ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಾಪುರದಲ್ಲಿ ಸಾಲು ಸಾಲು ಸಮಸ್ಯೆ

Last Updated 3 ಏಪ್ರಿಲ್ 2013, 9:19 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ತಾಲ್ಲೂಕಿನ ಚಿಕ್ಕ ಗ್ರಾಮಗಳಲ್ಲಿ ಒಂದಾದ ಸಿದ್ದಾಪುರದಲ್ಲಿ ಸಮಸ್ಯೆಗಳು ದೊಡ್ಡದಾಗಿಯೇ ಇವೆ.ಸಂಪೂರ್ಣ ಮಳೆಯನ್ನೇ ಆಶ್ರಯಿಸಿರುವ ಗಡಿಭಾಗದ ಈ ಗ್ರಾಮದಲ್ಲಿ ರಸ್ತೆಗಳು ತೀರಾ ಹದಗೆಟ್ಟಿವೆ. ಕೆಲವು ವರ್ಷಗಳ ಹಿಂದೆ ಮೆಟ್ಲಿಂಗ್ ಮಾಡಿರುವ ರಸ್ತೆಗಳಲ್ಲಿ ಜಲ್ಲಿ ಕಲ್ಲುಗಳು ಎದ್ದಿದ್ದು, ನಡೆದಾಡುವವರಿಗೆ ತೊಡಕಾಗುತ್ತಿವೆ. ಸರ್ಕಾರಿಶಾಲೆ ರಸ್ತೆ, ಕೃಷ್ಣೇಗೌಡರ ಮನೆಯ ರಸ್ತೆ ಮತ್ತು ರಾಮಣ್ಣನ ಮನೆಯ ಬೀದಿಗಳು ಕೊರಕಲು ಗುಂಡಿಗಳಂತಿವೆ. ಮಳೆಗಾಲದಲ್ಲಿ ಈ ಮಣ್ಣಿನ ರಸ್ತೆಗಳು ಕೆಸರು ಗುಂಡಿಯಾಗಿ ಮಾರ್ಪಡುವುದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತದೆ.

ರಸ್ತೆಗಳು ಅಧ್ವಾನಗೊಂಡಿರುವುದು ಒಂದೆಡೆಯಾದರೆ ಚರಂಡಿಗಳ ಸ್ಥಿತಿ ಮತ್ತಷ್ಟು ಶೋಚನೀಯವಾಗಿದೆ. ಹತ್ತಾರು ವರ್ಷಗಳ ಹಿಂದೆ ನಿರ್ಮಿಸಿರುವ, ಗೇಣುದ್ದದ ಕಲ್ಲಿನ ಚರಂಡಿಗಳು ಮುಚ್ಚಿ ಹೋಗಿವೆ. ಮಾರಮ್ಮನ ಗುಡಿ ಬೀದಿ ಇತರೆಡೆ ಕೆಲವು ರಸ್ತೆಗಳಲ್ಲಿ ಚರಂಡಿ ಇಲ್ಲವೇ ಇಲ್ಲ. ಹಾಗಾಗಿ ಸ್ನಾನದ ಮನೆಗಳ ನೀರು ರಸ್ತೆಗೆ ಹರಿಯುತ್ತಿದ್ದು ಗಬ್ಬು ವಾಸನೆ ಬರುತ್ತಿದೆ.

275 ಜನಸಂಖ್ಯೆ ಇರುವ ಈ ಊರಿನಲ್ಲಿ ವಸತಿ ಯೋಜನೆಯಡಿ 5 ವರ್ಷಗಳಲ್ಲಿ ಕೇವಲ 5 ಮನೆಗಳು ಮಾತ್ರ ಮಂಜೂರಾಗಿವೆ. ಈ ಮನೆಗಳಿಗೆ ಕಂತಿನಲ್ಲಿ ಕೊಡುವ ಹಣ ಕೂಡ ಸಕಾಲಕ್ಕೆ ಬಾರದೆ ಫಲಾನುಭವಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಊರು ಹುಟ್ಟಿದ ದಿನದಿಂದ ಇದುವರೆಗೆ ಸರ್ಕಾರದಿಂದ ಒಂದೇ ಒಂದು ನಿವೇಶನ ಹಂಚಿಕೆ ಮಾಡಿಲ್ಲ. ಒಂದು ಮನೆಯಲ್ಲಿ ಎರಡು, ಮೂರು ಕುಟುಂಬಗಳು ವಾಸ ಮಾಡುವ ಪರಿಸ್ಥಿತಿ ಇದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣೇಗೌಡ ಸಮಸ್ಯೆ ತೋಡಿಕೊಳ್ಳುತ್ತಾರೆ.

ಗ್ರಾಮದ್ಲ್ಲಲಿ ಅಲ್ಲೊಂದು ಇಲ್ಲೊಂದು ಬೀದಿ ದೀಪಗಳು ಇವೆ. ಹಬ್ಬ, ಹರಿದಿನ ಹೊರತುಪಡಿಸಿದರೆ ಕೆಟ್ಟಿರುವ ಬೀದಿ ದೀಪಗಳನ್ನು ರಿಪೇರಿ ಮಾಡುತ್ತಿಲ್ಲ. ಹಾಗಾಗಿ ವೃದ್ಧರು, ಮಕ್ಕಳು ರಾತ್ರಿ ವೇಳೆ ಮನೆಯಿಂದ ಹೊರಗೆ ಬರುವುದೇ ಕಷ್ಟವಾಗಿದೆ. ಊರಿಗೆ ಸಂಪರ್ಕ ಕಲ್ಪಿಸುವ ಪಾಂಡವಪುರ- ಮಂಡ್ಯ ರಸ್ತೆಯಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಿಸಿಕೊಡುವಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ನೀಡಿದ್ದೇವೆ.ಆದರೆ ಈ ಬಗ್ಗೆ ಯಾರೊಬ್ಬರೂ ಗಮನ ಹರಿಸಿಲ್ಲ ಎಂದು ಎಸ್.ಕೆ.ಆನಂದ್ ಇತರರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT