ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಯ್ಯಜ್ಜನವರ 79ನೇ ಪುಣ್ಯಸ್ಮರಣೆ

Last Updated 17 ಏಪ್ರಿಲ್ 2011, 7:05 IST
ಅಕ್ಷರ ಗಾತ್ರ

ಹುಬ್ಬಳ್ಳಿ ತಾಲ್ಲೂಕಿನ ಭಂಡಿವಾಡ ಗ್ರಾಮದ ಸದ್ಗುರು ಸಿದ್ಧಯ್ಯಜ್ಜನವರು ಸಿದ್ಧಾರೂಢರು, ಗದುಗಿನ ಶಿವಾನಂದರು ಹಾಗೂ ನವಲಗುಂದದ ನಾಗಲಿಂಗರ ಸಮಕಾಲೀನರು.

ಸಿದ್ಧಯ್ಯಜ್ಜನವರು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಸಾಸಲು ಎಂಬ ಗ್ರಾಮದ ಸಿದ್ದಪ್ಪಗೌಡ-ಗೌರಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಎಲ್ಲ ಬಾಲಕರಂತೆ ಆಟ-ಪಾಠಗಳೊಂದಿಗೆ ಕಳೆದು 12 ವರ್ಷದವನಾದ ಸಿದ್ಧಯ್ಯಜ್ಜ ಒಂದು ದಿನ ಊರಿನ ಬಾವಿ ಕಟ್ಟೆಯ ಮೇಲೆ ಏಕತಾರಿ ಬಾರಿಸುತ್ತ ಕುಳಿತಿದ್ದಾಗ ಒಬ್ಬ ಹರಿಜನ ಹುಡುಗ ನೀರು ಸೇದಲು ಬಂದ. ಆ ಹರಿಜನ ಹುಡುಗನಿಗೆ ಸಿದ್ಧಯ್ಯಜ್ಜನವರು ನೀರು ಸೇದಲು ಅವಕಾಶ ಮಾಡಿಕೊಟ್ಟಿದ್ದರಿಂದ ಊರಿನ ಮೇಲ್ವರ್ಗದ ಜನರ ಕೆಂಗಣ್ಣಿಗೆ ಗುರಿಯಾದರು. ಹೀಗಾಗಿ 12 ವರ್ಷದವರಿದ್ದಾಗಲೇ ಮನೆ ತೊರೆದು ದೇಶಸಂಚಾರಿಯಾದರು. ಒಂದು ಸಾರಿ ಕಾಶಿ ಯಾತ್ರೆ ಕೈಗೊಂಡಾಗ ಅಲ್ಲಿ ಭಂಡಿವಾಡ ಗ್ರಾಮದ ಭಕ್ತರು ಭೇಟಿಯಾದರು.

ಹೀಗಿರುವಾಗ ಬನಹಟ್ಟಿಯ ಸಂಗಮನಾಥ ಶಿವಯೋಗಿಗಳಿಂದ ಲಿಂಗದೀಕ್ಷೆ ಪಡೆದು ಗುರುಗಳ ಆಜ್ಞೆಯ ಮೇರೆಗೆ ಹುಬ್ಬಳ್ಳಿಯತ್ತ ಪ್ರಯಾಣ ಬೆಳೆಸಿ ಸದ್ಗುರು ಸಿದ್ಧಾರೂಢರಲ್ಲಿ ಬಂದರು. ಕಾಶಿಯಾತ್ರೆ ಕೈಗೊಂಡ ಭಕ್ತರಿಗೆ ಸಿದ್ಧಯ್ಯಜ್ಜನವರು ಬಂದ ವಿಷಯ ತಿಳಿಯಿತು. ಶ್ರೀಗಳನ್ನು ಭಂಡಿವಾಡ ಜನತೆ ಆದರದಿಂದ ಬರಮಾಡಿಕೊಂಡರು. ಪ್ರಶಾಂತ ಪ್ರಕೃತಿಯ ತಾಣವಾದ ಭಂಡಿವಾಡ ಗ್ರಾಮ ಇವರ ಭಕ್ತಿ ಜ್ಞಾನಕ್ಕೆ ತಪೋಭೂಮಿಯಾಯಿತು.

ಸಂಗಮನಾಥ ಶಿವಯೋಗಿಗಳ ಆಜ್ಞೆಯಂತೆ ತ್ರಿಕಾಲ ಲಿಂಗಪೂಜಾಧಾರಿಗಳಾಗಿ ಪುರಾಣ ಪ್ರವಚನದೊಂದಿಗೆ ಅಲ್ಲಿಯೇ ಕಳೆಯುತ್ತ ಬಂದರು. ಹೀಗೆ ಒಂದು ಸಾರಿ ಗೋಕರ್ಣ ಯಾತ್ರೆ ಕೈಗೊಂಡಾಗ ಅಂಗವೇ ಒಂದು ಲಿಂಗ, ಆತ್ಮವೇ ಪರಮಾತ್ಮವೆಂದು ತಿಳಿದು ಅಂದಿಗೆ ಲಿಂಗಪೂಜೆಯನ್ನು ಬಿಟ್ಟು ಸಾಧುಗಳಾದರು. ನಂತರ ಬಂಡಿವಾಡದ ಮಠವೊಂದರಲ್ಲಿ ಊರಿನ ಸದ್ಭಕ್ತರಿಗೆ ಜ್ಞಾನದ ಸವಿಯೂಟ ನೀಡುತ್ತ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತ ಬಂದರು. ಇವರಿಗೆ ದೀನ-ದಲಿತರು ಹಾಗೂ ಬಡವರನ್ನು ಕಂಡರೆ ಬಹಳ ಪ್ರೀತಿ. ಪಕ್ಕದ ಕೋಳಿವಾಡದಲ್ಲೊಮ್ಮೆ ಮೈಲಿಬೇನೆಯಿಂದ ಮೃತಪಟ್ಟ ಮಗುವನ್ನು ಬದುಕಿಸಿ ಪವಾಡಗೈದರು. ಇದರಿಂದ ಅವರ ಮಹಿಮೆ ಪ್ರಚಾರವಾಯಿತು. ಹೀಗೆ ಗುರುಗಳು ಪುರಾಣ ಪ್ರವಚನಗಳೊಂದಿಗೆ ನಾಡಿನ ಜನರನ್ನು ಉದ್ಧಾರ ಮಾಡುತ್ತ, ಬೇಡಿದ್ದನ್ನು ನೀಡಿ ಅವರ ಕಷ್ಟ-ಕಾರ್ಪಣ್ಯ ಕಳೆಯುತ್ತ ಗದಗ ಜಿಲ್ಲೆಯ ಕಣಗಿನಹಾಳದಲ್ಲಿ 1932ರ ಏ. 17ರಂದು ಲಿಂಗೈಕ್ಯರಾದರು.

ಇವರ 79ನೇ ಪುಣ್ಯರಾಧನೆಯನ್ನು ಹುಬ್ಬಳ್ಳಿ ತಾಲ್ಲೂಕಿನ ಭಂಡಿವಾಡ ಗ್ರಾಮದ ಗಿರೀಶ ಆಶ್ರಮದಲ್ಲಿ ಏ.15ರಿಂದ 17ರವರೆಗೆ ಹಮ್ಮಿಕೊಳ್ಳಲಾಗಿದೆ. ಏ. 17ರಂದು ಡಾ. ಎ.ಸಿ. ವಾಲಿ ರಚಿಸಿದ ‘ಪರುಷಮಣಿ’ ಎಂಬ ಕಾದಂಬರಿ ಮತ್ತು ‘ಮುದ್ದುಕವಿಯ ಸಿದ್ಧಪದಗಳು’ ಭಾಗ 5-6 ಹಾಗೂ ನಾಗರಾಜ ಬಾರಕೇರ ಅವರ ‘ಮುದ್ದು ಕಂದನ ಪದಗಳು’ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT