ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧರಾಮೇಶ್ವರ ಸ್ವಾಮೀಜಿ ಶೋಭಾಯಾತ್ರೆ

Last Updated 28 ಜನವರಿ 2012, 19:30 IST
ಅಕ್ಷರ ಗಾತ್ರ

ಬಳ್ಳಾರಿ:  ಶ್ರೀ ಸಿದ್ಧರಾಮೇಶ್ವರ ಜಯಂತ್ಯುತ್ಸವದ ಅಂಗವಾಗಿ ಜಿಲ್ಲಾ ಭೋವಿ (ವಡ್ಡರ) ಸಂಘ ನಗರದಲ್ಲಿ ಶನಿವಾರಏರ್ಪಡಿಸಿದ್ದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ಶೋಭಾಯಾತ್ರೆ ಅತ್ಯಂತ ಸಡಗರ ಸಂಭ್ರಮದಿಂದ ನಡೆಯಿತು.

ನಗರದ ಕನಕ ದುರ್ಗಮ್ಮ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗವಹಿಸಿ, ಘೋಷಣೆ ಕೂಗಿದರಲ್ಲದೆ, ಮಹಿಳೆಯರು ಪೂರ್ಣಕುಂಭ ಹೊತ್ತು ವಿಶೇಷ ಮೆರುಗು ನೀಡಿದರು.ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಸಮಾಜದ ಜಿಲ್ಲಾಮಟ್ಟದ ಸಮಾವೇಶ ನಡೆಯಲಿದ್ದ ಮುನಿಸಿಪಲ್ ಕಾಲೇಜು ಆವರಣದವರೆಗೆ ತೆರಳಿದ ಯಾತ್ರೆಯುದ್ದಕ್ಕೂ ಜನತೆ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರಲ್ಲದೆ, ಹರ್ಷಚಿತ್ತರಾಗಿ ಒಗ್ಗಟ್ಟು ಮೆರೆದರು.

ಜಿಲ್ಲೆ ಹಾಗೂ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಭೋವಿ ಜನಾಂಗದ ನೂರಾರು ಮುಖಂಡರು, ಭಕ್ತರು, ಶಾಸಕ ಜಿ.ಸೋಮಶೇಖರರೆಡ್ಡಿ, ಉಪ ಮೇಯರ್ ಶಶಿಕಲಾ ಮತ್ತಿತರರು ಮೆರವಣಿಗೆಯಲ್ಲಿ ಭಾಗವಹಿಸಿದರು.

ನಂತರ ಮುನಿಸಿಪಲ್ ಕಾಲೇಜು ಆವರಣದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ತುಲಾಭಾರ ನಡೆಯಿತಲ್ಲದೆ, ವಿವಿಧ ಕ್ಷೇತ್ರಗಳಲ್ಲಿ ಅಮೋಘ ಸೇವೆ ಸಲ್ಲಿಸಿದ ಸಮುದಾಯದ ಸಾಧಕರನ್ನು ಸತ್ಕರಿಸಿ ಗೌರವಿಸಲಾಯಿತು.

ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಭೋವಿ ಸಮಾಜದ ಏಳ್ಗೆಗೆ ಪ್ರತಿಯೊಬ್ಬರೂ ಶ್ರಮಿಸುವ ಅಗತ್ಯವಿದೆ ಎಂದು ಸ್ವಾಮೀಜಿಯವರು ಈ ಸಂದರ್ಭ ನೀಡಿದ ಆಶೀರ್ವಚನದಲ್ಲಿ ಸಲಹೆ ನೀಡಿದರು.

ಸಮಾವೇಶ ಉದ್ಘಾಟಿಸಿ ಮಾತನಾಡಿದ ಶಾಸಕ ಜಿ. ಸೋಮಶೇಖರ ರೆಡ್ಡಿ, ನಗರದ ಪ್ರಮುಖ ವೃತ್ತವೊಂದಕ್ಕೆ `ಸಿದ್ದರಾಮೇಶ್ವರರ ವೃತ್ತ~ ಎಂದು ನಾಮಕರಣ ಮಾಡಲಾಗುವುದು. ಒಂದು ಬೀದಿಗೆ ವಡ್ಡರ ನಾಗಪ್ಪ ಅವರ ಹೆಸರಿ ಇಡಲಾಗುವುದು ಎಂದರು.

ಜಿಲ್ಲಾ ಭೋವಿ (ವಡ್ಡರ) ಸಂಘದ ಅಧ್ಯಕ್ಷ ಜೆ.ಮಿಥಿಲೇಶ್ವರ ಅಧ್ಯಕ್ಷತೆ ವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT