗಳ ಪ್ರತಿಷ್ಠಾಪನೆಗೆ ಮುಂದಾಗಲಿದೆ. ಜಾತ್ಯತೀತ ನೆಲೆಯಲ್ಲಿ ಈ ಕಾರ್ಯ ಕೈಗೆತ್ತಿಕೊಂಡಿದ್ದು, ಪ್ರತಿಯೊಬ್ಬ ಭಕ್ತರಿಗೂ ಅವಕಾಶ ಮಾಡಿಕೊಡಲಾಗುವುದು. ಈ ಲಿಂಗವನ್ನು ಎಲ್ಲ ಭಕ್ತರ ಸಹಕಾರ ಪಡೆದು ರೂಪಿಸಬೇಕೆಂಬುದು ಸಮಿತಿಯ ಉದ್ದೇಶವಾಗಿದೆ ಎಂದರು.

ಫೆ. 20ರಂದು ಮಹಾ ಶಿವರಾತ್ರಿ ದಿನ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಭೂಮಿಪೂಜೆ ನೆರವೇರಿಸುವರು. ಅಲ್ಲಿಂದ 6 ತಿಂಗಳೊಳಗೆ ಲಿಂಗ ನಿರ್ಮಾಣ ಪೂರ್ಣಗೊಳ್ಳಲಿದೆ. ಸರ್ಕಾರದಿಂದಲೂ ನೆರವು ಕೋರುವುದಾಗಿ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT