ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಕೋಟೆಗೆ ಲಗ್ಗೆ ಹಾಕಲು ತಂತ್ರ

ಗದ್ದುಗೆಗೆ ಗುದ್ದಾಟ- 2013
Last Updated 22 ಜನವರಿ 2013, 19:59 IST
ಅಕ್ಷರ ಗಾತ್ರ

ಮೈಸೂರು:  ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ವರುಣಾ ವಿಧಾನಸಭಾ ಕ್ಷೇತ್ರದ ಈ ಬಾರಿಯ ಚುನಾವಣೆಯು `ಚಾಮುಂಡೇಶ್ವರಿ ಉಪ ಚುನಾವಣೆ'ಯನ್ನು ನೆನಪಿಗೆ ತರುವ ಮುನ್ಸೂಚನೆಗಳಿವೆ.

ರಾಜ್ಯದ ಪ್ರತಿಷ್ಠಿತ ಕ್ಷೇತಗಳಲ್ಲಿ ಒಂದಾಗಿರುವ ಇಲ್ಲಿಗೆ ಲಗ್ಗೆ ಹಾಕಲು ಕರ್ನಾಟನ ಜನತಾ ಪಕ್ಷ (ಕೆಜೆಪಿ), ಜೆಡಿಎಸ್ ತಂತ್ರಗಾರಿಕೆಯಲ್ಲಿ ತೊಡಗಿವೆ. ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ, ಕೆಜೆಪಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಸಹಾಯಕ ಕಾ.ಪು.ಸಿದ್ದಲಿಂಗಸ್ವಾಮಿ, ಜೆಡಿಎಸ್‌ನಿಂದ ಮೈಸೂರಿನ ದೇವರಾಜ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಚಲುವರಾಜು ಸ್ಪರ್ಧಿಸುವುದು ಖಚಿತವಾಗಿದೆ. (ಚಲುವರಾಜು ಸ್ವಯಂ ನಿವೃತ್ತಿ ಪಡೆಯುತ್ತಿದ್ದಾರೆ).

ಯಡಿಯೂರಪ್ಪ ಬಿಜೆಪಿ ಬಿಟ್ಟ ಮೇಲೆ ಈ ಪಕ್ಷ ಸೊರಗಿ ಹೋಗಿದೆ. ಆದ್ದರಿಂದ ಅಭ್ಯರ್ಥಿಯಾಗಲು ಯಾರೂ ಆಸಕ್ತಿ ತೋರಿಸುತ್ತಿಲ್ಲ. ಆದರೂ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.•ನಂಜುಂಡಸ್ವಾಮಿ ಹೆಸರು ಬಲವಾಗಿ ಕೇಳಿಬರುತ್ತಿದೆ. ಇವರೊಂದಿಗೆ ಯುವ ಮುಖಂಡ ದೇವನೂರು ಪ್ರತಾಪ್ ಹೆಸರೂ ಇದೆ. ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ಬಿಎಸ್‌ಆರ್ ಕಾಂಗ್ರೆಸ್‌ನಿಂದ ಯಾರು ಅಭ್ಯರ್ಥಿಯಾಗುತ್ತಾರೆ ಎನ್ನುವುದು ನಿರ್ಧಾರವಾಗಿಲ್ಲ.

ಕೊನೆ ಚುನಾವಣೆ: ಮುಖ್ಯಮಂತ್ರಿ ಸ್ಥಾನಕ್ಕೆ ತಾವೂ ಕೂಡ ಪ್ರಬಲ ಆಕಾಂಕ್ಷಿ ಎಂದು ಸಿದ್ದರಾಮಯ್ಯ ಈಗಾಗಲೇ ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಅಲ್ಲದೇ ಇದು ತಮ್ಮ ಕೊನೆಯ ಚುನಾವಣೆ ಎಂದೂ ಘೋಷಿಸಿಕೊಂಡಿದ್ದಾರೆ. 

ವಿರೋಧ ಪಕ್ಷದ ನಾಯಕರನ್ನು ಹೊಂದಿರುವ ವರುಣಾ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳಾಗಿವೆ. ಸಿದ್ದರಾಮಯ್ಯನವರು ರಾಜ್ಯ ಪ್ರವಾಸದ ಜೊತೆಗೆ ಕ್ಷೇತ್ರದಲ್ಲಿಯೂ ಓಡಾಡಿಕೊಂಡು ಕಾರ್ಯಕರ್ತರ ಸಂಪರ್ಕದಲ್ಲಿದ್ದಾರೆ. ಕ್ಷೇತ್ರದ ಮೇಲೆ ಹಿಡಿತ ಇರುವುದನ್ನು ವಿರೋಧಿಗಳು ಸಹ ಒಪ್ಪಿಕೊಳ್ಳುತ್ತಾರೆ.

ಜಾತಿ ಮತ್ತು ಹಣ ಬಲ: ಈ ಕ್ಷೇತ್ರದಲ್ಲಿ ಜಾತಿ ಮತ್ತು ಹಣ ಬಲದ ರಾಜಕೀಯ ಎದ್ದು ಕಾಣಿಸುತ್ತಿದೆ. ಕಾಂಗ್ರೆಸ್‌ನ ಸಿದ್ದರಾಮಯ್ಯ (ಕುರುಬ), ಕೆಜೆಪಿಯ ಕಾ.ಪು.ಸಿದ್ದಲಿಂಗಸ್ವಾಮಿ, ಬಿಜೆಪಿಯ ಎಂ.ನಂಜುಂಡಸ್ವಾಮಿ (ಲಿಂಗಾಯತ), ಜೆಡಿಎಸ್‌ನ ಚಲವರಾಜು (ನಾಯಕ) ಜನಾಂಗಕ್ಕೆ ಸೇರಿದ್ದಾರೆ.

ಕಾ.ಪು.ಸಿ ಸಿದ್ಧತೆ: ಎರಡು ವರ್ಷಗಳಿಂದಲೇ ಕಾ.ಪು.ಸಿದ್ದಲಿಂಗಸ್ವಾಮಿ ಚುನಾವಣಾ ಸಿದ್ಧತೆ ಮತ್ತು ಪ್ರಚಾರ ನಡೆಸುತ್ತಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಂಜನಗೂಡು ತಾಲ್ಲೂಕಿನಲ್ಲಿರುವ ಸ್ವಗ್ರಾಮ `ಕಾರ್ಯ' ದಲ್ಲಿ ಎರಡು ದಿನಗಳ ಬೃಹತ್ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿದ್ದರು. ಅಲ್ಲಿಗೆ ಸಾವಿರಾರು ಮಂದಿ ಬರುವಂತೆ ಮಾಡಿದ್ದಲ್ಲದೇ ಪಕ್ಷದ ವತಿಯಿಂದ ಸಮಾವೇಶವನ್ನೂ ಏರ್ಪಡಿಸಿದ್ದರು.

ಚುನಾವಣೆಗೆ ಸ್ಪರ್ಧಿಸುವ ಸಲುವಾಗಿಯೇ ಸಿದ್ದಲಿಂಗಸ್ವಾಮಿ ಹಳ್ಳಿ ಹಳ್ಳಿಗೆ ಭೇಟಿ ಕೊಡುತ್ತಿದ್ದಾರೆ. ಉದಾರವಾಗಿ ಹಣ ಕೊಡುತ್ತಿದ್ದಾರೆ. ಹಳ್ಳಿಗಳಲ್ಲಿ ನಡೆಯುವ ಹಬ್ಬ, ಜಾತ್ರೆ, ನಾಟಕ, ದೇವಸ್ಥಾನಗಳ ನಿರ್ಮಾಣ, ಕ್ರೀಡಾಕೂಟಗಳಿಗೆ `ಕೊಡುಗೈ ದಾನಿ'ಯಾಗಿದ್ದಾರೆ. ಇದನ್ನು ಅರಿತಿರುವ ಸಂಘ, ಸಂಸ್ಥೆಗಳು ಕಾರ್ಯಕ್ರಮ ಆಯೋಜಿಸಲು ಮುಗಿಬಿದ್ದಿರುವುದು ಗುಟ್ಟಾಗಿ ಉಳಿದಿಲ್ಲ. ಅಲ್ಲದೇ ಮದುವೆ, ಅಂತ್ಯಸಂಸ್ಕಾರ, ಇತ್ಯಾದಿ ಕಾರ್ಯಕ್ರಮಗಳಿಗೂ ಹಣ ಕೊಡುತ್ತಾರೆ ಎನ್ನುವ ಮಾತಿದೆ.

ಯಡಿಯೂರಪ್ಪ ಬಿಜೆಪಿ ತೊರೆದ ಬಳಿಕ ಕೆಜೆಪಿಯಲ್ಲಿ ಗುರುತಿಸಿಕೊಂಡಿರುವ  ಸಿದ್ದಲಿಂಗಸ್ವಾಮಿ ಸಿದ್ದರಾಮಯ್ಯನವರ ಮತಗಳಿಗೆ ಕನ್ನ ಹಾಕಲು ಹೊರಟಿದ್ದಾರೆ. ಈ ಕಾರಣದಿಂದಾಗಿ ವರುಣಾ ಕ್ಷೇತ್ರದಲ್ಲಿ `ಕುರುಡು ಕಾಂಚಾಣ' ಕುಣಿಯುತ್ತಿದೆ.

ಜೆಡಿಎಸ್ ಸುಮ್ಮನಿಲ್ಲ: ಕಳೆದ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಜೆಡಿಎಸ್ ಲೆಕ್ಕಕ್ಕೇ ಇರಲಿಲ್ಲ. ಆದರೆ ಈ ಬಾರಿ ಎಚ್ಚರಿಕೆಯಿಂದ ಹೆಜ್ಜೆ ಇಡಲು ಹೊರಟಿದೆ. ಕ್ಷೇತ್ರದಲ್ಲಿ ಹೆಚ್ಚು ಕಡಿಮೆ ಕುರುಬರಿಗೆ ಸರಿಸಮವಾಗಿರುವ ನಾಯಕ ಜನಾಂಗದ ಚಲುವರಾಜು ಅವರನ್ನು ಕಣಕ್ಕಿಳಿಸುತ್ತಿದೆ. ನಾಯಕರು, ಒಕ್ಕಲಿಗರು, ಪರಿಶಿಷ್ಟ ಜಾತಿಯ ಮತಗಳು ಲಭಿಸಿದರೆ ಉತ್ತಮ ಪೈಪೋಟಿ ನೀಡಲು ಸಾಧ್ಯ ಎನ್ನುವ ಲೆಕ್ಕಾಚಾರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT