ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧವಾಗಿರಿ ಪ್ರಶ್ನೆಗಳ ಸರಮಾಲೆಗೆ!

Last Updated 12 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮಕ್ಕಳಿಗೆ ವೈವಾಹಿಕ ಶಿಕ್ಷಣ: ಭಾಗ 3

ಮಕ್ಕಳು ನಾಲ್ಕೈದು ವರ್ಷದವರಾಗುವ ಹೊತ್ತಿಗೆ ಎಲ್ಲ ವಿಷಯಗಳಲ್ಲೂ ಪೋಷಕರಿಗೆ ಕಿರಿಕಿರಿಯಾಗುವಂತಹ ಪ್ರಶ್ನೆಗಳನ್ನು ಕೇಳಲು ಶುರು ಮಾಡುತ್ತಾರೆ. ಅವುಗಳಲ್ಲಿ ಕೆಲವು ಹೀಗಿರಬಹುದು ನೋಡಿ:

-ನಾನು ಹೇಗೆ ಹುಟ್ಟಿದೆ? ಮದುವೆಯಾದ ಮೇಲೆ ಮಾತ್ರ ಮಕ್ಕಳು ಯಾಕೆ ಹುಟ್ಟುತ್ತಾರೆ?

-ಅಮ್ಮನ ಹೊಟ್ಟೆಯೊಳಗೆ ಪಾಪು ಹೇಗೆ ಹೋಯಿತು ಮತ್ತು ಹೊರಗೆ ಹೇಗೆ ಬಂತು?

-ನಾಯಿಗಳು ಏಕೆ ಹಾಗೆ (ಮಿಲನವನ್ನು ನೋಡಿ)ಮಾಡುತ್ತಿವೆ?

-ಅಪ್ಪ ಅಮ್ಮ ರಾತ್ರಿ ಏನು ಮಾಡುತ್ತಾರೆ? ಯಾಕೆ ಒಟ್ಟಿಗೆ ಮಲಗಿಕೊಳ್ಳುತ್ತಾರೆ?

-ಅಪ್ಪನಿಗೆ ಯಾಕೆ ಮಕ್ಕಳು ಹುಟ್ಟುವುದಿಲ್ಲ?

ಇವು ಉದಾಹರಣೆಗಳು ಮಾತ್ರ, ಇದಕ್ಕಿಂತ ಭಯಾನಕವಾದ ಪ್ರಶ್ನೆಗಳೂ ಬರಬಹುದು! ಇವೆಲ್ಲಾ ನನ್ನ ಕಲ್ಪನೆಯೆಂದು ಕಡೆಗಣಿಸಬೇಡಿ, ವಾಸ್ತವದಲ್ಲಿ ಮಕ್ಕಳು ಕೇಳಿದ್ದು, ನೀವು ಮಾತನಾಡಲು ಅವಕಾಶ ಕೊಟ್ಟರೆ ನಿಮ್ಮ ಮಕ್ಕಳೂ ಕೇಳಬಹುದಾದದ್ದು!

ಇವುಗಳಿಗೆ ನಮ್ಮ ಸಾಮಾನ್ಯ ಉತ್ತರಗಳು ಹೀಗಿರುತ್ತವೆ:
-ಏ ತಲೆಹರಟೆ ಬಾಯ್ಮುಚ್ಕೊಂಡಿರು
-ನಿನಗೆ ಅವೆಲ್ಲಾ ಗೊತ್ತಾಗೋಲ್ಲ ಸುಮ್ನಿರು
-ದೊಡ್ಡವರಿಗೆ ಸಂಬಂಧಪಟ್ಟ ವಿಷಯದಲ್ಲೆಲ್ಲಾ ನೀನು ತಲೆ ಹಾಕಬೇಡ
-ಅವೆಲ್ಲಾ ದೇವರು ಮಾಡಿದ್ದು

ಇಂತಹ ಉತ್ತರಗಳಿಂದ ಮಕ್ಕಳ ಕುತೂಹಲವೇನೂ ತಣಿಯುವುದಿಲ್ಲ. ಅವರ ಪ್ರಶ್ನೆಗಳಿಗೆ ಉತ್ತರಿಸಲು ಅವರಿಗೆ ದೇವರೂ ಸಿಗುವುದಿಲ್ಲ! ಹಾಗಾಗಿ ನಮ್ಮಿಂದ ಈ ವಿಚಾರದಲ್ಲಿ ವಿಮುಖರಾಗುವ ಮಕ್ಕಳು ತಮ್ಮ ಸಹಪಾಠಿಗಳಲ್ಲೇ ಸ್ವಲ್ಪ ಹೆಚ್ಚು ತಿಳಿದವನೊಬ್ಬ ಹೇಳುವುದನ್ನೇ ನಂಬತೊಡಗುತ್ತಾರೆ. ಪರಿಣಾಮವಾಗಿ ಮುಜುಗರವನ್ನು ತಪ್ಪಿಸಿಕೊಳ್ಳುವ ಭರದಲ್ಲಿ ನಾವು ಮಕ್ಕಳನ್ನು ಅವೈಜ್ಞಾನಿಕ ವಿಚಾರಗಳ ಗೊಂದಲಕ್ಕೆ ತಳ್ಳುತ್ತೇವೆ.

`ಸರಿ, ಹಾಗಿದ್ರೆ ಮಕ್ಕಳನ್ನು ಕೂರಿಸಿಕೊಂಡು ಎಲ್ಲ ಹೇಳಿಬಿಡಬೇಕೇನು ಅಥವಾ ಎಲ್ಲಾ ಮಾಡಿಯೂ ತೋರಿಸಬೇಕಾ?~- ಇದು ಪೋಷಕರ ಸಿಟ್ಟಿನ, ವ್ಯಂಗ್ಯದ, ಅಸಹಾಯಕತೆಯ ಅಳಲು. ಇದಕ್ಕೆ ಕೆಲವು  ಸಲಹೆಗಳು ಹೀಗಿರಬಹುದು ನೋಡಿ:

-ಎಲ್ಲವನ್ನೂ ಒಮ್ಮೆಲೇ ಹೇಳಬೇಕಿಲ್ಲ. ಮಗುವಿಗೆ ಕಾಲಕಾಲಕ್ಕೆ ತಿಳಿಯುವುದಷ್ಟನ್ನೇ ಹೇಳುತ್ತಾ  ಬನ್ನಿ. ಮೊದಲು ಪ್ರಕೃತಿಯಲ್ಲಿ ಗಂಡು  ಹೆಣ್ಣುಗಳೆಂಬ ಎರಡು ಜಾತಿಗಳಿರುವ ಬಗೆಗೆ ವಿವರ ನೀಡಿ.

-ಮಾನವನಲ್ಲಿರುವ ಲಿಂಗ ಭೇದ ಮತ್ತು ಅದರಿಂದಾಗುವ ದೇಹದಲ್ಲಿನ ಭಿನ್ನತೆಯನ್ನು     ತಿಳಿಸಿ ಹೇಳಿ.

-ಜೀವ ಸೃಷ್ಟಿಗೆ ಇಬ್ಬರ ಅವಶ್ಯಕತೆ ಇರುವುದನ್ನೂ ತಿಳಿಸಿ. ಇದರ ಬಗೆಗೆ ವಿವರವಾಗಿ ಮುಂದೆ ಹೇಳುತ್ತೇನೆ ಎಂದು ಆಶ್ವಾಸನೆ ಕೊಡಿ.

-ಭಿನ್ನ ಲಿಂಗದ ಮಕ್ಕಳ ಜನನಾಂಗಗಳ ಬಗೆಗೆ ಕುತೂಹಲ ತೋರುವುದು ಇದೇ          ವಯಸ್ಸಿನಿಂದ. ನಮ್ಮ ಮುತ್ತಾತನ ಕಾಲದಿಂದ ಹಿಡಿದು ನಮ್ಮ ಮರಿಮಕ್ಕಳ ಕಾಲದವರೆಗೂ ಈ ವಯಸ್ಸಿನ ಮಕ್ಕಳ ಆಪ್ತವಾದ ಆಟ ಅಪ್ಪ ಅಮ್ಮನ ಆಟ       ಅಥವಾ ಮನೆ ಆಟ ಎಂಬುದು ನೆನಪಿರಲಿ! ಹಾಗಾಗಿ ಮಕ್ಕಳಿಗೆ ಭಿನ್ನ ಲಿಂಗದವರ ಬಗೆಗೆ ಸಚಿತ್ರವಾಗಿ ವಿವರಿಸಿದರೆ ಅವರ ಕುತೂಹಲ ತಣಿಯುತ್ತದೆ.

-ಇತರರ ಜನನಾಂಗಗಳನ್ನು ಸ್ಪರ್ಶಿಸುವುದು ಆರೋಗ್ಯದ ಮತ್ತು ಅವರ ಖಾಸಗಿತನದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದೂ ಸೇರಿಸಿ. ಮಗುವಿನ ಜನನಾಂಗವನ್ನು ಇತರರು ಅನುಚಿತವಾಗಿ ಮುಟ್ಟುವುದನ್ನು ಪ್ರತಿಭಟಿಸಬೇಕೆಂದು ತಿಳಿಸಿದರೆ ಅವರನ್ನು ಲೈಂಗಿಕ ಶೋಷಕರಿಂದಲೂ ರಕ್ಷಿಸಬಹುದು. ಇಂತಹ ಶೋಷಣೆ ಮನೆಯ ಹಿರಿಯರು, ಪರಿಚಿತರು, ಉಪಾಧ್ಯಾಯರು- ಹೀಗೆ ಯಾರಿಂದಲಾದರೂ ಆಗುವ ಸಾಧ್ಯತೆಗಳಿರುತ್ತವೆ ಎಂದು ನೆನಪಿಡಬೇಕು.

-ಮೊದಲೇ ಹೇಳಿದಂತೆ ಸುಳ್ಳು ಮತ್ತುಅಪೂರ್ಣ ಮಾಹಿತಿಗಳನ್ನು ಸಂಪೂರ್ಣ ನಿಷೇಧಿಸಿ. ಮಗುವಿನ ವಯಸ್ಸಿಗೆ ಮೀರಿದ ಪ್ರಶ್ನೆಗಳು ಬಂದಾಗ ಅಥವಾ  ಎಲ್ಲರೆದುರು ಪ್ರಶ್ನೆಗಳನ್ನು ಕೇಳಿದಾಗ ಮಾತು ಮರೆಸಿ ಮುಜುಗರ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರೆ, ನಿಧಾನವಾಗಿ ಮಗು ಬೇರೆ ಕಡೆ ಉತ್ತರಗಳನ್ನು ಹುಡುಕಿಕೊಳ್ಳುತ್ತದೆ ಎಂಬುದನ್ನು ಮರೆಯಬೇಡಿ.

-ಮಗುವಿನ ಕುತೂಹಲ ತಣಿಯುವವರೆಗೆ ಸಹನೆ ಕಳೆದುಕೊಳ್ಳದೆ ಉತ್ತರಿಸಿ. ಬೇರೆಯವರಿಂದ ತಿಳಿದ ಮಾಹಿತಿಗಳನ್ನು ನಂಬಿಕೊಳ್ಳುವ ಮೊದಲು ನಿಮ್ಮಿಂದ ಖಾತ್ರಿಪಡಿಸಿಕೊಳ್ಳಲು ಹೇಳಿ.

-ಮುಜುಗರ ತಪ್ಪಿಸಿಕೊಳ್ಳಲು ಉದಾಹರಣೆಗಳನ್ನು ಬರೀ ಸಸ್ಯ ಮತ್ತು ಪ್ರಾಣಿಗಳಿಗೆ ಮಾತ್ರ ಸೀಮಿತಗೊಳಿಸಬೇಡಿ. ಮಾನವನ ಲೈಂಗಿಕತೆ ಪ್ರಾಣಿಗಳಿಗಿಂತ ತೀರಾ ಭಿನ್ನವಾದದ್ದು, ಇದಕ್ಕೆ ಸಾಮಾಜಿಕ ಮತ್ತು ನೈತಿಕ ಆಯಾಮಗಳಿರುತ್ತವೆ ಎಂಬುದನ್ನು ಮರೆಯಬಾರದು. 

ಈಗ ಸಿಟ್ಟು ಕಳೆದುಕೊಂಡು ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧರಿದ್ದೀರಾ? ಹಾಗಿದ್ದರೆ ಆರಂಭದಲ್ಲಿ   ಕೊಟ್ಟಿರುವ ಕೆಲವು ಪ್ರಶ್ನೆಗಳಿಗೆ ಮಕ್ಕಳನ್ನು ಹೇಗೆ   ಸಮಾಧಾನಪಡಿಸಬಹುದೆಂದು ನೋಡೋಣ.

-ಮಕ್ಕಳು ಹುಟ್ಟಲು ಗಂಡು ಹೆಣ್ಣು, ಅಂದರೆ ಅಪ್ಪ ಅಮ್ಮ ಇಬ್ಬರೂ ಇರಬೇಕು. ಅವರಿಬ್ಬರೂ ಪ್ರೀತಿ ಮಾಡಿದಾಗ ಮಗು ಜನಿಸುತ್ತದೆ. ನಾಯಿಗಳು ಕೂಡ ನೀನು ನೋಡಿದಾಗ ಪ್ರೀತಿ ಮಾಡುತ್ತಿದ್ದವು. ಮನುಷ್ಯರಲ್ಲೂ ಅದೇ ರೀತಿ ನಡೆಯುತ್ತದೆ. ಆದರೆ ಪ್ರಾಣಿಗಳಂತೆ ಎಲ್ಲರೆದುರು ಮಾಡದೆ ಇಬ್ಬರೇ ಇದ್ದಾಗ ಮಾತ್ರ ಪ್ರೀತಿ ಮಾಡುತ್ತಾರೆ.

ಹಾಗಾಗಿ ಅಪ್ಪ ಅಮ್ಮ ಕೋಣೆಯಲ್ಲಿ ಬಾಗಿಲು ಹಾಕಿಕೊಂಡು ಮಲಗುತ್ತಾರೆ. ಇದರ ಬಗೆಗೆ ವಿವರವಾಗಿ ನೀನು ಇನ್ನೂ ಸ್ವಲ್ಪ ದೊಡ್ಡವನಾದ ಮೇಲೆ ಹೇಳುತ್ತೇನೆ. ಈ ಬಗ್ಗೆ ನಿನಗೆ ಯಾರಾದರೂ ಏನಾದರೂ ಹೇಳಿದರೂ ನನ್ನಿಂದ ಕೇಳಿ ತಿಳಿದುಕೋ. ಇಂತಹ ಪ್ರಶ್ನೆಗಳನ್ನು ಮನೆಯಲ್ಲಿ ನಾವಿಬ್ಬರೇ ಇದ್ದಾಗ ಕೇಳು. ನಿನ್ನ ಜೊತೆ ಮಾತನಾಡೋದಕ್ಕೆ ನನಗೆ ತುಂಬಾ ಖುಷಿಯಾಗುತ್ತೆ.

-ಅಮ್ಮನ ಹೊಟ್ಟೆಯಲ್ಲಿ ಒಂದು ಸಣ್ಣ ಚೀಲ ಇರುತ್ತದೆ. ಅದನ್ನು ಗರ್ಭಕೋಶ ಎನ್ನುತ್ತಾರೆ. ಮೊದಲು ಮಗು ಅದರಲ್ಲಿ ಒಂದು ಸಣ್ಣ ಚೆಂಡಿನಂತೆ ಇದ್ದು ನಿಧಾನವಾಗಿ ಬೆಳೆಯುತ್ತದೆ. ಆಗ ಅಮ್ಮನ ಹೊಟ್ಟೆಯೊಳಗಿನಿಂದ ಒಂದು ಚಿಕ್ಕ ಪೈಪಿನ ಮೂಲಕ ಅದಕ್ಕೆ ಆಹಾರ ಹೋಗುತ್ತದೆ. ನಿಧಾನವಾಗಿ ಮಗುವಿಗೆ ಕೈ, ಕಾಲು ಎಲ್ಲಾ ಬರುತ್ತದೆ.

ಒಂಬತ್ತು ತಿಂಗಳ ನಂತರ ಅದು ಅಮ್ಮನ ಕಾಲುಗಳ ಮಧ್ಯದಿಂದ ಹೊರಬರುತ್ತದೆ. (ಇಷ್ಟರಲ್ಲಾಗಲೇ ಸ್ತ್ರೀ ಪುರುಷರ ದೇಹ ರಚನೆಯನ್ನು ಮಗುವಿಗೆ ತಿಳಿಸಿರಬೇಕು) ಅಪ್ಪನಿಗೆ ಹೊಟ್ಟೆಯಲ್ಲಿ ಅಮ್ಮನಿಗಿರುವಂತೆ ಚೀಲವಿರುವುದಿಲ್ಲ, ಹಾಗಾಗಿ ಅವನಿಗೆ ಮಕ್ಕಳಾಗುವುದಿಲ್ಲ.

-ಸಸ್ಯ, ಪ್ರಾಣಿ ಮತ್ತು ಮನುಷ್ಯರಲ್ಲಿ ಮರಿಗಳು ಹುಟ್ಟುವುದು ಒಂದೇ ರೀತಿಯಲ್ಲಿ. ಆದರೆ ಸಸ್ಯ ಮತ್ತು ಪ್ರಾಣಿಗಳಿಗೆ ಮನುಷ್ಯನಿಗಿರುವಂತೆ ಬುದ್ಧಿ, ಮನಸ್ಸು, ಅಳು, ನಗು, ಸಿಟ್ಟು ಇವೆಲ್ಲಾ ಇರುವುದಿಲ್ಲ. ಅವರ ತಲೆಯಲ್ಲಿರುವ ಮೆದುಳು ಇನ್ನೂ ಹಳೇ ಮಾಡೆಲ್‌ದು. ನಾಯಿಗಳಲ್ಲಿ ನಮ್ಮ ಹಾಗೆ ಅಪ್ಪ, ಅಮ್ಮ, ಪಾಪುವಿನ ಮಧ್ಯ ಪ್ರೀತಿ, ಮನೆ, ಆಟ, ಊಟ ಎಲ್ಲಾ ಇರಲ್ಲ.  ಹಾಗಾಗಿ ಪ್ರಾಣಿಗಳಂತೆ ನಾವು ಇರಕ್ಕಾಗಲ್ಲ. ಅಪ್ಪ ಅಮ್ಮ ಪ್ರೀತಿಯನ್ನು ಯಾರಿಗೂ ಕಾಣದಂತೆ ಮಾಡುತ್ತಾರೆ. ಅದು ಅವರಿಬ್ಬರಿಗೆ ಮಾತ್ರ, ನೀನು ಕೂಡ ನೋಡಬಾರದು. ನೀನು ದೊಡ್ಡವನಾದ ಮೇಲೆ ಕೂಡ ಹೀಗೇ ಇರಬೇಕು. ಆವಾಗ ಯಾವಾಗ್ಲೂ ಖುಷಿಯಾಗಿ ನಗು ನಗುತ್ತಾ ಇರಬಹುದು.

ನೆನಪಿಡಿ, ಪ್ರಶ್ನೋತ್ತರಗಳು ಇಷ್ಟು ಸರಳವಾಗಿರುವುದಿಲ್ಲ. ಮಗು ಮಧ್ಯೆ ಇನ್ನೇನನ್ನೋ ಕೇಳುತ್ತದೆ ಅಥವಾ ತನ್ನ ಅನುಭವ, ಇತರರಿಂದ ಕೇಳಿದ್ದರ ಬಗೆಗೆ ಹೇಳುತ್ತದೆ. ಆದರೆ ತಾಳ್ಮೆ ಕಳೆದುಕೊಳ್ಳದೆ ಉತ್ತರ ಕೊಡಿ. ಮಗುವಿಗೆ ಅರ್ಥವಾಗಿಲ್ಲ ಎನಿಸಿದರೆ ಬೇರೆ ರೀತಿಯಲ್ಲಿ ಹೇಳಿ, ಹೆಚ್ಚು ಉದಾಹರಣೆಗಳನ್ನು ಕೊಡಿ. ಚಿತ್ರ ತೋರಿಸಿ, ಕಥೆಗಳ ಮೂಲಕ ಹೇಳಿ, ಆಗಾಗ ಸ್ವಲ್ಪ ಸ್ವಲ್ಪ ಹೇಳುತ್ತಾ ಹೋಗಿ, ಪದೇ ಪದೇ ಹೇಳಿ. ಅಂತೂ ಮಗುವಿನ ಕುತೂಹಲವನ್ನು ಮಾತ್ರ ಹತ್ತಿಕ್ಕಬೇಡಿ. 

ಹೀಗೆ ಮಕ್ಕಳೊಡನೆ ಮುಕ್ತವಾಗಿ ಮಾತನಾಡಲು ಸಾಧ್ಯವಾದರೆ ಬರೀ ಈ ವಿಚಾರದಲ್ಲಷ್ಟೇ ಅಲ್ಲ, ಎಲ್ಲ ವಿಷಯಗಳಲ್ಲೂ ನಿಮ್ಮ ಸಂಬಂಧಗಳು ಉತ್ತಮವಾಗುತ್ತವೆ ಮತ್ತು ಕೌಟುಂಬಿಕ ಬದುಕು ಒಂದು ಸುಂದರ ಅನುಭವವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT