ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧತೆ ತಣ್ಣಗೆ ಶುರು... ಟಿಕೆಟ್‌ಗಾಗಿ ತೀವ್ರ ಲಾಬಿ

ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರ, ಯಶವಂತಪುರ
Last Updated 10 ಜನವರಿ 2013, 20:08 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣಾ ಜ್ವರ ನಗರದಲ್ಲಿ ನಿಧಾನವಾಗಿ ಏರತೊಡಗಿದೆ. ಎಲ್ಲೆಡೆ ಫ್ಲೆಕ್ಸ್‌ಗಳ ಆರ್ಭಟ. ಹಾಲಿ ಶಾಸಕರು ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿ ರಸ್ತೆ ದುರಸ್ತಿ ಮತ್ತಿತರ `ಜನೋಪಯೋಗಿ' ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಕೆಲವರು ಟಿಕೆಟ್ ಪಡೆಯುವ ಪ್ರಯತ್ನದಲ್ಲಿದ್ದಾರೆ. ಟಿಕೆಟ್‌ಗಾಗಿ ಪಕ್ಷದ ಪ್ರಭಾವಿ ಮುಖಂಡರಿಗೆ ದುಂಬಾಲು ಬಿದ್ದಿದ್ದಾರೆ...

ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರ ಮತ್ತು ಯಶವಂತಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಓಡಾಡಿದಾಗ ಚುನಾವಣೆಯ ಸಿದ್ಧತೆಗಳು ತಣ್ಣಗೆ ಆರಂಭವಾಗಿರುವುದು ಗೋಚರಿಸಿತು. ಈ ನಾಲ್ಕು ಕ್ಷೇತ್ರಗಳಲ್ಲಿ ಮಹಾಲಕ್ಷ್ಮಿ ಲೇಔಟ್ ಹೊರತುಪಡಿಸಿ ಉಳಿದ ಮೂರು ಕಡೆಯೂ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದರು. ರಾಜಾಜಿನಗರ ಮತ್ತು ಮಲ್ಲೇಶ್ವರ ಕ್ಷೇತ್ರದ ಹಾಲಿ ಶಾಸಕರೇ ಈ ಸಲದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾಗಲಿದ್ದಾರೆ.

ಯಶವಂತಪುರ ಕ್ಷೇತ್ರದಿಂದ ಚುನಾಯಿತರಾಗಿರುವ ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಯಾವುದೇ ಕ್ಷಣದಲ್ಲಿ ಬಿಜೆಪಿ ತೊರೆದು ಕೆಜೆಪಿ ಸೇರಲಿದ್ದಾರೆ. ಅವರು ಯಶವಂತಪುರ ಕ್ಷೇತ್ರದಿಂದ ಪುನರಾಯ್ಕೆ ಬಯಸುವುದು ಅನುಮಾನ. ಹೊಸ ಕ್ಷೇತ್ರದ ಹುಡುಕಾಟ ನಡೆಸಿದ್ದಾರೆ ಎಂಬ ಮಾತುಗಳಿವೆ. ಆದರೆ, ಯಶವಂತಪುರ ಕ್ಷೇತ್ರದ ಕಾರ್ಯಕರ್ತರು, ಮುಖಂಡರೊಂದಿಗೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಿಂದ ಕಾಂಗ್ರೆಸ್‌ನ ನೆ.ಲ.ನರೇಂದ್ರಬಾಬು ಪುನರಾಯ್ಕೆ ಬಯಸಿದ್ದಾರೆ.

ರಾಜಾಜಿನಗರ
ಈ ಕ್ಷೇತ್ರ ಪ್ರತಿನಿಧಿಸಿರುವ ಕಾನೂನು ಸಚಿವ ಎಸ್.ಸುರೇಶಕುಮಾರ್ ಅವರೇ ಮುಂಬರುವ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಪಕ್ಷದ ಟಿಕೆಟ್‌ಗಾಗಿ ಪೈಪೋಟಿ ನಡೆದಿದೆ.

ಲಿಂಗಾಯತ ಸಮುದಾಯದ ಮತದಾರರು ಗಣನೀಯ ಪ್ರಮಾಣದಲ್ಲಿ ಇದ್ದಾರೆ ಎಂಬ ಕಾರಣಕ್ಕೆ ಆ ಸಮುದಾಯಕ್ಕೆ ಸೇರಿದ ಕಾಂಗ್ರೆಸ್‌ನ ಹಲವು ಮುಖಂಡರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಮಾಜಿ ಸಚಿವೆ ರಾಣಿ ಸತೀಶ್, ಕಾಂಗ್ರೆಸ್‌ನ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ನಾಯ್ಡು, ಮಾಜಿ ಉಪ ಮೇಯರ್ ಪುಟ್ಟರಾಜು, ಕಳೆದ ಚುನಾವಣೆಯಲ್ಲಿ ಸೋತಿದ್ದ ಪದ್ಮಾವತಿ ಸೇರಿದಂತೆ ಹಲವರು ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.

ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಹಾಲಿ ಶಾಸಕರಿಗೇ ಟಿಕೆಟ್ ನೀಡುವುದು ಬಹುತೇಕ ಖಚಿತ. ಈ ಹಿನ್ನೆಲೆಯಲ್ಲಿ ಆ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಪಾಲಿಕೆ ಸದಸ್ಯ ಎಂ.ನಾಗರಾಜ್ ಅವರಿಗೆ ರಾಜಾಜಿನಗರದಲ್ಲಿ ಟಿಕೆಟ್ ಕೊಡಬೇಕು ಎನ್ನುವ ಕೂಗು ಎದ್ದಿದೆ. ಇದಕ್ಕೆ ಶಾಸಕರಾದ ರಾಮಲಿಂಗಾರೆಡ್ಡಿ ಮತ್ತು ದಿನೇಶ್ ಗುಂಡೂರಾವ್ ಧ್ವನಿಗೂಡಿಸಿದ್ದಾರೆ. ಆದರೆ, ಸ್ವತಃ ನಾಗರಾಜ್ ಅವರೇ ಇದಕ್ಕೆ ಸಮ್ಮತಿಸಿಲ್ಲ. ರಾಜಾಜಿನಗರ ನೆ.ಲ.ನರೇಂದ್ರ ಬಾಬು ಅವರ ಹಳೆಯ ಕ್ಷೇತ್ರ. ಅವರನ್ನೇ ಅಲ್ಲಿಗೆ ಕಳುಹಿಸಿ ಎಂದು ಪಟ್ಟುಹಿಡಿದಿದ್ದಾರೆ.

ಒಂದು ರೀತಿಯ ಗೊಂದಲದಲ್ಲಿ ಸಿಲುಕಿರುವ ಪ್ರತಿಪಕ್ಷಗಳು ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿವೆ. ವಸತಿ ಸಚಿವ ವಿ.ಸೋಮಣ್ಣ ಅವರು ಬಿಜೆಪಿ ಬಿಟ್ಟು, ಕಾಂಗ್ರೆಸ್ ಸೇರುತ್ತಾರೆ. ಅವರೇ ಕಾಂಗ್ರೆಸ್ ಅಭ್ಯರ್ಥಿ ಎಂಬ ಗುಲ್ಲು ಹಬ್ಬಿದೆ. ಆದರೆ, ಇದನ್ನು ಅವರು ಅಲ್ಲಗಳೆದಿದ್ದಾರೆ. ಗೋವಿಂದರಾಜ ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದಾಗಿ ಅವರೇ ಸ್ಪಷ್ಟಪಡಿಸಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ತಮಗೆ ಕ್ಷೇತ್ರ ಇಲ್ಲ ಎನ್ನುವ ಕಾರಣಕ್ಕೆ ಅಲ್ಲಂ ಅವರು ರಾಜಾಜಿನಗರದಿಂದ ಸ್ಪರ್ಧಿಸಲು ಆಸಕ್ತಿ ತೋರಿದ್ದಾರೆ. ಆ ಭಾಗದಲ್ಲಿ ಮನೆ ಮಾಡಿ, ಚುನಾವಣೆಗೆ ತಯಾರಿ ನಡೆಸಿದ್ದಾರೆ.

ಕೆಜೆಪಿ ಅಭ್ಯರ್ಥಿಯಾಗಿ ಸಚಿವೆ ಶೋಭಾ ಸ್ಪರ್ಧಿಸುತ್ತಾರೆ ಎನ್ನುವ ವದಂತಿಯೂ ಹಬ್ಬಿದೆ. ಲಿಂಗಾಯತ ಸಮುದಾಯಕ್ಕೆ ಸೇರಿದ ಮತದಾರರು ರಾಜಾಜಿನಗರ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎನ್ನುವ ಕಾರಣದಿಂದ ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಕ್ಷೇತ್ರದ ಸಮೀಕ್ಷೆ ಮಾಡಿಸಿದ್ದಾರೆ. ಅನುಕೂಲಕರವಾದ ಕೆಲವು ಅಂಶಗಳು ಸಮೀಕ್ಷೆಯಿಂದ ಗೊತ್ತಾಗಿದೆ. ಹೀಗಾಗಿ ಶೋಭಾ ಅವರನ್ನು ಕಣಕ್ಕೆ ಇಳಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಯಡಿಯೂರಪ್ಪ ಅವರು ಬಿಜೆಪಿಯ ಕೆಲವು ಪಾಲಿಕೆ ಸದಸ್ಯರನ್ನು ಕರೆಸಿ ಕೆಜೆಪಿಯಿಂದ ಸ್ಪರ್ಧಿಸಬೇಕು ಎಂದು ಸಲಹೆ ಮಾಡಿದ್ದಾರೆ. ಇದಕ್ಕೆ ಅವರು ಒಪ್ಪಿಲ್ಲ ಎನ್ನಲಾಗಿದೆ. ಹಾಗಾದರೆ, ಶೋಭಾ ಅವರನ್ನು ಕಣಕ್ಕೆ ಇಳಿಸಿದರೆ, ಬೆಂಬಲಿಸುತ್ತೀರಾ ಎಂದು ಕೇಳಿದ್ದಾರೆ. ಅದಕ್ಕೆ ಪಾಲಿಕೆ ಸದಸ್ಯರು ಮೌನ ಸಮ್ಮತಿ ಸೂಚಿಸಿದ್ದಾರೆ. ಹೀಗಾಗಿ ಶೋಭಾ ಅವರ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇದೆ.

ರಿಯಲ್ ಎಸ್ಟೇಟ್ ಉದ್ಯಮಿ ಬಿ.ಎಲ್.ತಿಮ್ಮೇಗೌಡ ಅವರು ಜೆಡಿಎಸ್ ಅಭ್ಯರ್ಥಿ ಆಗುವುದು ಬಹುತೇಕ ಖಚಿತ. ಇವರಲ್ಲದೆ, ಚಲನಚಿತ್ರ ನಿರ್ಮಾಪಕ ಸಾ.ರಾ.ಗೋವಿಂದು, ರಮೇಶಬಾಬು ಕೂಡ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್ ತೊರೆದ ವೆಂಕಟೇಶ ಗೌಡ ಅವರು ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ ಎಂದು ಗೊತ್ತಾಗಿದೆ.

ಮಹಾಲಕ್ಷ್ಮಿ ಲೇಔಟ್
ಹಾಲಿ ಶಾಸಕ ನೆ.ಲ.ನರೇಂದ್ರ ಬಾಬು ಅವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ತೀರ್ಮಾನಿಸಿದೆ. ಇದಕ್ಕೆ ಪಾಲಿಕೆ ಸದಸ್ಯ ಎಂ.ನಾಗರಾಜ್ ವಿರೋಧ ವ್ಯಕ್ತಪಡಿಸಿದ್ದು, ತಮಗೇ ಟಿಕೆಟ್ ನೀಡಬೇಕು ಎಂದು ಪಟ್ಟುಹಿಡಿದಿದ್ದಾರೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕುರುಬ ಸಮುದಾಯದ ನಾಗರಾಜ್ ಅವರನ್ನು ಕರೆಸಿ ಮಾತನಾಡಿದ್ದಾರೆ. `ಬಾಬು ಹಾಲಿ ಶಾಸಕ. ಅವರಿಗೆ ಟಿಕೆಟ್ ನೀಡಲೇಬೇಕಾಗುತ್ತದೆ' ಎಂದು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ.

ಇದಕ್ಕೆ ಸೊಪ್ಪು ಹಾಕದ ನಾಗರಾಜ್ ಮುನಿಸಿಕೊಂಡಿದ್ದಾರೆ. ಈ ವಿಷಯ ತಿಳಿದು ಉಪ ಮುಖ್ಯಮಂತ್ರಿ ಆರ್.ಅಶೋಕ ಅವರು ನಾಗರಾಜ್ ಅವರನ್ನು ಕರೆಸಿ ಮಾತನಾಡಿದ್ದು, ಬಿಜೆಪಿ ಟಿಕೆಟ್ ಕೊಡುವ ಭರವಸೆ ನೀಡಿದ್ದಾರೆ.  ಕಾಂಗ್ರೆಸ್ ಟಿಕೆಟ್ ದೊರೆಯದಿದ್ದರೆ, ನಾಗರಾಜ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಮಾಜಿ ಉಪ ಮೇಯರ್ ಎಸ್.ಹರೀಶ್ ಮತ್ತು ಸಂಸದ ಡಿ.ಬಿ.ಚಂದ್ರೇಗೌಡ ಅವರ ಆಪ್ತ ಸಿ.ರಾಜನ್ ಕೂಡ ಬಿಜೆಪಿ ಟಿಕೆಟ್‌ಗೆ ಲಾಬಿ ನಡೆಸಿದ್ದಾರೆ. ನಾಗರಾಜ್ ಅವರು ಬಿಜೆಪಿ ಸೇರುವುದಕ್ಕೆ ಸಮ್ಮತಿಸಿದರೆ ಅವರಿಗೆ ಟಿಕೆಟ್ ಖಚಿತ ಎಂದೂ ಪಕ್ಷದ ಮೂಲಗಳು ಹೇಳಿವೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ನಾಗರಾಜ್ ಅವರಿಗೆ ಪರೋಕ್ಷ ಬೆಂಬಲ ನೀಡಿದ್ದಾರೆ ಎನ್ನಲಾಗಿದೆ.
ಕಳೆದ ಚುನಾವಣೆಯಲ್ಲಿ ಪರಾಜಯಗೊಂಡಿದ್ದ ಗೋಪಾಲಯ್ಯ ಅವರೇ ಈ ಬಾರಿಯೂ ಜೆಡಿಎಸ್ ಅಭ್ಯರ್ಥಿ ಆಗುವ ಸಂಭವ ಇದೆ. ಕೆಜೆಪಿ ಮತ್ತು ಬಿಎಸ್‌ಆರ್ ಪಕ್ಷದ ಅಭ್ಯರ್ಥಿಗಳು ಯಾರು ಎಂಬುದು ಇನ್ನೂ ಖಚಿತವಾಗಿಲ್ಲ.

ಮಲ್ಲೇಶ್ವರ
ಹಾಲಿ ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರೇ ಮುಂಬರುವ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ, ಮಾಜಿ ಮೇಯರ್ ಜೆ.ಹುಚ್ಚಪ್ಪ, ಮಾಜಿ ಸಚಿವ ದಿವಂಗತ ಎಸ್.ರಮೇಶ್ ಅವರ ಪತ್ನಿ ಹೇಮಲತಾ ಕಾಂಗ್ರೆಸ್ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ.

ಶಿವರಾಂ ಅವರು ಕಳೆದ ಚುನಾವಣೆಯಲ್ಲೇ ಟಿಕೆಟ್‌ಗಾಗಿ ತೀವ್ರ ಪ್ರಯತ್ನ ನಡೆಸಿದ್ದರು. ಆ ಸಂದರ್ಭದಲ್ಲಿ (2008) ಹಾಲಿ ಶಾಸಕರಾಗಿದ್ದ ಎಂ.ಆರ್.ಸೀತಾರಾಮ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಚುನಾವಣೆಯಲ್ಲಿ ಸೋತಿದ್ದ ಸೀತಾರಾಮ್ ಅವರು ಮೇಲ್ಮನೆ ಪ್ರವೇಶಿಸಿದ್ದಾರೆ. ಹೀಗಾಗಿ ಶಿವರಾಂ ಅವರಿಗೆ ಹಾದಿ ಸುಗಮ ಆಗಬಹುದು ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿವೆ.

ಆದರೆ, ಹುಚ್ಚಪ್ಪ ಅಥವಾ ಹೇಮಲತಾ ಅವರಿಗೆ ಟಕೆಟ್ ನೀಡಬೇಕು ಎಂದು ಸೀತಾರಾಮ್ ಮತ್ತು ಅವರ ಬೆಂಬಲಿಗರು ಪಟ್ಟುಹಿಡಿದಿದ್ದಾರೆ. ಇದು ಯಾವ ತಿರುವು ಪಡೆಯುವುದೋ ಎಂಬ ಕುತೂಹಲ ಇದೆ. ಈ ನಡುವೆ ದೇವರಾಜ ಅರಸು ಅವರ ಮೊಮ್ಮಗ ಸೂರಜ್ (ಎಂ.ಡಿ.ನಟರಾಜ್ ಪುತ್ರ) ಅವರೂ ಕಾಂಗ್ರೆಸ್ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮುಸ್ಲಿಂ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಜೆಡಿಎಸ್ ಚಿಂತನೆ ನಡೆಸಿದೆ. ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದೆ. ಇದಲ್ಲದೆ, ಜೆಡಿಎಸ್ ಬ್ಲಾಕ್ ಅಧ್ಯಕ್ಷ ಅಶೋಕ ಕುಮಾರ್ ಅವರ ಹೆಸರು ಕೂಡ ಕೇಳಿಬರುತ್ತಿದೆ. ಕೆಜೆಪಿ ಮತ್ತು ಬಿಎಸ್‌ಆರ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಅಂತಿಮವಾಗಿಲ್ಲ.

ಯಶವಂತಪುರ
ಈ ಕ್ಷೇತ್ರದ ಹಾಲಿ ಶಾಸಕಿ ಶೋಭಾ ಅವರು ಬೇರೊಂದು ಕ್ಷೇತ್ರಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತಿದ್ದ ಕಾಂಗ್ರೆಸ್‌ನ ಎಸ್.ಟಿ.ಸೋಮಶೇಖರ್ ಅವರೇ ಈ ಸಲವೂ ಅಭ್ಯರ್ಥಿ. ಸೋತ ದಿನದಿಂದಲೂ ಅವರು ಕ್ಷೇತ್ರದಲ್ಲಿ ಓಡಾಡಿಕೊಂಡಿದ್ದು, ಅವರಿಗೆ ಮತ್ತೊಂದು ಅವಕಾಶ ದೊರೆಯುವ ಸಾಧ್ಯತೆ ಹೆಚ್ಚಿಗಿದೆ.

ಜೆಡಿಎಸ್‌ನಿಂದ ಜವರಾಯಿಗೌಡ ಅವರನ್ನು ಕಣಕ್ಕೆ ಇಳಿಸಲು ತೀರ್ಮಾನಿಸಲಾಗಿದೆ. ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ, ಸೋತಿದ್ದ ಪಂಚಲಿಂಗಯ್ಯ ಬಿಜೆಪಿ ಜತೆ ಗುರುತಿಸಿಕೊಂಡಿದ್ದಾರೆ.

ಶೋಭಾ ಕೆಜೆಪಿಗೆ ಹೋಗುವುದು ಖಚಿತ ಎಂದು ಭಾವಿಸಿರುವ ಬಿಜೆಪಿ ಮುಖಂಡರು ಈ ಕ್ಷೇತ್ರದಿಂದ ಬೇರೊಬ್ಬ ಮಹಿಳಾ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ತಯಾರಿ ನಡೆಸಿದ್ದಾರೆ. ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಪತ್ನಿ ವಾಣಿಶ್ರೀ ಬಿಜೆಪಿ ಅಭ್ಯರ್ಥಿ ಆಗಬಹುದು ಎಂದು ಮೂಲಗಳು ತಿಳಿಸಿವೆ. ಇವರು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರೂ ಹೌದು. ಈ ಕುರಿತು ಉಪ ಮುಖ್ಯಮಂತ್ರಿ ಆರ್.ಅಶೋಕ ಜತೆಗೆ ಮಾತುಕತೆ ನಡೆದಿದೆ ಎನ್ನಲಾಗಿದೆ. ಮಾಜಿ ಮೇಯರ್ ಎಸ್.ಕೆ.ನಟರಾಜ್ ಅವರ ಹೆಸರು ಕೂಡ ಕೇಳಿಬಂದಿದೆ.

ಕೆಜೆಪಿಯಿಂದ ಎನ್.ರುದ್ರೇಶ್ ಅಥವಾ ಕೊಡಿಗೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಂಜುಂಡೇಶ್ ಅವರನ್ನು ಕಣಕ್ಕೆ ಇಳಿಸುವ ಬಗ್ಗೆ ಚಿಂತನೆ ನಡೆದಿದೆ. ಬಿಎಸ್‌ಆರ್ ಅಭ್ಯರ್ಥಿ ಯಾರು ಎನ್ನುವುದು ಇನ್ನೂ ಅಂತಿಮವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT