ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸಿದ್ಧಾಂತ ಶಿಖಾಮಣಿ ಗ್ರಂಥದ ಸಂಸ್ಕಾರ ಪಾಲಿಸಿ'

Last Updated 22 ಏಪ್ರಿಲ್ 2013, 6:49 IST
ಅಕ್ಷರ ಗಾತ್ರ

ಹಾವೇರಿ: ಭಾರತ ಧಾರ್ಮಿಕ ನೆಲೆ ಬೀಡು. ಸಂಸ್ಕೃತಿ ಮತ್ತು ಸಂಸ್ಕಾರಕ್ಕೆ ಮಹತ್ವ ನೀಡಿದ ದೇಶ. ಇಂತಹ ಪವಿತ್ರ ನಾಡಿನಲ್ಲಿ ಸಿದ್ಧಾಂತ ಶಿಖಾಮಣಿ ಗಂಥ ವೀರಶೈವರಿಗೆ ಗರ್ಭದಾನ ಸಂಸ್ಕಾರದಿಂದ ಹಿಡಿದು ಜೀವಿತದ ಕೊನೆಯವರೆಗೆ 16 ಪ್ರಕಾರದ ಸಂಸ್ಕಾರಗಳನ್ನು ಬೋಧಿಸಿದೆ ಎಂದು ಕಾಶಿ ಡಾ.ಚಂದ್ರಶೇಖರ ಶಿವಾಚಾರ್ಯರು ಹೇಳಿದರು.

ನಗರದ ಶಿವಲಿಂಗೇಶ್ವರ ಪದವಿ ಮಹಿಳಾ ಕಾಲೇಜಿನ ಆವರಣದಲ್ಲಿ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಮತ್ತು ಧರ್ಮ ಜಾಗೃತಿ ಸಮಾರಂಭದ ಮೂರನೇ ದಿನ ಶನಿವಾರ ಧರ್ಮ, ಸಂಸ್ಕೃತಿ ಮತ್ತು ಸಂಸ್ಕಾರ ಕುರಿತು ಮಾತನಾಡಿದರು.

ಸಂಸ್ಕಾರ ಪಡೆದವರು ಶುದ್ಧರೆಂದು ಕರೆಯಲ್ಪಡುವರು. ಸಂಸ್ಕಾರ ಪಡೆಯದವರನ್ನು ಸಹಜರೆಂದು ಕರೆಯಲ್ಪಡುವರು. ಮನಷ್ಯನನ್ನು ಹೊರತುಪಡಿಸಿ ಯಾವುದೇ ಪಶು ಪಕ್ಷಿಗಳಿಗೆ ಸಂಸ್ಕಾರವಿಲ್ಲ. ಏಕೆಂದರೆ ಅವುಗಳು ಪ್ರಕೃತ ಜೀವಿಗಳೆಂದು ಕರೆಸಿಕೊಳ್ಳುತ್ತವೆ ಎಂದು ಹೇಳಿದರು.

ವೀರಶೈವ ಧರ್ಮದಲ್ಲಿ ದೀಕ್ಷಾ ಸಂಸ್ಕಾರ ಸರ್ವೋತ್ಕೃಷ್ಟವಾದುದು. ವೇದ, ಮಂತ್ರ, ಕ್ರಿಯಾ ದೀಕ್ಷೆ ಪಡೆದು ದೇಹದ ಮೇಲೆ ಇಷ್ಟಲಿಂಗ ಧರಿಸಿಕೊಂಡರೆ ಭಕ್ತನ ದೇಹವೇ ಕೈಲಾಸ ಎಂದು ಕರೆಸಿಕೊಳ್ಳುತ್ತದೆ. ಇಷ್ಟಲಿಂಗಪೂಜೆ, ಲಿಂಗ ಧ್ಯಾನ, ಮಹಾಮಂತ್ರ ಜಪ ಗುಣಗಳನ್ನು ಕಳೆದುಕೊಂಡವನು ಲಿಂಗರೂಪನೆ ಆಗುತ್ತಾನೆ ಎಂದರು.

ವೀರಶೈವ ಧರ್ಮದ ದೀಕ್ಷಾ ಸಂಸ್ಕಾರ ಪಡೆದುಕೊಳ್ಳಲು ಯಾವುದೇ ಜಾತಿ ಬೇಧವಿಲ್ಲ. ಶಿವ ಸಂಪನ್ನನಾದ ವ್ಯಕ್ತಿಗಳು ಇಷ್ಟಲಿಂಗ ದೀಕ್ಷೆ ಪಡೆಯಬಹುದು. ಇಷ್ಟಲಿಂಗ ರಹಿತ ವೀರಶೈವನು ಪ್ರಾಣವಿಲ್ಲದ ದೇಹವಿದ್ದಂತೆ. ವೀರಶೈವರು ಇಷ್ಟಲಿಂಗ ಧರಿಸಿಕೊಂಡು ತಮ್ಮ ದೇಹವನ್ನು ಕೈಲಾಸವಾಗಿ ಮಾಡಿ ಕೊಂಡು ತಾನೇ ಶಿವನಾಗುವ ಮಹಾ ಮಾರ್ಗದಲ್ಲಿ ನಡೆಯಬೇಕು ಎಂದು ಶ್ರೀಗಳು ಹೇಳಿದರು.

ರಾಣೆಬೆನ್ನೂರಿನ ಶಿವಯೋಗಿ ದೇವರು ಮಾತನಾಡಿ, ಗುರುವಿನ ಸುಭಾಷಿತ ಮತ್ತು ವಿಶೇಷ ಸಂದೇಶಗಳನ್ನು ಯಾರು ಆಲಿಸುವುದಿಲ್ಲವೋ ಅವರಿಗೆ ಮೋಕ್ಷ ಸಿಗುವುದಿಲ್ಲ. ಆದ್ದ ರಿಂದ ವೀರಶೈವರು ಗುರುವಿನ ಸಂದೇಶ ಗಳನ್ನು ತಪ್ಪದೇ ಪಾಲಿಸಬೇಕು ಎಂದರು.

ನೆಗಳೂರ ಸಂಸ್ಥಾನಮಠದ ಗುರುಶಾಂತ ಶಿವಾಚಾರ್ಯರು ಮಾತನಾಡಿ, ಸಿದ್ಧಾಂತ ಶಿಖಾಮಣಿ ಕೇವಲ ಒಂದು ಧಾರ್ಮಿಕ ಗ್ರಂಥವಲ್ಲ. ಅದು ಮಾನವ ಕುಲ ಹೇಗೆ ಬದುಕಬೇಕು ಎಂಬುವುದರ ಕುರಿತು ತಿಳಿಸಿಕೊಡುವ ಒಂದು ಜೀವನ ದರ್ಶನ ಗ್ರಂಥವಾಗಿದೆ ಎಂದು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಕರ್ಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯ ಶ್ರೀಗಳು, ಹುಕ್ಕೇರಿಮಠದ ಸದಾಶಿವ ಶ್ರೀಗಳು, ಆರ್.ಎಸ್.ಮಾಗನೂರ, ವಿ.ಜಿ.ಹರ್ಲಾಪುರ, ಶಿವರಾಜ ವಳಸಂಗದ ಭಾಗವಹಿಸಿದ್ದರು. ಶಿವಶಂಕರ ಕುರುಬೆಟ್‌ಹಿರೇಮಠ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT