ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಾಪುರ: ಕಾಣದ ಪ್ರಚಾರದ ಅಬ್ಬರ

Last Updated 23 ಏಪ್ರಿಲ್ 2013, 9:04 IST
ಅಕ್ಷರ ಗಾತ್ರ

ಸಿದ್ದಾಪುರ: ಶಿರಸಿ-ಸಿದ್ದಾಪುರ ವಿಧಾನ ಸಭಾ ಕ್ಷೇತ್ರದ ಚುನಾವಣೆಯ ಸ್ಪರ್ಧಾ ಕಣ ಸ್ಪಷ್ಟಗೊಂಡ ನಂತರವೂ ತಾಲ್ಲೂಕಿನಲ್ಲಿ ಅಬ್ಬರದ ಪ್ರಚಾರ ಕಂಡು ಬರುತ್ತಿಲ್ಲ. ಅಭ್ಯರ್ಥಿಗಳು ಮನೆಮನೆ ಪ್ರಚಾರಕ್ಕೆ ಆದ್ಯತೆ ನೀಡಿರುವುದರಿಂದ ವಿವಿಧ ಪಕ್ಷಗಳ ಚುನಾವಣಾ ಕಾರ್ಯಾಲಯಗಳೂ ಕೂಡ ತಣ್ಣಗಿವೆ.

ಈ ಬಾರಿಯ ಚುನಾವಣಾ ಪ್ರಚಾರ ಇದುವರೆಗೆ ಅಬ್ಬರದ ಅಲೆಯನ್ನಂತೂ ಸೃಷ್ಟಿ ಮಾಡಿಲ್ಲ. ಯಾವುದೆ ಅಭ್ಯರ್ಥಿಯ ಬ್ಯಾನರ್ ಅಥವಾ ಬಂಟಿಂಗ್ ಎಲ್ಲಿಯೂ ಕಂಡುಬರುತ್ತಿಲ್ಲ. ಜನರ ಮಾತುಕತೆಯಲ್ಲಿ ಅಥವಾ ರಾಜಕಾರಣಿಗಳ ಬಿಡುವಿಲ್ಲದ ತಿರುಗಾಟದಲ್ಲಿ ಮಾತ್ರ ಚುನಾವಣೆ ಕಾಣಿಸಿಕೊಳ್ಳುತ್ತಿರುವುದು ಸದ್ಯದ ವಿಶೇಷ.

ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳ ಕಾರ್ಯಾಲಯಗಳು ಕಾರ್ಯಕರ್ತರಿಂದ ಕಿಕ್ಕಿರಿದು ಹೋಗುತ್ತಿದ್ದ ಪರಿಸ್ಥಿತಿ ಈಗ ಬದಲಾಗಿದೆ. ಪ್ರಮುಖ ರಾಜಕೀಯ ಪಕ್ಷಗಳ ಕಚೇರಿಗಳಲ್ಲಿ  ಒಬ್ಬರು ಅಥವಾ ಇಬ್ಬರು ಕಚೇರಿ ನಿರ್ವಾಹಕರು ಮಾತ್ರವಿದ್ದು, ಸಂಪರ್ಕ ಕೇಂದ್ರಗಳಂತೆ ಕೆಲಸ ಮಾಡುತ್ತಿವೆ.    

ಪಟ್ಟಣದಲ್ಲಿರುವ ಈ ಚುನಾವಣಾ ಕಚೇರಿಗಳಲ್ಲಿ  ಬಿಜೆಪಿ ಕಚೇರಿ ಚಟುವಟಿಕೆಯಲ್ಲಿ ಮುಂದಿದೆ. ಜನರ ಓಡಾಟ ಹೆಚ್ಚು ಕಂಡು ಬರುವುದು ಬಿಜೆಪಿ ಕಾರ್ಯಾಲಯದಲ್ಲಿಯೆ. ಕಾಂಗ್ರೆಸ್ ಕಚೇರಿ ವಾರದಲ್ಲಿ ಒಂದೆರಡು ದಿನಗಳು  ಕಾರ್ಯಕರ್ತರಿಂದ ಗಿಜಿಗುಟ್ಟಿದರೆ, ಉಳಿದ ದಿನದಂದು ಮೌನಕ್ಕೆ ಶರಣಾದಂತೆ ಕಾಣುತ್ತದೆ. ಕೆಜೆಪಿ ಕಚೇರಿಯಲ್ಲಿಯೂ ಕಾರ್ಯಕರ್ತರು ವಿಶೇಷವಾಗಿ ಕಂಡು ಬರುತ್ತಿಲ್ಲ. ಪಟ್ಟಣದ ಮೂಲೆಯಲ್ಲಿರುವ ಜೆಡಿಎಸ್ ಕಚೇರಿ ಜನರ ಕಣ್ಣಿಗೆ ಬೀಳುವುದು ಕಷ್ಟವಾಗಿದೆ.ಇದುವರೆಗೆ ತಾಲ್ಲೂಕಿನಲ್ಲಿ ಅಸ್ತಿತ್ವದಲ್ಲಿಯೇ ಇರದಿದ್ದ  ಜೆಡಿ(ಯು) ಪಟ್ಟಣದ ಪ್ರಮುಖ ಸ್ಥಳದಲ್ಲಿಯೇ ಚುನಾವಣಾ ಕಚೇರಿ ತೆರೆದಿರುವುದು ಗಮನಾರ್ಹ.
   
ಪಟ್ಟಣದ ಚುನಾವಣಾ ಕಾರ್ಯಾಲಯಗಳನ್ನು ನೋಡಿದಾಗ ರಾಜಕಾರಣಿಗಳು ಮತದಾರರ ಭೇಟಿ (ಬೇಟೆ!)ಯಲ್ಲಿ ತೊಡಗಿರುವುದು ಸ್ಪಷ್ಟವಾಗುತ್ತದೆ. ಈ ರೀತಿ  ಮತದಾರರನ್ನು ಭೇಟಿ ಮಾಡುವುದರಲ್ಲಿ ಜೆಡಿಎಸ್ ಅಭ್ಯರ್ಥಿ ಶಶಿಭೂಷಣ ಹೆಗಡೆ ಮುಂಚೂಣಿಯಲ್ಲಿದ್ದಾರೆ. ಜೆಡಿಎಸ್ ಈ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡುವುದಕ್ಕೂ ಕಾಯ್ದೆ ಕ್ಷೇತ್ರದಾದ್ಯಂತ ತಿರುಗಾಡಿ ಸಾರ್ವಜನಿಕರನ್ನು ಭೇಟಿ ಮಾಡಿರುವ ಶಶಿಭೂಷಣ ಹೆಗಡೆ, ಹೆಚ್ಚಿನ ಗ್ರಾಮೀಣ ಪ್ರದೇಶವನ್ನು ತಲುಪಿದ್ದಾರೆ.

ಬಿಜೆಪಿ ಅಭ್ಯರ್ಥಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ಮತದಾರರ ಭೇಟಿಯಲ್ಲಿ ಹಿಂದೆ ಬಿದ್ದಿಲ್ಲ. ಚುನಾವಣೆಯ ಘೋಷಣೆಗೆ ಮೊದಲೇ ಸೂಚ್ಯವಾಗಿ ಚುನಾವಣೆಯ ಪ್ರಸ್ತಾಪ ಮಾಡುವ ಬುದ್ಧಿವಂತಿಕೆ ತೋರುತ್ತಿದ್ದ ಸಚಿವ ಕಾಗೇರಿ, ಚುನಾವಣೆ ಘೋಷಣೆಯಾದ ನಂತರವಂತೂ ಹಳ್ಳಿಗಳತ್ತಲೇ ದೃಷ್ಟಿ ನೆಟ್ಟಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ದೀಪಕ ಹೊನ್ನಾವರ ಮತ್ತು ಕೆಜೆಪಿ ಅಭ್ಯರ್ಥಿ ರವಿ ಹೆಗಡೆ ಹೂವಿನಮನೆ ತಮ್ಮ ತಮ್ಮ ಪಕ್ಷಗಳಲ್ಲಿ ಅಭ್ಯರ್ಥಿಯ ಆಯ್ಕೆಯ ವಿಷಯದಲ್ಲಿ ಉಂಟಾಗಿದ್ದ ಗೊಂದಲದ ಕಾರಣದಿಂದ ಮತದಾರರ ಭೇಟಿಗೆ ಕೊಂಚ ತಡ ಮಾಡಿದ್ದಾರೆ. 

ಈ ಬಾರಿಯ ಚುನಾವಣೆಯ ಚಿತ್ರವೇ ಬದಲಾಗಿದೆ. ಮೈಕ್‌ಗಳ ಗದ್ದಲ, ಬ್ಯಾನರ್‌ಗಳ ಗೊಂದಲ, ವಾಹನಗಳ ಭರಾಟೆ ಕಣ್ಮರೆಯಾಗಿದ್ದು, ಮಾದರಿ ನೀತಿಸಂಹಿತೆ ಚುನಾವಣೆಯ ಗದ್ದಲಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದೆ.
ರವೀಂದ್ರ ಭಟ್ ಬಳಗುಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT