ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧ ಉಡುಪು ತಯಾರಿಕೆ ತರಬೇತಿ ಕೇಂದ್ರ ಆರಂಭ

Last Updated 1 ಜನವರಿ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು:  ಬಿಬಿಎಂಪಿ ಮತ್ತು ಕೇಂದ್ರ ಸರ್ಕಾರದ ಪ್ರಾಯೋಜಕತ್ವದ `ಅಪೇರಲ್ ಟ್ರೈನಿಂಗ್ ಮತ್ತು ಡಿಸೈನ್ ಸೆಂಟರ್' (ಎಟಿಡಿಸಿ) ಸಹಯೋಗದಲ್ಲಿ ನಗರದ ಆಡುಗೋಡಿಯಲ್ಲಿ ಮಂಗಳವಾರ ಸ್ಮಾರ್ಟ್ ಸಿದ್ಧ ಉಡುಪು ತಯಾರಿಕೆ ತರಬೇತಿ ಕೇಂದ್ರವನ್ನು ಶಾಸಕ ರಾಮಲಿಂಗಾರೆಡ್ಡಿ ಉದ್ಘಾಟಿಸಿದರು.

`ತರಬೇತಿ ಕೆಂದ್ರದಿಂದ ಪ್ರತಿ ತಿಂಗಳು 50 ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡಲಾಗುವುದು. ಕನಿಷ್ಠ ಐದನೇ ತರಗತಿ ವಿದ್ಯಾಭ್ಯಾಸ ಪಡೆದಿರುವ 18 ರಿಂದ 35 ವರ್ಷ ವಯೋಮಾನದ ಒಳಗಿನ ಆಸಕ್ತರು ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು' ಎಂದು ಎಟಿಡಿಸಿ ಕಾಲೇಜಿನ ಪ್ರಾಂಶುಪಾಲ ರವಿ ಕಿಶೋರ್ ಹೇಳಿದರು.

ತರಬೇತಿ ಅವಧಿ ಒಂದು ತಿಂಗಳಾಗಿದ್ದು, ಇಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಖಾಸಗಿ ಕಂಪೆನಿಗಳಲ್ಲಿ ಉದ್ಯೋಗ ದೊರಕಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು.
ಲಗುನಾ ಕ್ಲಾಥಿಂಗ್, ಕೆ.ಮೋಹನ್ ಅಂಡ್ ಕಂಪೆನಿ, ಗೋಕುಲ್ ದಾಸ್ ಮತ್ತಿತರ ಖಾಸಗಿ ಕಂಪೆನಿಗಳ ಜತೆಗೆ ಈಗಾಗಲೇ ಒಡಂಬಡಿಕೆ ಮಾಡಿಕೊಳ್ಳಲಾಗಿದ್ದು, ಇದರಿಂದಾಗಿ ವರ್ಷಕ್ಕೆ ಸುಮಾರು 600 ಕ್ಕೂ ಹೆಚ್ಚು ನಿರುದ್ಯೋಗಿ ಯುವಕರು ಮತ್ತು ಯುವತಿಯರಿಗೆ ಉದ್ಯೋಗ ದೊರೆಯುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ನಗರದ ಮಲ್ಲೇಶ್ವರ, ನಾಗರಭಾವಿ ಸೇರಿದಂತೆ ಆನೇಕಲ್, ಚಿಕ್ಕಬಳ್ಳಾಪುರ, ಗದಗ, ಕೋಲಾರ, ರಾಮನಗರ, ಹುಬ್ಬಳ್ಳಿ, ತುಮಕೂರು, ಮದ್ದೂರು ತರಬೇತಿ ಕೇಂದ್ರಗಳಿಂದ ಈಗಾಗಲೇ ಸುಮಾರು ಹನ್ನೆರಡು ಸಾವಿರಕ್ಕೂ ಅಧಿಕ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ ಎಂದರು.

ಸಿದ್ಧ ಉಡುಪು ತಯಾರಿಕೆ ಕೈಗಾರಿಕೆ ಕ್ಷೇತ್ರದಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ತರಬೇತಿಯಿಂದಾಗಿ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಅಭಿಪ್ರಾಯಪಟ್ಟರು. ಆಸಕ್ತರು ಹೆಚ್ಚಿನ ಮಾಹಿತಿಗೆ 96112 38944 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಲು ತಿಳಿಸಿದರು.

ಇಲ್ಲಿ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಒಂದು ಸಾವಿರ ರೂಪಾಯಿ ಶಿಷ್ಯ ವೇತನ ನೀಡಲಾಗುವುದು ಎಂದು ಪಾಲಿಕೆಯ ಸದಸ್ಯ ಎಸ್.ಎಂ.ಮುರುಗೇಶ್ ಮೊದಲಿಯಾರ್ ತಿಳಿಸಿದರು.
ಎಟಿಡಿಸಿ ಯ ನಿರ್ದೇಶಕ ಡಾರ್ಲಿ ಕೋಶಿ, ಎಟಿಡಿಸಿ ಅಧ್ಯಕ್ಷ ಡಾ.ಎ.ಶಕ್ತಿವೇಲು, ಸದಸ್ಯ ಜಗದೀಶ್ ಹಿಂದುಜಾ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT